Travel Guide: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಬಗ್ಗೆ ಗಮನಕೊಡಿ
Health Tips: ರಜೆ ಬಂತೆಂದರೆ ಸಾಕು ಬ್ಯಾಗ್ ಪ್ಯಾಕ್ ಮಾಡಿ ಕೆಲವರು ಪ್ರವಾಸಕ್ಕೆ ಹೊರಟೇ ಬಿಡುತ್ತಾರೆ. ಇನ್ನೇನು ದಸರಾ ರಜೆ ಬಂತು. ನೀವೂ ಟೂರ್ ಪ್ಲ್ಯಾನ್ ಮಾಡುತ್ತಿದ್ದೀರಾ? ಹಾಗಾದರೆ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆ ಕುರಿತಾದ ವಿರ ಇಲ್ಲಿದೆ.

-

ಬೆಂಗಳೂರು: ಚೌತಿ ಹಬ್ಬವನ್ನು ಮುಗಿಸಿ ಈಗಷ್ಟೇ ಕಳಿಸಿಕೊಟ್ಟಿದ್ದೇವೆ ಗಣೇಶನನ್ನು. ಇನ್ನೀಗ ನವರಾತ್ರಿಗೆ ಸಿದ್ಧವಾಗಬೇಕು. ದಸರ ಹಬ್ಬದಲ್ಲಿ ರಜೆ ದೀರ್ಘವಾಗಿ ಇರುವುದರಿಂದ ಪ್ರವಾಸಕ್ಕೆ ಹೊರಡುವವರು ಬಹಳಷ್ಟು ಮಂದಿಯಿದ್ದಾರೆ. ಪ್ರಯಾಣಕ್ಕೆಂದು ಮುಂಚಿತವಾಗಿ ಎಷ್ಟೇ ಸಿದ್ಧತೆಗಳನ್ನು ಮಾಡಿಕೊಂಡರೂ ಸುತ್ತಾಟದ ಸಂದರ್ಭದಲ್ಲಿ ಸಿಕ್ಕಿದ್ದೆಲ್ಲ ತಿನ್ನುವ ಅನಿವಾರ್ಯತೆಗೆ ಸಿಲುಕುವುದೇ ಹೆಚ್ಚು (Travel Guide). ಕೆಲವೊಮ್ಮೆ ಕಂಡಿದ್ದನ್ನು ತಿನ್ನುವ ಚಪಲವೂ ಕಾಡಬಹುದು. ಉದಾ, ಬೆಳಗಿನ ತಿಂಡಿಗೆ ಇಡ್ಲಿ, ದೋಸೆಯಂಥ ಆಯ್ಕೆ ಮನದಲ್ಲಿದ್ದರೂ ಮೆನುದಲ್ಲಿ ಕಂಡ ಪೂರಿ, ಬನ್ಸ್‌ನಂಥವು ಮನ ಸೆಳೆಯಬಹುದು. ಯಾವುದೋ ಹೊತ್ತಿಗೆ ಸರಿಯಾಗಿ ಊಟ ಸಿಗಲಿಲ್ಲ ಎನ್ನುವ ಕಾರಣಕ್ಕೆ, ಏನೋ ಕರುಂಕುರುಂ ತಿಂದುಕೊಂಡು, ಮುಂದೆ ಒಳ್ಳೆಯ ಆಹಾರ ಸಿಕ್ಕಿದಲ್ಲಿ ಹೊಟ್ಟೆಬಿರಿ ತಿನ್ನಬಹುದು. ಇಂಥವೆಲ್ಲಾ ಪ್ರಯಾಣದ ದಿನಗಳಲ್ಲಿ ನಮ್ಮ ಆರೋಗ್ಯ ಕೆಡುವುದಕ್ಕೆ ಮತ್ತು ತೂಕ ಹೆಚ್ಚುವುದಕ್ಕೆ ಕಾರಣವಾಗುತ್ತವೆ (Health Tips). ಹಾಗಾದರೆ ಪ್ರವಾಸದ ದಿನಗಳಲ್ಲಿ ನಾವು ಅನುಸರಿಸಬೇಕಾದ ಆಹಾರಕ್ರಮಗಳೇನು?
