ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fitness Band: ಸಹಜ ನಡಿಗೆಗೆ ಫಿಟ್‌ನೆಸ್‌ ಬ್ಯಾಂಡ್‌ ತೊಡಕೇ?

ಇಡೀ ದಿನ ಹತ್ತೋ ಹದಿನೈದೋ ಸಾವಿರ ಹೆಜ್ಜೆಗಳನ್ನು ಹಾಕುವ ಗುರಿಯನ್ನು ಹೊಂದಿ, ಅದರಂತೆ ಕೈಗೊಂದು ವಾಚು ಅಥವಾ ಫಿಟ್‌ನೆಸ್‌ ಉಪಕರಣವನ್ನು ಬಿಗಿದುಕೊಂಡಿರುತ್ತೇವೆ. ನಡೆಯುವುದೆಂದರೆ ಈಗ ಹೀಗೆ ಬ್ಯಾಂಡ್‌ ಕಟ್ಟಿಕೊಂಡು ಹೆಜ್ಜೆ ಲೆಕ್ಕ ಮಾಡುವುದು ಎಂಬಂತಾಗಿದೆ.

ಬೆಂಗಳೂರು: ಇದೀಗ ಫಿಟ್‌ನೆಸ್‌ ಬ್ಯಾಂಡ್‌ಗಳ (Fitness Band) ಕಾಲ. ಇಡೀ ದಿನ ಹತ್ತೋ ಹದಿನೈದೋ ಸಾವಿರ ಹೆಜ್ಜೆಗಳನ್ನು ಹಾಕುವ ಗುರಿಯನ್ನು ಹೊಂದಿ, ಅದರಂತೆ ಕೈಗೊಂದು ವಾಚು ಅಥವಾ ಫಿಟ್‌ನೆಸ್‌ ಉಪಕರಣವನ್ನು ಬಿಗಿದುಕೊಂಡಿರುತ್ತೇವೆ (Health Tips). ಇ-ಮೇಲ್‌ಗೆ ಉತ್ತರಿಸು, ದಿನಸಿ ಖರೀದಿಸು, ಧ್ಯಾನ ಮಾಡು- ಇತ್ಯಾದಿ ಮಾಡಬೇಕಾದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಹತ್ತು ಸಾವಿರ ಹೆಜ್ಜೆ ಪೂರ್ಣಗೊಳಿಸುವುದಕ್ಕೂ ಒಂದು ʻಟಾಸ್ಕ್‌ʼ ಹಾಕಿಕೊಂಡಿರುತ್ತೇವೆ. ಈ ಕೊನೆಯದನ್ನು ಪೂರ್ಣಗೊಳಿಸದಿದ್ದರೆ ನಮ್ಮ ಫಿಟ್‌ಬ್ಯಾಂಡ್‌ ಅಥವಾ ವಾಚು ಗದರಿಸಲು ತೊಡಗುತ್ತದೆ. ಬದುಕಿನ ಉಳಿದೆಲ್ಲ ಒತ್ತಡಗಳ ಜತೆಗೆ ಇದೀಗ ಇನ್ನೊಂದು!

ನಡೆಯುವುದೆಂದರೆ ಹೀಗೆ ಬ್ಯಾಂಡ್‌ ಕಟ್ಟಿಕೊಂಡು ಹೆಜ್ಜೆ ಲೆಕ್ಕ ಮಾಡುವುದಲ್ಲ, ಹಾಗೇ ಸುಮ್ಮನೆ ತಿರುಗುವ ಕಾಲವೊಂದಿತ್ತು. ನೆನಪಿಸಿಕೊಳ್ಳಿ- ಸ್ನೇಹಿತರ ಜತೆ ಅಲೆಯುವ, ವಿಂಡೋ ಶಾಪಿಂಗ್‌ ಹೆಸರಿನಲ್ಲಿ ಸುತ್ತುವ, ಮನೆಯ ಏನೇನೋ ಅಗತ್ಯಗಳಿಗಾಗಿ ನಡೆದೇ ಹೋಗುವ, ವಾಕಿಂಗ್‌ ನೆವದಲ್ಲಿ ಗಾಸಿಪ್‌ ಮಾಡುವ, ಯಾವುದೋ ಹುಡುಗಿಯ ಬೆನ್ನಿಗೆ ನಡೆಯುವ, ಬಸ್ಸು ತಪ್ಪುವ ಕಾರಣಕ್ಕೆ ಓಡುವ, ಖುಷಿಗಾಗಿ ಊರು ಸುತ್ತುವ… ಪಟ್ಟಿ ಬೆಳೆಯುತ್ತದೆ. ನೋಡಿ ಎಷ್ಟೊಂದು ಕಾರಣಗಳಿದ್ದವು ನಮಗೆ ನಡೆಯುವುದಕ್ಕೆ! ಹೆಜ್ಜೆಗಳ ಲೆಕ್ಕ ಇಡುವ ಗೋಜಿಲ್ಲದೆಯೇ ದಿನಕ್ಕೆ ಹತ್ತಾರು ಸಾವಿರ ಹೆಜ್ಜೆಗಳನ್ನು ಸಲೀಸಾಗಿ ನಡೆಯುತ್ತಿದ್ದೆವಲ್ಲ.

