ಹೊಸದಿಲ್ಲಿ: ಕಳೆದ ವರ್ಷ ಭಾರತವನ್ನು ಕೆಣಕಲು ಹೋಗಿ ಮಾಲ್ದೀವ್ಸ್ ಸರಿಯಾಗಿ ಹೊಡೆತ ತಿಂದಿತ್ತು. ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿತ್ತು. ಇದೀಗ ಟರ್ಕಿ ಸರದಿ. ಭಾರತದ ವಿರುದ್ಧ ನಡೆದ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ನೆರವಾದ ಟರ್ಕಿ ವಿರುದ್ಧ ಇದೀಗ ಭಾರತೀಯರು ʼಬಾಯ್ಕಾಟ್ ಟರ್ಕಿʼ (Boycott Turkey) ಅಭಿಯಾನ ಆರಂಭಿಸಿದ್ದಾರೆ. ಭಾರತ ವಿರುದ್ಧದ ಪಾಕಿಸ್ತಾನದ ದಾಳಿಯಲ್ಲಿ ಟರ್ಕಿ ನಿರ್ಮಿತ 350ಕ್ಕೂ ಹೆಚ್ಚು ಡ್ರೋನ್ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಜತೆಗೆ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಇಬ್ಬರು ಟರ್ಕಿಶ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ಯುದ್ಧ ಸಾಮಗ್ರಿ ನಿರ್ವಾಹಕರೊಂದಿಗೆ ಸಹಾಯ ಮಾಡಿರುವುದು ಕಂಡು ಬಂದಿದ್ದು, ಭಾರತೀಯರು ಟರ್ಕಿ ವಿರುದ್ಧ ಮುಗಿ ಬಿದ್ದಿದ್ದಾರೆ.
ಇದೀಗ ಪಾಕಿಸ್ತಾನದ ಜತೆಗೆ ಮತ್ತೊಂದು ಮುಸ್ಲಿಂ ರಾಷ್ಟ್ರ ಟರ್ಕಿ ವಿರುದ್ಧವೂ ಭಾರತೀಯರು ಕೆಂಡ ಕಾರುತ್ತಿದ್ದಾರೆ. ಬಾಯ್ಕಾಟ್ ಅಬಿಯಾನಕ್ಕೆ ಟರ್ಕಿ ಹೆಚ್ಚಿನ ಬೆಲೆ ತೆರೆಬೇಕಾಗುತ್ತದೆ ಎಂದೇ ತಜ್ಞರು ಊಹಿಸಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ #BoycottTurkey ಟಾಪಿಕ್ ಟ್ರೆಂಡಿಂಗ್‌ನಲ್ಲಿದ್ದು, ಅನೇಕ ಭಾರತೀಯರು ಟರ್ಕಿ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ. ಟರ್ಕಿಯ ಟಿಆರ್‌ಟಿ ವರ್ಲ್ಡ್ ಔಟ್‌ಲೆಟ್‌ನ ಎಕ್ಸ್ ಖಾತೆಯನ್ನು ಈಗಾಗಲೇ ಭಾರತ ನಿಷೇಧಿಸಿದೆ.
ವರದಿಯ ಪ್ರಕಾರ ಭಾರತದ ವಿರುದ್ಧ ನಡೆದ ದಾಳಿಯ ವೇಳೆ ಪಾಕಿಸ್ತಾನ ಟರ್ಕಿ ನಿರ್ಮಿತ ಸುಮಾರು 350 ಬೈಕರ್ ವೈಐಎಚ್‌ಎ III (Byker YIHA III) ಡ್ರೋನ್ ಬಳಸಿದೆ. ಇವರನ್ನು ಭಾರತೀಯ ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ʼʼನಾವು ಹೊಡೆದುರುಳಿಸಿದ ಡ್ರೋನ್ ಅವಶೇಷಗಳನ್ನು ಪರಿಶೀಲಿಸಲಾಗಿದ್ದು, ತನಿಖೆ ಪ್ರಕಾರ ಇದು ಟರ್ಕಿ ನಿರ್ಮಿತ ಎನ್ನುವುದು ತಿಳಿದು ಬಂದಿದೆʼʼ ಎಂದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ (Sofia Qureshi) ತಿಳಿಸಿದ್ದಾರೆ.
