ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್ ಅಪರೂಪದ, ಸಂಕೀರ್ಣವಾದ ಮತ್ತು ಜೀವಕ್ಕೆ ಅಪಾಯಕಾರಿಯಾಗಿದ್ದ ಕ್ಯಾನ್ಸರ್ ಹೊಂದಿದ್ದ ಕೀನ್ಯಾದ 32 ವರ್ಷದ ಗರ್ಭಿಣಿ ಮಹಿಳೆಗೆ ಯಶಸ್ವಿಯಾಗಿ ಅತ್ಯುತ್ಕೃಷ್ಟವಾದ ಬಹುವಿಧ ಚಿಕಿತ್ಸೆ ನೀಡಿ ಜೀವ ಉಳಿಸಿದ ಮಹತ್ವದ ಸಾಧನೆ ಮಾಡಿದೆ.
ಈ ರೋಗಿಗೆ ಅತ್ಯಂತ ಸಂಕೀರ್ಣ, ಅಪರೂಪದ ಮತ್ತು ಆಕ್ರಮಣಕಾರಿ ರಕ್ತ ಕ್ಯಾನ್ಸರ್ ಆಗಿರುವ ಅಕ್ಯೂಟ್ ಪ್ರೊಮೈಲೋಸೈಟಿಕ್ ಲ್ಯೂಕೇಮಿಯಾ (ಎಪಿಎಲ್) ಸಮಸ್ಯೆ ಬಾಧಿಸುತ್ತಿತ್ತು. ಇದು ಎಷ್ಟು ಅಪಾಯಕಾರಿ ಎಂದರೆ ಅಕ್ಯೂಟ್ ಮೈಲಾಯ್ಡ್ ಲ್ಯೂಕೇಮಿಯಾ ಪ್ರಕರಣಗಳಲ್ಲಿ ಹತ್ತರಲ್ಲಿ ಒಂದು ಭಾಗದಷ್ಟು ಮಾತ್ರ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. 1 ಲಕ್ಷ ಜನರಲ್ಲಿ ಕೇವಲ 0.08 ಜನರಿಗೆ ಮಾತ್ರ ಕಾಣಿಸುವಂತಹ ಬಹಳ ಅಪರೂಪದ ಕ್ಯಾನ್ಸರ್ ಇದಾಗಿದೆ. ಎಪಿಎಲ್ ನಲ್ಲಿ ಅತೀವ ರಕ್ತಸ್ರಾವ, ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ ಮತ್ತು ವೇಗವಾಗಿ ಹರಡುವ ಸಮಸ್ಯೆ ಇರುವುದರಿಂದ ತೀವ್ರ ಅಪಾಯ ಉಂಟಾಬಹುದು ಮತ್ತು ಗರ್ಭಾವಸ್ಥೆಯಲ್ಲಿ ಇದು ಸಂಭವಿಸುವುದು ಅತ್ಯಂತ ಅಪರೂಪ ಮತ್ತು ವೈದ್ಯಕೀಯವಾಗಿ ಬಹಳ ಸಂಕೀರ್ಣ.
ಇದನ್ನೂ ಓದಿ: Manipal Hospital: ಸಂಗೀತದ ಮೂಲಕ ಮೆದುಳಿನ ಪುನಃಶ್ಚೇತನ: ಮಣಿಪಾಲ್ ಹಾಸ್ಪಿಟಲ್ಸ್‌ನಿಂದ ವಿಶೇಷ ಚಿಕಿತ್ಸಾ ಕ್ರಮ!
