ಮಾಸ್ಕೋ: ಉಕ್ರೇನ್ ಭಾನುವಾರ (ಜೂ. 1) ರಷ್ಯಾದ ಮೇಲೆ ಅತಿದೊಡ್ಡ ಡ್ರೋನ್ ದಾಳಿ ಪ್ರಾರಂಭಿಸಿದೆ. ತನ್ನ ಗಡಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಪೂರ್ವ ಸೈಬೀರಿಯಾದಲ್ಲಿರುವ ರಷ್ಯಾದ ಸೇನಾ ನೆಲೆಯ ಮೇಲೆ ದಾಳಿ ಮಾಡಿದೆ (Russia-Ukraine War). ಇರ್ಕುಟ್ಕ್ಸ್ ಪ್ರಾಂತ್ಯದ ರಷ್ಯಾದ ಗವರ್ನರ್ ದಾಳಿಯನ್ನು ದೃಢಪಡಿಸಿದ್ದಾರೆ. ಉಕ್ರೇನ್‌ನ ವಿಮಾನವು ಶ್ರೀದ್ನಿ ಗ್ರಾಮದಲ್ಲಿ ಮಿಲಿಟರಿ ಘಟಕದ ಮೇಲೆ ದಾಳಿ ಮಾಡಿದೆ. ಸೈಬೀರಿಯಾದಲ್ಲಿ ಇಂತಹ ದಾಳಿ ನಡೆದಿರುವುದು ಇದು ಮೊದಲನೆ ಸಲ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್‌ನ ಭದ್ರತಾ ಪಡೆ ಸೆಕ್ಯುರಿಟಿ ಸರ್ವಿಸ್ ಆಫ್ ಉಕ್ರೇನ್ (SBU) ನಡೆಸಿದ ಈ ದೊಡ್ಡ ಪ್ರಮಾಣದ ವಿಶೇಷ ಕಾರ್ಯಾಚರಣೆಯಲ್ಲಿ ರಷ್ಯಾದ ವಾಯುನೆಲೆಗಳ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಬಿಯು ಭಾನುವಾರ ಒಲೆನ್ಯಾ ಮತ್ತು ಬೆಲಾಯಾದಲ್ಲಿನ ವಾಯುನೆಲೆಗಳು ಸೇರಿದಂತೆ ರಷ್ಯಾದ 4 ಮಿಲಿಟರಿ ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ತಿಳಿಸಿದೆ.
ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ Tu-95 ಮತ್ತು Tu-22M3 ಬಾಂಬರ್‌ಗಳು ಮತ್ತು 1 A-50 ಸೇರಿದೆ ಎಂದು ಮೂಲಗಳು ಹೇಳಿವೆ. ಇದು ಉಕ್ರೇನ್‌ನ ಅತ್ಯಂತ ಭೀಕರ ದಾಳಿ ಎನ್ನಲಾಗಿದ್ದು, ಇದರಿಂದ ರಷ್ಯಾಕ್ಕೆ ಗಮನಾರ್ಹ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾದ ಇರ್ಕುಟ್ಸ್ಕ್ ಪ್ರದೇಶದಲ್ಲಿನ ಮಿಲಿಟರಿ ಘಟಕದ ಮೇಲೆ ಡ್ರೋನ್ ದಾಳಿ ಮಾಡುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದೀಗ ರಷ್ಯಾ ಎಚ್ಚೆತ್ತುಕೊಂಡಿದ್ದು, ಉಕ್ರೇನ್ ದಾಳಿಯನ್ನು ತಡೆಗಟ್ಟಲು ಸೇನೆ ಸಜ್ಜಾಗಿದೆ. ಜತೆಗೆ ಇದು ಎರಡೂ ದೇಶಗಳ ಶಾಂತಿ ಮಾತುಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಡ್ರೋನ್ ದಾಳಿಯ ದೃಶ್ಯ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Russian Strike On Ukrainian: ಪಾಮ್ ಭಾನುವಾರದಂದು ಉಕ್ರೇನ್ ಮೇಲೆ ರಷ್ಯಾ ದಾಳಿ; 31 ಮಂದಿ ಬಲಿ
ಪವುಟಿನಾ ಅಥವಾ ವೆಬ್ ಎಂಬ ಈ ವಿಶೇಷ ಕಾರ್ಯಾಚರಣೆ ಮೂಲಕ ರಷ್ಯಾದ ಬಲ ಕುಗ್ಗಿಸಲು ಉಕ್ರೇನ್ ಮುಂದಾಗಿದೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ರಷ್ಯಾ ಅಪಾರ ಕ್ಷಿಪಣಿಗಳ ಸಂಗ್ರಹವನ್ನು ಹೊಂದಿದ್ದು, ಅದರ ಬದಲಾಗಿ ಉಕ್ರೇನ್ ಡ್ರೋನ್‌ಗಳ ದೊಡ್ಡ ಪಡೆಯನ್ನೇ ನಿರ್ಮಿಸಿದೆ. ಈ ಮೂಲಕ ರಷ್ಯಾದ ಮಿಲಿಟರಿ ಮತ್ತು ತೈಲ ಸಂಗ್ರಹಗಳ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿಕೊಂಡಿದೆ ಎಂದು ವರದಿಯಾಗಿದೆ.
ರಷ್ಯಾ ಈಗಾಗಲೇ ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್‌ನೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಉಕ್ರೇನ್ ಅಂಗೀಕರಿಸಿತ್ತು. ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಸಚಿವ ರುಸ್ಟೆಮ್ ಉಮೆರೊವ್ ನೇತೃತ್ವದ ನಿಯೋಗವು ಸೋಮವಾರ (ಜೂ. 2) ಇಸ್ತಾನ್‌ಬುಲ್‌ನಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಲಾಗಿತ್ತು.
ಸಂಪೂರ್ಣ ಮತ್ತು ಬೇಷರತ್ತಾದ ಕದನ ವಿರಾಮವನ್ನು ಘೋಷಿಸುವ ಮತ್ತು ಕೈದಿಗಳು ಹಾಗೂ ಅಪಹರಿಸಲ್ಪಟ್ಟ ಮಕ್ಕಳನ್ನು ಹಿಂತಿರುಗಿಸುವ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಇಸ್ತಾನ್‌ಬುಲ್‌ನಲ್ಲಿ ನಡೆಯುವ ಸೋಮವಾರದ ಸಭೆಗೆ ಮೊದಲು ನಮ್ಮ ನಿಲುವನ್ನು ತಿಳಿಸಿದ್ದೇವೆ ಎಂದು ರಷ್ಯಾ ಹೇಳಿದೆ. ಇದೀಗ ಉಕ್ರೇನ್ ದಾಳಿ ಬಳಿಕ ಈ ಮಾತುಕತೆ ನಡೆಯಲಿದೆಯೇ ಎನ್ನುವ ಬಗ್ಗೆ ಅನುಮಾನ ಮೂಡಿದೆ.
ಕಳೆದ ಏಪ್ರಿಲ್‌ನಲ್ಲಿ ಉತ್ತರ ಉಕ್ರೇನ್ ನಗರ ಸುಮಿಯ ಹೃದಯಭಾಗಕ್ಕೆ ರಷ್ಯಾ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದರು. ಈ ವರ್ಷ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಗಳಲ್ಲಿ ಇದು ಒಂದು ಎನ್ನಲಾಗಿದೆ.