ಮಲೇಷ್ಯಾ, ನ. 27: ಉಬುಂಟು ಒಕ್ಕೂಟದ ಅಧ್ಯಕ್ಷೆ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ (K Ratnaprabha) ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಯುಎನ್ ಎಕನಾಮಿಕ್ ಶೃಂಗಸಭೆಯಲ್ಲಿ ಬ್ರಿಕ್ಸ್-ಆಸಿಯಾನ್ ಚೇಂಬರ್ ಆಫ್ ಕಾಮರ್ಸ್ (BACC) ವತಿಯಿಂದ ಪ್ರತಿಷ್ಠಿತ 'ಟುನ್ ಡಾ. ಮಹಾತಿರ್ ಮೊಹಮ್ಮದ್ ಗುಡ್ ಗ್ಲೋಬಲ್ ಎಕ್ಸೆಂಪ್ಲರಿ ಲೀಡರ್‌ಶಿಪ್ ಅವಾರ್ಡ್' (Tun Dr. Mahathir Mohamad Good Global Exemplary Leadership Recognition) ನೀಡಿ ಗೌರವಿಸಲಾಯಿತು. ಬ್ರಿಕ್ಸ್-ಆಸಿಯಾನ್ ಕೌನ್ಸಿಲ್ ಅಧ್ಯಕ್ಷ ಹಾಗೂ ನೈಜೀರಿಯಾದ ರಾಯಭಾರಿ ಥಯಾಲನ್ ನಾಥನ್ ಪ್ರಶಸ್ತಿ ಪ್ರದಾನ ಮಾಡಿದರು. ಉಬುಂಟು ಒಕ್ಕೂಟದ ಜಂಟಿ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ ಉಪಸ್ಥಿತರಿದ್ದರು.
ಸಮುದಾಯ ಅಭಿವೃದ್ಧಿ, ಸಂಸ್ಥೆಗಳ ಬಲವರ್ಧನೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ರತ್ನಪ್ರಭಾ ಅವರ ವಿಶಿಷ್ಟ ನಾಯಕತ್ವ ಮತ್ತು ಅವರ ಸುಸ್ಥಿರ ಕೊಡುಗೆಗಳಿಗಾಗಿ ಈ ಪ್ರಶಸ್ತಿ ದೊರೆತಿದೆ. ರತ್ನಾಪ್ರಭಾ ಅವರ ಸಾಧನೆಗಳು, ಆಡಳಿತಾತ್ಮಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಅವರ ಉಪಕ್ರಮಗಳ ಸಕಾರಾತ್ಮಕ ಪರಿಣಾಮಗಳನ್ನು ಸಮಗ್ರವಾಗಿ ಮೌಲ್ಯಮಾಪನ ನಡೆಸಿ ಕಾರ್ಯಕಾರಿ ಮಂಡಳಿಯು ಅವರನ್ನು ಗುರುತಿಸಿದೆ.
ಪ್ರಶಸ್ತಿ ಸ್ವೀಕರಿಸಿ ಬಳಿಕ ಮಾತನಾಡಿದ ಕೆ. ರತ್ನಪ್ರಭಾ, ಈ ಗೌರವದಿಂದ ಉಟುಂಬು ಸಂಸ್ಥೆಗೆ ಆನೆ ಬಲ ಸಿಕ್ಕಂತಾಗಿದ್ದು, ಇದರಿಂದ ನಮ್ಮ ಧ್ಯೇಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಪ್ರಶಸ್ತಿಗಳು ಎಷ್ಟೇ ಬಂದರೂ ಸಹ ನಾವು 10,000 ಮಹಿಳಾ ಉದ್ಯಮಿಗಳನ್ನು ತಲುಪುವ, ಅವರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ನೀಡುವ, 100 ಸಂಘಗಳಿಗೆ ವಿಸ್ತರಿಸುವ, ರಫ್ತು ಸುಗಮಗೊಳಿಸುವ ಮತ್ತು ಭಾರತ ಹಾಗೂ ವಿಶ್ವದಾದ್ಯಂತ ಪಾಲುದಾರಿಕೆ ಹೊಂದುವ ಗುರಿಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಉಬುಂಟು ಸ್ಥಾಪನೆಗೂ ಮುನ್ನ ಕೆ. ರತ್ನಪ್ರಭಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ (2014-16) ಕರ್ತವ್ಯ ನಿರ್ವಹಿಸಿದ್ದರು. 