ಗರ್ಭಧಾರಣೆಯ 15 ವಾರಗಳಲ್ಲಿ ರೋಗಿಯು ಆರಂಭಿಕ ಗರ್ಭಾವಸ್ಥೆಯಲ್ಲಿರುವುದು ಮತ್ತು ಆಕ್ರಮಣಕಾರಿ ರಕ್ತ ಕ್ಯಾನ್ಸರ್ ಹೊಂದಿರುವುದು ಎರಡೂ ಸವಾಲುಗಳನ್ನು ವೈದ್ಯರು ಎದುರು ಗೊಂಡರು. ಇದು ತೀವ್ರ ರಕ್ತಸ್ರಾವ, ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ, ಅಂಗಾಂಗ ವೈಫಲ್ಯ ಮತ್ತು ತಾಯಿ-ಶಿಶುವಿಗೆ ತೀವ್ರ ತೊಡಕು ಉಂಟು ಮಾಡಬಲ್ಲ ಅತ್ಯಂತ ಅಪರೂಪದ ಮತ್ತು ಅತ್ಯಂತ ಅಪಾಯಕಾರಿ ಸಂದರ್ಭವಾಗಿತ್ತು. ಇಲ್ಲಿ ಎರಡು ಸವಾಲುಗಳನ್ನು ಜೊತೆಯಾಗಿ ಎದುರಿಸುವ ವಿಶಿಷ್ಟ ಸನ್ನಿವೇಶ ಸೃಷ್ಟಿಯಾಗಿತ್ತು. ಎಪಿಎಲ್ ನ ಆಕ್ರಮಣಕಾರಿ ಸ್ವಭಾವ ಮತ್ತು ಗರ್ಭಾವಸ್ಥೆಯ ದೈಹಿಕ ಬದಲಾವಣೆಗಳು ಜೊತೆಯಾಗಿದ್ದರಿಂದ ತಕ್ಷಣ ರೋಗನಿರ್ಣಯ ಮಾಡುವುದು ಮತ್ತು ತ್ವರಿತವಾಗಿ ಚಿಕಿತ್ಸೆ ಆರಂಭಿಸುವುದು ರೋಗಿಯ ಜೀವ ಮತ್ತು ಗರ್ಭವನ್ನು ಉಳಿಸಲು ಬಹಳ ಅತ್ಯಗತ್ಯವಾಗಿತ್ತು.
ರೋಗಿಯು ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಗೆ ಬಂದಾಗ ಬಹಳ ಆಯಾಸ, ವಿವರಿಸ ಲಾಗದ ರಕ್ತಸ್ರಾವ ಮತ್ತು ಬಲಗಾಲಿನಲ್ಲಿ ತೀವ್ರ ನೋವಿನ ಸಮಸ್ಯೆಯಿಂದ ಒದ್ದಾಡುತ್ತಿದ್ದರು. ವಿವರವಾದ ತಪಾಸಣೆ ಮಾಡಿದ ಬಳಿಕೆ ಅವರಿಗೆ ಹೈ-ರಿಸ್ಕ್ ಅಕ್ಯೂಟ್ ಪ್ರೊಮೈಲೋಸೈಟಿಕ್ ಲ್ಯೂಕೇಮಿಯಾ (ಎಪಿಎಲ್) ಇರುವುದು ದೃಢಪಟ್ಟಿತು. ಇದೊಂದು ಕೊಗ್ಯುಲೋಪತಿ (ರಕ್ತ ಹೆಪ್ಪು ಗಟ್ಟದೇ ಇರುವ ತೀವ್ರ ಸಮಸ್ಯೆ) ಮತ್ತು ಡಿವಿಟಿ (ಡೀಪ್ ವೇನ್ ಥ್ರಾಂಬೋಸಿಸ್) ಉಂಟು ಮಾಡುವ ಅಪರೂಪದ ಆಕ್ರಮಣಕಾರಿ ರಕ್ತ ಕ್ಯಾನ್ಸರ್ ಆಗಿದೆ. ಅಲ್ಲದೇ ಅವರ ಹೃದಯ ಮತ್ತು ಶ್ವಾಸಕೋಶದ ಸುತ್ತ ದ್ರವ ಸಂಗ್ರಹವಾಗಿತ್ತು, ಯಕೃತ್ತಿನಲ್ಲಿ ಅಸಹಜತೆ ಕಂಡುಬಂದಿತ್ತು ಮತ್ತು ಗರ್ಭಕೋಶದ ಫೈಬ್ರಾಯ್ಡ್ ನಲ್ಲಿ ನೋವಿದ್ದದ್ದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿತ್ತು. ಈ ಪ್ರತಿಯೊಂದು ಸಮಸ್ಯೆಗಳೂ ಜೀವಕ್ಕೆ ಅಪಾಯಕಾರಿಯಾಗಿದ್ದರಿಂದ, ಹೆಮಟಾಲಜಿ, ವಾಸ್ಕುಲರ್ ಸರ್ಜರಿ, ಕಾರ್ಡಿ ಯೋಪಲ್ಮನರಿ ಮೆಡಿಸಿನ್ ಮತ್ತು ಆಬ್‌ಸ್ಟೆಟ್ರಿಕ್ಸ್ ತಜ್ಞರ ಬಹುವಿಧ ತಂಡವು ತಕ್ಷಣ ಮತ್ತು ಸಮನ್ವ ಯತೆಯಿಂದ ಚಿಕಿತ್ಸೆ ಒದಗಿಸುವುದು ಅಗತ್ಯವಾಗಿತ್ತು.
