ಬೆಂಗಳೂರು: ಜೊತೆಯಾಗಿ ಬಾಳಿದ ಸಂಗಾತಿ, ಜೀವಮಾನವಿಡೀ ಕಟ್ಟಿಕೊಂಡ ಸುಂದರ ನೆನಪುಗಳು ಇವೆಲ್ಲವೂ ಕಣ್ಣೆದುರೇ ಇದ್ದರೂ ಗುರುತಿಸಲಾಗದ, ಹೆಸರೂ ನೆನಪಾಗದ ಸ್ಥಿತಿ ಬಂದರೆ? ತಾವು ಎಲ್ಲಿದ್ದೇವೆ, (Alzheimer Early Symptoms) ಯಾರೊಂದಿಗಿದ್ದೇವೆ ಎಂಬ ಅರಿವೂ ಇಲ್ಲದೆ, ಸ್ವಂತ ಮನೆಯಲ್ಲೇ ಅಪರಿಚಿತರಂತೆ ನಿಲ್ಲುವ ಅಸಹಾಯಕತೆ ಎದುರಾದರೆ? ಅಂತಹ ಭೀಕರ ಮರೆವಿನ ಕತ್ತಲೆಗೆ ತಳ್ಳುವುದೇ 'ಅಲ್ಝೈಮರ್ಸ್' ಕಾಯಿಲೆ. ಸಾಮಾನ್ಯವಾಗಿ ಮಯಸ್ಸಾದಂತೆ ಸಣ್ಣಪುಟ್ಟ ವಿಷಯಗಳನ್ನು ಮರೆಯುವುದು ಸಹಜ. ಆದರೆ ನೆನಪಿನ ಶಕ್ತಿ ಹಂತ ಹಂತವಾಗಿ ಕ್ಷೀಣಿಸುತ್ತಾ ಹೋದರೆ ಅದು ಅಲ್ಝೈಮರ್ಸ್‌ನ ಲಕ್ಷಣವಾಗಿರಬಹುದು.
ಜಗತ್ತಿನಾದ್ಯಂತ ಲಕ್ಷಾಂತರ ಕುಟುಂಬಗಳನ್ನು ಈ ರೀತಿ ಮೌನವಾಗಿ ಕಾಡುತ್ತಿರುವ 'ಅಲ್ಝೈಮರ್ಸ್' ಕಾಯಿಲೆಯ ಕುರಿತು ಜಾಗೃತಿ ಮೂಡಿಸಲು ಇಂದು ವಿಶ್ವ ಸಂಸ್ಥೆ ಹಾಗೂ ಅಲ್ಝೈಮರ್ಸ್ ಡಿಸೀಸ್ ಇಂಟರ್ನ್ಯಾಷನಲ್ (ADI) ಜಂಟಿಯಾಗಿ ವಿಶ್ವ ಅಲ್ಝೈಮರ್ಸ್ ದಿನವನ್ನು ಆಚರಿಸುತ್ತಿವೆ. ಈ ಬಾರಿಯ ಧ್ವೆಯವಾಕ್ಯ ʼಮುಂಚಿತವಾಗಿಯೇ ತಿಳಿಯಿರಿ, ಭವಿಷ್ಯವನ್ನು ಸುರಕ್ಷಿತವಾಗಿಸಿ: ಆರಂಭಿಕ ಪತ್ತೆ ಅತ್ಯಗತ್ಯʼ. ಜಗತ್ತಿನಲ್ಲಿ ಪ್ರತಿ 3 ಸೆಕೆಂಡಿಗೆ ಒಬ್ಬರು ಬುದ್ಧಿಮಾಂದ್ಯತೆಗೆ (Dementia) ತುತ್ತಾಗುತ್ತಿದ್ದಾರೆ. ಅಲ್ಝೈಮರ್ಸ್ ಕಾಯಿಲೆಯು ವಯೋಸಹಜವಾಗಿ ಬರುವ 'ಡಿಮೆನ್ಷಿಯಾ' (ಬುದ್ಧಿಮಾಂದ್ಯತೆ) ಪ್ರಕರಣಗಳಲ್ಲಿ ಶೇಕಡಾ 60 ರಿಂದ 70 ರಷ್ಟು ಪಾಲನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಅಲ್ಝೈಮರ್ಸ್‌ನ ಆರಂಭಿಕ ಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಇತ್ತೀಚಿನ ವೈದ್ಯಕೀಯ ಸಂಶೋಧನೆಗಳ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.
