ಗೂಟಕ್ಕೆ ಸಿಕ್ಕಿಕೊಂಡ ದೋಣಿ
ಗೂಟಕ್ಕೆ ಸಿಕ್ಕಿಕೊಂಡ ದೋಣಿ
Vishwavani News
December 23, 2021
ಭಾರತಿ ಎ. ಕೊಪ್ಪ
ಬದುಕಿಗೆ ಒಂದು ಗುರಿ ಇರಬೇಕು. ಅದನ್ನು ಸಾಧಿಸಲು ನಿರ್ಲಕ್ಷ್ಯ ಮಾಡಬಾರದು. ಸಣ್ಣ ನಿರ್ಲಕ್ಷ್ಯವೇ ಪ್ರಗತಿಯ ಹಾದಿಗೆ ಮುಳ್ಳಾಗುತ್ತದೆ! ಆಗ ಈ ಬದುಕು ಗೂಟಕ್ಕೆ ಸಿಕ್ಕಿಕೊಂಡ ದೋಣಿಯಂತೆ ಮುಂದಕ್ಕೆ ಸಾಗಲಾರದು. ಹಾಗಾಗದಂತೆ ಎಚ್ಚರ ವಹಿಸಬೇಕು.
ರಾಮಕೃಷ್ಣ ಪರಮಹಂಸರು ಹಲವು ಕಥೆಗಳ ಮೂಲಕ ಶಿಷ್ಯ ವೃಂದದ ಕಣ್ಣು ತೆರೆಸುತ್ತಿದ್ದರು. ಯಾವು ದನ್ನೇ ಆಗಲಿ ಸಾಧಿಸಲು ಗುರಿ ಸ್ಪಷ್ಟವಾಗಿರ ಬೇಕು ಎಂಬುದಕ್ಕೆ ಅವರು ಒಂದು ಸುಂದರ ಕಥೆಯನ್ನು ಹೇಳುತ್ತಿದ್ದರು. ಒಮ್ಮೆ ಒಬ್ಬ ಬಯಲಾಟ ನೋಡಲು ಹೊರಟ. ನಿದ್ರೆ ಬಂದರೆ ಇರಲಿ ಎಂದು ಮುಂಜಾಗ್ರತೆಗೆಂದು ಬಗಲಿಗೆ ಚಾಪೆಯನ್ನೂ ಸಿಕ್ಕಿಸಿಕೊಂಡ. ಬಯಲಾಟ ಆರಂಭ ಆಗಿರಲಿಲ್ಲ. ತಯಾರಿ ನಡೆಯುತ್ತಿತ್ತಷ್ಟೇ. ಬಯಲಾಟಕ್ಕಿನ್ನೂ ಹೊತ್ತಿದೆಯಲ್ಲ ಎಂದೆಣಿಸಿ ಆತ ತನ್ನ ಚಾಪೆ ಬಿಡಿಸಿ ನಿದ್ರೆಗೆ ಜಾರಿದ.
ಗಾಢ ನಿದ್ರೆ ಬಂದಿತು. ಆತನಿಗೆ ಎಚ್ಚರವಾಗುವಾಗ ಬಯಲಾಟ ಮುಗಿದು ಎಲ್ಲರೂ ಮನೆಗೆ ಹಿಂದಿರು ಗುತ್ತಿದ್ದರು. ಇನ್ನೇನು ಮಾಡುವುದು! ಆತನೂ ಚಾಪೆ ಮಡಚಿಕೊಂಡು ಅವರೊಡನೆ ಮನೆಗೆ ಹೊರಟ! ಹೀಗೆ ಸಣ್ಣ ನಿದ್ರೆಯೆಂಬ ನಿರ್ಲಕ್ಷ್ಯ ಆತನ ಮುಖ್ಯ ಉದ್ದೇಶವನ್ನು ಹಾಳು ಮಾಡಿತು. ಆ ವ್ಯಕ್ತಿಯ ಬಯಲಾಟ ನೋಡುವ ಆಸೆ, ಉದ್ದೇಶವು ಸೋಮಾರಿತನ, ನಿರ್ಲಕ್ಷ್ಯದಿಂದ ಕೈಗೂಡದೇ ನಿರಾಸೆ ಮೂಡಿಸಿದಂತೆ, ನಮ್ಮ ಬದುಕಿನ ಆಟದಲ್ಲೂ ಅನೇಕ ನಿರಾಸೆಗಳಿಗೆ ನಾವೇ ಕಾರಣರಾಗಿರುತ್ತೇವೆ. ಎಲ್ಲರೂ ಉತ್ತಮ ಗುರಿ, ಮುಗಿಲೆತ್ತರದ ಕನಸು ಕಾಣುವುದು ಸಹಜ. ಆದರೆ ಆ ಗುರಿ ತಲುಪುವುದರಲ್ಲಿ ನಿರ್ಲಕ್ಷ್ಯ ಸಲ್ಲದು.