ರೋಗಿಗೆ ತಕ್ಷಣವೇ ಎಪಿಎಲ್ ಇಂಡಕ್ಷನ್ ಥೆರಪಿಯಲ್ಲಿ ಮೂಲಭೂತವಾಗಿ ಬಳಸುವ ಎರಡು ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಔಷಧಗಳನ್ನು ನೀಡಲು ಆರಂಭಿಸಲಾಯಿತು. ಈ ಔಷಧಗಳು ತ್ವರಿತ ಮತ್ತು ಪರಿಣಾಮಕಾರಿ ರಿಮಿಷನ್ ಸಾಧಿಸುವ ಉದ್ದೇಶದಿಂದ ರಚಿತಗೊಂಡಿವೆ. ಮುಂದಿನ ಆರು ವಾರಗಳಲ್ಲಿ ಚಿಕಿತ್ಸೆಯ ಸಮಯದಲ್ಲಿ ಉಂಟಾಗಬಹುದಾದ ಹೃದಯ, ಶ್ವಾಸಕೋಶ, ರಕ್ತ ಅಥವಾ ಮೆಟಬಾಲಿಕ್ ಸಮಸ್ಯೆಗಳನ್ನು ತಕ್ಷಣ ಕಂಡುಹಿಡಿಯಲು ಮತ್ತು ಅದನ್ನು ಸೂಕ್ತವಾಗಿ ನಿರ್ವಹಿಸಲು ತೀವ್ರ ರೀತಿಯಲ್ಲಿ ಆಕೆಯ ಆರೋಗ್ಯ ಮೇಲ್ವಿಚಾರಣೆ ಮಾಡಿ ಚಿಕಿತ್ಸೆ ನೀಡಲಾಯಿತು.
ಜೊತೆಗೆ, ಅವರ ಸಂಕೀರ್ಣ ಸ್ಥಿತಿಗೆ ತಕ್ಕಂತೆ ಸಮಗ್ರ ಔಷಧೋಪಚಾರ, ಆರೈಕೆ ನೀಡಲಾಯಿತು. ಬ್ರಾಡ್-ಸ್ಪೆಕ್ಟ್ರಮ್ ಆಂಟಿಬಯಾಟಿಕ್ ಗಳು, ಆಂಟಿಕೋಗ್ಯುಲೆಂಟ್ ಥೆರಪಿ, ನಿಯಮಿತ ರಕ್ತ ಮತ್ತು ಪ್ಲೇಟ್‌ಲೆಟ್ ಟ್ರಾನ್ಸ್ ಫ್ಯೂಷನ್, ವಿವಿಧ ತಜ್ಞರ ಸಹಯೋಗದ ನಿರಂತರ ಆರೋಗ್ಯ ನಿರ್ವಹಣಾ ಸೇವೆ ಇತ್ಯಾದಿಗಳ ಮೂಲಕ ಚಿಕಿತ್ಸೆ ಒದಗಿಸಲಾಯಿತು. ಈ ಬಹುವಿಧ, ಪ್ರೊಟೋಕಾಲ್ ಆಧಾರಿತ ವಿಧಾನವು ಸೋಂಕುಗಳನ್ನು ನಿಯಂತ್ರಿಸಲು, ರಕ್ತಸ್ರಾವ ತಡೆಗಟ್ಟಲು ಮತ್ತು ತೀವ್ರ ಚಿಕಿತ್ಸಾ ಹಂತ ದಲ್ಲಿ ಅಂಗಾಂಗಗಳನ್ನು ಬೆಂಬಲಿಸಲು ಬಹಳ ನಿರ್ಣಾಯಕವಾಗಿತ್ತು. ಸುಮಾರು ಆರು ವಾರಗಳ ಇಂಡಕ್ಷನ್ ಥೆರಪಿ ನೀಡಿದ ನಂತರ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ತಮ ರೀತಿಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಜೊತೆಗೆ ವಿವರವಾದ ಚಿಕಿತ್ಸಾ ನಂತರ ಆರೈಕೆ ಯೋಜನೆ ಮತ್ತು ಫಾಲೋ- ಅಪ್ ಯೋಜನೆಯನ್ನು ಒದಗಿಸಲಾಗಿದೆ.
