ವಾಷಿಂಗ್ಟನ್: ಭಾರತ ಮತ್ತು ಅಮೆರಿಕದ ಚುನಾವಣಾ ವ್ಯವಸ್ಥೆಗಳ ನಡುವಿನ ವ್ಯತ್ಯಾಸಗಳು, ಮತದಾರರ ಗುರುತಿನ ದೃಢೀಕರಣ ಹಾಗೂ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕುರಿತ ಚರ್ಚೆ ಇದೀಗ ಮತ್ತೊಮ್ಮೆ (Donald Trump) ಮುನ್ನೆಲೆಗೆ ಬಂದಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಗುರುತಿನ ದೃಢೀಕರಣ ಹೇಗೆ ನಡೆಯುತ್ತದೆ. ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವೇ ಹಾಗೂ ಚುನಾವಣೆಯಲ್ಲಿ ಮತದಾರರ ಅರ್ಹತೆಯನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂಬ ಕುರಿತು ಪ್ರಶ್ನೆಗಳನ್ನು ಕೇಳಿರುವುದನ್ನು ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಶಿಯಲ್’ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಗುರುತು ಮತ್ತು ಪೌರತ್ವವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪರಿಶೀಲಿಸುವ ಅಗತ್ಯವಿದೆ ಎಂಬ ತಮ್ಮ ನಿಲುವನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ಅಮೆರಿಕದಲ್ಲಿ ಮತದಾರರ ನೋಂದಣಿ ಪ್ರಕ್ರಿಯೆಯಲ್ಲೇ ಪೌರತ್ವದ ದಾಖಲೆಗಳನ್ನು ಕಡ್ಡಾಯಗೊಳಿಸುವ ಹಾಗೂ ಮತದಾನದ ವೇಳೆ ಗುರುತಿನ ಚೀಟಿ ಕಡ್ಡಾಯಗೊಳಿಸುವ ಕ್ರಮಕ್ಕೆ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಗೆ ಹಿನ್ನೆಲೆಯಾಗಿ ಭಾರತದ ಚುನಾವಣಾ ವ್ಯವಸ್ಥೆಯನ್ನೂ ಟ್ರಂಪ್ ಉಲ್ಲೇಖಿಸಿದ್ದು ಇಲ್ಲಿ ಗಮನಾರ್ಹವಾಗಿದೆ. ಭಾರತದಲ್ಲಿ 646 ಮಿಲಿಯನ್ ಮತದಾರರಿದ್ದು, ಅವರಲ್ಲಿ ಶೇಕಡಾ 100 ರಷ್ಟು ಜನರು ಫೋಟೋ ಐಡಿ ಬಳಸಿದ್ದಾರೆ ಮತ್ತು ಶೇಕಡಾ 1 ಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಿದ್ದಾರೆ ಎಂದು ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.
ಅಮೆರಿಕ ಮತ್ತು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಪ್ರಮುಖ ವ್ಯತ್ಯಾಸವೇನು?
ಭಾರತದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು, ಮತದಾರರನ್ನು ನೋಂದಾಯಿಸುವುದು, ಅವರ ಅರ್ಹತೆಯನ್ನು ಪರಿಶೀಲಿಸುವುದು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಇದಕ್ಕೆ ಭಿನ್ನವಾಗಿ ಅಮೆರಿಕದಲ್ಲಿ ಚುನಾವಣೆಗಳ ನಿರ್ವಹಣೆ ರಾಜ್ಯಗಳು, ಕೌಂಟಿಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ನಡೆಯುತ್ತದೆ.
ಅಮೆರಿಕದಲ್ಲಿ ಮತದಾರರ ನೋಂದಣಿ ಹೇಗೆ?
ಅಮೆರಿಕದಲ್ಲಿ ಮತದಾರರ ಅರ್ಹತೆ ಮತ್ತು ನೋಂದಣಿ ಬಹುತೇಕ ರಾಜ್ಯಗಳ ಜವಾಬ್ದಾರಿಯಾಗಿದೆ. ಮತದಾರರ ನೋಂದಣಿ ಸಾಮಾನ್ಯವಾಗಿ ವ್ಯಕ್ತಿಯೇ ಮಾಡಿಕೊಳ್ಳಬೇಕಾಗುತ್ತದೆ. ಮತದಾರರು ತಾವು ಅಮೆರಿಕದ ಪ್ರಜೆ ಎಂಬುದನ್ನು ಘೋಷಿಸಬೇಕು. ಆದರೆ ಮತದಾರರ ನೋಂದಣಿಯ ಸಂದರ್ಭದಲ್ಲಿ ಪೌರತ್ವದ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮ ಎಲ್ಲ ರಾಜ್ಯಗಳಲ್ಲೂ ಇಲ್ಲ. ಅಮೆರಿಕದ National Voter Registration Act, 1993 (ನ್ಯಾಷನಲ್ ವೋಟರ್ ನೋಂದಣಿ) ಮೂಲಕ ಮೋಟಾರು ವಾಹನ ಕಚೇರಿಗಳು ಮತ್ತು ಕೆಲವು ಸಾರ್ವಜನಿಕ ಸೇವಾ ಕಚೇರಿಗಳಲ್ಲಿ ಮತದಾರರ ನೋಂದಣಿಗೆ ಅವಕಾಶ ಕಲ್ಪಿಸಲಾಯಿತು.
ಭಾರತದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವ ವಿಧಾನ
ಭಾರತದಲ್ಲಿ ಚುನಾವಣಾ ಆಯೋಗವು ಪ್ರತಿ ರಾಜ್ಯದಲ್ಲೂ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ಹಾಗೂ ನೋಂದಣಿ ಪ್ರಕ್ರಿಯೆ ನಡೆಸುತ್ತದೆ. ಅರ್ಹ ಮತದಾರರನ್ನು ಗುರುತಿಸಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಅರ್ಹ ಮತದಾರರಿಗೆ Electoral Photo Identity Card (EPIC) ನೀಡಲಾಗುತ್ತದೆ. ಮತಗಟ್ಟೆಯಲ್ಲಿ ಗುರುತಿನ ದೃಢೀಕರಣಕ್ಕಾಗಿ ಆಧಾರ್ ಸೇರಿದಂತೆ ಇತರ ಮಾನ್ಯ ದಾಖಲೆಗಳನ್ನೂ ಬಳಸಬಹುದಾಗಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಶೀಲನೆಯ ಜವಾಬ್ದಾರಿ ಕೇಂದ್ರೀಕೃತವಾಗಿ ಚುನಾವಣಾ ಆಯೋಗದ ಮೇಲಿರುತ್ತದೆ. ಅಮೆರಿಕದಲ್ಲಿ ಇದೇ ಪ್ರಕ್ರಿಯೆ ರಾಜ್ಯ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ನಡೆಯುತ್ತದೆ.
ಸೇವ್ ಅಮೆರಿಕಾ Act ಚರ್ಚೆ
ಟ್ರಂಪ್ ಹೇಳಿಕೆ ನಡುವೆ ಅಮೆರಿಕದ SAVE America Act ಕೂಡ ಪ್ರಮುಖ ಚರ್ಚೆಯ ವಿಷಯವಾಗಿದೆ. ಇದು ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಅರ್ಹತೆ ಮತ್ತು ಪೌರತ್ವ ಪರಿಶೀಲನೆಯನ್ನು ಕಟ್ಟುನಿಟ್ಟಾಗಿಸಲು ಪ್ರಸ್ತಾಪಿಸಲಾಗಿರುವ ಒಂದು ಮಹತ್ವದ ಮತ್ತು ವಿವಾದಾತ್ಮಕ ಫೆಡರಲ್ (ರಾಷ್ಟ್ರೀಯ) ಮಸೂದೆಯಾಗಿದೆ. ಮತದಾರರಾಗಿ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ಅಮೆರಿಕದ ಪೌರತ್ವವನ್ನು ದಾಖಲೆಗಳ ಮೂಲಕ ದೃಢಪಡಿಸುವಂತೆ ಮಾಡುವ ಉದ್ದೇಶ ಹೊಂದಿರುವ ಈ ಮಸೂದೆಗೆ ಟ್ರಂಪ್ ಆಡಳಿತ ಬೆಂಬಲ ನೀಡಿದೆ. ಹೊಸ ಮತದಾರರು ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಅಥವಾ ನೈಸರ್ಗಿಕೀಕರಣದ ದಾಖಲೆಗಳಂತಹ ಪೌರತ್ವದ ಪುರಾವೆಗಳನ್ನು ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿದೆ.
ಆದರೆ ಈ Act ಜಾರಿ ಕುರಿತು ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಮೆರಿಕದ ಲಕ್ಷಾಂತರ ಬಡವರು, ಗ್ರಾಮೀಣ ಭಾಗದ ಜನ ಮತ್ತು ವಿದ್ಯಾರ್ಥಿಗಳ ಬಳಿ ತಕ್ಷಣಕ್ಕೆ ಪಾಸ್‌ಪೋರ್ಟ್ ಅಥವಾ ಜನನ ಪ್ರಮಾಣಪತ್ರಗಳು ಲಭ್ಯವಿರುವುದಿಲ್ಲ. ಈ ನಿಯಮದಿಂದಾಗಿ ಅರ್ಹ ನಾಗರಿಕರೇ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ವಾದಿಸಿದ್ದಾರೆ. ಸದ್ಯ ಈ ಮಸೂದೆಯು ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ (ಕೆಳಮನೆ) ಅಂಗೀಕಾರಗೊಂಡಿದೆ.ಆದರೆ, ಡೆಮಾಕ್ರಟಿಕ್ ಪಕ್ಷದ ತೀವ್ರ ವಿರೋಧದಿಂದಾಗಿ ಸೆನೆಟ್‌ನಲ್ಲಿ (ಮೇಲ್ಮನೆ) ಇದು ಇನ್ನೂ ಬಾಕಿಯ ಉಳಿದಿದೆ.
