ಕೀವ್, ಸೆ.10: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಲ್ಡೊವಾದಿಂದ ನಾರ್ವೆಯ ಓಸ್ಲೋ ನಗರಕ್ಕೆ ಪ್ರಯಾಣಿಸುತ್ತಿದ್ದ ಅವರ ವಿಮಾನಕ್ಕೆ ಡ್ರೋನ್ ಒಂದು ಡಿಕ್ಕಿ ಹೊಡೆಯುವ (Drone Attack) ಸಾಧ್ಯತೆ ಇತ್ತು ಎಂದು ನಾರ್ವೆಯ ಪ್ರಧಾನ ಮಂತ್ರಿ ಜೋನಾಸ್ ಗಾರ್ ಸ್ಟೋರ್ ತಿಳಿಸಿದ್ದಾರೆ.
ನಾರ್ವೆಯ ದಿವಂಗತ ರಾಜ ಐದನೇ ಹೆರಾಲ್ಡ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅಧ್ಯಕ್ಷ ಝೆಲೆನ್ಸ್ಕಿ ಅವರು ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಿಮಾನವು ಮೊಲ್ಡೊವಾದಿಂದ ಟೇಕಾಫ್ ಆಗುತ್ತಿದ್ದಂತೆ ರಷ್ಯಾದ ಡ್ರೋನ್ ಒಂದು ನುಗ್ಗಿ ಬಂದಿದೆ. ಇದರಿಂದಾಗಿ ವಿಮಾನಕ್ಕೆ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಉಕ್ರೇನ್ ಅಧ್ಯಕ್ಷರು ದಿನನಿತ್ಯ ಎದುರಿಸುತ್ತಿರುವ ಯುದ್ಧದ ವಾಸ್ತವಿಕ ಅಪಾಯಕ್ಕೆ ಇದು ಸಾಕ್ಷಿಯಾಗಿದೆ ಎಂದು ನಾರ್ವೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ.
ಡ್ರೋನ್ ನುಗ್ಗಿರುವ ಎಚ್ಚರಿಕೆ ಸಿಗುತ್ತಿದ್ದಂತೆಯೇ, ಮೊಲ್ಡೊವಾ ಸರ್ಕಾರವು ತಕ್ಷಣವೇ ತನ್ನ ವೈಮಾನಿಕ ವಲಯವನ್ನು ತಾತ್ಕಾಲಿಕವಾಗಿ ಮುಚ್ಚಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿತು. ತದನಂತರ ರಷ್ಯಾ ನಿರ್ಮಿತ ಡ್ರೋನ್ ಮೊಲ್ಡೊವಾ ಭೂಪ್ರದೇಶದಲ್ಲಿ ಬಿದ್ದಿರುವುದು ಖಚಿತವಾದ ಬಳಿಕ ಝೆಲೆನ್ಸ್ಕಿ ಅವರಿದ್ದ ವಿಮಾನ ಟೇಕಾಫ್ ಮಾಡಲು ಅನುಮತಿ ನೀಡಲಾಯಿತು.
ಈ ಎಲ್ಲಾ ಆತಂಕಗಳ ನಡುವೆಯೂ ಝೆಲೆನ್ಸ್ಕಿ ಅವರ ವಿಮಾನವು ತಡರಾತ್ರಿ ಓಸ್ಲೋ ನಗರದಲ್ಲಿ ಸುರಕ್ಷಿತವಾಗಿ ಇಳಿದಿದೆ. ಗಡಿಯಲ್ಲಿ ರಷ್ಯಾದ ಡ್ರೋನ್‌ಗಳ ಹಾವಳಿ ತೀವ್ರವಾಗಿರುವುದನ್ನು ಈ ಘಟನೆ ಸಾಬೀತುಪಡಿಸಿದೆ.
ಇನ್ನು ಓಸ್ಲೋದಲ್ಲಿದ್ದಾಗ, ಝೆಲೆನ್ಸ್ಕಿ ಅವರು ಪ್ರಧಾನಿ ಜೋನಾಸ್ ಗಾರ್ ಸ್ಟೋರ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಇಬ್ಬರೂ ನಾಯಕರು ರಕ್ಷಣಾ ಉದ್ಯಮದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಫ್ರೇಯಾ (FREYJA) ಎಂಬ ಕೋಡ್ ನೇಮ್ ಹೊಂದಿರುವ ಯುರೋಪಿಯನ್ ಆಂಟಿ-ಬ್ಯಾಲಿಸ್ಟಿಕ್ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಅಭಿವೃದ್ಧಿಯ ಕುರಿತು ಚರ್ಚಿಸಿದರು.
ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಈ ಬಗ್ಗೆ ತಿಳಿಸಿರುವ ಝೆಲೆನ್ಸ್ಕಿ, ಈ ಸಭೆಯಲ್ಲಿ ಸರ್ಕಾರಗಳು ಮತ್ತು ರಕ್ಷಣಾ ಕಂಪನಿಗಳ ನಡುವೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಈ ಯೋಜನೆಯಿಂದ ಮೊದಲ ಪ್ರಾಯೋಗಿಕ ಫಲಿತಾಂಶಗಳನ್ನು ಪಡೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಹೇಳಿದ್ದಾರೆ.
“ನಾವು ಈ ಯೋಜನೆಯ ಮೊದಲ ಪ್ರಾಯೋಗಿಕ ಫಲಿತಾಂಶಗಳನ್ನು ನೋಡಲು ಆಶಿಸುತ್ತೇವೆ. ಈ ಮಹತ್ವದ ಸಭೆಯನ್ನು ಆಯೋಜಿಸಿದ್ದಕ್ಕಾಗಿ ನಾನು ನಾರ್ವೆಗೆ ಕೃತಜ್ಞನಾಗಿದ್ದೇನೆ. ನಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಿದ್ಧರಿರುವ ಪಾಲುದಾರ ರಾಷ್ಟ್ರಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಇದೇ ವೇಳೆ ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ. ಅಂದಹಾಗೆ, ಉಕ್ರೇನ್-ಮೊಲ್ಡೊವಾ ಗಡಿಯಲ್ಲಿ ಮತ್ತು ಆಗ್ನೇಯದಲ್ಲಿ ಸೇರಿದಂತೆ ಬುಧವಾರ (ಸೆ.9) ನಡೆಸಿದ ರಷ್ಯಾದ ದಾಳಿಯಲ್ಲಿ ಉಕ್ರೇನ್‌ನ ಎಂಟು ಜನರು ಮೃತಪಟ್ಟಿದ್ದಾರೆ.