ಈ ವಿಶಿಷ್ಟ ಪ್ರಕರಣದ ವಿವರ ನೀಡಿದ ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಯ ಮೆಡಿಕಲ್ ಆಂಕಾಲಾಜಿ & ಹೆಮಟೋ-ಆಂಕಾಲಾಜಿ ವಿಭಾಗದ ಪ್ರಿನ್ಸಿಪಾಲ್ ಡೈರೆಕ್ಟರ್ ಡಾ. ನೀತಿ ರೈಜಾದಾ ಅವರು, “ಅಕ್ಯೂಟ್ ಪ್ರೊಮೈಲೋಸೈಟಿಕ್ ಲ್ಯೂಕೇಮಿಯಾ ಅತ್ಯಂತ ತೀವ್ರ ಗತಿಯ, ಆದರೆ ತಕ್ಷಣ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದಾದ ಸಂಕೀರ್ಣ ಲ್ಯೂಕೇಮಿಯಾ ಪ್ರಕಾರಗಳಲ್ಲಿ ಒಂದು. ಈ ಪ್ರಕರಣದಲ್ಲಿ ರೋಗಿಯು ಅಪಾಯಕಾರಿ ರೋಗ ರೋಗ, ಗರ್ಭಾವಸ್ಥೆ ಯ ಸವಾಲುಗಳು ಮತ್ತು ಡೀಪ್ ವೀನ್ ಥ್ರಾಂಬೋಸಿಸ್ ಸ್ಥಿತಿಯನ್ನು ಹೊಂದಿದ್ದರಿಂದ ಅವರ ಸ್ಥಿತಿ ಅತ್ಯಂತ ಕ್ರಿಟಿಕಲ್ ಆಗಿತ್ತು. ಆದರೆ ಆರಂಭಿಕ ರೋಗನಿರ್ಣಯ, ತ್ವರಿತ ಸಿಸ್ಟಮಿಕ್ ಥೆರಪಿ, ರಕ್ತ ಸಂಬಂಧಿ ಔಷಧಗಳು, ಕೀಮೋ ಟ್ಯಾಬ್ಲೆಟ್ ಗಳು ಮತ್ತು ಸಮನ್ವಯಿತ ಬಹುವಿಧ ಚಿಕಿತ್ಸೆಯಿಂದ ನಾವು ಸಮರ್ಪಕ ಚಿಕಿತ್ಸೆ ಒದಗಿಸುವುದು ಸಾಧ್ಯವಾಯಿತು” ಎಂದು ಹೇಳಿದರು.
ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಯ ರೇಡಿಯೇಷನ್ ಆಂಕಾಲಾಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಮಧುಸೂದನ್ ಎನ್ ಅವರು ಮಾತನಾಡಿ, “ಎಪಿಎಲ್ ಚಿಕಿತ್ಸೆಯ ಸಮಯದಲ್ಲಿ ತೀವ್ರ ರಕ್ತಸ್ರಾವ, ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ, ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ಹೃದಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಇದಕ್ಕೆ ಎಚ್ಚರಿಕೆ ಯ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ. ಹೀಗಾಗಿ ನಮ್ಮ ತಂಡವು ಕಾರ್ಡಿಯಾಲಜಿ, ಪಲ್ಮನಾಲಜಿ, ವಾಸ್ಕುಲರ್ ಸರ್ಜರಿ ಮತ್ತು ಗೈನಕಾಲಜಿ ತಜ್ಞರ ಜೊತೆ ಸೇರಿ ಸಮನ್ವಯದಿಂದ ಕಾರ್ಯ ನಿರ್ವಹಿಸಿದೆ ಮತ್ತು ರೋಗಿಯು ಚಿಕಿತ್ಸೆಗೆ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ” ಎಂದು ಹೇಳಿದರು.
ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಯ ಹೆಮಟೋ ಆಂಕಾಲಾಜಿ ವಿಭಾಗದ ಕನ್ಸಲ್ಟೆಂಟ್ ಡಾ. ನಿಶಿತ್ ಓಝಾ ಅವರು ಮಾತನಾಡಿ, “ಗರ್ಭಾವಸ್ಥೆಯಲ್ಲಿ ಹೈ-ರಿಸ್ಕ್ ಎಪಿಎಲ್ ನಿರ್ವಹಣೆ ಮಾಡುವುದು ಅತ್ಯಂತ ಸೂಕ್ಷ್ಮ ಮತ್ತು ಬಹಳ ಎಚ್ಚರಿಕೆ ಬೇಕಾಗುತ್ತದೆ. ಯಾಕೆಂದರೆ ಇಲ್ಲಿ ತಾಯಿ ಮತ್ತು ಗರ್ಭಸ್ಥ ಶಿಶುವಿನ ಸುರಕ್ಷತೆಯನ್ನು ಎರಡನ್ನೂ ನೋಡಬೇಕಾಗುತ್ತದೆ. ಈ ಪ್ರಕರಣದಲ್ಲಿ ಪ್ರತೀ ನಿಮಿಷ ನಿಮಿಷವೂ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದು ಕೊಂಡು ಮುಂದುವರಿದೆವು. ರೋಗಿಯ ಅತ್ಯುತ್ತಮ ಸ್ಪಂದನೆಯಿಂದ ಸೂಕ್ತ ರಿಸ್ಕ್ ಸ್ಟ್ರಾಟಿಫಿ ಕೇಷನ್, ಪ್ರೊಟೋಕಾಲ್ ಆಧಾರಿತ ಥೆರಪಿ ನೀಡುವುದು ಸಾಧ್ಯವಾಯಿತು ಮತ್ತು ವಿಶೇಷವು ಈ ಪ್ರಕರಣವು ಬಹುವಿಧ ಚಿಕಿತ್ಸೆಯ ಮಹತ್ವವನ್ನು ತೋರಿಸಿಕೊಟ್ಟಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ವೈದ್ಯರ ತಂಡದ ಕೃತಜ್ಞತೆ ಸಲ್ಲಿಸಿದ ರೋಗಿ, “ಭಾರತಕ್ಕೆ ಬಂದಾಗ ನಾನು ತುಂಬಾ ಅನಾರೋಗ್ಯದಿಂದಿದ್ದೆ ಮತ್ತು ನನ್ನ ಜೀವ ಹಾಗೂ ಮಗುವಿನ ಕುರಿತು ಬಹಳ ಭಯ ಪಟ್ಟಿದ್ದೆ. ಆದರೆ ಫೋರ್ಟಿಸ್ ತಂಡ ಸಹಾನುಭೂತಿಯಿಂದ ಮತ್ತು ಬಹಳ ಸ್ಪಷ್ಟತೆ ಯಿಂದ ನನಗೆ ಚಿಕಿತ್ಸೆ ನೀಡಿದೆ. ಪ್ರತೀ ಹೆಜ್ಜೆಯಲ್ಲೂ ಸೂಕ್ತ ಮಾರ್ಗದರ್ಶನ ನೀಡಿ ಸುರಕ್ಷಿತ ವಾಗಿರುವಂತೆ ನೋಡಿಕೊಂಡಿದ್ದಾರೆ. ಇಂದು ನಾನು ಆರೋಗ್ಯವಾಗಿ ಡಿಸ್ಚಾರ್ಜ್ ಆಗುತ್ತಿರುವುದು ಊಹೆಗೂ ಮೀರಿದ್ದು ಮತ್ತು ಇದೊಂದು ಆಶೀರ್ವಾದ ಎಂದೇ ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಯ ಫೆಸಿಲಿಟಿ ಡೈರೆಕ್ಟರ್ ಡಾ.ತೇಜಸ್ವಿನಿ ಪಾರ್ಥಸಾರಥಿ ಅವರು ಮಾತನಾಡಿ, “ಫೋರ್ಟಿಸ್ ಹಾಸ್ಪಿಟಲ್ ಬನ್ನೇರುಘಟ್ಟ ರಸ್ತೆಯಲ್ಲಿನ ಬಹುವಿಧ ಕ್ಯಾನ್ಸರ್ ಚಿಕಿತ್ಸಾ ಸಾಮರ್ಥ್ಯವನ್ನು ಈ ಪ್ರಕರಣವು ತೋರಿಸಿಕೊಟ್ಟಿದೆ. ಬಹು ಅಂಗಾಂಗ ತೊಡಕುಗಳಿದ್ದ ಗರ್ಭಿಣಿ ರೋಗಿಯ ಹೈ-ರಿಸ್ಕ್ ಲ್ಯೂಕೇಮಿಯಾ ಚಿಕಿತ್ಸೆಗೆ ಅತ್ಯಾಧುನಿಕ, ಸುಧಾರಿಕ ವೈದ್ಯಕೀಯ ತಜ್ಞತೆ ಮತ್ತು ಅದ್ಭುತವಾದ ಸಮನ್ವಯತೆ ಬೇಕಾಗುತ್ತದೆ. ಸುರಕ್ಷಿತವಾಗಿ, ಅತ್ಯುತ್ಕೃಷ್ಟ ಚಿಕಿತ್ಸೆ ನೀಡಿ ಸಕಾರಾತ್ಮಕ ಫಲಿತಾಂಶ ನೀಡಿದ ನಮ್ಮ ಆಸ್ಪತ್ರೆಯ ತಂಡಗಳ ಅದ್ಭುತ ಪ್ರಯತ್ನಕ್ಕೆ ನಮಗೆ ಹೆಮ್ಮೆ ಇದೆ” ಎಂದು ಹೇಳಿದರು.