ಡಾ.ಮೇಘನಾ ಕೆ. ಎ. ಸಹಾಯಕ ಪ್ರಾಧ್ಯಾಪಕರು ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಡುಪಿ
ಜ್ವರವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರನ್ನೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಜ್ವರವು ಸ್ವತಃ ಒಂದು ರೋಗವಾಗಿರದೆ, ದೇಹದಲ್ಲಿ ಉಂಟಾ ಗುವ ಸೋಂಕು ಅಥವಾ ಇತರ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕಾಣಿಸಿಕೊಳ್ಳುವ ಲಕ್ಷಣವಾಗಿದೆ. ಸೋಂಕುಕಾರಕ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ದೇಹದ ರೋಗನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯಾಗಿ ದೇಹದ ಉಷ್ಣತೆ ಹೆಚ್ಚಾಗಬಹುದು. ಜ್ವರವನ್ನು ತ್ವರಿತವಾಗಿ ಕಡಿಮೆ ಮಾಡುವ ಉದ್ದೇಶದಿಂದ ಆಂಟಿಬಯೋಟಿಕ್ಗಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾದರೆ, ಪ್ರತಿ ಬಾರಿ ಜ್ವರ ಬಂದಾಗಲೂ ಆಂಟಿಬಯೋಟಿಕ್ಗಳ ಅಗತ್ಯವಿದೆಯೇ? ಅವುಗಳನ್ನು ಅನಗತ್ಯವಾಗಿ ಬಳಸುವುದರಿಂದ ಉಂಟಾಗುವ ದುಷ್ಪರಿಣಾಮಗಳೇನು?
ಋತುಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಜ್ವರ, ನೆಗಡಿ ಮತ್ತು ಗಂಟಲು ನೋವುಗಳ ಬಹುತೇಕ ಪ್ರಕರಣಗಳು ವೈರಸ್ಗಳಿಂದ ಉಂಟಾಗುತ್ತವೆ. ಆಂಟಿಬಯೋಟಿಕ್ಗಳು ಬ್ಯಾಕ್ಟೀರಿಯಾಗಳ ವಿರುದ್ಧ ಕಾರ್ಯನಿರ್ವಹಿಸುತ್ತವೆಯೇ ಹೊರತು ವೈರಸ್ಗಳ ವಿರುದ್ಧವಲ್ಲ. ಆದ್ದರಿಂದ, ಅವು ವೈರಲ್ ಸೋಂಕುಗಳನ್ನು ಗುಣಪಡಿಸುವುದಿಲ್ಲ, ಜ್ವರದ ತಾಪಮಾನವನ್ನು ನೇರವಾಗಿ ಕಡಿಮೆ ಮಾಡುವುದಿಲ್ಲ ಅಥವಾ ಚೇತರಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುವುದಿಲ್ಲ. ಹೀಗಾಗಿ, ಜ್ವರ ಬಂದ ತಕ್ಷಣ ಆಂಟಿಬಯೋಟಿಕ್ಗಳನ್ನು ಸೇವಿಸುವ ಅಗತ್ಯವಿಲ್ಲ. ಆದರೆ, ಈ ವಿಷಯದ ಅರಿವಿಲ್ಲದೆ ವೈದ್ಯರ ಸಲಹೆ ಪಡೆಯದೆ ಸ್ವಯಂ ಆಂಟಿಬಯೋಟಿಕ್ಗಳನ್ನು ಸೇವಿಸುವುದು ಅಥವಾ ಮನೆಯ ಇತರ ಸದಸ್ಯರಿಗೆ ನೀಡಲಾದ ಔಷಧಿಗಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಇದನ್ನೂ ಓದಿ: Brain fever: ಅಯ್ಯಪ್ಪನ ಭಕ್ತರೇ ಅಲರ್ಟ್... ಅಲರ್ಟ್...! ಕೇರಳದಲ್ಲಿ ಹೆಚ್ಚಿದ ಮೆದುಳು ಜ್ವರ ಭೀತಿ- ರೋಗದ ಲಕ್ಷಣಗಳೇನು?