ʼʼಕಾರ್ಯಾಚರಣೆ ವೇಳೆ ಭಾರತೀಯ ಟರ್ಕಿಯ ಇಬ್ಬರು ಡ್ರೋನ್ ಆಪರೇಟರ್‌ಗಳು ಮೃತಪಟ್ಟಿದ್ದಾರೆ. ಆದರೆ ಈ ವಿವರವನ್ನು ಪಾಕಿಸ್ತಾನ ಮುಚ್ಚಿಟ್ಟಿದೆʼʼ ಎಂದು ಮೂಲಗಳು ಹೇಳಿವೆ.
ರಾಜೀವ್ ಚಂದ್ರಶೇಖರ್ ಅವರ ಪೋಸ್ಟ್:
ಈ ಸುದ್ದಿಯನ್ನೂ ಓದಿ: India-Pak Tensions: ಪಾಕ್‌ಗೆ ಬೆಂಬಲ- ಟರ್ಕಿ, ಅಜೆರ್ಬೈಜಾನ್‌ಗೆ ಬಾಯ್ಕಾಟ್ ಬಿಸಿ

ಬಾಯ್ಕಾಟ್ ಅಭಿಯಾನ
ಈ ಎಲ್ಲ ಕಾರಣಗಳಿಂದ ಸದ್ಯ ಬಾಯ್ಕಾಟ್ ಟರ್ಕಿ ಅಭಿಯಾನ ಆರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಟರ್ಕಿ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ಪ್ರವಾಸಕ್ಕಾಗಿ ಟರ್ಕಿಗೆ ತೆರಳದಂತೆ ಕರೆ ನೀಡುತ್ತಿದ್ದಾರೆ. ಈ ಅಭಿಯಾನಕ್ಕೆ ಭಾರತದ ಉದ್ಯಮಿ ಹರ್ಷ ಗೋಯಂಕಾ ಕೂಡ ಧ್ವನಿಗೂಡಿಸಿದ್ದಾರೆ. ʼʼಪ್ರವಾಸೋದ್ಯಮದ ಮೂಲಕ ಕಳೆದ ವರ್ಷ ಭಾರತ ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಸುಮಾರು 4,000 ಕೋಟಿ ರೂ. ಆದಾಯ ಒದಗಿಸಿತ್ತು. ಸಾವಿರಾರು ಸಂಖ್ಯೆಯ ಉದ್ಯೋಗ ಸೃಷ್ಟಿಸಲಾಗಿತ್ತು. ಅವರ ಆರ್ಥಿಕತೆಗೆ ಉತ್ತೇಜನ ನೀಡಲಾಗಿತ್ತು. ಪಹಲ್ಗಾಮ್ ದಾಳಿಯ ನಂತರ ಈ 2 ರಾಷ್ಟ್ರಗಳು ಪಾಕಿಸ್ತಾನದ ಬೆಂಬಲಕ್ಕೆ ನಿಂತಿವೆ. ಭಾರತ ಮತ್ತು ಪ್ರಪಂಚದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ಹೀಗಾಗಿ ದಯವಿಟ್ಟು ಈ 2 ದೇಶಗಳಿಗೆ ಪ್ರವಾಸಕ್ಕಾಗಿ ತೆರಳಬೇಡಿ. ಜೈ ಹಿಂದ್," ಎಂದು ಗೋಯೆಂಕಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಭಿಯಾನದ ಪರಿಣಾಮ ಈಗಾಗಲೇ ಸುಮಾರು ಶೇ. 22ರಷ್ಟು ಮಂದಿ ಟರ್ಕಿ ಪ್ರವಾಸ ಮೊಟಕುಗೊಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದ್ದಾರೆ.
ಹರ್ಷ ಗೋಯಂಕಾ ಅವರ ಪೋಸ್ಟ್:
ಕೈ ಜೋಡಿಸಿದ ವ್ಯಾಪಾರಿಗಳು
ಪ್ರವಾಸಿಗರು ಮಾತ್ರವಲ್ಲ ವ್ಯಾಪಾರಿಗಳಿಂದಲೂ ಟರ್ಕಿಗೆ ಹೊಡೆತ ಬೀಳುತ್ತಿದೆ. ಇದೀಗ ಟರ್ಕಿ ಉತ್ಪನ್ನಗಳನ್ನು ಖರೀದಿಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಟರ್ಕಿ ಮಾರ್ಬಲ್ ಮತ್ತು ಸೇಬುಗಳನ್ನು ಬಹಿಷ್ಕರಿಸಲಾಗುತ್ತಿದೆ. ಎನ್‌ಡಿಟಿವಿ ವರದಿ ಪ್ರಕಾರ, ಭಾರತೀಯ ವ್ಯಾಪಾರಿಗಳು ಟರ್ಕಿಶ್ ಮಾರ್ಬಲ್ ಮತ್ತು ಟರ್ಕಿಶ್ ಸೇಬುಗಳನ್ನು ಬಹಿಷ್ಕರಿಸುತ್ತಿದ್ದಾರೆ.
ಎಎನ್‌ಐ ಪ್ರಕಾರ, ಭಾರತದ ಮಾರ್ಬಲ್ ಕೇಂದ್ರವಾದ ಉದಯಪುರದ ವ್ಯಾಪಾರಿಗಳು ಟರ್ಕಿಯಿಂದ ಮಾರ್ಬಲ್ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ. "ಟರ್ಕಿಶ್ ಮಾರ್ಬಲ್ ನಿಷೇಧಿಸುವಂತೆ ನಾವು ಪ್ರಧಾನಿಗೆ ಪತ್ರ ಬರೆದಿದ್ದೇವೆ. ವ್ಯವಹಾರವು ರಾಷ್ಟ್ರಕ್ಕಿಂತ ದೊಡ್ಡದಾಗಲು ಸಾಧ್ಯವಿಲ್ಲ" ಎಂದು ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಕಪಿಲ್ ಸುರಾನ ತಿಳಿಸಿದ್ದಾರೆ. ಟರ್ಕಿ ಭಾರತದ ಅತಿದೊಡ್ಡ ಮಾರ್ಬಲ್ ಪೂರೈಕೆದಾರ ರಾಷ್ಟ್ರ ಎನಿಸಿಕೊಂಡಿದೆ.
ಭಾರತವು ಆಮದು ಮಾಡಿಕೊಳ್ಳುವ ಮಾರ್ಬಲ್‌ಗಳ ಪೈಕಿ ಸುಮಾರು ಶೇ. 70ರಷ್ಟು ಟರ್ಕಿಯಿಂದಲೇ ಬರುತ್ತದೆ. ಇದರ ವಾರ್ಷಿಕ ವಹಿವಾಟು 2,500 ಕೋಟಿ ರೂ.-3,000 ಕೋಟಿ ರೂ. ಅಂದರೆ ಸುಮಾರು 14ರಿಂದ 18 ಲಕ್ಷ ಟನ್‌ಗಳನ್ನು ಟರ್ಕಿಯಿಂದ ತರಿಸಿಕೊಳ್ಳಲಾಗುತ್ತದೆ.
ಇತ್ತ ಮಹಾರಾಷ್ಟ್ರದ ಪುಣೆಯ ವ್ಯಾಪಾರಿಗಳು ಟರ್ಕಿಯ ಸೇಬನ್ನು ಬಹಿಷ್ಕರಿಸುತ್ತಿದ್ದಾರೆ. ವ್ಯಾಪಾರಿಗಳು ಈಗ ಅಮೆರಿಕ, ಇರಾನ್, ನ್ಯೂಜಿಲೆಂಡ್ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ ಸೇಬುಗಳನ್ನು ಖರೀದಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಟರ್ಕಿಶ್ ಸೇಬುಗಳು ಭಾರತದಲ್ಲಿ ಸುಮಾರು 1,000 ಕೋಟಿ ರೂ. - 1,200 ಕೋಟಿ ರೂ. ವಹಿವಾಟು ನಡೆಸುತ್ತವೆ.
