ನವದೆಹಲಿ, ಜೂ. 5: ನಡಿಗೆ (Walking) ಅನ್ನೋದು ಪ್ರತಿಯೊಬ್ಬರೂ ಅನುಸರಿಸಬಹುದಾದ ಅತ್ಯುತ್ತಮ ವ್ಯಾಯಾಮ ವಿಧಾನ. ನಮ್ಮ ಸ್ನಾಯುಗಳು, ಮೂಳೆ ಸಂಧುಗಳನ್ನು ಬಲಪಡಿಸುವುದರ ಜತೆಗೆ ಅನೇಕ ಆರೋಗ್ಯ ಲಾಭವನ್ನು ವಾಕಿಂಗ್ ನೀಡುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಪರಿಣಾಮಕಾರಿ ವ್ಯಾಯಾಮ ಇದಾಗಿದೆ. ಅದರಲ್ಲೂ ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ನಿಮ್ಮ ಫಿಟ್‌ನೆಸ್ ಕಾಯ್ದುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಾದರೆ ದೇಹ ಫಿಟ್ ಆಗಿರಲು ಕೇವಲ 10,000 ಹೆಜ್ಜೆ ನಡೆಯುವುದೇ ಏಕೈಕ ವ್ಯಾಯಾಮವೆ?
ಹೆಚ್ಚಾಗಿ ಕುಳಿತುಕೊಂಡೇ ಕೆಲಸ ಮಾಡುವವರಿಗೆ ದಿನಕ್ಕೆ 10,000 ಹೆಜ್ಜೆಗಳು ಆವಶ್ಯ. ಆದರೆ ತೂಕ ಇಳಿಕೆಗೆ ಹಾಗೂ ಫಿಟ್‌ನೆಸ್ ಕಾಪಾಡಿಕೊಳ್ಳಲು ನಡಿಗೆ ಮಾತ್ರ ಸಾಲದು. ಇದರ ಜತೆಗೆ ಸರಿಯಾದ ಆಹಾರ ಮತ್ತು ಕೆಲವೊಂದು ವರ್ಕೌಟ್‌ಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಕಳಪೆ ಆಹಾರ ಕ್ರಮವನ್ನು ಕೇವಲ ನಡಿಗೆಯ ಮೂಲಕ ಸರಿದೂಗಿಸಲು ಸಾಧ್ಯವಿಲ್ಲ. 10,000 ಹೆಜ್ಜೆಗಳು ಸರಿಸುಮಾರು 300ರಿಂದ 500 ಕ್ಯಾಲೊರಿಗಳನ್ನು ಸುಡಬಹುದಾದರೂ, ಅಧಿಕ ಕ್ಯಾಲೊರಿಯ ಆಹಾರಗಳು ಈ ಶ್ರಮವನ್ನು ವ್ಯರ್ಥ ಮಾಡಬಹುದು.
ಎಲ್ಲಾ ವಯಸ್ಸಿನವರಲ್ಲೂ ಕಿಡ್ನಿ ಆರೋಗ್ಯ
ನಡಿಗೆಯಿಂದ ಏನು ಪ್ರಯೋಜನ?
- ನಡಿಗೆಯೂ ಹೊಟ್ಟೆಯ ಸುತ್ತಲಿನ ಹಾನಿಕಾರಕ ಕೊಬ್ಬನ್ನು ಕಡಿಮೆ ಮಾಡಿ, ಕೀಲುಗಳನ್ನು ಸುಸ್ಥಿತಿಯಲ್ಲಿಡುತ್ತದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಜಡ ಜೀವನಶೈಲಿಯನ್ನು ಹೋಗಲಾಡಿಸಲು ಪರಿಣಾಮಕಾರಿ.
- ವಾಕಿಂಗ್ ಹೃದಯ ಮತ್ತು ಶ್ವಾಸಕೋಶಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಹೊಸದಾಗಿ ವ್ಯಾಯಾಮ ಮಾಡುವವರಿಗೆ ನೇರವಾಗಿ 10,000 ಹೆಜ್ಜೆಗಳ ಗುರಿ ತಲುಪುವುದು ಕಷ್ಟವಾಗಬಹುದು. ಆದ್ದರಿಂದ ಆರಂಭದಲ್ಲಿ 5,000ದಿಂದ 7,000 ಹೆಜ್ಜೆಗಳಿಂದ ಆರಂಭಿಸಿ ಕಾಲ ಕ್ರಮೇಣ ಜಾಸ್ತಿ ಮಾಡಬಹುದು.
ತೂಕ ಇಳಿಕೆಗೆ ನಡಿಗೆ
ನಿಮ್ಮ ಮುಖ್ಯ ಗುರಿ ತೂಕ ಇಳಿಸುವುದಾಗಿದ್ದರೆ ಕೇವಲ 10,000 ಹೆಜ್ಜೆಗಳು ಸಾಕಾಗುವುದಿಲ್ಲ. ನಡಿಗೆಯ ಜತೆ ಇತರ ವ್ಯಾಯಾಮ, ಇಂಟರ್ವಲ್ ಟ್ರೈನಿಂಗ್‌ನಂತಹ ಅಭ್ಯಾಸ ಸೇರಿಸುವುದರಿಂದ ಹೆಚ್ಚಿನ ಕ್ಯಾಲೊರಿ ಬರ್ನ್ ಆಗುತ್ತದೆ. ಇನ್ನು ಹಿರಿಯ ನಾಗರಿಕರು ಅಥವಾ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿರುವವರು ಸಾಮರ್ಥ್ಯಕ್ಕೆ ತಕ್ಕ ನಡಿಗೆಯನ್ನು ಆರಿಸಿಕೊಳ್ಳಬೇಕು.