Bengaluru News: ಬೆಂಗಳೂರಿನಲ್ಲಿ ʼಕ್ಯಾನ್ಸರ್ ವಿರುದ್ಧ ನಡೆಯಿರಿʼ ವಾಕಥಾನ್
Bengaluru News: ಬೆಂಗಳೂರಿನಲ್ಲಿ ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಪ್ರಕ್ರಿಯಾ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ʼಕ್ಯಾನ್ಸರ್ ವಿರುದ್ಧ ನಡೆಯಿರಿʼ ಬೃಹತ್ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಪ್ರಕ್ರಿಯಾ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ನಗರದಲ್ಲಿ (Bengaluru News ) ʼಕ್ಯಾನ್ಸರ್ ವಿರುದ್ಧ ನಡೆಯಿರಿʼ ಬೃಹತ್ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು.
ವಿಧಾನಸೌಧದಿಂದ ಪ್ರಾರಂಭವಾದ ಈ ವಾಕಥಾನ್ ಬಾಲ ಭವನದಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಕ್ಯಾನ್ಸರ್‌ನಿಂದ ಗುಣಮುಖರಾದವರು ಈ ಕಾಯಿಲೆಯ ವಿರುದ್ಧದ ತಮ್ಮ ಹೋರಾಟದ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.
ಈ ವೇಳೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ ಮಾತನಾಡಿದರು.
ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ. ಶ್ರೀನಿವಾಸ್ ಚಿರುಕುರಿ ಮಾತನಾಡಿ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ ಗುಣಪಡಿಸಬಹುದು ಮತ್ತು ಕ್ಯಾನ್ಸರ್‌ನಿಂದ ಬದುಕುಳಿದವರು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ವಾಸ್ತವವಾಗಿ, 10 ರಿಂದ 15 ವರ್ಷಗಳ ಹಿಂದೆ ಚಿಕಿತ್ಸೆ ಪಡೆದ ಅನೇಕ ಕ್ಯಾನ್ಸರ್‌ನಿಂದ ಬದುಕುಳಿದವರು ಈಗ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿಯೇ ಈ ಕಾಯಿಲೆ ಪತ್ತೆಯಾದರೆ ಜೀವ ರಕ್ಷಣೆ ಸಾಧ್ಯ ಎಂಬುದು ಈಗ ಸಂಪೂರ್ಣ ಗುಣಮುಖಗೊಂಡವರ ಪ್ರಕರಣದಿಂದ ಸಾಬೀತಾಗಿದೆ.
ಜನರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು, ಜೀವನಶೈಲಿಯ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬೇಕು, ಸರಿಯಾಗಿ ಆಹಾರ ಸೇವಿಸಬೇಕು ಮತ್ತು ಸಕಾಲಿಕ ವೈದ್ಯಕೀಯ ಸಲಹೆಗಳನ್ನು ಪಡೆಯಬೇಕು. ಸುಧಾರಿತ ತಂತ್ರಜ್ಞಾನ ಮತ್ತು ವಿಶೇಷ ಚಿಕಿತ್ಸೆಗಳೊಂದಿಗೆ, ನಾವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು. ಭಯಪಡುವ ಅಗತ್ಯವಿಲ್ಲ ಆದರೆ ತಡೆಗಟ್ಟುವಿಕೆಯತ್ತ ಗಮನ ಹರಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!
ಅದ್ವಿಕಾ ಕೇರ್ ಫೌಂಡೇಶನ್‌ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ವಾರಿಯರ್ ಮಾತನಾಡಿ, ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ನಾವು ನಿರಂತರ ಪ್ರಯತ್ನಗಳನ್ನ ಮಾಡುತ್ತಿದ್ದೇವೆ. 100 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಣ ಸಂಗ್ರಹ ಮಾಡುತ್ತಿದ್ದು, ಇದಕ್ಕಾಗಿ ಕೈ ಜೋಡಿಸಬೇಕು. ಕ್ಯಾನ್ಸರ್‌ನಿಂದ ಬದುಕುಳಿದವರು ಮತ್ತು ಸ್ವಯಂಸೇವಕರು ಸೇರಿದಂತೆ ಸಾವಿರಕ್ಕಿಂತ ಅಧಿಕ ಜನ ಭಾಗವಹಿಸುವಿಕೆ ಸಂತಸ ಹಾಗೂ ಉತ್ಸಾಹ ಮೂಡಿಸಿದೆ. ಮುಂಬರುವ ತಿಂಗಳುಗಳಲ್ಲಿ ಇಂತಹ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅದ್ವಿಕಾ ಕೇರ್ ಫೌಂಡೇಶನ್‌ನ ಟ್ರಸ್ಟಿ ಬಾಲಾ ವಾರಿಯರ್ ಹಾಗೂ ಸ್ಥಳೀಯ ಬೈಕರ್ ಕ್ಲಬ್‌ನ ಅಧ್ಯಕ್ಷ ಚೇತನ್ ಮಾತನಾಡಿದರು.