ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಡುವೆ ಬಂದರೆ ಒಮಾನ್ ಮೇಲೆಯೂ ದಾಳಿ: ಹಾರ್ಮೊಜ್‌ ಜಲಸಂಧಿ ಬಿಕ್ಕಟ್ಟಿನ ನಡುವೆ ಟ್ರಂಪ್ ಖಡಕ್ ವಾರ್ನಿಂಗ್!

ಇರಾನ್–ಅಮೆರಿಕ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಒಮಾನ್ ಅಮೆರಿಕದ ಹಾದಿಗೆ ಅಡ್ಡ ಬಂದರೆ ಭೀಕರ ಬಾಂಬ್ ದಾಳಿ ನಡೆಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯುವುದೇ ಅಮೆರಿಕದ ಪ್ರಮುಖ ಗುರಿ ಎಂದು ಅವರು ಪುನರುಚ್ಚರಿಸಿದ್ದು, ಈ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ವಾಷಿಂಗ್ಟನ್‌: ಆಯಕಟ್ಟಿನ ಹಾರ್ಮುಜ್ ಜಲಸಂಧಿ (Strait of Hormuz) ಯಲ್ಲಿ ಇರಾನ್ ಮತ್ತು ಅಮೆರಿಕ (US - Iran ) ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಒಮಾನ್ (Oman) ದೇಶವು ಅಮೆರಿಕದ ಹಾದಿಗೆ ಅಡ್ಡ ಬಂದರೆ ಅಥವಾ ಇರಾನ್ ಪರವಾಗಿ ನಿಂತರೆ ಆ ದೇಶದ ಮೇಲೂ ಭೀಕರವಾಗಿ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಫಾಕ್ಸ್ ನ್ಯೂಸ್‌ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಅಮೆರಿಕ ಮತ್ತು ಇರಾನ್ ನಡುವಿನ 60 ದಿನಗಳ ಕದನ ವಿರಾಮದ ಗಡುವು ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ ಈ ಅತ್ಯಂತ ಕಟು ಹಾಗೂ ಆಕ್ರಮಣಕಾರಿ ಹೇಳಿಕೆ ನೀಡಿದ್ದಾರೆ. ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ತನ್ನ ಸೇನಾ ಪ್ರಾಬಲ್ಯವನ್ನು ಬಿಟ್ಟುಕೊಡುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಇರಾನ್ ರಾಜತಾಂತ್ರಿಕರು ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರವನ್ನು ನಿರ್ವಹಿಸುವ ತಾತ್ಕಾಲಿಕ ವ್ಯವಸ್ಥೆ ಹಾಗೂ ಒಪ್ಪಂದಕ್ಕಾಗಿ ಒಮಾನ್ ಅಧಿಕಾರಿಗಳೊಂದಿಗೆ ಸಮಾಂತರ ಮಾತುಕತೆ ನಡೆಸುತ್ತಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಪ್ರಮುಖ ಕೇಂದ್ರಬಿಂದುವಾಗಿರುವ ಈ ಜಲಸಂಧಿಯ ನಿಯಂತ್ರಣದ ಕುರಿತು ಇರಾನ್ ಮತ್ತು ಒಮಾನ್ ನಡುವಿನ ರಹಸ್ಯ ಮಾತುಕತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಕೆಂಡಾಮಂಡಲರಾದ ಟ್ರಂಪ್, "ಒಂದು ವೇಳೆ ಒಮಾನ್ ನಮ್ಮ ಹಾದಿಗೆ ಅಡ್ಡ ಬಂದರೆ, ಅವರ ಮೇಲೆ ಭೀಕರವಾಗಿ ಬಾಂಬ್ ದಾಳಿ ನಡೆಸುತ್ತೇವೆ" ಎಂದು ನೇರವಾಗಿ ಗುಡುಗಿದ್ದಾರೆ.

ಇದೇ ವೇಳೆ ಇರಾನ್ ತಕ್ಷಣವೇ ಶರಣಾಗತಿಯ ಬಿಳಿ ಧ್ವಜವನ್ನು ಹಾರಿಸಬೇಕು ಎಂದಿರುವ ಟ್ರಂಪ್, "ಅವರು ಉತ್ತಮ ಪೋಕರ್ ಆಟಗಾರರಾಗಿರಬಹುದು, ಆದರೆ ಪ್ರಸ್ತುತ ಯುದ್ಧದಲ್ಲಿ ದಿನೇ ದಿನೇ ತೀವ್ರವಾಗಿ ದುರ್ಬಲಗೊಳ್ಳುತ್ತಿದ್ದಾರೆ. ನನಗೆ ಯಾವುದೇ ಆತುರವಿಲ್ಲ ಅಥವಾ ನಿರ್ದಿಷ್ಟ ಸಮಯದ ಮಿತಿಯಿಲ್ಲ; ಮುಂಬರುವ ಮಧ್ಯಂತರ ಚುನಾವಣೆಗಳು ನನ್ನ ಯಾವುದೇ ಕಠಿಣ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಿಲ್ಲ" ಎಂದು ಎಚ್ಚರಿಸಿದ್ದಾರೆ.

ಜತೆಗೆ ತಮ್ಮ ಅಧಿಕೃತ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪ್ರತ್ಯೇಕ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, "ಯಾವುದೇ ಸಂದರ್ಭದಲ್ಲೂ, ಯಾವುದೇ ಕಾರಣಕ್ಕೂ ಇರಾನ್ ಯಾವುದೇ ರೂಪದಲ್ಲಿ ಅಣ್ವಸ್ತ್ರವನ್ನು ಹೊಂದದಂತೆ ಸಂಪೂರ್ಣವಾಗಿ ತಡೆಯುವುದೇ ಅಮೆರಿಕದ ಪ್ರಮುಖ, ಪ್ರಥಮ ಮತ್ತು ಸದಾಕಾಲದ ಅಂತಿಮ ಗುರಿಯಾಗಿದೆ" ಎಂದು ಪುನರುಚ್ಚರಿಸಿದ್ದಾರೆ. ಕದನ ವಿರಾಮ ಅಂತ್ಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಟ್ರಂಪ್ ಅವರ ಈ ಹೇಳಿಕೆಯು ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.