ಬಾಯಾಡುವುದಕ್ಕೆ ನಿಮ್ಮಲ್ಲೇ ಇರಲಿ
ಬೆಳಗಿನ ತಿಂಡಿ, ಆಮೇಲಿನ ಎರಡು ಊಟಗಳನ್ನು ಎಲ್ಲಾದರೂ ವ್ಯವಸ್ಥೆ ಮಾಡಿಕೊಂಡರೂ, ನಡುವಿನ ಹಸಿವೆಗಳಿಗೆ ಬೇಕಾದ ತಿನಿಸುಗಳನ್ನು ನೀವೇ ತಂದುಕೊಳ್ಳಿ. ಗುಡ್‌ಲೈಫ್ ಮಾದರಿಯ ಹಾಲುಗಳು, ಪ್ರೊಟೀನ್ ಬಾರ್‌ಗಳು, ಹಣ್ಣುಗಳು, ಬೀಜಗಳು, ಒಣಹಣ್ಣುಗಳು, ಮನೆಯಲ್ಲೇ ಮಾಡಿ ತರಬಹುದಾದ ಲಡ್ಡುಗಳು- ಮುಂತಾದವುಗಳನ್ನು ಹೊರಡುವಾಗಲೇ ಇರಿಸಿಕೊಳ್ಳಿ. ಅಥವಾ ಪ್ರವಾಸ ಹೋದ ಸ್ಥಳದಲ್ಲಿ ಇಂಥವು ಹೇರಳವಾಗಿ ಲಭ್ಯವಿದೆ ಎಂಬುದು ಖಾತ್ರಿಯಿದ್ದರೆ, ಅಲ್ಲಾದರೂ ಖರೀದಿಸಿ. ಆದರೆ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದರಾಯಿತು ಎನ್ನುವ ಆಯ್ಕೆ ಕೈಕೊಡುವುದೇ ಹೆಚ್ಚು.
ಈ ಸುದ್ದಿಯನ್ನೂ ಓದಿ: Makhana Benefits: ಮಖನಾ ಲಾಭಗಳನ್ನು ತಿಳಿಯುವುದಕ್ಕೆ ತಿಂದು ನೋಡಿ!
ಬೆಳಗಿನ ತಿಂಡಿ ತಪ್ಪಿಸಬೇಡಿ
ಬೆಳಗ್ಗೆ ತಿಂಡಿ ತಿನ್ನುತ್ತಾ ಕುಳಿತರೆ ಹೊತ್ತಾಗುತ್ತದೆ ಎನ್ನುವ ಭಾವನೆ ಹಲವರಲ್ಲಿ ಇರುತ್ತದೆ. ಆದರೆ ವಾಸ್ತವ್ಯದ ಹೊಟೆಲ್‌ನಿಂದ ಬೆಳಗ್ಗೆ ಹೊರಬೀಳುವಾಗ ತಿಂಡಿ ತಿಂದೇ ಹೋಗುವ ಅಭ್ಯಾಸ ಇಟ್ಟುಕೊಳ್ಳಿ. ಹೋಗ್ತಾ ದಾರಿಯಲ್ಲಿ ತಿಂದರಾಯಿತು ಎಂದುಕೊಂಡ ದಿನವೇ ಏನೂ ದೊರೆಯದೆ ಹೋಗಬಹುದು. ಆಗ ಮತ್ತೆ ಕೈ ಹೋಗುವುದು ಜಂಕ್‌ಗಳತ್ತ. ಹಸಿದಾಗ ಇವುಗಳನ್ನು ಹೊಟ್ಟೆಗೆ ತುಂಬಿಸುವುದರಿಂದ ಹೊಟ್ಟೆ ಹಾಳಾಗುವುದು ನಿಶ್ಚಿತ. ಅಲ್ಲಿಗೆ ಪ್ರವಾಸ ಮಗುಚಿಬೀಳಬಹುದು. ಬೆಳಗಿನ ತಿಂಡಿಗೆ ಆದಷ್ಟೂ ದೋಸೆ, ಇಡ್ಲಿ, ಉಪ್ಪಿಟ್ಟು, ಆಮ್ಲೆಟ್, ಚಪಾತಿಯಂಥ ಆರೋಗ್ಯಕರ ತಿಂಡಿಗಳನ್ನೇ ಆಯ್ಕೆ ಮಾಡಿಕೊಳ್ಳಿ.
ಆಯ್ಕೆಯತ್ತ ಗಮನ ಕೊಡಿ
ಪ್ರವಾಸಿ ತಾಣಗಳ ಸುತ್ತ ಮುತ್ತ ಇರುವಂಥ ರೆಸ್ಟೋರೆಂಟ್‌ಗಳನ್ನು ಆಯ್ಕೆ ಮಾಡಬಾರದೆಂದಲ್ಲ ಅಥವಾ ಯಾವುದೋ ಊರಿನ ವಿಶೇಷ ಖಾದ್ಯಗಳನ್ನು ಸವಿಯುವುದರಲ್ಲಿ ಖಂಡಿತಕ್ಕೂ ತಪ್ಪಿಲ್ಲ. ಆದರೆ ಸ್ಥಳಗಳ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಮೆನುದಲ್ಲಿರುವ ಆಹಾರಗಳು ಗೊತ್ತಿಲ್ಲದಿದ್ದರೆ, ಕೇಳಿ ತಿಳಿಯಿರಿ. ಆಹಾರದಲ್ಲಿ ಸಿಹಿ ಅಥವಾ ಕೊಬ್ಬು ಹೆಚ್ಚಿದೆ ಎನಿಸಿದರೆ, ಅದನ್ನು ಹಂಚಿಕೊಂಡು ತಿನ್ನಲು ಪ್ರಯತ್ನಿಸಿ. ಮಧ್ಯಾಹ್ನದ ಊಟವೇ ಭರಪೂರ ಆಗಿದೆ ಎನಿಸಿದರೆ, ರಾತ್ರಿಯೂಟವನ್ನು ಮಿತಗೊಳಿಸಿ. ಹೊಟ್ಟೆಗೂ ಕೊಂಚ ಆರಾಮ ನೀಡಿ. ಹೊಸ ರುಚಿ ಸವಿಯುತ್ತಿದ್ದರೆ, ಒಂದೊಂದು ತುತ್ತನ್ನೂ ಸವಿಯಿರಿ. ಏನನ್ನು ಮತ್ತು ಎಷ್ಟು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನಕೊಡಿ.

ಕಿಚನ್ ಇದೆಯೇ?
ಕೆಲವು ಹೊಟೆಲ್ ಕೋಣೆಗಳಲ್ಲಿ ಸಣ್ಣದೊಂದು ಕಿಚನ್ ಇರುವುದಕ್ಕುಂಟು. ಪೂರಾ ಅಡುಗೆಮನೆಯೇ ಅಲ್ಲದಿದ್ದರೂ, ಸಣ್ಣ ಕೌಂಟರ್ ಇದ್ದರೂ ಅನುಕೂಲವಾದೀತು. ಮಕ್ಕಳು, ವಯಸ್ಸಾದವರೊಂದಿಗೆ ಪ್ರಯಾಣ ಮಾಡುತ್ತಿದ್ದರೆ ಇಂಥವು ಅಗತ್ಯವಾಗುತ್ತವೆ. ಅದರಲ್ಲೂ ಹೊರದೇಶಗಳಿಗೆ ಪ್ರವಾಸ ಹೋದಾಗ, ಅಲ್ಲಿ ನಮಗೆ ಬೇಕಾದಂಥ ಆಹಾರ ದೊರೆಯದಿದ್ದರೆ ಸಿಕ್ಕಿದ್ದು ತಿಂದು ಜೀವ ಹಿಡಿದುಕೊಳ್ಳುವ ಬದಲು ಇಂಥವುಗಳ ಆಯ್ಕೆ ಜಾಣತನ.
ನೀರು ಕುಡಿಯುತ್ತಿದ್ದೀರಾ?
ಪ್ರವಾಸದ ಸಂದರ್ಭದಲ್ಲಿ ಸ್ವಚ್ಛವಾದ ಶೌಚಾಲಯಗಳು ದೊರೆಯದಿದ್ದರೆ ಎಂಬ ಚಿಂತೆಯಲ್ಲಿ ನೀರು ಕುಡಿಯುವುದನ್ನೇ ಕಡಿಮೆ ಮಾಡುವವರು ಬಹಳ ಮಂದಿಯಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ದೇಹ ನಿರ್ಜಲೀಕರಣಕ್ಕೆ ಸಿಲುಕುವುದರ ಜೊತೆಗೆ ಜೀರ್ಣಾಂಗಗಳ ಕ್ಷಮತೆಯೂ ಕ್ಷೀಣಿಸುತ್ತದೆ. ಹೋದ ಸ್ಥಳಗಳಲ್ಲಿ ಅಲ್ಕೋಹಾಲ್ ಸೇವಿಸಿದರಂತೂ ದೇಹ ಮತ್ತಷ್ಟು ನೀರಿಲ್ಲದಂತಾಗಿ ಬಳಲುತ್ತದೆ. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ
ಪ್ರಯಾಣಿಸುವಾಗ…
ವಿಮಾನ, ರೈಲುಗಳಲ್ಲಿ ಸರಿಯಾದ ಆಹಾರ ದೊರೆಯದಿದ್ದರೆ ನಿಲ್ದಾಣಗಳಲ್ಲಿ ಆರೋಗ್ಯಕರ ಆಯ್ಕೆಗಳಿವೆಯೇ ಪರಿಶೀಲಿಸಿ. ಅದಿಲ್ಲದಿದ್ದರೆ ಬಿಸಿನೀರು ಹಾಕಿದರೆ ಸಿದ್ಧವಾಗುವಂಥ ಆಹಾರಗಳು ಸಹ ನಮ್ಮ ನೆರವಿಗೆ ಬರಬಹುದು. ಆರಾಮದಾಯಕ ಧಿರಿಸುಗಳನ್ನು ಧರಿಸಿ, ಹೊಟ್ಟೆಯ ಸುತ್ತ ಬಿಗಿಯಾದ ಉಡುಪುಗಳು ಜೀರ್ಣಾಂಗದ ಮೇಲೆ ಒತ್ತಡ ಹಾಕಬಹುದು. ಸಾಧ್ಯವಿದ್ದಷ್ಟೂ ಚಟುವಟಿಕೆಯಿಂದಿರಿ. ವಾಕಿಂಗ್‌ನಂಥ ಸರಳ ವ್ಯಾಯಾಮಗಳಿಗೆ ಸಮಯ ತೆಗೆಯುವುದಕ್ಕಾದರೆ ಒಳ್ಳೆಯದು.