ಜೀವನದಲ್ಲಿ ನಮ್ಮ ಗುರಿಯನ್ನು ನಿರ್ಧರಿಸಿಕೊಂಡ, ನಿಷ್ಠೆಯಿಂದ, ಪರಿಶ್ರಮದಿಂದ ಆ ದಾರಿಯಲ್ಲಿ ಸಾಗಬೇಕು. ನಡೆಯುವಾಗ ವಿವೇಚನೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ನಾವು ನಮ್ಮೊಳಗೆ ಬಂಧಿತರಂತೆ ಇರಬಾರದು, ಅಡೆತಡೆಗಳ ಬಂಧನ ತೊಡೆದು ಸಾಗುತ್ತಿರಬೇಕು.
ದಡದಲ್ಲೇ ನಿಂತ ದೋಣಿ
ಪರಮಹಂಸರು ಹೇಳುವ ಇನ್ನೊಂದು ಕಥೆ ಬಹಳ ಅರ್ಥಪೂರ್ಣವಾಗಿದೆ. ಒಮ್ಮೆ ಕೆಲವು ಬೆಸ್ತರು ಹುಣ್ಣಿಮೆಯ ರಾತ್ರಿ ದೂರದ ದ್ವೀಪಕ್ಕೆ ಯಾನ ಗೈಯುವ ನಿರ್ಧಾರ ಮಾಡಿದರು. ದೋಣಿ ನಡೆಸಲು ಸೂರ್ತಿ ಬರುತ್ತದೆಂದು ಭ್ರಮಿಸಿ ಕಂಠಪೂರ್ತಿ ಕುಡಿದರು. ಅದೇ ಅಮಲಿನಲ್ಲಿ ದೋಣಿ ಏರಿ ಭರದಿಂದ ಹುಟ್ಟು ಹಾಕತೊಡಗಿದರು. ರಾತ್ರಿ ಇಡೀ ಭರದಿಂದ ಹುಟ್ಟು ಹಾಕಿದ್ದೇ ಹಾಕಿದ್ದು. ಬೆಳಕು ಹರಿಯುವಾಗ ಬೆಸ್ತರ ಅಮಲು ಇಳಿದಿತ್ತು.
ದೂರದ ದ್ವೀಪ ಸಮೀಪಿಸಿರಬೇಕೆಂದು ಕಣ್ಣುಜ್ಜಿ ನೋಡುತ್ತಾರೆ, ದೋಣಿ ದಡದ ಇದೆ! ಗೂಟಕ್ಕೆ ಕಟ್ಟಿದ್ದ ಅದರ ಹಗ್ಗವನ್ನು ಅವರು ಬಿಡಿಸಿಯೇ ಇರಲಿಲ್ಲ!
ನಾವೂ ಕೂಡಾ ಆಲಸ್ಯ, ಅನಾಸಕ್ತಿ, ಭಯ ಮುಂತಾದ ಗೂಟಗಳಿಗೆ ನಮ್ಮನ್ನು ಕಟ್ಟಿಕೊಂಡು, ಗುರಿಯತ್ತ ಪಯಣ ಬೆಳೆಸಿದರೆ ವಿಫಲರಾಗುತ್ತೇವೆ. ನಮ್ಮೊಳಗಿನ ಈ ಎಲ್ಲಾ ನಕಾರಾತ್ಮಕ ಅಂಶಗಳನ್ನು ಗೂಟದಿಂದ ಬಿಡಿಸಿಕೊಂಡು ಸಕಾರಾತ್ಮಕವಾಗಿ ಮುಂದೆ ಸಾಗಬೇಕು.
