ಆಲೋಚನೆಗಳ ಎಲ್ಲೆ ಮೀರಿ...
ಆಲೋಚನೆಗಳ ಎಲ್ಲೆ ಮೀರಿ...
Vishwavani News
December 23, 2021
ಮಹಾದೇವ ಬಸರಕೋಡ
ನಾವೇ ವಿಧಿಸಿಕೊಂಡ ಕಟ್ಟುಪಾಡುಗಳು, ಕೆಲವು ನಂಬಿಕೆಗಳು ನಮ್ಮ ಪ್ರಗತಿಗೆ ಸಹಕಾರಿಯಾಗಬೇಕೇ ಹೊರತು, ಅಡೆತಡೆಯಾಗಬಾರದು.
ಅದನ್ನು ಗುರುತಿಸಿ, ಸೂಕ್ತ ನಡೆಯನ್ನು ಮುಂದಿಡುವುದರಲ್ಲಿ ಜಾಣ್ಮೆ ಅಡಗಿದೆ.
ನಮ್ಮ ವಿಚಾರಗಳು, ನಂಬಿಕೆಗಳು ನಮ್ಮ ವಾಸ್ತವವನ್ನು, ತನ್ಮೂಲಕ ಭವಿಷ್ಯವನ್ನು ರೂಪಿಸುತ್ತವೆ ಎಂಬುದು ಜಗತ್ತು ಕಂಡುಕೊಂಡ ಬಹುದೊಡ್ಡ ಸತ್ಯ. ನಾವು ಯಾವುದರ ಮೇಲೆ ಹೆಚ್ಚು ಗಮನ ಹರಿಸುತ್ತೇವೆಯೋ ಅವುಗಳೇ ನಮ್ಮ ವರ್ತನೆಗಳಾಗುತ್ತವೆ.
ಇವುಗಳು ಜನ್ಮತಃ ಬಂದವುಗಳಲ್ಲ. ಅವೆಲ್ಲವುಗಳೂ ನಾವು ರೂಢಿಸಿಕೊಂಡವುಗಳು ಎಂಬುದು ಬಹುಮುಖ್ಯ ಸಂಗತಿ. ನಮ್ಮ ಆಲೋಚನೆಗಳೇ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ನಮ್ಮ ಕಣ್ಣಿನ ಮೇಲೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಹೊರ ಜಗತ್ತನ್ನು ನೋಡಲು ಬಯಸುವ ನಮ್ಮ ಪ್ರಯತ್ನ ವಿವೇಚನೆ ಯಿಂದ ಕೂಡಿರು ವಂತದ್ದಲ್ಲ. ಒಂದು ದಿನ ಚಿಕ್ಕ ಇರುವೆಯೊಂದು ಅಕಸ್ಮಿಕವಾಗಿ ಸಕ್ಕರೆಯ ಪರ್ವತಕ್ಕೆ ಹೋಯಿತು. ಅಲ್ಲಿರುವ ಸಕ್ಕರೆಯನ್ನು ಕಂಡು ತುಂಬ ಸಂತೋಷಗೊಂಡಿತು.
ತನ್ನಿಂದ ಸಾಧ್ಯವಾದಷ್ಟು ಸಕ್ಕರೆಯನ್ನು ತನ್ನ ಗೂಡಿಗೆ ಸಾಗಿಸತೊಡಗಿತು. ಹೀಗೆ ಸಕ್ಕರೆಯನ್ನು ಸಾಗಿಸುವಾಗ ಇನ್ನೊಂದು ಹಿರಿಯ ಇರುವೆ ಭೇಟಿಯಾಯಿತು. ‘ಏನಿದು? ಅಷ್ಟೊಂದು ಸಕ್ಕರೆಯನ್ನು ನಿನ್ನ ಗೂಡಿಗೆ ಸಾಗಿಸು ತ್ತಿರುವೆ. ಎಲ್ಲಿಂದ ಇಷ್ಟೊಂದು ಸಕ್ಕರೆ ತರುತ್ತಿರುವೆ?’ ಎಂದು ಕೇಳಿತು. ‘ಇಲ್ಲಿಂದ ಒಂದಷ್ಟು ದೂರದಲ್ಲಿರುವ ಒಂದು ಸಕ್ಕರೆ ಬೆಟ್ಟವೇ ಇದೆ. ಅಲ್ಲಿಂದ ಸಂಗ್ರಹಿಸುತ್ತಿರುವೆ’ ಎಂದಿತು ಚಿಕ್ಕ ಇರುವೆ.
