ಸಾಮಾನ್ಯವಾಗಿ ಮಹಿಳೆಯರಿಗೆ 35 ವಯಸ್ಸಿನ ನಂತರ ದೇಹದಲ್ಲಿ ನೈಸರ್ಗಿಕವಾಗಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಅವರ (Health Tips) ನಿದ್ರೆ, ಶಕ್ತಿ, ಋತುಚಕ್ರ, ಚರ್ಮ, ಸ್ನಾಯುಗಳ ಶಕ್ತಿಯಲ್ಲಿ ಹಾಗೂ ಚಯಾಪಚಯ ಕ್ರಿಯೆಗಳಲ್ಲಿ ಬದಲಾವಣೆಗಳಾಗುತ್ತವೆ. ಇದು ಸಮಯ ಮತ್ತು ದೇಹಗಳ ಮೇಲೆ ಆಧಾರವಾಗಿದ್ದು ಒಬ್ಬ ಮಹಿಳೆಯಿಂದ ಮತ್ತೊಬ್ಬ ಮಹಿಳೆಗೆ ಬೇರೆ ರೀತಿಯಾಗಿರುತ್ತದೆ. ವಯಸ್ಸು ಹೆಚ್ಚಾಗುತ್ತಾ ಹೋದಂತೆ ದೇಹದಲ್ಲಿ ಯಾವೆಲ್ಲ ಬದಲಾವಣೆ ಕಂಡು ಬರುತ್ತದೆ ಎಂಬುದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
35ರ ನಂತರ ದೇಹದಲ್ಲಿ ಕಂಡುಬರುವ ಸಾಮಾನ್ಯ ಶಾರೀರಿಕ ಬದಲಾವಣೆಗಳು
ಮಹಿಳೆಯರಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮುಟ್ಟು ತಡವಾಗುವುದು ಅಥವಾ ಬೇಗ ಅಗುವಂತಹ ಋತುಚಕ್ರದ ವ್ಯತ್ಯಾಸಗಳು ಕಾಣಿಸಿಕೊಳ್ಳುವುದು ತೀರಾ ಸಾಮಾನ್ಯ. ಇದರೊಂದಿಗೆ ಚಯಾಪಚಯ ಕ್ರಿಯೆ ನಿಧಾನಗೊಳ್ಳುವುದರಿಂದ ಮೊದಲಿನಷ್ಟೇ ಆಹಾರ ಸೇವಿಸಿದರೂ ತೂಕ ಹೆಚ್ಚಾಗುತ್ತದೆ. ಅಂಡಾಶಯದಲ್ಲಿ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಸ್ವಾಭಾವಿಕವಾಗಿ ಕಡಿಮೆಯಾಗುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯದಲ್ಲೂ ಇಳಿಕೆಯಾಗುತ್ತದೆ.
ದೇಹದಲ್ಲಿ ಕೊಲ್ಯಾಜೆನ್ ಉತ್ಪಾದನೆ ಮತ್ತು ಎಣ್ಣೆ ಅಂಶ ಕಡಿಮೆಯಾಗುವುದರಿಂದ ಚರ್ಮ ಒಣಗುವುದು ಹಾಗೂ ಸುಕ್ಕು ಬೀಳುವುದು ಆರಂಭವಾಗುತ್ತದೆ. ಹಾರ್ಮೋನ್ ಏರಿಳಿತದ ಪರಿಣಾಮವಾಗಿ ನೆತ್ತಿಯ ಭಾಗದಲ್ಲಿ ಕೂದಲು ತೆಳುವಾಗುತ್ತದೆ. ಮುಟ್ಟಿನ ಸಮಯಕ್ಕೂ ಮುನ್ನ ಸ್ತನಗಳಲ್ಲಿ ಸಾಧಾರಣ ನೋವು ಅಥವಾ ಭಾರವಾದ ಅನುಭವ ಆಗುವುದು ಸಹಜ.