ಅಲ್ಝೈಮರ್ಸ್ ಕಾಯಿಲೆ ಬರುವುದೇಕೆ?
ಅಲ್ಝೈಮರ್ಸ್ ಕಾಯಿಲೆಯು ಮೆದುಳಿನಲ್ಲಿ ಪ್ರೋಟೀನ್‌ಗಳು ಅಸಹಜವಾಗಿ ಜಮೆಯಾಗಿ ನರಕೋಶಗಳನ್ನು ಹಂತ ಹಂತವಾಗಿ ನಾಶಪಡಿಸುವುದರಿಂದ ಉಂಟಾಗುತ್ತದೆ. ಪ್ರಮುಖವಾಗಿ 'ಬೀಟಾ-ಅಮಿಲಾಯ್ಡ್' ಎಂಬ ಪ್ರೋಟೀನ್ ನರಕೋಶಗಳ ನಡುವೆ ಗಂಟಿನಂತೆ (Plaques) ಜಮೆಯಾದರೆ, 'ಟೌ' ಎಂಬ ಇನ್ನೊಂದು ಪ್ರೋಟೀನ್ ಜೀವಕೋಶಗಳ ಒಳಗೆ ಗೋಜಲುಗೊಂಡು (Tangles) ಸಂದೇಶ ವಾಹಕ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಕಡಿತಗೊಳಿಸುತ್ತದೆ. ಇದರಿಂದ ಪೋಷಕಾಂಶಗಳಿಲ್ಲದೆ ಮೆದುಳಿನ ಜೀವಕೋಶಗಳು ಸತ್ತುಹೋಗುತ್ತವೆ. ಸಾಮಾನ್ಯವಾಗಿ 65 ವರ್ಷ ದಾಟಿದವರಲ್ಲಿ ವಯೋಸಹಜವಾಗಿ ಜೀವಕೋಶಗಳು ಸವೆಯುವುದರಿಂದ ಈ ಅಪಾಯ ಹೆಚ್ಚಿರುತ್ತದೆ. ಇದರೊಂದಿಗೆ 'APOE-e4' ನಂತಹ ಆನುವಂಶಿಕ ಜೀನ್‌ಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಕಮ್ಮಿ ನಿದ್ರೆ, ದೈಹಿಕ ಶ್ರಮವಿಲ್ಲದಿರುವುದು ಹಾಗೂ ತಲೆಗೆ ತೀವ್ರ ಪೆಟ್ಟು ಬೀಳುವಂತಹ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು ಮೆದುಳಿಗೆ ಸೂಕ್ತ ರಕ್ತಸಂಚಾರವಾಗದಂತೆ ತಡೆದು ಅಲ್ಝೈಮರ್ಸ್ ಕಾಯಿಲೆ ಬರಲು ಮುಖ್ಯ ಕಾರಣವಾಗುತ್ತವೆ.
ಮರೆವಿನ ಕಾಯಿಲೆ ಆರಂಭಿಕ ಲಕ್ಷಣಗಳು
ಸಾಮಾನ್ಯವಾಗಿ ವಯಸ್ಸಾದಂತೆ ಸಣ್ಣಪುಟ್ಟ ವಿಷಯಗಳನ್ನು ಮರೆಯುವುದು ಸ್ವಾಭಾವಿಕ. ಉದಾಹರಣೆಗೆ, ಹೋದ ಜಾಗದ ಹೆಸರು ತಕ್ಷಣ ನೆನಪಾಗದಿರುವುದು, ಯಾರದ್ದೋ ಅಪಾಯಿಂಟ್‌ಮೆಂಟ್ ಮರೆಯುವುದು ಅಥವಾ ಲೆಕ್ಕಾಚಾರ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ವಯೋಸಹಜ ಮರೆವಿನ ಲಕ್ಷಣಗಳಾಗಿವೆ. ಆದರೆ ನೆನಪಿನ ಶಕ್ತಿ ಹಂತ ಹಂತವಾಗಿ ಕ್ಷೀಣಿಸುತ್ತಾ ಹೋದರೆ ಅದು ಅಲ್ಝೈಮರ್ಸ್ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ. ಅಲ್ಝೈಮರ್ಸ್‌ನಿಂದ ಬಳಲುವ ವ್ಯಕ್ತಿಯು ಇತ್ತೀಚೆಗೆ ನಡೆದ ಘಟನೆಗಳನ್ನು ಸಂಪೂರ್ಣವಾಗಿ ಮರೆಯುತ್ತಾನೆ, ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾನೆ ಹಾಗೂ ಚಿರಪರಿಚಿತವಿರುವ ದಾರಿಗಳಲ್ಲೇ ಹಾದಿ ತಪ್ಪಿ ಗೊಂದಲಕ್ಕೊಳಗಾಗುತ್ತಾನೆ.
