ಕೋಲ್ಕತ್ತಾ, ಮಾ.9: ಬಾಂಗ್ಲಾದೇಶದ ರಾಜಕೀಯ ಕಾರ್ಯಕರ್ತ ಉಸ್ಮಾನ್ ಹಾದಿಯ (Usman Hadi) ಹತ್ಯೆಯ ಇಬ್ಬರು ಆರೋಪಿಗಳನ್ನು ಪಶ್ಚಿಮ ಬಂಗಾಳ ಪೊಲೀಸರ (West Bengal Police) ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭಾನುವಾರ (ಮಾ.8) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಸ್ಮಾನ್ ಅವರ ಹತ್ಯೆ ನೆರೆಯ ದೇಶದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು.
ಪಟುಖಾಲಿ ಮತ್ತು ಢಾಕಾ ನಿವಾಸಿಗಳಾದ ರಾಹುಲ್ ಅಲಿಯಾಸ್ ಫೈಸಲ್ ಕರೀಮ್ ಮಸೂದ್ (37) ಮತ್ತು ಅಲಂಗೀರ್ ಹೊಸೇನ್ (34) ಎಂದು ಗುರುತಿಸಲಾದ ಇಬ್ಬರು ಬಾಂಗ್ಲಾದೇಶ ಪ್ರಜೆಗಳನ್ನು ಉತ್ತರ 24 ಪರಗಣ ಜಿಲ್ಲೆಯ ಗಡಿ ಪಟ್ಟಣವಾದ ಬೊಂಗಾನ್‌ನಲ್ಲಿ ಬಂಧಿಸಲಾಗಿದೆ. ಮಾರ್ಚ್ 7 ಮತ್ತು 8 ರ ಮಧ್ಯರಾತ್ರಿ ಅವರನ್ನು ಬಂಧಿಸಲಾಗಿದೆ ಎಂದು ಬಂಗಾಳ ಎಸ್‌ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಸುಲಿಗೆ ಮತ್ತು ಕೊಲೆ ಸೇರಿದಂತೆ ಗಂಭೀರ ಅಪರಾಧಗಳನ್ನು ಮಾಡಿದ ನಂತರ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ಪರಾರಿಯಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು ಎಂದು STF ಹೇಳಿಕೆಯಲ್ಲಿ ತಿಳಿಸಿದೆ. ಅವಕಾಶ ಸಿಕ್ಕಾಗ ಬಾಂಗ್ಲಾದೇಶಕ್ಕೆ ಹಿಂತಿರುಗುವ ಉದ್ದೇಶದಿಂದ ಅವರು ಬೊಂಗಾನ್ ಗಡಿ ಪ್ರದೇಶದಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದರು.
ಬಾಂಗ್ಲಾದೇಶದ ನಾಯಕ ಷರೀಫ್ ಉಸ್ಮಾನ್ ಹಾದಿ ಹಂತಕರು ಮೇಘಾಲಯಕ್ಕೆ ಬಂದಿಲ್ಲ; ಭಾರತದಿಂದ ಸ್ಪಷ್ಟನೆ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸ್‌ಟಿಎಫ್, ಉಸ್ಮಾನ್ ಹಾದಿ ಕೊಲೆ ಆರೋಪ ಹೊತ್ತಿದ್ದ ಇಬ್ಬರನ್ನು ಬಂಧಿಸಿತು. ಇಬ್ಬರು ಆರೋಪಿಗಳು ಮೇಘಾಲಯ ಗಡಿಯ ಮೂಲಕ ಭಾರತದ ಪ್ರದೇಶವನ್ನು ಪ್ರವೇಶಿಸಿ, ಭಾರತದ ವಿವಿಧ ಸ್ಥಳಗಳ ಮೂಲಕ ತೆರಳಿ, ಅಂತಿಮವಾಗಿ ಬಾಂಗ್ಲಾದೇಶಕ್ಕೆ ಮರಳುವ ಉದ್ದೇಶದಿಂದ ಬೊಂಗಾವ್‌ಗೆ ಬಂದಿದ್ದರು ಎಂದು ಎಸ್‌ಟಿಎಫ್ ತಿಳಿಸಿದೆ.
