ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಯನ್ನು ವಿರೋಧಿಸುತ್ತಿದ್ದ ಅಮೆರಿಕ ಇದೀಗ ಭಾರತ ಸೇರಿದಂತೆ ಹಲವು ದೇಶಗಳಿಗೆ ರಷ್ಯಾದಿಂದ (India- America) ಇಂಧನವನ್ನು ಖರೀದಿಸಲು 30 ದಿನಗಳ ಹೊಸ ಸಾಮಾನ್ಯ ಪರವಾನಗಿಯನ್ನು ನೀಡುವುದಾಗಿ ಘೋಷಿಸಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಯುದ್ಧದ ಸಮಯದಲ್ಲಿ ಗಗನಕ್ಕೇರಿರುವ ಜಾಗತಿಕ ಇಂಧನ ಬೆಲೆಗಳನ್ನು ನಿಯಂತ್ರಿಸುವುದು ಈ ವಿನಾಯಿತಿಯ ಗುರಿಯಾಗಿದೆ. ಏಪ್ರಿಲ್ 17, ಶುಕ್ರವಾರದಿಂದ ಮೇ 16 ರವರೆಗೆ ಹಡಗುಗಳಲ್ಲಿ ತುಂಬಿದ ತೈಲವನ್ನು ಖರೀದಿಸಲು ಅಮೆರಿಕದ ಖಜಾನೆ ಇಲಾಖೆ ಅನುಮತಿ ನೀಡಿದೆ.
ರಷ್ಯಾದಿಂದ ತೈಲ ಖರೀದಿಸಲು ದೇಶಗಳಿಗೆ ನಿರ್ಬಂಧಗಳನ್ನು ಎದುರಿಸದೆ ಅವಕಾಶ ನೀಡುವ ವಿನಾಯಿತಿಯನ್ನು ಅಮೆರಿಕ ನವೀಕರಿಸುವುದಿಲ್ಲ ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ ಕೇವಲ ಎರಡು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. "ನಾವು ರಷ್ಯಾದ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನವೀಕರಿಸುವುದಿಲ್ಲ" ಎಂದು ಬೆಸೆಂಟ್ ಹೇಳಿದ್ದರು. ಮಾರ್ಚ್ 20 ರಂದು ಹೊರಡಿಸಲಾದ ಹಿಂದಿನ ವಿನಾಯಿತಿಯು ಸುಮಾರು 140 ಮಿಲಿಯನ್ ಬ್ಯಾರೆಲ್‌ಗಳ ಇರಾನಿನ ತೈಲವನ್ನು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಅನುವು ಮಾಡಿಕೊಟ್ಟಿತು, ಇದು ಜಾಗತಿಕ ಮಾರುಕಟ್ಟೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿತು ಎಂದು ಬೆಸೆಂಟ್ ಹೇಳಿದ್ದಾರೆ.
ಹಾರ್ಮೊಜ್ ಜಲಸಂಧಿ ಓಪನ್
ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿತ್ತು. ಬಳಿಕ ಇರಾನ್ ಹಾರ್ಮೊಜ್ ಜಲಸಂಧಿಯನ್ನು ಮುಚ್ಚಿತ್ತು. ಇದರಿಂದಾಗಿ ಜಾಗತಿಕ ಇಂಧನ ಕೊರತೆ ಉಂಟಾಗಿತ್ತು. ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವ ಹೊರ್ಮುಝ್ ಜಲಸಂಧಿ 33 ಕಿಮೀ ಅಗಲವಿದೆ. ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯಲಾಗುತ್ತದೆ. ಇರಾನ್ ಈ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ. ಇಲ್ಲಿಂದ ರಫ್ತಾಗುವ ಶೇ. 84ರಷ್ಟು ತೈಲ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ.
ಏನಿದು ಇರಾನ್‌ನ 'ಪರಮಾಣು ಧೂಳು'? ಟ್ರಂಪ್ ಕಣ್ಣಿಟ್ಟಿರೋದ್ಯಾಕೆ?
ಶುಕ್ರವಾರ, ಇರಾನ್ ಜಲಸಂಧಿಯನ್ನು ಮತ್ತೆ ತೆರೆಯುವುದಾಗಿ ಘೋಷಿಸಿತು, ಜಾಗತಿಕ ತೈಲ ಬೆಲೆಗಳು ಶೇಕಡಾ 9 ರಷ್ಟು ಕುಸಿದು ಬ್ಯಾರೆಲ್‌ಗೆ ಸುಮಾರು 90 ಡಾಲರ್‌ಗಳಿಗೆ ತಲುಪಿದವು.