ನವದೆಹಲಿ: ಭಯೋತ್ಪಾದನೆಗೆ ಪ್ರಚೋದನೆ (Inciting extremism), ಅಕ್ರಮ ಹಣ ವರ್ಗಾವಣೆ (money laundering) ಆರೋಪ ಹೊತ್ತು 2016ರಿಂದ ಭಾರತ ತೊರೆದು ಮಲೇಷ್ಯಾದಲ್ಲಿ (Malaysia) ವಾಸವಾಗಿರುವ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ (Zakir Naik) ಹಸ್ತಾಂತರಕ್ಕೆ ಭಾರತ 2018ರಿಂದ ಮಲೇಷ್ಯಾ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದೆ. ಆದರೆ ಇದೀಗ ಆತನನ್ನು ಭಾರತಕ್ಕೆ ಒಪ್ಪಿಸಲು ಮಲೇಷ್ಯಾ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ. ಈ ಭಾರತದೊಂದಿಗೆ ಸಹಕರಿಸುವುದಾಗಿ ಹೇಳಿರುವ ಭಾರತದಲ್ಲಿನ ಮಲೇಷ್ಯಾದ ಹೈಕಮಿಷನರ್ ಡಾಟೊ ಮುಜಾಫರ್ ಶಾ ಮುಸ್ತಫಾ (Malaysias High Commissioner, Dato Muzafar Shah Mustapha), ಮಲೇಷ್ಯಾ ಎರಡು ರಾಷ್ಟ್ರಗಳ ನಡುವಿನ ಹಸ್ತಾಂತರ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸುತ್ತದೆ ಎಂದು ತಿಳಿಸಿದರು.
ಝಾಕಿರ್ ನಾಯಕ್ ಹಸ್ತಾಂತರಕ್ಕೆ ಪ್ರಕ್ರಿಯೆಯು ಕಾನೂನು ಮತ್ತು ನ್ಯಾಯಾಂಗ ಕಾರ್ಯವಿಧಾನಗಳನ್ನು ಅನುಸರಿಸುತ್ತದೆ ಎಂದು ಹೇಳಿರುವ ಅವರು ಇದಕ್ಕಾಗಿ ಸಮಯ ಬೇಕಾಗಬಹುದು ಎಂದು ತಿಳಿಸಿದ್ದಾರೆ.
ಕೌಲಾಲಂಪುರದಲ್ಲಿ ಈ ತಿಂಗಳಾಂತ್ಯಕ್ಕೆ ಆಸಿಯಾನ್ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುನ್ನವೇ ಮಲೇಷ್ಯಾ ಝಾಕಿರ್ ನಾಯಕ್ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದೆ. ಭಾರತದ ವಿರೋಧ ಹೇಳಿಕೆ, ಉಪದೇಶ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಝಾಕಿರ್ ನಾಯ್ಕ್ 2016ರಲ್ಲಿ ಭಾರತವನ್ನು ತೊರೆದಿದ್ದು, ಬಳಿಕ ಮಲೇಷ್ಯಾದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. 2018ರಿಂದ ಆತನ ಹಸ್ತಾಂತರಕ್ಕೆ ಭಾರತ ಮನವಿ ಮಾಡುತ್ತಿದ್ದು, ಈ ಪ್ರಕರಣವು ಮಲೇಷ್ಯಾದ ನ್ಯಾಯಾಲಯಗಳಲ್ಲಿ ಬಾಕಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೈಕಮಿಷನರ್ ಮುಜಾಫರ್ ಶಾ, ಭಾರತದೊಂದಿಗೆ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದವನ್ನು ಹೊಂದಿದ್ದೇವೆ ಮತ್ತು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸುವುದು ಮುಖ್ಯ. ಝಾಕಿರ್ ನಾಯ್ಕ್ ಪ್ರಕರಣವು ಮಲೇಷ್ಯಾದ ನ್ಯಾಯಾಲಯದಲ್ಲಿದೆ. ನ್ಯಾಯಾಂಗ ಪರಿಗಣನೆಯ ಆಧಾರದ ಮೇಲೆ ನಿರ್ಧಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಭಾರತ ಸರ್ಕಾರವು ಒದಗಿಸಿದ ಪುರಾವೆಗಳು ಅಥವಾ ಕಾರಣಗಳ ಆಧಾರದ ಮೇಲೆ ಪ್ರಕರಣವು ಮುಂದುವರಿಯುತ್ತದೆ ಎಂದಿರುವ ಅವರು, ಈ ವಿಷಯದಲ್ಲಿ ಮಲೇಷ್ಯಾಕ್ಕೆ ಯಾವುದೇ ನೇರ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ. ಅವರು ಭಾರತವು ನಿರ್ದಿಷ್ಟ ಪುರಾವೆಗಳನ್ನು ಒದಗಿಸಿದರೆ ಹಸ್ತಾಂತರವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದರು.