ಅಷ್ಟೇ ಅಲ್ಲದೆ, ಅಡುಗೆ ಮಾಡುವುದು ಅಥವಾ ಹಣಕಾಸಿನ ದಿನನಿತ್ಯದ ಸರಳ ಕೆಲಸಗಳನ್ನು ಮಾಡಲು ಹೆಣಗಾಡುತ್ತಾರೆ. ಮಾತನಾಡುವಾಗ ಸೂಕ್ತ ಪದಗಳು ಸಿಗದೆ ಮಧ್ಯದಲ್ಲೇ ನಿಂತುಬಿಡುವುದು, ವಸ್ತುಗಳಿಗೆ ತಪ್ಪು ಹೆಸರು ಬಳಸುವುದು ಹಾಗೂ ಯಾವುದೇ ಕಾರಣವಿಲ್ಲದೆ ಅತಿಯಾದ ಆತಂಕ, ಅನುಮಾನ, ಖಿನ್ನತೆ ಅಥವಾ ಹಠಾತ್ ಕೋಪಗೊಳ್ಳುವುದು ಅಲ್ಝೈಮರ್ಸ್‌ನ ಪ್ರಮುಖ ಆರಂಭಿಕ ಮುನ್ಸೂಚನೆಗಳಾಗಿವೆ. ತಾರ್ಕಿಕ ಚಿಂತನೆ, ನಿರ್ಧಾರ ತೆಗೆದುಕೊಳ್ಳುವುದು, ಸಾಮಾಜಿಕ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು ಎಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಹಣಕಾಸಿನ ವಹಿವಾಟುಗಳು, ಶಾಪಿಂಗ್ ಅಡುಗೆ ಕ್ರಮೇಣವಾಗಿ ಶೌಚ, ಸ್ನಾನ, ಉಡುಗೆ ತೊಡುಗೆ ಹಲ್ಲುಜ್ಜುವುದು ಮುಂತಾದ ಸಾಮಾನ್ಯ ಚಟುವಟಿಕೆಗಳಿಗೂ ತೊಂದರೆ. ಮತ್ತು ಅವಲಂಬನೆಗೆ ಕಾರಣವಾಗುತ್ತದೆ ಅಥವಾ ಸಹಾಯ ಪಡೆಯುವುದಕ್ಕೆ ಪ್ರತಿರೋಧವಿರಬಹುದು.
ಕಾಯಿಲೆ ತಡೆಗಟ್ಟಲು ಅನುಸರಿಸಬೇಕಾದ ಪ್ರಮುಖ ಕ್ರಮಗಳು
ಅಲ್ಝೈಮರ್ಸ್‌ಗೆ ವಯಸ್ಸು ಮತ್ತು ವಂಶಪಾರಂಪರ್ಯ ಪ್ರಮುಖ ಕಾರಣಗಳಾಗಿದ್ದರೂ, ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಶೇಕಡಾ 40 ರಷ್ಟು ಪ್ರಕರಣಗಳನ್ನು ತಡೆಯಬಹುದು ಅಥವಾ ಮುಂದೂಡಬಹುದು ಎಂದು ಸಂಶೋಧನೆಗಳು ತಿಳಿಸಿವೆ.
ಹೃದಯದ ಆರೋಗ್ಯ ಕಾಪಾಡುವುದು: ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಕಾಯಿಲೆಯನ್ನು (Diabetes) ನಿಯಂತ್ರಣದಲ್ಲಿಡುವುದರಿಂದ ಮೆದುಳಿನ ರಕ್ತನಾಳಗಳಿಗೆ ಹಾನಿಯಾಗುವುದನ್ನು ತಡೆಯಬಹುದು.
ಪೌಷ್ಟಿಕ ಆಹಾರ: ಹಸಿರು ತರಕಾರಿಗಳು, ಬೆರ್ರಿ ಹಣ್ಣುಗಳು, ಒಣ ಹಣ್ಣುಗಳು ಬದಾಮ್, ಆಕ್ರೋಟ್, ಮತ್ತು ಒಮೆಗಾ-3 ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಮೆದುಳಿನ ಉರಿಯೂತವನ್ನು (Inflammation) ಕಡಿಮೆ ಮಾಡುತ್ತದೆ.