ಈ ಸುದ್ದಿಯನ್ನೂ

ಈ ಸುದ್ದಿಯನ್ನೂ ಓದಿ: Travel Guide: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಬಗ್ಗೆ ಗಮನಕೊಡಿ

ಯಾಂತ್ರಿಕ ನಡಿಗೆ

ಯಾವುದೋ ಹಳೆಯ ಕಾಲದ್ದು ಈಗ ಅನ್ವಯಿಸುವುದಿಲ್ಲ ಎನ್ನುತ್ತೀರಾ? ನಿಜ, ಕಾಲ ಬದಲಾಗಿದೆ. ಎಲ್ಲಿಯವರೆಗೆ ಎಂದರೆ, ರಾತ್ರಿ ಹನ್ನೊಂದು ಗಂಟೆಗೆ ನಗರದ ಪುಟ್ಟ ಮನೆಯೊಳಗೆ ದಾಪುಗಾಲಿಕ್ಕುತ್ತಾ ನಡೆದು ಇವತ್ತಿನ ಲೆಕ್ಕದ ಸಾವಿರಾರು ಹೆಜ್ಜೆಗಳನ್ನು ಹೇಗಾದರೂ ಪೂರ್ಣಗೊಳಿಸುವಷ್ಟು ಬದಲಾಗಿದೆ. ʻಓಹ್!‌ ಇವತ್ತು ಸ್ಟೆಪ್‌ ಕೌಂಟ್‌ ಕಂಪ್ಲೀಟ್‌ ಆಗ್ಲೇ ಇಲ್ಲʼ ಎನ್ನುತ್ತ ಎದುರಿಗೆ ಬಂದವರನ್ನೂ ಲೆಕ್ಕಿಸದೆ, ತಲೆ ತಗ್ಗಿಸಿ ವಾಚು ನೋಡುತ್ತಾ ಕಂಗೆಟ್ಟು ನಡೆಯುವಷ್ಟು ಬದಲಾಗಿದೆ. ಆದರೆ ನಡೆಯುವುದಕ್ಕೆಂದೇ ದೇಹ ರಚನೆಯನ್ನು ಹೊಂದಿರುವ ನಾವು, ಹೆಜ್ಜೆ ಲೆಕ್ಕ ಮಾಡುವ ಭರದಲ್ಲಿ ನಡಿಗೆಯನ್ನು ಇಷ್ಟೊಂದು ಯಾಂತ್ರಿಕ ಮಾಡಿಕೊಳ್ಳಬೇಕೇ? ಈ ಫಿಟ್‌ನೆಸ್‌ ಬ್ಯಾಂಡ್‌ಗಳು ಸಹಜ ನಡಿಗೆಯ ಸುಖವನ್ನು ಕಸಿದು, ʻಸ್ಟೆಪ್‌ ಟಾರ್ಗೆಟ್‌ʼನ ಒತ್ತಡ ಸೃಷ್ಟಿಸುತ್ತಿವೆಯೇ?

ಅಂಡಲೆಯುವ ಸುಖ

ಹೌದು, ಹಾಗೊಂದಿದೆ ಎನ್ನುತ್ತವೆ ವೈಜ್ಞಾನಿಕ ಅಧ್ಯಯನಗಳು! ಇಷ್ಟು ಹೆಜ್ಜೆ, ಇಂತಿಷ್ಟು ವೇಗ, ಅದಷ್ಟು ದೂರ ಎಂದೆಲ್ಲಾ ಯಾವುದೇ ನಿಖರ ಗುರಿಗಳಿಲ್ಲದೆ, ಸುಮ್ಮನೇ ಗೊತ್ತು-ಗುರಿಯಿಲ್ಲದೆ ಅಂಡೆಲೆಯುವುದು ದೇಹ-ಮನಸ್ಸುಗಳಿಗೆ ಮದ್ದಿನಂತೆ, ಟಾನಿಕ್‌ನಂತೆ ಕೆಲಸ ಮಾಡಬಲ್ಲದು ಎನ್ನುವುದು ಹಲವು ಅಧ್ಯಯನಗಳಲ್ಲಿ ಸಾಬೀತಾಗಿದೆ. ಮನಸ್ಸನ್ನು ಉದ್ದೀಪನಗೊಳಿಸಲು, ಕೆಟ್ಟ ಮೂಡ್‌ ಸುಧಾರಿಸಲು, ಯಾರದ್ದೋ ಮೇಲಿನ ಕೋಪ ತೊಲಗಿಸಲು, ನಿಸರ್ಗದ ಸದ್ದುಗಳನ್ನು ಆಲಿಸಲು, ಸೃಜನಶೀಲ ಸಾಧ್ಯತೆಗಳಿಗೆ ನೀರೆರೆಯಲು- ಹೀಗೆ ಮಾನಸಿಕ ಸ್ತರದಲ್ಲಿ ಬಹಳಷ್ಟು ಪ್ರಯೋಜನಗಳನ್ನಿದು ನೀಡಬಲ್ಲದು. ಹಳೆಯ ಇಂಗ್ಲಿಷ್‌ ಕಾದಂಬರಿಕಾರ ಚಾರ್ಲ್ಸ್‌ ಡಿಕೆನ್ಸ್‌ ದಿನಕ್ಕೆ 20 ಮೈಲಿ ನಡೆಯುತ್ತಿದ್ದುದು ತೂಕ ಕರಗಿಸಲಲ್ಲ, ʻರೈಟರ್ಸ್‌ ಬ್ಲಾಕ್‌ʼನಿಂದ ಹೊರ ಬರುವುದಕ್ಕೆ.

Fitness Band 2

ಫಿಟ್‌ಬ್ಯಾಂಡ್‌ ಬೇಡವೇ?

ತಂತ್ರಜ್ಞಾನವು ನಮ್ಮ ಬದುಕನ್ನು ಬಹಳಷ್ಟು ರೀತಿಯಲ್ಲಿ ಬದಲಾಯಿಸಿದೆ, ಸುಧಾರಿಸಿದೆ. ಆದರೆ ಫಿಟ್‌ನೆಸ್‌ ಬ್ಯಾಂಡ್‌ಗಳು ನಡಿಗೆಯನ್ನು ಅತೀ ಯಾಂತ್ರಿಕಗೊಳಿಸಿವೆ ಎನ್ನುವುದು ಸುಳ್ಳಲ್ಲ. ಆಯಾ ದಿನದ ಹೆಜ್ಜೆ ಲೆಕ್ಕ ಪೂರ್ಣವಾಗಿಲ್ಲ ಎಂಬುದು ಫಿಟ್‌ನೆಸ್‌ ಆಪ್‌ನಲ್ಲಿ ಬರಬಾರದೆಂಬ ಒತ್ತಡವೊಂದು ಎಷ್ಟೋ ಮಂದಿಯ ಬದುಕಿನಲ್ಲಿ ಹೊಸದಾಗಿ ಸೇರಿಕೊಂಡಿರುವುದು ನಿಜ. ಹೆಜ್ಜೆ ತಪ್ಪಿದರೆ ʻಸೋತೆʼ ಎನ್ನುವ ಭಾವವನ್ನು ಹೊರಬೇಕಲ್ಲ! ಬಿಲ್ಲಿಗೆ ಹೂಡಿದ ಬಾಣದಂತೆ, ಇಷ್ಟು ಹೆಜ್ಜೆ, ಅಷ್ಟು ದೂರ, ಇದಿಷ್ಟು ವೇಗ ಎನ್ನುತ್ತಾ ನಡೆಯುವವರನ್ನು ಕಂಡಾಗ, ಸಹಜ ನಡಿಗೆಯ ಸುಖ ಕಳೆದು ಹೋಗಿದೆಯೆನಿಸುವುದಿಲ್ಲವೇ?

ಏನು ಪರಿಹಾರ?

ಖುಷಿಗಾಗಿ ನಡೆಯಿರಿ, ಸಾಧ್ಯವಾದಷ್ಟು ನಡೆಯಿರಿ, ನಿಯಮಿತವಾಗಿ ನಡೆಯಿರಿ. ನಡಿಗೆಯ ಸಂಗಾತಿಯಾಗಿ ʻಹೆಜ್ಜೆ ಲೆಕ್ಕʼ ಮಾಡುವ ಸ್ಮಾರ್ಟ್‌ ವಾಚಿಗಿಂತ ಸಮಾನ ಸಮಸ್ಕರಿದ್ದರೆ ಒಳ್ಳೆಯದು. ನಮ್ಮ ಫಿಟ್‌ನೆಸ್‌ ಪ್ರಯೋಗಗಳು, ತೂಕ ಇಳಿಸುವ ಕಸರತ್ತುಗಳೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಟಾಂಟಾಂ ಆಗಬೇಕಿಲ್ಲ. ಇದನ್ನೆಲ್ಲ ನಾವು ಮಾಡುವುದು ನಮ್ಮ ಒಳಿತಿಗಾಗಿ. ಹಾಗಾಗಿ ಎಷ್ಟು ನಡೆಯುತ್ತೀರೀ ಎನ್ನುವುದನ್ನು ಲೆಕ್ಕವಿರಿಸಿ ಮಾಡಬೇಕಾದ್ದೇನು? ʻಸೋತೆʼ ಎನ್ನುವ ಒತ್ತಡವನ್ನು ಸೃಷ್ಟಿಸಿಕೊಳ್ಳುವ ಅಗತ್ಯವೇನಿದೆ? ನಡೆಯುವಾಗ ಕಿವಿಗೆ ಕಲರವ ಕೇಳಲಿ, ಲೋಕದ ಜಾತ್ರೆಯೆಲ್ಲ ಕಣ್ಣಿಗೆ ಕಾಣಲಿ, ಮನಸ್ಸು ಮುದಗೊಳ್ಳಲಿ, ನಡಿಗೆಯ ಸುಖ ಒದಗಲಿ.