2014-19ರಲ್ಲಿ ಕರ್ನಾಟಕದ ಕೈಗಾರಿಕಾ ನೀತಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ವಿಶೇಷ ಒತ್ತು ನೀಡಲಾಗಿತ್ತು. ಮೊದಲ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿಯೇ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿದ್ದು, ವಿಶೇಷ ಪ್ರೋತ್ಸಾಹ, ರಿಯಾಯಿತಿ ಮತ್ತು ಬೆಂಬಲ ನೀಡುವ ಕ್ರಮಗಳನ್ನು ಅಳವಡಿಸಲಾಗಿತ್ತು. ಇದರ ಭಾಗವಾಗಿ ಕಲಬುರಗಿ, ಹಾರೋಹಳ್ಳಿ, ಮೈಸೂರು ಮತ್ತು ಧಾರವಾಡದಲ್ಲಿ ನಾಲ್ಕು ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲಾಯಿತು. ಈ ಪಾರ್ಕ್‌ಗಳನ್ನು ಮಹಿಳೆಯರಿಗೆ ನಿರ್ದಿಷ್ಟ ಪ್ರಯೋಜನಗಳನ್ನು ಒದಗಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದ್ದು, ಆರ್ಥಿಕ ಪ್ರೋತ್ಸಾಹದಿಂದ ಹಿಡಿದು ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ನಿಯೋಗಗಳಿಗೆ ಒಡ್ಡಿಕೊಳ್ಳುವವರೆಗೆ ಮತ್ತು ಆ ಮೂಲಕ ನೆಟ್‌ವರ್ಕಿಂಗ್ ಮತ್ತು ವ್ಯಾಪಾರ ಅವಕಾಶಗಳಿಗೆ ತೆರೆದುಕೊಳ್ಳಲು ವೇದಿಕೆ ಸೃಷ್ಟಿಸಲಾಯಿತು ಎಂದು ತಿಳಿಸಿದರು.
ರತ್ನಪ್ರಭಾ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ವೇಳೆ ಏಷ್ಯಾದ ಅತಿದೊಡ್ಡ ಮಹಿಳಾ ಉದ್ಯಮಶೀಲತಾ ಸಮಾವೇಶವನ್ನು 'ಥಿಂಕ್ ಬಿಗ್' (Think Big Women Entrepreneurs Summit) ಎಂಬ ಹೆಸರಿನಲ್ಲಿ ಆಯೋಜಿಸಿದ್ದರು. ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ನಲ್ಲಿ 2016ರ ನವೆಂಬರ್ 14 ಮತ್ತು 15ರಂದು ನಡೆದ ಈ ಸಮಾವೇಶದಲ್ಲಿ 2,500ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಒಗ್ಗೂಡಿದ್ದರು.
ಮಹಿಳೆಯರಿಗೂ ಸಮಾನ ಅವಕಾಶಗಳು ದೊರೆತಾಗ ದೇಶದ ಪ್ರಗತಿ ಸಾಧ್ಯ: ಕೆ. ರತ್ನಪ್ರಭಾ
ನಂತರ ಆಯೋಜಿಸಲಾದ ಇನ್ವೆಸ್ಟ್ ಕರ್ನಾಟಕ (Invest Karnataka) ಕಾರ್ಯಕ್ರಮವು ಕರ್ನಾಟಕವನ್ನು ಮಹಿಳಾ ನೇತೃತ್ವದ ಉದ್ಯಮಗಳಿಗೆ ಪ್ರಮುಖ ತಾಣವಾಗಿ ಪ್ರದರ್ಶಿಸಿತು. ಈ ವೇಳೆ 400ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳೊಂದಿಗೆ ವಿಚಾರ ಸಂಕಿರಣ, ವ್ಯಾಪಾರ ಮತ್ತು ಆಡಳಿತದಲ್ಲಿ ಅವರ ಸಾಮರ್ಥ್ಯವನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಲಾಯಿತು. ಈ ಉಪಕ್ರಮಗಳು ಕರ್ನಾಟಕ ಮತ್ತು ಭಾರತದಾದ್ಯಂತ ಮಹಿಳಾ ಉದ್ಯಮಿಗಳ ಶಕ್ತಿಯನ್ನು ಪ್ರದರ್ಶಿಸಿದವು ಎಂದು ಅವರು ಮಾಹಿತಿ ನೀಡಿದರು.