ದೈಹಿಕ ಮತ್ತು ಮಾನಸಿಕ ವ್ಯಾಯಾಮ: ವಾರಕ್ಕೆ ಕನಿಷ್ಠ 150 ನಿಮಿಷಗಳ ನಡಿಗೆ, ಈಜು ಹಾಗೂ ಪುಸ್ತಕ ಓದುವುದು, ಪಜಲ್ ಬಿಡಿಸುವುದು, ಹೊಸ ಭಾಷೆ ಕಲಿಯುವುದರಿಂದ ಮೆದುಳಿನ ನರಕೋಶಗಳು ಚುರುಕಾಗಿರುತ್ತವೆ.
ಕಿವಿ ಮತ್ತು ಕಣ್ಣಿನ ತಪಾಸಣೆ: ಇತ್ತೀಚಿನ ವರದಿಗಳ ಪ್ರಕಾರ, ಕಿವಿ ಕಿವುಡುತನ ಮತ್ತು ದೃಷ್ಟಿ ಲೋಪವನ್ನು ನಿರ್ಲಕ್ಷಿಸುವುದು ಮೆದುಳಿನ ಕ್ಷೀಣತೆಗೆ ಪ್ರಮುಖ ಕಾರಣವಾಗಿದೆ. ಕಿವಿಯ ಆಲಿಕೆ ತೊಂದರೆ ಇದ್ದಲ್ಲಿ 'ಹಿಯರಿಂಗ್ ಏಡ್' ಬಳಸುವುದು ಹಾಗೂ ಕಣ್ಣಿನ ಪೊರೆ ಅಥವಾ ದೋಷಕ್ಕೆ ತಕ್ಷಣ ಚಿಕಿತ್ಸೆ ಪಡೆಯುವುದರಿಂದ ಮೆದುಳು ನಿಷ್ಕ್ರಿಯಗೊಳ್ಳುವುದನ್ನು ತಡೆಯಬಹುದು.
ಸರಿಯಾಗಿ ನಿದ್ರೆ ಮಾಡುವುದು: ರಾತ್ರಿಯ ಗಾಢ ನಿದ್ರೆಯ ಸಮಯದಲ್ಲಿ ಮೆದುಳಿನ 'ಗ್ಲಿಂಫ್ಯಾಟಿಕ್ ಸಿಸ್ಟಮ್' ಚುರುಕಾಗಿ, ದಿನವಿಡೀ ಸಂಗ್ರಹಿಸಿದ ವಿಷಕಾರಿ ಟಾಕ್ಸಿನ್ಸ್ ಹೊರಹಾಕುತ್ತದೆ. ಇದರಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡುವುದು ಕೂಡಾ ಒಳ್ಳೆಯದು.
ಸಾಮಾಜಿಕ ಸಂಪರ್ಕ: ಒಂಟಿತನ ಮತ್ತು ಖಿನ್ನತೆ ಅಲ್ಝೈಮರ್ಸ್ ಅಪಾಯವನ್ನು ಹೆಚ್ಚಿಸುತ್ತವೆ. ಹೀಗಾಗಿ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಸದಾ ಸಾಮಾಜಿಕವಾಗಿ ಬೆರೆಯುವುದು ಮೆದುಳಿನ ಆರೋಗ್ಯಕ್ಕೆ ಉತ್ತಮ.
ಅಲ್ಝೈಮರ್ಸ್ ಎನ್ನುವುದು ಕೇವಲ ವೈದ್ಯಕೀಯ ರೋಗವಲ್ಲ, ಅದು ಇಡೀ ಕುಟುಂಬವನ್ನು ಪರೀಕ್ಷಿಸುವ ಮಾನಸಿಕ ಹಾಗೂ ಭಾವನಾತ್ಮಕ ಸವಾಲು. ರೋಗಿಯು ತನ್ನವರನ್ನೇ ಮರೆಯಬಹುದು, ಆದರೆ ಅವರ ಮೇಲಿರುವ ಪ್ರೀತಿಯನ್ನು ನಾವು ಮರೆಯಬಾರದು. ಆರಂಭಿಕ ಹಂತದಲ್ಲೇ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ರೀತಿಯ ಆರೈಕೆ ನೀಡಿದರೆ, ರೋಗಿಗಳ ಜೀವನಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯ.