ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೋಳಿ ಮಕ್ಕಳ ಶಿವರಾತ್ರಿ !

ಹೋಳಿ ಮಕ್ಕಳ ಶಿವರಾತ್ರಿ !

image-4b443a0d-d226-489d-b1f9-c11af1b21a18.jpg
image-f9ca39c9-d8f5-4b92-bb8e-ae9cbbcdc10c.jpg
ಎಂ.ಜಿ.ತಿಲೋತ್ತಮೆ ಭಟ್ಕಳ ಮೂರು ದಿನ ಶಿವರಾತ್ರಿಯನ್ನು ಆಚರಿಸುವ ಗೊಂಡ ಸಮುದಾಯದ ಗಂಡಸರನ್ನು ‘ಹೋಳಿ ಮಕ್ಕಳು’ ಎಂದು ಭಕ್ತಿಯಿಂದ, ಅಭಿಮಾನ ದಿಂದ ಕರೆಯುತ್ತಾರೆ! ಉತ್ತರ ಕನ್ನಡ ಜಿಯ ಭಟ್ಕಳ ಭಾಗದ ಗೊಂಡರು ಶಿವರಾತ್ರಿಯನ್ನು ಆಚರಿಸುವ ವಿಧಾನ ವಿಶಿಷ್ಟ, ವಿಭಿನ್ನ, ಅನನ್ಯ. ತಮ್ಮದೇ ರೀತಿಯಲ್ಲಿ ಆಚರಿಸುವ ಶಿವರಾತ್ರಿ ಹಬ್ಬ ಎಂದರೆ ಗೊಂಡರಿಗೆ ಬಹಳ ಸಂಭ್ರಮ. ಇವರ ಶಿವರಾತ್ರಿಯಲ್ಲಿ ಉಪವಾಸ ಮತ್ತು ಜಾಗರಣೆಯ ಜತೆಯಲ್ಲೇ, ಕಾಮನ ಹಬ್ಬವನ್ನು ತಮ್ಮದೇ ರೀತಿಯಲ್ಲಿ ಆಚರಿಸುವುದು ಗಮನ ಸೆಳೆಯುತ್ತದೆ. ಶಿವರಾತ್ರಿಯನ್ನು ಮೂರು ದಿನಗಳ ಕಾಲ ಆಚರಿಸುವ ಗೊಂಡರ ಈ ಹಬ್ಬವು ಬಹಳ ಕುತೂಹಲಕಾರಿ ಮತ್ತು ಅಧ್ಯಯನಯೋಗ್ಯ. ಇವರು ಶಿವರಾತ್ರಿ ಹಬ್ಬಕ್ಕೆಂದು ಪೂರ್ವ ತಯಾರಿಯನ್ನು ಹದಿನೈದು ದಿನಗಳ ಮೊದಲಿನಿಂದಲೇ ಆರಂಭಿಸು ತ್ತಾರೆ. ಮನೆಯ ಮುಂದಿನ ಕಣೆದಲ್ಲಿ (ಅಂಗಳ) ಒಂದು ಬದಿ ತುಳಿಸಿ ಕಟ್ಟೆ, ಇನ್ನೊಂದು ಬದಿ ಭತ್ತದ ಮುಡಿ. ಗೊಂಡರ ಪ್ರತಿ ಮನೆಯ ಮುಂದೆ ಮೇಟಿ ಕಂಬ (ಕೃಷಿ ಸಂಬಂಧಿ) ಹೊಂದಿರುತ್ತದೆ. ಅಂಗಳಕ್ಕೆ ಸಗಣಿ ಹಾಕೋದು ಸಹ ಹಬ್ಬದ ಭಾಗವೇ ಸರಿ! ಢಕ್ಕೆಯ ತಯಾರಿ ಶಿವರಾತ್ರಿಯ ದಿನ ಬಡಿಯುವ ಢಕ್ಕೆಯು