ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯ ಉದ್ಯಮಗಳಲ್ಲಿ ಎಐ ಕ್ರಾಂತಿ: 73% ಕಂಪನಿಗಳಿಗೆ ಸಿಗುತ್ತಿದೆ ಲಾಭ, ಆದರೂ ಕಾಡುತ್ತಿದೆ ʼಡೇಟಾʼ ಕೊರತೆಯ ಚಿಂತೆ!

ಸಮೀಕ್ಷೆಗೊಳಗಾದ ಭಾರತದ ಎಲ್ಲಾ ಶೇ.100ರಷ್ಟು ಕಂಪನಿಗಳು ಒಂದಲ್ಲಾ ಒಂದು ರೀತಿಯ ಎಐ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿವೆ. ಆದರೆ, ಶೇ. 44ರಷ್ಟು ಕಂಪನಿಗಳು ಇನ್ನೂ ಪ್ಲಾನಿಂಗ್ ಹಂತ ದಲ್ಲಿದ್ದರೆ, ಶೇ. 30ರಷ್ಟು ಕಂಪನಿಗಳು ಎಐ ಅನ್ನು ಉತ್ಪಾದನಾ ಹಂತಕ್ಕೆ ಕೊಂಡೊಯ್ದಿವೆ. ಶೇ. 19ರಷ್ಟು ಕಂಪನಿಗಳು ತಮ್ಮ ಪ್ರಮುಖ ಕೆಲಸಗಳಲ್ಲಿ ಎಐ ಬಳಸುತ್ತಿದ್ದರೆ, ಶೇ. 7ರಷ್ಟು ಕಂಪನಿಗಳು ಅತ್ಯಾಧುನಿಕ ಎಐ ವ್ಯವಸ್ಥೆ ಹೊಂದಿವೆ.

ಬೆಂಗಳೂರು: ಕೃತಕ ಬುದ್ಧಿಮತ್ತೆ ಅಥವಾ ಎಐ ಇಂದು ಕೇವಲ ತಂತ್ರಜ್ಞಾನವಾಗಿ ಮಾತ್ರ ಉಳಿದಿಲ್ಲ. ಅದು ಪ್ರತಿಯೊಂದು ಉದ್ಯಮದ ಪ್ರಮುಖ ಅಸ್ತ್ರವಾಗಿ ಬದಲಾಗುತ್ತಿದೆ. ಭಾರತದಲ್ಲೂ ಬಹುತೇಕ ಎಲ್ಲಾ ಕಂಪನಿಗಳು ಎಐ ಅನ್ನು ಅಪ್ಪಿಕೊಂಡಿದ್ದು, ಅದರಿಂದ ಲಾಭವನ್ನೂ ಗಳಿಸಲು ಆರಂಭಿಸಿವೆ. ಆದರೆ, ಎಐ ಅನ್ನು ದೊಡ್ಡ ಮಟ್ಟದಲ್ಲಿ ಬಳಸಲು ಬೇಕಾದ ಅಸಲಿ ಡೇಟಾ ರೆಡಿ ಇರುವುದು ಕೇವಲ ಶೇ. 4ರಷ್ಟು ಕಂಪನಿಗಳಲ್ಲಿ ಮಾತ್ರ ಎಂಬ ಸತ್ಯವೂ ಇದೇ ಸಂದರ್ಭದಲ್ಲಿ ಹೊರಬಿದ್ದಿದೆ.

ಪ್ರಸಿದ್ಧ ಡೇಟಾ ಮತ್ತು ಅನಾಲಿಟಿಕ್ಸ್ ಸಂಸ್ಥೆಯಾದ ಡನ್ ಆಂಡ್ ಬ್ರಾಡ್‌ಸ್ಟ್ರೀಟ್ ಬಿಡುಗಡೆ ಮಾಡಿ ರುವ ಇತ್ತೀಚಿನ 'ಎಐ ಮೊಮೆಂಟಮ್ ಸಮೀಕ್ಷೆ'ಯು ಭಾರತೀಯ ಉದ್ಯಮ ವಲಯದಲ್ಲಿನ ಎಐ ಬಳಕೆಯ ಬಗ್ಗೆ ಅಚ್ಚರಿಯ ಹಾಗೂ ಆಸಕ್ತಿದಾಯಕ ಅಂಶಗಳನ್ನು ಬಹಿರಂಗಪಡಿಸಿದೆ.

ಸಮೀಕ್ಷೆಗೊಳಗಾದ ಭಾರತದ ಎಲ್ಲಾ ಶೇ. 100ರಷ್ಟು ಕಂಪನಿಗಳು ಒಂದಲ್ಲಾ ಒಂದು ರೀತಿಯ ಎಐ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿವೆ. ಆದರೆ, ಶೇ. 44ರಷ್ಟು ಕಂಪನಿಗಳು ಇನ್ನೂ ಪ್ಲಾನಿಂಗ್ ಹಂತ ದಲ್ಲಿದ್ದರೆ, ಶೇ.30ರಷ್ಟು ಕಂಪನಿಗಳು ಎಐ ಅನ್ನು ಉತ್ಪಾದನಾ ಹಂತಕ್ಕೆ ಕೊಂಡೊಯ್ದಿವೆ. ಶೇ. 19ರಷ್ಟು ಕಂಪನಿಗಳು ತಮ್ಮ ಪ್ರಮುಖ ಕೆಲಸಗಳಲ್ಲಿ ಎಐ ಬಳಸುತ್ತಿದ್ದರೆ, ಶೇ.7ರಷ್ಟು ಕಂಪನಿಗಳು ಅತ್ಯಾಧುನಿಕ ಎಐ ವ್ಯವಸ್ಥೆ ಹೊಂದಿವೆ.

ಇದನ್ನೂ ಓದಿ: ಭಾರತೀಯ ಕಾಲೇಜುಗಳಲ್ಲಿ ಉಚಿತ AI ಪ್ರಮಾಣೀಕರಣಗಳನ್ನು ನೀಡಲು AI CERTs® ‘ಮಿಷನ್ AI-ಸಕ್ಷಮ್’ ಎಂಬ ಉಪಕ್ರಮ ಪ್ರಾರಂಭ

ವಿಶೇಷ ಸಂಗತಿ ಎಂದರೆ, ಯಾವುದೇ ಕಂಪನಿಯು ಎಐ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡುವ ಬಗ್ಗೆ ಯೋಚನೆಯೂ ಮಾಡುತ್ತಿಲ್ಲ. ಶೇ.69ರಷ್ಟು ಕಂಪನಿಗಳು ಎಐ ತಂತ್ರಜ್ಞಾನದ ಮೇಲಿನ ಹೂಡಿಕೆಯನ್ನು ಹೆಚ್ಚಿಸಲು ನಿರ್ಧರಿಸಿವೆ. ಉಳಿದ ಶೇ.31ರಷ್ಟು ಕಂಪನಿಗಳು ಪ್ರಸ್ತುತ ಇರುವ ಹೂಡಿಕೆಯನ್ನೇ ಮುಂದುವರಿಸಲಿವೆ.

ಎಐ ಅಳವಡಿಸಿಕೊಂಡ ಶೇ.73ರಷ್ಟು ಕಂಪನಿಗಳು ವ್ಯವಹಾರದಲ್ಲಿ ಲಾಭ ಪಡೆಯುತ್ತಿರುವುದಾಗಿ ವರದಿ ಮಾಡಿವೆ. ಇದರಲ್ಲಿ ಶೇ. 50ರಷ್ಟು ಕಂಪನಿಗಳು ಕೆಲವು ನಿರ್ದಿಷ್ಟ ವಿಭಾಗಗಳಲ್ಲಿ ಲಾಭ ಕಂಡಿದ್ದರೆ, ಶೇ.23ರಷ್ಟು ಕಂಪನಿಗಳು ಎಲ್ಲ ವಿಭಾಗಗಳಲ್ಲೂ ಭಾರಿ ಲಾಭವನ್ನು ಕಾಣುತ್ತಿವೆ.

'ಡೇಟಾ'ದಲ್ಲಿಯೇ ಇರುವುದು ಅಸಲಿ ಸಮಸ್ಯೆ!

