ಕರಾಚಿ, ಜ.16: ಎಂಟು ತಿಂಗಳ ಹಿಂದೆ ಆಪರೇಷನ್ ಸಿಂಧೂರ್(Operation Sindoor )ನಿಂದ ಭಾರೀ ಹೊಡೆತ ಅನುಭವಿಸಿದ್ದರೂ ಪಾಕಿಸ್ತಾನ(Pakistan) ಮಾತ್ರ ಬುದ್ದಿ ಕಲಿತಿಲ್ಲ. ಮತ್ತೆ ಡ್ರೋನ್(dron) ಹಾರಾಟ ನಡೆಸುವ ಮೂಲಕ ಪ್ರಚೋದನೆ ಆರಂಭಿಸಿದೆ. ಜನವರಿ 9ರಿಂದ ಜಮ್ಮು ಮತ್ತು ಕಾಶ್ಮೀರದ ಗಡಿಭಾಗಗಳಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ಈ ಅಕ್ರಮ ಪ್ರವೇಶಗಳನ್ನು ತಕ್ಷಣ ನಿಲ್ಲಿಸುವಂತೆ ಭಾರತ ಪಾಕ್‌ಗೆ ಎಚ್ಚರಿಕೆ ನೀಡಿದೆ. ಆದರೂ ಗುರುವಾರ ರಾತ್ರಿ ಮತ್ತೆ ಪಾಪಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡಿವೆ.
ಪಾಕ್ ಈಗ ಕಳುಹಿಸುತ್ತಿರುವ ಡ್ರೋನ್‌ಗಳು ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ಸಂಘರ್ಷದ ವೇಳೆ ಬಳಸಿದ್ದ ಆತ್ಮಹತ್ಯಾ ಡ್ರೋನ್‌ಗಳಲ್ಲ. ಆತ್ಮಹತ್ಯಾ ಡ್ರೋನ್‌ಗಳು ಗುರಿಯನ್ನು ಹುಡುಕಿ, ಅದರ ಮೇಲೆ ನೇರ ದಾಳಿ ನಡೆಸುವಂತೆ ವಿನ್ಯಾಸಗೊಳಿಸಲಾದ ಮಾನವರಹಿತ ವೈಮಾನಿಕ ವಾಹನಗಳಾಗಿವೆ.
ಪಾಕಿಸ್ತಾನಿ ಡ್ರೋನ್‌ಗಳು ಏಕಾಏಕಿ ಹೆಚ್ಚಳ
ಇತ್ತೀಚೆಗೆ ಕಂಡುಬಂದ ಡ್ರೋನ್‌ಗಳು ಹೆಚ್ಚಿನದಾಗಿ ಸಣ್ಣ ಗಾತ್ರದ, ಗುಪ್ತಚರ ನಿಗಾವಹಿಸುವ ಉದ್ದೇಶದ ಡ್ರೋನ್‌ಗಳಾಗಿದ್ದು, ಈ ವಿಷಯವನ್ನು ಸೇನಾ ದಿನಾಚರಣೆಯ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ. ಪಾಕ್‌ನ ಈ ಡ್ರೋನ್ ಚಟುವಟಿಕೆಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಜನರಲ್ ದ್ವಿವೇದಿ ತಿಳಿಸಿದ್ದಾರೆ.
“ಜನವರಿ 15 (ಸೇನಾ ದಿನ) ಮತ್ತು ಜನವರಿ 26 (ಗಣರಾಜ್ಯೋತ್ಸವ) ಸಮಯದಲ್ಲಿ ಭಾರತ ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ಭಯ ಪಾಕ್‌ಗೆ ಇದೆ. ಈ ಸಮಯದಲ್ಲಿ ಕಡಿಮೆ ಎತ್ತರದಲ್ಲಿ, ಲೈಟ್‌ಗಳನ್ನು ಆನ್ ಮಾಡಿಕೊಂಡು ಹಾರುವ ಸಣ್ಣ ಡ್ರೋನ್‌ಗಳನ್ನು ನಾವು ಕಂಡಿದ್ದೇವೆ,” ಎಂದು ದ್ವಿವೇದಿ ಹೇಳಿದರು.
ಜನವರಿ 9ರಿಂದ ಅಂತಾರಾಷ್ಟ್ರೀಯ ಗಡಿ (IB) ಹಾಗೂ ನಿಯಂತ್ರಣ ರೇಖೆ (LoC)ಯ ವಿವಿಧ ವಲಯಗಳಲ್ಲಿ ಕನಿಷ್ಠ 10–12 ಡ್ರೋನ್‌ಗಳನ್ನು ಪಾಕಿಸ್ತಾನ ಕಳುಹಿಸಿದೆ. ಗುರುವಾರ ಪೂಂಚ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ವಲಯಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿದ್ದವು. ಇದಕ್ಕೂ ಮೊದಲು ನೌಶೆರಾ ಮತ್ತು ರಾಜೌರಿ ವಲಯಗಳಲ್ಲಿ ಡ್ರೋನ್ ಚಟುವಟಿಕೆ ಕಂಡುಬಂದಿದ್ದು, ಭದ್ರತಾ ಪಡೆಗಳು ಆಂಟಿ-ಯುಎಎಸ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿ ಗುಂಡಿನ ದಾಳಿ ನಡೆಸಿದ್ದವು.