ಬಹು ಮುಖ್ಯ ಸಂಗೀತ ಸಾಧನ. ಶಿವನಿಗೆ ಡಮರುಗ ಅಥವಾ ಢಕ್ಕೆ ಇಷ್ಟವಂತೆ. ಅದಕ್ಕೇ ಇರಬೇಕು, ಗೊಂಡ ಜನರು ಢಕ್ಕೆಯನ್ನು ಬಡಿಯುತ್ತಾ ಶಿವರಾತ್ರಿಯ ಹಾಡು ಗಳನ್ನು ಹಾಡುತ್ತಾರೆ! ಇಂದಿಗೂ ಡಮರುಗವನ್ನು ಬಡಿಯುವ ಕರ್ನಾಟಕದ ಕೆಲವೇ ಜನ ಸಮೂಹಗಳಲ್ಲಿ ಗೊಂಡರೂ ಒಂದು! ಅಟ್ಟದ ಮೇಲೆ ಭದ್ರ ವಾಗಿ ಇಟ್ಟ ಢಕ್ಕೆಯ ಮುಚ್ಚನ್ನು ಢಕ್ಕೆ ಬಳೆಗೆ ಹಚ್ಚುವುದು, ಅದು ಸರಿಯಾಗಿ ಸದ್ದು ಮಾಡುತ್ತದೋ ಎಂದು ನೋಡಿಕೊಳ್ಳುವುದು ಹಬ್ಬದ ಪ್ರಮುಖ ತಯಾರಿ. ಎಲ್ಲಾ ಗಂಡಸರು ಹಬ್ಬದ ಅಂಗವಾಗಿ ತಮ್ಮ ತಲೆಗೆ ಕಟ್ಟುವ ರುಮಾಲು, ಗೋಣಿ ದಟ್ಟಿ ಇವುಗಳನ್ನೆ ಖರೀದಿಸುವುದು, ಕಾಲಗೆಜ್ಜೆ, ಸೊಂಟ ಪಟ್ಟಿ, ನವಳ, ಪೆಟ್ಟಿಗೆಯಲ್ಲಿ ಹಬ್ಬಕ್ಕೆಂದು ಇರುವ ಆಭರಣಗಳ ಜೋಡಿಸುವುದು, ಶುಚಿಗೊಳಿಸುವುದು ಇವೆಲ್ಲವೂ ಹಬ್ಬದ ಸಂಭ್ರಮದ ಭಾಗ. ಹಬ್ಬಕ್ಕೆ ನಾಲ್ಕಾರು ದಿನಗಳು ಇರುವಾಗಲೇ ಹೆಂಗಸರು ಸಗಣಿಯಿಂದ ಅಂಗಳ ಸಾರಿಸುತ್ತಾರೆ. ಹಬ್ಬ ಆರಂಭ ವಾಗುವ ದಿನ ಮನೆಯ ಒಳಾಂಗಣ ಮತ್ತು ಹೊರಾಂಗಣ ತೊಳೆದು ನಂತರ ಸ್ನಾನ ಮಾಡಿ, ತಿಂಡಿಯನ್ನು ತಯಾರಿಸುತ್ತಾರೆ. ಮನೆಯ ಯಜಮಾನ ದೇವರ ಪೂಜೆ ಮಾಡಿದರೆ , ಉಳಿದವರು ಹಬ್ಬದ ತಯಾರಿಯಲ್ಲಿ ಇರುತ್ತಾರೆ. ಶಿವರಾತ್ರಿಯ ದಿನ ಸಹಜವಾಗಿ ಉಪವಾಸ. ಮನೆಯ ಗಂಡಸರು ಊಟ ಮಾಡುವುದಿಲ್ಲ. ಬದಲಾಗಿ ದೋಸೆ ಯನ್ನು ಬಾಳೆ ಹಣ್ಣಿನ ಪಾಯಸದೊಂದಿಗೆ ಸವಿಯುತ್ತಾರೆ. ಸಂಜೆ ಸುಮಾರು ಐದು ಗಂಟೆಗೆ ಈಗಾಗಲೇ ತೆಗೆದಿಟ್ಟ ಢಕ್ಕೆ, ಹೆಗಲು ದಂಡೆ, ಬೆಳ್ಳಿ ಆಭರಣ, ಕಟ್ಟಿದ ಅಬ್ಬಲಿ ಹೂವಿನೊಂದಿಗೆ ಊರ ಮುಖಂಡರ ಮನೆಯತ್ತಾ ಸಾಗುತ್ತಾರೆ. ಅಪ್ಪ,ಅಣ್ಣನೊಂದಿಗೆ ಚಿಕ್ಕ ಮಕ್ಕಳು ನಡೆಯುವ ಸಂಭ್ರವೇ ಸಂಭ್ರಮ! ಗೊಂಡರ (ಮುಖಂಡ) ಮನೆಯ ಚಾವಡಿಗೆ ಬರುವ ತಂಡ, ಸಭೆಗೆ ನಮಸ್ಕರಿಸಿ ಮನೆಯೊಳಕ್ಕೆ ಹೋಗಬೇಕು. ಇಲ್ಲಿ ಪ್ರತಿಯೊಬ್ಬರಿಗೂ ಮಡಿ (ಒಂದು ರೀತಿಯ ಕೆಂಪು ಬಣ್ಣದ ಬಟ್ಟೆ) ಮತ್ತು ಬನಿಯಾನ ನೀಡುತ್ತಾರೆ. ಸೊಂಟ ತನಕ ಮಡಿಯನ್ನುಟ್ಟು, ಬನಿಯಾನ ಧರಿಸಿ, ತಲೆಗೆ ಪೇಟ, ಅದರ ಮೇಲೆ ಕನಕಾಂಬರ ಅಥವಾ ಅಬ್ಬಲಿ ಹೂವನ್ನು ಮುಡಿಯುತ್ತಾರೆ. ತಮ್ಮ ಶಕ್ತ್ಯಾನುಸಾರ ಆಭರಣಗಳನ್ನು ತೊಟ್ಟು, ಅಲಂಕೃತರಾಗುತ್ತಾರೆ. ಇಲ್ಲಿ ಈಗಲೇ ಹೋಳಿ! ಈ ಮೂರು ದಿನಗಳ ಕಾಲ ಅಲಂಕೃತ ಗಂಡಸರನ್ನು ‘ಹೋಳಿ ಮಕ್ಕಳು’ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಇವರು ಕಾಲಿಗೆ ಚಪ್ಪಲಿ ಹಾಕೋದಿಲ್ಲ, ಮಾಂಸಹಾರ ಸೇವಿಸುವುದಿಲ್ಲ. ಊರಿನ ದೇವಾಲಯದಲ್ಲಿ ಅಥವಾ ಮುಖಂಡರ ಮನೆಯಲ್ಲಿ ತಮ್ಮ ಮೊದಲ ಕುಣಿತ ಕುಣಿಯುತ್ತಾರೆ. ಢಕ್ಕೆ ಬಡಿಯತ್ತಾ ಹಾಡುವುದು ಕುಣಿತದಲ್ಲೇ ಸೇರಿಕೊಂಡಿರುತ್ತದೆ. ಧುಮಸೋಲ ಅನ್ನಿರೋ ನಮ್ಮ ತುಳಸಿ ಅಮ್ಮನವರಿಗೋ, ಧುಮಸೋಲ ಅನ್ನಿರೋ ನಮ್ಮ ಢಕ್ಕೆ ಧ್ವನಿಗೋ, ಧುಮಸೋಲ ಅನ್ನಿರೋ ನಮ್ಮ ಉರುವ ಜ್ಯೋತಿಗೊ! ಎಂದು ಇವರು ಹಾಡುವ ಹಾಡು ಮನ ಸೆಳೆಯುತ್ತದೆ. ‘ಧುಮಸೋಲ’ ಎಂದರೆ ಶುಭವಾಗಲಿ ಎಂದರ್ಥ. ಈ ಹಾಡನ್ನು ಹೇಳುತ್ತಾ ಮುಂದಿನ ಮನೆಗೆ ತೆರಳುತ್ತಾರೆ. ಎರಡನೆಯ ದಿನವೂ ಈ ಕುಣಿತ ಮುಂದುವರಿಯುತ್ತದೆ. ಮೂರನೇ ದಿನ ಬೆಳಿಗ್ಗೆ ಬೇರೆ ಬೇರೆ ಊರಿಗೆ ವಿಭಾಗವಾಗಿ ಹೋಗಿದ್ದ ‘ಹೋಳಿ ಮಕ್ಕಳು’ ಊರಿನ ಒಂದು ನಿಗದಿತ ಪ್ರದೇಶದಲ್ಲಿ ಹಳಬನ್ನು (ಹೋಳಿ ಮಕ್ಕಳು ತಮ್ಮ ಉಡುಪನ್ನು ಬದಲಾಯಿಸುವುದು) ಕಳಚುತ್ತಾರೆ. ಈ ಬಟ್ಟೆಯನ್ನು ಒಗೆಯುವುದೇ ಒಂದು ಸಂಭ್ರಮ. ಮೂರು ಅಥವಾ ಐದು ದಿನದ ನಂತರ ದಾನವಾಗಿ ದೊರೆತ ಕಾಯಿ, ಮಡಿ, ಹಣ ಇವುಗಳನ್ನು ಊರ ಮುಖಂಡರ ಸಮುಖದಲ್ಲಿ ಲೆಕ್ಕಹಾಕುವರು. ಅಂದು ಬೆಲ್ಲದ ಅವಲಕ್ಕಿಯ ಸಿಹಿಯ ಸೇವನೆ. ದಾನವಾಗಿ ಬಂದ ಹಣವನ್ನು ಬಡವರಿಗೆ ಮತ್ತು ಊರಿನ ಅಭ್ಯುದಯಕ್ಕೆ ವೆಚ್ಚ ಮಾಡುವ ಸದ್ಗುಣ! ಶಿವರಾತ್ರಿ ಹಬ್ಬವನ್ನು ಈ ರೀತಿ ವಿಭಿನ್ನವಾಗಿ ಆಚರಿಸುವ  ಗೊಂಡ ಸಮುದಾಯದವರು, ಬಹು ಕಾಲದಿಂದಲೂ ಈ ಆಚರಣೆಯನ್ನು ಚಾಲ್ತಿಯಲ್ಲಿಟ್ಟಿರು ವುದು ಅಭಿಮಾನದ ಸಂಗತಿ. ಇಂತಹ ಆಚರಣೆಗಳು ಇನ್ನೂ ಜೀವಂತವಾಗಿ ಇರುವುದರಿಂದಲೇ ಅಲ್ಲವೆ, ನಮ್ಮ ನಾಡಿನ ಸಂಸ್ಕೃತಿಯು ವಿಶಿಷ್ಟ ಸೊಗಡನ್ನು ಹೊಂದಿರುವುದು! ಕಾಮನ ಅಂಗಿ ಢಕ್ಕೆ ಹಿಡಿದ ಹೋಳಿ ಮಕ್ಕಳ ಜತೆಯಲ್ಲೇ, ‘ಕಾಮನಂಗಿ’ (ಕಾಮನ ಅಂಗಿ) ತೊಟ್ಟ ವಿಭಿನ್ನ ವೇಷಧಾರಿಯನ್ನು ನೋಡಬಹುದು. ಸರಿಸುಮಾರು ಐವತ್ತು ಹೋಳಿ ಮಕ್ಕಳು ಇದ್ದರೆ ಅದರಲ್ಲಿ ‘ಕಾಮನಂಗಿ’ಗಳು ಹತ್ತರಿಂದ ಹದಿನೈದು ಮಂದಿ ಇದ್ದೇ ಇರುತ್ತಾರೆ. ಎಲ್ಲರೂ ಕುಣಿದ ನಂತರ, ಆ ಮನೆಯವರು ದಾನಮಾಡಿದ ಕಾಯಿ, ಉಡಲು ಕೊಟ್ಟ ಮಡಿ ಬಟ್ಟೆ, ಹಣ ಇವುಗಳನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಕೆಲವು ಮನೆಯವರು ಹೋಳಿ ಮಕ್ಕಳಿಗೆ ಚಹಾ, ತಿಂಡಿ ನೀಡುತ್ತಾರೆ.