ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Russian Strike On Ukrainian: ಪಾಮ್‌ ಭಾನುವಾರದಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ; 31 ಮಂದಿ ಬಲಿ

Missile Strikes: ಹಲವು ದಿನಗಳ ವಿರಾಮದ ಬಳಿಕ ರಷ್ಯಾ ಮತ್ತೆ ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದೆ. ಉತ್ತರ ಉಕ್ರೇನ್ ನಗರ ಸುಮಿಯ ಹೃದಯಭಾಗಕ್ಕೆ ಭಾನುವಾರ (ಏ. 13) ಬೆಳಗ್ಗೆ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಅಪ್ಪಳಿದ್ದು, ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು 83 ಜನರು ಗಾಯಗೊಂಡಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ; 31 ಮಂದಿ ಬಲಿ

Profile Ramesh B Apr 13, 2025 8:43 PM

ಕೀವ್‌: ಹಲವು ದಿನಗಳ ವಿರಾಮದ ಬಳಿಕ ರಷ್ಯಾ ಮತ್ತೆ ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದೆ. ಉತ್ತರ ಉಕ್ರೇನ್ ನಗರ ಸುಮಿ (Sumy)ಯ ಹೃದಯಭಾಗಕ್ಕೆ ಭಾನುವಾರ (ಏ. 13) ಬೆಳಗ್ಗೆ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಅಪ್ಪಳಿದ್ದು, ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು 83 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ ಅಧ್ಯಕ್ಷ ವೆಲೊಡಿಮಿರ್‌ ಝೆಲೆನ್ಸ್ಕಿ (Volodymyr Zelenskyy) ಈ ದಾಳಿಯನ್ನು ಖಂಡಿಸಿದ್ದು, ರಷ್ಯಾ ವಿರುದ್ಧ ಕಠಿಣ ಅಂತಾರಾಷ್ಟ್ರೀಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ (Russian Strike On Ukrainian). ಈ ವರ್ಷ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಗಳಲ್ಲಿ ಇದು ಒಂದು ಎನ್ನಲಾಗಿದೆ.

ಪಾಮ್ ಭಾನುವಾರ (Palm Sunday)ವಾದ ಏ. 13ರಂದು ಸುಮಿ ನಗರದ ಮೇಲೆ ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಉಕ್ರೇನ್ ಹೇಳಿದೆ. ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿ ಮಾಡಲು ತೆರಳಿದ 2 ದಿನಗಳ ನಂತರ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾವನ್ನು ಆಗ್ರಹಿಸಿದ ಬಳಿಕವೂ ಈ ದಾಳಿ ನಡೆದಿದೆ. ಸುಮಿ ನಗರ ರಷ್ಯಾದ ಗಡಿಯಲ್ಲಿದ್ದು, ವಾರಗಳಿಂದ ಇದು ದಾಳಿಗೆ ತುತ್ತಾಗುತ್ತಿದೆ.

ಉಕ್ರೇನ್‌ ಅಧ್ಯಕ್ಷ ವೆಲೊಡಿಮಿರ್‌ ಝೆಲೆನ್ಸ್ಕಿ ಹಂಚಿಕೊಂಡ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Missile Strikes: ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಖಂಡಿಸಿದ ವೆಲೊಡಿಮಿರ್‌ ಝೆಲೆನ್ಸ್ಕಿ

ರಷ್ಯಾ ನಡೆಗೆಉಕ್ರೇನ್‌ ಅಧ್ಯಕ್ಷ ವೆಲೊಡಿಮಿರ್‌ ಝೆಲೆನ್ಸ್ಕಿ ಕಿಡಿಕಾರಿದ್ದಾರೆ. "ದುಷ್ಟರು ಮಾತ್ರ ಈ ರೀತಿ ವರ್ತಿಸುತ್ತಾರೆ. ಸಾಮಾನ್ಯ ಜನರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ" ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ದಾಳಿಯಿಂದ ನಾಶವಾದ ನಗರದ ವಿಡಿಯೊ ಹಂಚಿಕೊಂಡಿದ್ದಾರೆ. ಬೀದಿಯಲ್ಲಿ ಬಿದ್ದ ಮೃತದೇಹ, ನಾಶವಾದ ಬಸ್ ಮತ್ತು ಸುಟ್ಟುಹೋದ ಕಾರು ವಿಡಿಯೊದಲ್ಲಿ ಕಂಡು ಬಂದಿದೆ. ʼʼಪವಿತ್ರ ದಿನ ಪಾಮ್ ಭಾನುವಾರದಂದು ಈ ಕೃತ್ಯ ಎಸಗಲಾಗಿದೆ. ಪ್ರಮುಖ ಹಬ್ಬದ ದಿನದಂದು ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆʼʼ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ವಿರುದ್ಧ ಕ್ರಮಕ್ಕೆ ಆಗ್ರಹ

"ರಷ್ಯಾ ಈ ರೀತಿಯ ಹಿಸಂಸೆಯನ್ನು ಬಯಸುತ್ತದೆ ಮತ್ತು ಯುದ್ಧವನ್ನು ಮುಂದುವರಿಸುತ್ತಿದೆ. ಈ ರೀತಿಯ ವರ್ತನೆಯಿಂದ ಎಂದಿಗೂ ಶಾಂತಿ ನೆಲೆಸಲು ಸಾಧ್ಯವಿಲ್ಲ. ಇದುವರೆಗೆ ನಡೆದ ಮಾತುಕತೆಗೆ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ವೈಮಾನಿಕ ಬಾಂಬ್‌ ದಾಳಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲʼʼ ಎಂದು ವೆಲೊಡಿಮಿರ್‌ ಝೆಲೆನ್ಸ್ಕಿ ಹೇಳಿದ್ದಾರೆ. ಜತೆಗೆ ರಷ್ಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಮೆರಿಕ ಮತ್ತು ಯುರೋಪ್‌ ನಾಯಕರಿಗೆ ಕರೆ ನೀಡಿದ್ದಾರೆ.

ಇತ್ತ ರಷ್ಯಾ ಕೂಡ ಉಕ್ರೇನ್‌ ವಿರುದ್ಧ ಒಪ್ಪಂದ ಉಲ್ಲಂಘನೆಯ ಆರೋಪ ಹೊರಿಸಿದೆ. ಇಂಧನ ಮೂಲ ಸೌಕರ್ಯಗಳ ಮೇಲೆ ಉಕ್ರೇನ್ 5 ಬಾರಿ ದಾಳಿಗಳನ್ನು ನಡೆಸಿದ್ದು, ಅದಕ್ಕೆ ಪ್ರತಿಕ್ರಿಯಿಸಿದ್ದಾಗಿ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಉಕ್ರೇನ್ ಮತ್ತು ರಷ್ಯಾ ಕಳೆದ ತಿಂಗಳು ಇಂಧನ ಪ್ಲಾಂಟ್‌ಗಳ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಎರಡೂ ಕಡೆಯವರು ನಿಷೇಧವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. 2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ಪ್ರಸ್ತುತ ರಷ್ಯಾವು ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣದ ಶೇ. 20ರಷ್ಟು ಭೂಪ್ರದೇಶದ ನಿಯಂತ್ರಣ ಹೊಂದಿದೆ.