ಅರ್ಜುನನ ಏಕಾಗ್ರತೆ
ದ್ರೋಣಾಚಾರ್ಯರು ಒಮ್ಮೆ ಮರದ ಕೊಂಬೆಯಲ್ಲಿ ಒಂದು ಹಕ್ಕಿಯನ್ನು ಇಟ್ಟು ಶಿಷ್ಯರ ಏಕಾಗ್ರತೆ ಮತ್ತು ಗುರಿ ಪರೀಕ್ಷಿಸಿದ್ದರು. ವಿದ್ಯಾರ್ಥಿಗಳನ್ನು ಕರೆದು ‘ಅನು ಕಾಣುತ್ತಿದೆ?’ ಎಂದು ಪ್ರಶ್ನಿಸಿದಾಗ, ಒಬ್ಬನು ಹೂವು ಎಂದ, ಇನ್ನೊಬ್ಬನು ಮರದ ಕೊಂಬೆ ಎಂದ, ಇನ್ನೊಬ್ಬನು ಎಲೆ ಎಂದ. ಅರ್ಜುನನು ‘ಹಕ್ಕಿಯ ಕಣ್ಣು ಮಾತ್ರ ಕಾಣು ತ್ತಿದೆ’ ಎಂದು ಹೇಳಿ ಏಕಾಗ್ರತೆಯ ಮಹತ್ವವನ್ನು ತೋರಿದ. ನಮ್ಮ ಗಮನ ಸದಾ ಗುರಿಯತ್ತ ಇರಬೇಕು. ಆ ದಿಶೆಯಲ್ಲಿ ಮುನ್ನಡೆಯಬೇಕು.
ಗುರಿ ಸ್ಪಷ್ಟವಾಗಿರಬೇಕು. ದಾರಿ ಸಮರ್ಪಕವಾಗಿರಬೇಕು. ಗುರಿ ಸೇರುವ ನಿರ್ಧಾರ ದೃಢವಾಗಿರಬೇಕು. ಸಮರ್ಥವಾಗಿ ಸಾಗುವ ಆತ್ಮವಿಶ್ವಾಸ ಇರಬೇಕು. ಆತ್ಮವಿಶ್ವಾಸವು ದುರಹಂಕಾರವಾಗಿ, ಒಣಜಂಭವಾಗಿ ಪರಿವರ್ತನೆ ಆಗಬಾರದು. ಗುರಿಯ ಪಥದಲ್ಲಿ ದುರಹಂಕಾರ ಮೂಡಿದರೆ ‘ಆಮೆ ಮತ್ತು ಮೊಲ’ದ ಕಥೆಯಂತಾಗುತ್ತದೆ. ಮೊಲದ ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರವು ತುಸು ಸೋಮಾರಿ ತನಕ್ಕೆ ಜಾರಿ, ಆಮೆಯೊಂದಿಗೆ ಪಂದ್ಯದಲ್ಲಿ ಸೋಲು ಕಾಣುವಂತೆ ಮಾಡಿತ್ತು. ಒಮ್ಮೊಮ್ಮೆ ಗುರಿ ಸಾಧನೆಯಲ್ಲಿ ಸುಳಿಯುವ ದುರಹಂಕಾರವೇ ಸೋಮಾ ರಿತನಕ್ಕೆ ಎಡೆಮಾಡಿಕೊಟ್ಟು ಹಿನ್ನಡೆ ಅನುಭವಿಸುವಂತೆ ಮಾಡಬಹುದು.
‘ಹಿಂದೆ ನೋಡುವ ಅವಶ್ಯಕತೆಯಿಲ್ಲ, ಮುನ್ನುಗ್ಗಿ! ನಮಗೆ ಬೇಕಾಗಿರುವುದು ಅನಂತ ಶಕ್ತಿ, ಅಪರಿಮಿತ ಉತ್ಸಾಹ ಮತ್ತು ಅಸದಳ ಸಹನೆ. ಆಗ ಮಾತ್ರ ಮಹಾನ್ ಕಾರ್ಯಗಳನ್ನು ಸಾಧಿಸಲು ಸಾಧ್ಯ’ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ, ಯಾವುದೇ ಕೆಲಸದಲ್ಲಿ ಉತ್ಸಾಹ ಕುಂದದೆ ಆತ್ಮ ವಿಶ್ವಾಸದಿಂದ ಮುನ್ನಡೆಯಬೇಕು. ಆ ನಿಟ್ಟಿನಲ್ಲಿ ಸಾಧನೆಯ ಹೆಜ್ಜೆಯನ್ನುಹಾಕೋಣ.