ವೈದ್ಯರ ಸೂಚನೆಯಿಲ್ಲದೆ, ಸೂಕ್ತ ಪ್ರಮಾಣದಲ್ಲಿ ಅಥವಾ ನಿಗದಿತ ಅವಧಿಗೆ ಅನುಗುಣವಾಗಿ ಸೇವಿಸದೆ ಆಂಟಿಬಯೋಟಿಕ್ಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದರಿಂದ ಪ್ರತಿಜೀವಕ ನಿರೋಧಕತೆ (Antimicrobial Resistance) ಉಂಟಾಗುವ ಅಪಾಯವಿದೆ. ಇದರಿಂದ ಬ್ಯಾಕ್ಟೀರಿಯಾ ಗಳ ವಿರುದ್ಧ ಹೋರಾಡಲು ಔಷಧಿಗಳ ಪರಿಣಾಮಕಾರಿತ್ವ ಕಡಿಮೆಯಾಗಬಹುದು. ಅಲ್ಲದೆ, ದೇಹದ ಕರುಳಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳ ಸಮತೋಲನಕ್ಕೂ ಹಾನಿಯಾಗಬಹುದು. ವಿಶೇಷವಾಗಿ, ವಿಶಾಲ ವ್ಯಾಪ್ತಿಯ ಆಂಟಿಬಯೋಟಿಕ್ಗಳು (Broad-spectrum antibiotics) ದೇಹಕ್ಕೆ ಪ್ರಯೋಜನಕಾರಿಯಾದ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸಬಹುದು. ಇದರಿಂದ ಕ್ಯಾಂಡಿಡಾ ದಂತಹ ಶಿಲೀಂಧ್ರ ಸೋಂಕುಗಳು ಹಾಗೂ ಕ್ಲಾಸ್ಟ್ರಿಡಿಯಾಯ್ಡ್ಸ್ ಡಿಫಿಸಿಲ್ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ ಗಂಭೀರ ಕರುಳಿನ ಸೋಂಕುಗಳು ಉಂಟಾಗುವ ಸಾಧ್ಯತೆಯಿದೆ.
ಕೆಲವು ಆಂಟಿಬಯೋಟಿಕ್ಗಳು ಮೂತ್ರಪಿಂಡದ ಹಾನಿ (Nephrotoxicity), ಯಕೃತ್ತಿನ ಹಾನಿ (Hepatotoxicity) ಮತ್ತು ಮೂಳೆ ಮಜ್ಜೆಯ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಗಳಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ತೀವ್ರ ಅಲರ್ಜಿಯ ಪ್ರತಿಕ್ರಿಯೆ ಗಳೂ ಕಾಣಿಸಿಕೊಳ್ಳಬಹುದು. ಇನ್ನು, ವೈದ್ಯರ ಸೂಚನೆಯಂತೆ ಔಷಧಿಯನ್ನು ಬಳಸದೆ, ಸ್ವಯಂಪ್ರೇರಿತವಾಗಿ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಚಿಕಿತ್ಸೆಯನ್ನು ಅರ್ಧದಲ್ಲೇ ನಿಲ್ಲಿಸುವುದು ಸೋಂಕಿನ ಸರಿಯಾದ ಚಿಕಿತ್ಸೆಗೆ ಅಡ್ಡಿಯಾಗಬಹುದು. ಈಗಾಗಲೇ ಆಂಟಿ ಬಯೋಟಿಕ್ಗಳನ್ನು ಸೇವಿಸಿರುವುದರಿಂದ ಕೆಲವು ಸಂದರ್ಭಗಳಲ್ಲಿ ಪ್ರಯೋಗಾಲಯ ಪರೀಕ್ಷೆಗಳು ಮತ್ತು ಕಲ್ಚರ್ ವರದಿಗಳ ಫಲಿತಾಂಶಗಳ ಮೇಲೂ ಪರಿಣಾಮ ಉಂಟಾಗಬಹುದು. ಇದರಿಂದ ಆಳವಾದ ಕೀವು ಸಂಗ್ರಹ (Abscess) ಅಥವಾ ತುರ್ತು ಚಿಕಿತ್ಸೆಯ ಅಗತ್ಯವಿರುವ ಕೆಲವು ಸೋಂಕುಗಳನ್ನು ಗುರುತಿಸುವುದು ವಿಳಂಬವಾಗುವ ಸಾಧ್ಯತೆಯಿದೆ.
