ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಪಾಕ್ ಸೇನೆಗೆ ಹಣಕಾಸಿನ ನೆರವು ನೀಡಬೇಡಿ" ಟ್ರಂಪ್‌ ಸರ್ಕಾರಕ್ಕೆ ಭಟ್ಕಳದ ಅಳಿಯ, ಅಮೆರಿಕ ಸೆನೆಟರ್‌ ಸಯೀದ್‌ರಿಂದ ವಿಶೇಷ ಮನವಿ

ಮಿಚಿಗನ್‌ನ ಸೆನೆಟ್ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಡೆಮೋಕ್ರಾಟಿಕ್ ಪಕ್ಷದ ಡಾ. ಅಬ್ದುಲ್ ಅಲ್-ಸಯೀದ್ ಅವರು ಪಾಕಿಸ್ತಾನಕ್ಕೆ ಅಮೆರಿಕ ನೆರವು ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತೀಯ ಮೂಲದ ಡಾ. ಸಾರಾ ಜುಕಾಕು ಅವರನ್ನು ವಿವಾಹವಾದ ಇವರು ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್‌: ಮಿಚಿಗನ್‌ನ ಸೆನೆಟ್ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಡೆಮೋಕ್ರಾಟಿಕ್ ಪಕ್ಷದ ಡಾ. ಅಬ್ದುಲ್ ಅಲ್-ಸಯೀದ್ (US Senator-Elect Abdul El-Sayed) ಅವರು ಪಾಕಿಸ್ತಾನಕ್ಕೆ ಅಮೆರಿಕ ನೆರವು ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತೀಯ ಮೂಲದ ಡಾ. ಸಾರಾ ಜುಕಾಕು ಅವರನ್ನು ವಿವಾಹವಾದ ಇವರು ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮೆರಿಕದಿಂದ ಆರ್ಥಿಕ ಮತ್ತು ಸೇನಾ ಬೆಂಬಲ ಪಡೆಯುವ ಸರ್ಕಾರಗಳು ಸಮಾನ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಕಡ್ಡಾಯವಾಗಿ ಎತ್ತಿಹಿಡಿಯಬೇಕು ಎಂದು ಪ್ರತಿಪಾದಿಸಿರುವ ಅಮೆರಿಕದ ನೂತನ ಸೆನೆಟರ್ ಅಬ್ದುಲ್ ಎಲ್-ಸಯೀದ್, ಪಾಕಿಸ್ತಾನದ ಸೇನೆಗೆ ಅಮೆರಿಕ ಹಣಕಾಸಿನ ನೆರವು ನೀಡಬಾರದು ಎಂದು ಅವರು ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಸಯೀದ್, ಇಸ್ರೇಲ್‌ನ ಯಹೂದಿ ರಾಷ್ಟ್ರದ ಗುರುತು ಮತ್ತು ಪ್ಯಾಲೆಸ್ಟೀನಿಯನ್ನರ ಸ್ವಯಂ ನಿರ್ಣಯದ ಹಕ್ಕಿನ ಕುರಿತಾದ ಚರ್ಚೆಯ ವೇಳೆ ಪಾಕಿಸ್ತಾನದ ವಿಚಾರವನ್ನು ಪ್ರಸ್ತಾಪಿಸಿದರು. ಅಮೆರಿಕನ್ನರು ತಮ್ಮ ಚರ್ಮದ ಬಣ್ಣ ಅಥವಾ ಪ್ರಾರ್ಥನೆಯ ವಿಧಾನವನ್ನು ಲೆಕ್ಕಿಸದೆ ಕಾನೂನಿನ ಮುಂದೆ ಸಮಾನ ಅವಕಾಶ ಪಡೆಯಬೇಕು ಎಂದರು. ವಾಷಿಂಗ್ಟನ್ ಬೆಂಬಲಿಸುವ ಇತರ ದೇಶಗಳ ಸರ್ಕಾರಗಳು ಸಹ ಇದೇ ಮೂಲಭೂತ ಮಾನದಂಡವನ್ನು ಪೂರೈಸಬೇಕು ಎಂದು ಅವರು ವಾದಿಸಿದರು. "ನಮ್ಮ ತತ್ವಗಳ ಆಧಾರದ ಮೇಲೆ ನಾವು ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವಕ್ಕೆ ಮೊದಲ ಆದ್ಯತೆ ನೀಡಬೇಕು" ಎಂದು ಅವರು ಹೇಳಿದರು.

ಇರಾನ್ ಸಂಘರ್ಷಕ್ಕೆ ಹಣಕಾಸು ತಡೆಗೆ ಒತ್ತಾಯ:

ಸಂದರ್ಶನದ ಮತ್ತೊಂದು ಭಾಗದಲ್ಲಿ, ಇರಾನ್‌ನೊಂದಿಗಿನ ಯುದ್ಧವನ್ನು 'ಕಾನೂನುಬಾಹಿರ ಮತ್ತು ಅಸಮರ್ಥನೀಯ' ಎಂದು ಕರೆದ ಎಲ್-ಸಯೀದ್, ಈ ಯುದ್ಧಕ್ಕೆ ಹಣ ಒದಗಿಸುವ ವಿಚಾರದಲ್ಲಿ ಅಮೆರಿಕನ್ ಕಾಂಗ್ರೆಸ್ ತನ್ನ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕು ಎಂದು ಆಗ್ರಹಿಸಿದರು. ಸಂಘರ್ಷಕ್ಕೆ ಹಣ ನಿಲ್ಲಿಸಲು ಸರ್ಕಾರದ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವುದನ್ನು ಬೆಂಬಲಿಸುವುದಿಲ್ಲವಾದರೂ, ಯುದ್ಧ ಮತ್ತು ವೆಚ್ಚಗಳ ನಿರ್ಧಾರದಲ್ಲಿ ಸಂಸದರು ತಮ್ಮ ಪಾತ್ರವನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಅವರು ಒತ್ತಾಯಿಸಿದರು.

ಅಬ್ದುಲ್ ಅಲ್-ಸಯೀದ್ ಯಾರು?

ಅಮೆರಿಕದ ಮಿಚಿಗನ್ ರಾಜ್ಯದಿಂದ ಯುಎಸ್ ಸೆನೆಟ್‌ಗೆ ಆಯ್ಕೆಯಾಗಿರುವ ಡೆಮಾಕ್ರಟಿಕ್ ಪಕ್ಷದ ನೂತನ ಸೆನೆಟರ್ ಆಗಿ ಆಯ್ಕೆಯಾಗಿರುವ ಅಬ್ದುಲ್ ಅಲ್-ಸಯೀದ್ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಇವರು ಈಜಿಪ್ಟ್‌ ಮೂಲದವರಾಗಿದ್ದು, ಕರ್ನಾಟಕದ ಭಟ್ಕಳ ಮೂಲದ ಡಾ. ಸಾರಾ ಜುಕಾಕು ಅವರನ್ನು ವಿವಾಹವಾಗಿದ್ದಾರೆ.

Vishakha Bhat Heggar

View all posts by this author