ಜನವರಿ 9ರಂದು ಪಾಕ್‌ನಿಂದ ಬಂದ ಡ್ರೋನ್‌ವೊಂದು ಸಾಂಬಾ ಜಿಲ್ಲೆಯಲ್ಲಿ ಎರಡು ಪಿಸ್ತೂಲುಗಳು, ಮೂರು ಮ್ಯಾಗಜಿನ್‌ಗಳು, 16 ಗುಂಡುಗಳು ಮತ್ತು ಒಂದು ಗ್ರನೇಡ್ ಅನ್ನು ಬೀಳಿಸಿರಬಹುದು ಎಂದು ಶಂಕಿಸಲಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಚ್ಚಿದ ಭದ್ರತಾ ಪರಿಶೀಲನೆಯ ವೇಳೆ ಇವುಗಳನ್ನು ವಶಪಡಿಸಿಕೊಳ್ಳಲಾಯಿತು. ಸೋಮವಾರ ರಾತ್ರಿ ರಾಜಸ್ಥಾನದ ಜೈಸಲ್ಮೇರ್ ಮೇಲೆಯೂ ಶಂಕಿತ ಪಾಕಿಸ್ತಾನಿ ಡ್ರೋನ್ ಕಾಣಿಸಿತ್ತು.
ಐಎಸ್‌ಐ, ಪಾಕಿಸ್ತಾನ ಸೇನೆ 2ನೇ ತಲೆಮಾರಿನ ಭಯೋತ್ಪಾದಕ ನಾಯಕರನ್ನು ರೂಪಿಸುತ್ತಿದೆ: ಗುಪ್ತಚರ ಇಲಾಖೆ ಎಚ್ಚರಿಕೆ
ಪಾಕಿಸ್ತಾನ ಡ್ರೋನ್‌ಗಳನ್ನು ಏಕೆ ಕಳುಹಿಸುತ್ತಿದೆ?
ಪಾಕಿಸ್ತಾನ ಡ್ರೋನ್ ಚಟುವಟಿಕೆಗಳನ್ನು ಹೆಚ್ಚಿಸುವುದರ ಹಿಂದೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿರುವ ದುರ್ಬಲತೆಗಳನ್ನು ಪರೀಕ್ಷಿಸುವುದು ಮತ್ತು ಭಾರತದ ಪ್ರತಿಕ್ರಿಯಾ ಸಮಯವನ್ನು ಅಳೆಯುವುದು ಮುಖ್ಯ ಉದ್ದೇಶವಾಗಿರಬಹುದು ಎಂದು ಭೂರಾಜಕೀಯ ತಜ್ಞ ಸುಮಿತ್ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಈ ಮಾತನ್ನು ಸೇನಾ ಮುಖ್ಯಸ್ಥರೂ ಸಮರ್ಥಿಸಿಕೊಂಡಿದ್ದು, ಡ್ರೋನ್ ಪ್ರವೇಶಗಳ ಮೂಲಕ ಪಾಕಿಸ್ತಾನ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿರುವ ಬಿರುಕುಗಳನ್ನು ಹುಡುಕಿ, ಆ ಮೂಲಕ ಉಗ್ರರನ್ನು ನುಗ್ಗಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಪಾಕ್‌ಗೆ ಇಲ್ಲೂ ನಕಾರಾತ್ಮಕ ಪ್ರತಿಕ್ರಿಯೆಯೇ ದೊರೆತಿದ್ದು, “ಇಂದಿನ ದಿನಕ್ಕೆ ಉಗ್ರರನ್ನು ನುಗ್ಗಿಸಬಹುದಾದಂತಹ ಯಾವುದೇ ಸ್ಥಳವೂ ಇಲ್ಲ," ಎಂಬುದು ಪಾಕ್‌ಗೆ ಗೊತ್ತಾಗಿದೆ,” ಎಂದು ಅವರು ತಿಳಿಸಿದರು.
ಶಸ್ತ್ರಾಸ್ತ್ರ ಪೂರೈಕೆಗೆ ಯತ್ನವೇ?
"ಪಾಕಿಸ್ತಾನ ಉದ್ವಿಗ್ನತೆ ಹೆಚ್ಚಿಸುವ ಪ್ರಯತ್ನದಲ್ಲೇ ತೊಡಗಿದೆ. ಸ್ಥಳೀಯ ಉಗ್ರ ನೇಮಕಾತಿ ತೀರಾ ಕಡಿಮೆಯಾದ ಹಿನ್ನೆಲೆ, ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ, ಮಾದಕ ವಸ್ತುಗಳನ್ನು ಕಳುಹಿಸಿ ಉಗ್ರವಾದವನ್ನು ಮತ್ತೆ ಬೆಳೆಸಲು ಪಾಕ್ ಯತ್ನಿಸುತ್ತಿರಬಹುದು," ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್ ಹೇಳಿದ್ದಾರೆ.
ಪಾಕಿಸ್ತಾನ ಭಾರತದ ಎಚ್ಚರಿಕೆಗಳನ್ನೂ ಲೆಕ್ಕಿಸದೆ ತನ್ನ ಪ್ರಚೋದನಾ ತಂತ್ರವನ್ನು ಮುಂದುವರಿಸುತ್ತಿರುವಂತೆಯೇ ಕಾಣುತ್ತಿದೆ. ಗಣರಾಜ್ಯೋತ್ಸವದ ಮುನ್ನ ನಮ್ಮ ರಕ್ಷಣಾ ಪಡೆಗಳು ಯಾವ ಕ್ರಮ ಕೈಗೊಳ್ಳಲಿವೆ ಎಂಬುದು ಈಗ ಕಾದು ನೋಡಬೇಕಾಗಿದೆ.