ಆಯುರ್ವೇದದಲ್ಲಿಯೂ ಸ್ವಯಂ ಔಷಧೋಪಚಾರವನ್ನು ತಪ್ಪಿಸುವುದು ಮತ್ತು ಸೂಕ್ತ ವೈದ್ಯಕೀಯ ಜ್ಞಾನದ ಆಧಾರದ ಮೇಲೆ ಔಷಧಿಗಳನ್ನು ಬಳಸುವುದು ಮಹತ್ವದ ತತ್ವಗಳಾಗಿವೆ. ಚರಕ ಸಂಹಿತೆಯಲ್ಲಿ ಔಷಧಿಗಳ ಗುಣ, ಸ್ವಭಾವ ಮತ್ತು ಸರಿಯಾದ ಬಳಕೆಯ ವಿಧಾನಗಳನ್ನು ತಿಳಿಯದೆ ಅವುಗಳನ್ನು ಬಳಸುವುದರಿಂದ ಹಾನಿ ಉಂಟಾಗಬಹುದು ಎಂಬ ಆಶಯವನ್ನು ವಿವರಿಸಲಾಗಿದೆ. ಔಷಧಿಯನ್ನು ಸರಿಯಾದ ಜ್ಞಾನ ಮತ್ತು ವಿವೇಚನೆಯೊಂದಿಗೆ ಬಳಸಿದಾಗ ಅದು ಅಮೃತದಂತೆ ಪ್ರಯೋಜನಕಾರಿಯಾಗಬಲ್ಲದು; ಆದರೆ, ತಪ್ಪಾದ ಬಳಕೆಯು ವಿಷದಂತೆ ಹಾನಿ ಯನ್ನುಂಟುಮಾಡಬಹುದು ಎಂಬುದು ಇದರ ಸಾರವಾಗಿದೆ.
ಆಂಟಿಬಯೋಟಿಕ್ಗಳ ಜವಾಬ್ದಾರಿಯುತ ಬಳಕೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜ್ವರ ಕಾಣಿಸಿಕೊಂಡಾಗ ಅದರ ಕಾರಣವನ್ನು ತಿಳಿಯಲು ವೈದ್ಯರ ಸಲಹೆ ಪಡೆಯಬೇಕು. ವೈದ್ಯರು ಸೂಚಿಸಿದಾಗ ಮಾತ್ರ ಆಂಟಿಬಯೋಟಿಕ್ಗಳನ್ನು ಬಳಸಬೇಕು ಮತ್ತು ಸೂಚಿಸಿದ ಪ್ರಮಾಣ ಹಾಗೂ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಳಿದ ಔಷಧಿಗಳನ್ನು ಸ್ವಯಂ ಸೇವಿಸುವು ದಾಗಲಿ, ಇತರರಿಗೆ ನೀಡುವುದಾಗಲಿ ಮಾಡಬಾರದು. ಸ್ವಯಂ ಔಷಧ ಸೇವನೆಯನ್ನು ತಪ್ಪಿಸಿ, ಆಂಟಿಬಯೋಟಿಕ್ಗಳನ್ನು ಜವಾಬ್ದಾರಿಯುತವಾಗಿ ಬಳಸುವ ಮೂಲಕ ನಮ್ಮ ಆರೋಗ್ಯವನ್ನೂ, ಭವಿಷ್ಯದಲ್ಲಿ ಈ ಔಷಧಿಗಳ ಪರಿಣಾಮಕಾರಿತ್ವವನ್ನೂ ಕಾಪಾಡಿಕೊಳ್ಳಬಹುದು.