ಝಾಕಿರ್ ನಾಯ್ಕ್ ಪ್ರಕರಣವು ಭಾರತ ಮತ್ತು ಮಲೇಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಸಮಸ್ಯೆಯಾಗಿದೆ. ಆತ 2016ರ ಬಾಂಗ್ಲಾದೇಶದ ದಾಳಿಗೆ ಪ್ರಚೋದನೆ ನೀಡಿದ್ದ ಎಂದು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2017ರಲ್ಲಿ ಆರೋಪಪಟ್ಟಿ ಸಲ್ಲಿಸಿತು. ಆತನ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ, ಕೋಮು ದ್ವೇಷ, ಅಕ್ರಮ ಹಣ ವರ್ಗಾವಣೆ ಆರೋಪವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪಟ್ಟಿ ಮಾಡಿದೆ.
ಝಾಕಿರ್ ನಾಯ್ಕ್‌ಗೆ ಮಲೇಷ್ಯಾ ಆಶ್ರಯ ನೀಡಿದ್ದರೂ ಅದು ಭಾರತದ ವಿನಂತಿಯನ್ನು ನಿರ್ಲಕ್ಷಿಸಲಿಲ್ಲ. 2024ರಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಮಲೇಷ್ಯಾ, ಭಾರತ ಪುರಾವೆಗಳನ್ನು ಒದಗಿಸಿದರೆ ಸಹಕಾರವನ್ನು ನೀಡಲಾಗುವುದು ಎಂದು ಹೇಳಿತ್ತು.
ಝಾಕಿರ್ ನಾಯ್ಕ್ ಮಲೇಷ್ಯಾದಲ್ಲಿ ಸಕ್ರಿಯನಾಗಿದ್ದು, ಅನೇಕ ಧಾರ್ಮಿಕ ಸಭೆಗಳನ್ನು ನಡೆಸುತ್ತಿದ್ದಾನೆ. ಸಾಮಾಜಿಕ ಮಾಧ್ಯಮಗಳ ಮೂಲಕ ಲಕ್ಷಾಂತರ ಅನುಯಾಯಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Viral Video: ಕೆಂಪು ಟೈ ಧರಿಸಿ ಟ್ರಂಪ್ ಗಮನ ಸೆಳೆಯಲು ಯತ್ನಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ; ಕಾರಣವೇನು?
ಝಾಕಿರ್ ನಾಯ್ಕ್ ಹಸ್ತಾಂತರದ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಆತನ ಹಸ್ತಾಂತರಕ್ಕೆ ಯಾವುದೇ ಆತುರವಿಲ್ಲ. ಹಲವಾರು ದೇಶಗಳೊಂದಿಗೆ ಇದೇ ರೀತಿಯ ಪ್ರಕರಣಗಳು ನಡೆಯುತ್ತಿವೆ. ಝಾಕಿರ್ ನಾಯ್ಕ್ ಪ್ರಕರಣ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮಲೇಷ್ಯಾದ ಸಹಕಾರವು ಭಾರತದ ರಾಜತಾಂತ್ರಿಕ ಮತ್ತು ಕಾನೂನು ಜಯವಾಗಿದೆ ಎಂದು ತಿಳಿಸಿದ್ದಾರೆ.