ಇದಲ್ಲದೆ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು, ಸ್ನಾಯುಗಳ ಪ್ರಮಾಣ ಇಳಿಕೆಯಾಗಿ ವ್ಯಾಯಾಮದ ನಂತರ ದೇಹ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು ಹಾಗೂ ಮೆದುಳಿನ ಸರೊಟೋನಿನ್ ಮಟ್ಟದ ವ್ಯತ್ಯಾಸದಿಂದಾಗಿ ಆಗಾಗ ಮೂಡ್ ಸ್ವಿಂಗ್ಸ್ ಆಗುವುದು. ಅಥವಾ ಕಿರಿಕಿರಿ ಉಂಟಾಗುವುದು ವಯಸ್ಸಾಗುವಿಕೆಯ ಸಹಜ ಗುಣಲಕ್ಷಣ .
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಸಾಮಾನ್ಯ ಬದಲಾವಣೆಗಳು ಹೊರತಾಗಿಯು ಕೆಲವು ಲಕ್ಷಣಗಳು ಗಂಭೀರ ಆರೋಗ್ಯ ಸಮಸ್ಯೆಯ ಮುನ್ಸೂಚನೆ ನೀಡುತ್ತವೆ. ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತ ಸ್ರಾವ, 8 ದಿನಗಳಿಗಿಂತ ಹೆಚ್ಚು ದಿನ ಪೀರಿಯಡ್ಸ್ ಆಗುವುದು. ಅಥವಾ ಎರಡು ಮುಟ್ಟಿನ ಮಧ್ಯದ ದಿನಗಳಲ್ಲಿ ರಕ್ತಸ್ರಾವವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದು ಫೈಬ್ರಾಯ್ಡ್ಗಳು ಅಥವಾ ಗರ್ಭಕೋಶದ ಸಮಸ್ಯೆಯಾಗಿ ಕಾಡಬಹುದು.
ಚರ್ಮದ ಆರೋಗ್ಯದಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಬೀಜಗಳ ಆರೋಗ್ಯ ಲಾಭ ಒಂದೆರಡಲ್ಲ!
ಸ್ತನದಲ್ಲಿ ಹೊಸದಾಗಿ ಯಾವುದೇ ಗಡ್ಡೆಗಳು ಕಂಡುಬಂದರೆ, ಚರ್ಮದ ವಿನ್ಯಾಸ ಬದಲಾದರೆ ವೈದ್ಯರ ಕಾಣಬೇಕು. ಯಾವುದೇ ಕಾರಣವಿಲ್ಲದೇ ಹಠಾತ್ತನೆ ಭಾರಿ ಪ್ರಮಾಣದಲ್ಲಿ ತೂಕ ಇಳಿಯುವುದು ಅಥವಾ ಹೆಚ್ಚಾಗುವುದು ಹಾಗೂ ತೀವ್ರವಾಗಿ ಕೂದಲು ಉದುರುವುದು ಥೈರಾಯ್ಡ್ ಅಥವಾ ಪಿಸಿಒಡಿ ಸಮಸ್ಯೆ ಸೂಚಿಸುತ್ತದೆ. ಲೈಗಿಂಕ ಕ್ರಿಯೆಯ ನಂತರ ರಕ್ತಸ್ರಾವವಾಗುವುದು ಅಥವಾ ಹೊಟ್ಟೆಯ ಕೇಳಭಾಗದಲ್ಲಿ ಸತತವಾಗಿ ತೀವ್ರ ನೋವು ಕಾಣಿಸಿಕೊಂಡರೆ ಗರ್ಭಕಂಠದ ಸೋಂಕು ಕಾಣಿಸಿಕೊಳ್ಳಬಹುದು, ಇದಕ್ಕೆ ಗೈನೆಕಾಲಜಿಕಲ್ ಪರಿಶೀಲನೆ ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ. ದೈನಂದಿನ ಕೆಲಸ ಮಾಡಲು ಸಾಧ್ಯವಾಗದಷ್ಟು ತೀವ್ರ ಆಯಾಸ, ಮಾನಸಿಕ ಗೊಂದಲ ಹಾಗೂ ದೀರ್ಘಕಾಲದ ಖಿನ್ನತೆಯ ಸಮಸ್ಯಗಳು ಹಾರ್ಮೋನ್ ಅಸಮತೋಲನ ಅಥವಾ ವಿಟಮಿನ್ ಡಿ, ಬಿ೧೨ ಕೊರತೆಯ ಸಂಕೇತ ಆಗಿರುತ್ತದೆ, ಹೀಗಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.