‘ನನ್ನನ್ನು ಕರೆದುಕೊಂಡು ಹೋಗುವೆಯಾ?’ ಎಂದು ಕೇಳಿತು ಹಿರಿಯ ಇರುವೆ. ‘ಸರಿ ನನ್ನ ಜೊತೆ ಬಾ’ ಎಂದಾಗ, ಹಿರಿಯ ಇರುವೆ ‘ಸ್ವಲ್ಪ ಸಮಯ ಇಲ್ಲಿಯೇ ಇರು, ನಾನು ನನ್ನ ಗೂಡಿಗೆ ಹೋಗಿ ಬರುವೆ’ ಎಂದಿತು. ಹಿರಿಯ ಇರುವೆ ಮರಳಿ ಬಂದ ನಂತರ ಎರಡೂ ಇರುವೆಗಳು ಜೊತೆಯಾಗಿ ಸಕ್ಕರೆ ಬೆಟ್ಟಕ್ಕೆ ಹೋದವು. ಹಿರಿಯ ಇರುವೆ ಅಲ್ಲಿರುವ ಸಕ್ಕರೆಯನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿದಾಗ ಅಲ್ಲಿರುವ ಸಕ್ಕರೆ ಕಹಿಯಾಗಿ ತೋರಿತು. ‘ಇದೇನು ಸುಳ್ಳು ಹೇಳುತ್ತಿರುವೆ? ಇದು ಸಕ್ಕರೆ ಯಲ್ಲ ಕಹಿಯಾದ ಪಧಾರ್ಥವಾಗಿದೆ. ನೀನು ಸುಳ್ಳು ಹೇಳಿದೆ’ ಎಂದಿತು.
ಏನೊಂದು ಮಾತನಾಡದೇ ಚಿಕ್ಕ ಇರುವೆ ಸುಮ್ಮನಾಯಿತು. ಸಕ್ಕರೆ ಬೆಟ್ಟ ದೂರವಿರಬಹುದು ದಾರಿಯಲ್ಲಿ ಹಸಿವಾಗಬಹುದು ಎಂದು ಭಾವಿಸಿದ ಹಿರಿಯ ಇರುವೆ, ದಾರಿಯಲ್ಲಿ ತಿನ್ನಲೆಂದು ತನ್ನ ದವಡೆಯಲ್ಲಿ ಬೇವಿನುಂಡೆಯನ್ನು ಇರಿಸಿಕೊಂಡು ಬಂದಿದ್ದರ ಪರಿಣಾಮವಾಗಿ ಸಕ್ಕರೆಯೂ ಅದಕ್ಕೆ ಕಹಿಯಾಗಿ ತೋರಿತ್ತು. ನಮ್ಮ ವರ್ತನೆಗಳು ಕೂಡ ಹಿರಿಯ ಇರುವೆಗಿಂತ ಭಿನ್ನವಾಗಿರುವುದಿಲ್ಲ. ಮನುಷ್ಯನ ಬಹುದೊಡ್ಡ ದೌರ್ಬಲ್ಯವೆಂದರೆ ನಾವು ನಮ್ಮ ವಿಚಾರಗಳ ಎಲ್ಲೆ ದಾಟಿ ಹೋಗಲು ಸುಲಭವಾಗಿ ಸಾಧ್ಯವಾಗದಿರುವುದು. ನಮ್ಮ ಆಲೋಚನೆಗಳು, ನಾವು ಸತ್ಯವೆಂದು ಭಾವಿಸಿದ ಸಂಗತಿಗಳು ನಮ್ಮ ಪ್ರಪಂಚವಾಗುತ್ತವೆ.
ನಮ್ಮ ಅನುಭವ, ಪರಿಸರ, ಶಿಕ್ಷಣಗಳ ಪ್ರಭಾವಗಳು ಇಂತಹ ಚಕ್ರವ್ಯೂಹವನ್ನು ನಿರ್ಮಿಸಿ ಬಿಡುತ್ತವೆ. ಎಲ್ಲೋ ಸ್ವಲ್ಪವನ್ನು ಅರ್ಥ ಮಾಡಿಕೊಂಡು ನಾವೆಲ್ಲ ಅರ್ಥೈಯಿಸಿಕೊಂಡಿದ್ದೇನೆ ಎಂಬ ಭ್ರಮೆಯ ಪರಿಣಾಮವಿದು. ಸಣ್ಣ ವಿಚಾರಗಳ ಸರಳುಗಳಿಂದ ನಾವು ಬಂಧಿತರಾಗಿ ಬಿಡುತ್ತೇವೆ. ಸಣ್ಣ ಸಣ್ಣ ಇಂತಹ ಮಿತಿಗಳೇ ನಮ್ಮನ್ನು ಮುಂದೆ ಹೋಗದಂತೆ ತಡೆಯುತ್ತವೆ.
ನಮ್ಮ ವಿಚಾರಗಳನ್ನು ಸೀಮಿತಗೊಳಿಸುತ್ತಿರುವ ಎಲ್ಲ ಸಂಗತಿಗಳನ್ನು ತಕ್ಷಣಕ್ಕೆ ನಮ್ಮ ಮನಸ್ಸಿನಿಂದ ಹೊರ ಹಾಕಬೇಕು. ಇಂತಹ ಭ್ರಮೆಗಳನ್ನು ದಾಟಿ ನಿರಂತರ ಎಚ್ಚರದಲ್ಲಿ ಹಾಗೂ ಜಾಗ್ರತ ಸ್ಥಿತಿಯಲ್ಲಿ ನಮ್ಮ ಮನಸ್ಸನ್ನು ನಿಲ್ಲಿಸಿಕೊಳ್ಳುವ ಕೌಶಲ ನಮ್ಮದಾದಾಗ ಬದುಕು ಅರ್ಥಪೂರ್ಣವಾಗಬಲ್ಲದು.