ಈ ಸಂಬಂಧ ನಿರ್ದಿಷ್ಟ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಟಿಎಫ್ ಹೇಳಿದೆ. ಭಾನುವಾರ (ಮಾ.8) ನ್ಯಾಯಾಲಯವು ಮಸೂದ್ ಮತ್ತು ಹೊಸೇನ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಬಾಂಗ್ಲಾದೇಶದ ಇಂಕ್ವಿಲಾಬ್ ಮಂಚ್‍ನ ವಿದ್ಯಾರ್ಥಿ ನಾಯಕ ಮತ್ತು ವಕ್ತಾರರಾಗಿದ್ದ ಉಸ್ಮಾನ್ ಹಾದಿ ಅವರ ಮೇಲೆ ಡಿಸೆಂಬರ್ 12, 2025 ರಂದು ಢಾಕಾದಲ್ಲಿ ಗುಂಡು ಹಾರಿಸಲಾಯಿತು. ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ವೇಳೆ ಷರೀಫ್‌ಗೆ ತಲೆಗೆ ಗುಂಡು ಹಾರಿಸಲಾಗಿತ್ತು. ಗುಂಡೇಟು ಬೀಳುತ್ತಿದ್ದಂತೆ ಗಂಭೀರ ಗಾಯಗೊಂಡಿದ್ದ ಷರೀಫ್ ಅನ್ನು ಮೊದಲಿಗೆ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು. ಡಿಸೆಂಬರ್ 18 ರಂದು ಚಿಕಿತ್ಸೆ ಫಲಕಾರಿಯಾಗದೆ ಸಿಂಗಾಪೂರದಲ್ಲಿ ಅವರು ನಿಧನರಾದರು.
ಹಾದಿ ಸಾವಿನ ಸುದ್ದಿ ಹೊರಬಿದ್ದ ತಕ್ಷಣವೇ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಿತ್ತು, ಎಲ್ಲೆಡೆ ಹಿಂಸಾಚಾರ ನಡೆಸಲಾಯಿತು. ಹಿಂದೂಗಳ ಮಾರಣಹೋಮವೇ ನಡೆಯಿತು.
ಷರೀಫ್ ಉಸ್ಮಾನ್ ಹಾದಿ ಯಾರು?
ಷರೀಫ್ ಉಸ್ಮಾನ್ ಹಾದಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹಸೀನಾ ಅವರ ತೀವ್ರ ವಿರೋಧಿಯಾಗಿದ್ದರು. ಜುಲೈ ತಿಂಗಳಲ್ಲಿ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಈ ಆಂದೋಲನಗಳು ಹಸೀನಾ ಅವರ ರಾಜಕೀಯ ಪತನಕ್ಕೆ ಕಾರಣವಾಗಿದ್ದವು. ಅವಾಮಿ ಲೀಗ್ ಪಕ್ಷದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಹಾದಿ, ಆ ಪಕ್ಷವನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದರು.
‘ಇಂಕಿಲಾಬ್ ಮಂಚ್’ ಸಂಘಟನೆಯ ಸಂಚಾಲಕ
ಅಲ್ಲದೆ ಭಾರತ ವಿರೋಧಿ ಹೇಳಿಕೆಗಳಿಂದ ಗಮನ ಸೆಳೆದ ‘ಇಂಕಿಲಾಬ್ ಮಂಚ್’ ಸಂಘಟನೆಯ ಸಂಚಾಲಕನಾಗಿದ್ದು, ಈ ಸಂಘಟನೆಯ ಮೂಲಕ ಅವರು ಭಾರತ ವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತಿದ್ದರು ಎಂಬ ಆರೋಪಗಳಿವೆ. ಚುನಾವಣೆಯಲ್ಲಿ ಢಾಕಾದ ಒಂದು ಕ್ಷೇತ್ರದಿಂದ ಸ್ಪರ್ಧಿಸಲು ಅವರು ಸಿದ್ಧತೆ ನಡೆಸುತ್ತಿದ್ದರು.