ಇತ್ತ ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಟರ್ಕಿಯ ಇನೋನು ವಿಶ್ವವಿದ್ಯಾಲಯದೊಂದಿಗಿನ ತಿಳುವಳಿಕೆ ಒಪ್ಪಂದವನ್ನು (MoU) ರದ್ದುಗೊಳಿಸಿದೆ. "ರಾಷ್ಟ್ರೀಯ ಭದ್ರತಾ ಕಾರಣಗಳಿಂದ ಜೆಎನ್‌ಯು ಮತ್ತು ಇನೋನು ವಿಶ್ವವಿದ್ಯಾಲಯದ ನಡುವಿನ ಒಪ್ಪಂದವನ್ನು ಮುಂದಿನ ಸೂಚನೆ ಬರುವವರೆಗೂ ಅಮಾನತುಗೊಳಿಸಲಾಗಿದೆ. ಜೆಎನ್‌ಯು ರಾಷ್ಟ್ರದೊಂದಿಗೆ ನಿಲ್ಲುತ್ತದೆ" ಎಂದು ಜೆಎನ್‌ಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಟರ್ಕಿಯೊಂದಿಗೆ ವ್ಯಾಪಾರ-ವ್ಯವಹಾರ
ಟರ್ಕಿಯಲ್ಲಿ ಅಂದಾಜು 3,000 ಭಾರತೀಯ ಪ್ರಜೆಗಳಿದ್ದಾರೆ. ಅದರಲ್ಲಿ 200 ವಿದ್ಯಾರ್ಥಿಗಳು. 2024-25ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಟರ್ಕಿಗೆ ಭಾರತದ ರಫ್ತು 5.2 ಬಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು. ಇನ್ನು 2024-25ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಟರ್ಕಿಯಿಂದ ಭಾರತದ ಆಮದು 2.84 ಬಿಲಿಯನ್ ಡಾಲರ್ ಆಗಿತ್ತು. 2023-24ರಲ್ಲಿ ಇದು 3.78 ಬಿಲಿಯನ್ ಡಾಲರ್ ಆಗಿತ್ತು.
ಟರ್ಕಿಗೆ ಭಾರತದ ರಫ್ತುಗಳಲ್ಲಿ ಖನಿಜ ಇಂಧನಗಳು, ತೈಲ, ವಿದ್ಯುತ್ ಯಂತ್ರೋಪಕರಣಗಳು, ಅಟೋ, ಅದರ ಭಾಗಗಳು, ರಾಸಾಯನಿಕಗಳು, ಔಷಧ ಉತ್ಪನ್ನಗಳು, ಟ್ಯಾನಿಂಗ್ ಮತ್ತು ಡೈಯಿಂಗ್ ವಸ್ತುಗಳು, ಪ್ಲಾಸ್ಟಿಕ್, ರಬ್ಬರ್, ಹತ್ತಿ, ಕಬ್ಬಿಣ ಮತ್ತು ಉಕ್ಕು ಸೇರಿದೆ.
ಭಾರತವು ವಿವಿಧ ರೀತಿಯ ಮಾರ್ಬಲ್, ತಾಜಾ ಸೇಬುಗಳು, ಚಿನ್ನ, ತರಕಾರಿಗಳು, ಸುಣ್ಣ ಮತ್ತು ಸಿಮೆಂಟ್, ಖನಿಜ ತೈಲ, ರಾಸಾಯನಿಕಗಳು, ನೈಸರ್ಗಿಕ ಮುತ್ತು ಇತ್ಯಾದಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಭಾರತದ ಬಹಿಷ್ಕಾರದ ಕೂಗು ಟರ್ಕಿಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