ಎಐ ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ಅದಕ್ಕೆ ಮೂಲ ಆಹಾರವೇ 'ಡೇಟಾ' ಅಥವಾ ಮಾಹಿತಿ. ಆದರೆ, ಭಾರತದ ಕೇವಲ ಶೇ.4ರಷ್ಟು ಕಂಪನಿಗಳು ಮಾತ್ರ ಎಐಗೆ ಬೇಕಾದ ಪೂರ್ಣ ಪ್ರಮಾಣದ ಡೇಟಾವನ್ನು ಹೊಂದಿವೆ. ಶೇ.58ರಷ್ಟು ಕಂಪನಿಗಳ ದತ್ತಾಂಶ ಭಾಗಶಃ ಸಿದ್ಧವಿದ್ದರೆ, ಶೇ.30ರಷ್ಟು ಕಂಪನಿಗಳ ಮಾಹಿತಿಗಳು ಬಹುಪಾಲು ಸಿದ್ಧವಾಗಿವೆ. ಎಐ ಅನ್ನು ದೊಡ್ಡ ಮಟ್ಟದಲ್ಲಿ ಬಳಸಿ ಭಾರಿ ಲಾಭ ಗಳಿಸಲು ನಿಖರವಾದ ಡೇಟಾದ ಕೊರತೆ ಅಡ್ಡಿಯಾಗುತ್ತಿದೆ ಎಂಬುದನ್ನು ಈ ವರದಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಾತನಾಡಿರುವ ಡನ್ ಆಂಡ್ ಬ್ರಾಡ್‌ಸ್ಟ್ರೀಟ್ ಸಂಸ್ಥೆಯ (ಭಾರತ ಮತ್ತು ತೈವಾನ್) ಎಂಡಿ ಮತ್ತು ಸಿಇಒ ಜೂಲಿಯನ್ ಪ್ರೋವರ್, "ಭಾರತೀಯ ವ್ಯವಹಾರಗಳು ಎಐ ಪ್ರಯೋಗಗಳಿಂದಾಚೆಗೆ, ಅದನ್ನು ಎಂಟರ್‌ಪ್ರೈಸ್ ಮಟ್ಟದಲ್ಲಿ ಅಳವಡಿಸಿಕೊಳ್ಳುವತ್ತ ವೇಗವಾಗಿ ಸಾಗುತ್ತಿವೆ. ಎಐ ಬಳಕೆ ಯಿಂದ ಲಾಭ ಬರುತ್ತಿರುವುದು ಸಾಬೀತಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಕಂಪನಿಗಳ ಡೇಟಾದ ಗುಣಮಟ್ಟವೇ ಎಐನ ಯಶಸ್ಸನ್ನು ನಿರ್ಧರಿಸುತ್ತದೆ. ವಿಶ್ವಾಸಾರ್ಹ ಡೇಟಾ ಒದಗಿಸುವ ಮೂಲಕ ಕಂಪನಿಗಳ ಬೆಳವಣಿಗೆಗೆ ನಾವು ಸಹಾಯ ಮಾಡುತ್ತಿದ್ದೇವೆ," ಎಂದಿದ್ದಾರೆ.

ಡನ್ ಆಂಡ್ ಬ್ರಾಡ್‌ಸ್ಟ್ರೀಟ್ ಸಂಸ್ಥೆಯು ವಿಶ್ವಾದ್ಯಂತ 32 ದೇಶಗಳ 10,000 ವ್ಯವಹಾರಗಳನ್ನು ಸಮೀಕ್ಷೆಗೊಳಪಡಿಸಿ ಈ ವರದಿಯನ್ನು ಸಿದ್ಧಪಡಿಸಿದೆ. ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ್ ಭಾರತ್' ಯೋಜನೆಗಳಿಗೆ ಪೂರಕವಾಗಿ ಡೇಟಾ ತಂತ್ರಜ್ಞಾನದ ಮೂಲಕ ಉದ್ಯಮಗಳಿಗೆ ಸಹಾಯ ಮಾಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