SAVE America Act ಅಮೆರಿಕದ ಚುನಾವಣೆಯಲ್ಲಿ ಮತದಾರರ ಪೌರತ್ವದ ದಾಖಲೆ ಮತ್ತು ಗುರುತಿನ ಪರಿಶೀಲನೆಗೆ ಕಾನೂನುಬದ್ಧವಾಗಿ ಹೆಚ್ಚಿನ ಒತ್ತು ನೀಡುವ ಪ್ರಸ್ತಾವವಾಗಿದ್ದರೆ, ಭಾರತದ SIR ಎನ್ನುವುದು ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಪರಿಶೀಲನಾ ಪ್ರಕ್ರಿಯೆ. ಅಂದರೆ, ಒಂದು ಕಡೆ ಅಮೆರಿಕದಲ್ಲಿ ಮತದಾರರ ನೋಂದಣಿ ವೇಳೆ ಪೌರತ್ವದ ದೃಢೀಕರಣವನ್ನು ಬಲಪಡಿಸುವುದು ಪ್ರಮುಖ ವಿಷಯವಾಗಿದ್ದರೆ, ಭಾರತದಲ್ಲಿ ಈಗಾಗಲೇ ಇರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ ನವೀಕರಿಸುವುದಕ್ಕೆ SIR ಒತ್ತು ನೀಡುತ್ತದೆ.
ಅಮೆರಿಕದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ 'ಸೇವ್ ಅಮೆರಿಕಾ ಆಕ್ಟ್', ಅಲ್ಲಿನ ವ್ಯವಸ್ಥೆಯಲ್ಲಿರುವ ಭದ್ರತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅಂಚೆ ಮತದಾನದಲ್ಲಿ ಕಟ್ಟುನಿಟ್ಟಾದ ಐಡಿ ಪರಿಶೀಲನೆ ಇಲ್ಲದಿರುವುದು ಮತ್ತು ಮತದಾರರ ಪಟ್ಟಿಯನ್ನು ನಿಯಮಿತವಾಗಿ ಪರಿಷ್ಕರಿಸದಿರುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಿದೆ ಎಂದು ರಿಪಬ್ಲಿಕನ್ನರು ವಾದಿಸುತ್ತಾರೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಭಾರತದ ವ್ಯವಸ್ಥೆಯನ್ನು ಶ್ಲಾಘಿಸಿ, ಅಮೆರಿಕದಲ್ಲೂ ಕಠಿಣ ನಿಯಮ ತರಲು ಬಯಸುತ್ತಿದ್ದಾರೆ.
ಅನಿವಾಸಿ ಭಾರತೀಯರ ಮೇಲೆ ಪರಿಣಾಮವೇನು?
ಅಮೆರಿಕದ ಪೌರತ್ವ ಪಡೆದು, ಅಲ್ಲಿನ ಮಾನ್ಯ ಪಾಸ್‌ಪೋರ್ಟ್ ಹಾಗೂ ಪ್ರಮಾಣಪತ್ರ ಹೊಂದಿರುವ ಭಾರತೀಯರಿಗೆ ಈ ಕಾಯ್ದೆಯಿಂದ ಯಾವುದೇ ಕಾನೂನಾತ್ಮಕ ತೊಂದರೆಯಾಗುವುದಿಲ್ಲ.ಅವರು ಮತದಾನ ಮಾಡುವಾಗ ತಮ್ಮ ಪೌರತ್ವದ ದಾಖಲೆಯನ್ನು ಸುಲಭವಾಗಿ ಒದಗಿಸಬಹುದು. ಆದರೆ ಈ ಕಾಯ್ದೆ ಜಾರಿಯಾದರೆ, ಹೊಸದಾಗಿ ಪೌರತ್ವ ಪಡೆದ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಟ್ಟುನಿಟ್ಟಾದ ಮತ್ತು ದೀರ್ಘಾವಧಿಯ ದಾಖಲೆ ಪರಿಶೀಲನಾ ಪ್ರಕ್ರಿಯೆಯನ್ನು ಎದುರಿಸಬೇಕಾಗಬಹುದು.ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ವಿಳಂಬವಾದರೆ, ಅವರು ಮುಂಬರುವ ಚುನಾವಣೆಗಳಲ್ಲಿ ತಕ್ಷಣವೇ ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಳ್ಳಬಹುದು.