ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತೀಯ ಮಹಿಳೆಯರನ್ನು ಕಾಡುವ ಬಾಯಿಯ ಕ್ಯಾನ್ಸರ್‌ನ ವಂಶವಾಹಿನಿ ಸುಳಿವು ಪತ್ತೆ: ವಿಜ್ಞಾನಿಗಳು ಹೇಳಿದ್ದೇನು?

Oral Cancer: ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚಿನ ಬಾಯಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ. ತಂಬಾಕು, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ಕಾರಣದಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಈ ಭಾಗಗಳಲ್ಲಿ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯ.

ಸಾಂದರ್ಭಿಕ ಚಿತ್ರ.

ನವದೆಹಲಿ: ದಕ್ಷಿಣ ಭಾರತದ ಮಹಿಳೆಯರಲ್ಲಿ ಬಾಯಿಯ ಕ್ಯಾನ್ಸರ್ (Oral Cancer) ಪ್ರೇರಕ ಜೀನ್ ಪರಿವರ್ತಕವನ್ನು(Genetic clues) ಕಂಡುಹಿಡಿಯುವಲ್ಲಿ ಭಾರತೀಯ ವಿಜ್ಞಾನಿಗಳು ಸಫಲರಾಗಿದ್ದಾರೆ. ಬಾಯಿಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿರುವ ವಿಶ್ವದ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದ್ದು, ಇಲ್ಲಿನ ಕೆಲವು ಭಾಗಗಳಲ್ಲಿ, ಅಂದರೆ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಹಿಳೆಯರಲ್ಲಿ ಅತೀ ಹೆಚ್ಚಿನ ಬಾಯಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ. ತಂಬಾಕು ಸೇವನೆ, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ಕಾರಣದಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಈ ಭಾಗಗಳಲ್ಲಿ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯ. ಬಾಯಿ ಕ್ಯಾನ್ಸರ್ ಪ್ರಕರಣಗಳು ಪುರುಷರಲ್ಲೇ ಹೆಚ್ಚಾಗಿ ಕಂಡುಬರುತ್ತಿದ್ದರೂ, ಮಹಿಳೆಯರಲ್ಲೂ ಕಾಣಿಸಿಕೊಳ್ಳುವ ಕಾರಣ ಆ ವರ್ಗದ ಬಗ್ಗೆಯೂ ಸಹ ನಿಗಾ ವಹಿಸಲಾಗಿದೆ.

ಬೆಂಗಳೂರಿನ ಜವಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ (ಜೆ.ಎನ್.ಸಿ.ಎ.ಎಸ್.ಆರ್.) ವಿಜ್ಞಾನಿಗಳ ತಂಡ ಹಾಗೂ ಕಲ್ಯಾಣಿಯ ಬ್ರಿಕ್ – ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೆನೊಮಿಕ್ಸ್ (ಎನ್.ಐ.ಬಿ.ಎಂ.ಜಿ.) ಸಹಯೋಗದಲ್ಲಿ, ಕೋಲಾರದ ಶ್ರೀ ದೇವರಾಜ ಅರಸು ಅಕಾಡೆಮಿ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ (ಎಸ್.ಡಿ.ಯು.ಎ.ಎಚ್.ಇ.ಆರ್.) ಇಲ್ಲಿನ ವೈದ್ಯರ ಸಹಕಾರದೊಂದಿಗೆ ನಡೆಸಲಾದ ಮಹಿಳಾ ಕೇಂದ್ರೀಕೃತ ಅಧ್ಯಯನವೊಂದರಲ್ಲಿ ಈ ಅಂಶ ಹೊರಬಿದ್ದಿದೆ. ತಂಬಾಕು ಜಗಿಯುವ ಹವ್ಯಾಸ ಇರುವ ಭಾರತೀಯ ಮಹಿಳೆಯರನ್ನು ಕೇಂದ್ರೀಕರಿಸಿಕೊಂಡು ಈ ಅಧ್ಯಯನವನ್ನು ನಡೆಸಲಾಗಿದೆ.

ಈ ಅಧ್ಯಯನದ ನೇತೃತ್ವನ್ನು ಜೆ.ಎನ್.ಸಿ.ಎ.ಎಸ್.ಆರ್.ನ ಪ್ರೊ. ತಪಸ್ ಕೆ. ಖಂಡು ವಹಿಸಿಕೊಂಡಿದ್ದರು. ಮಹಿಳೆಯರಲ್ಲಿ ಕ್ಯಾನ್ಸರ್ ಕಾರಕ ಅಂಶಗಳಾವವು, ಮಹಿಳಾ ರೋಗಿಗಳಲ್ಲಿ ಈ ಕ್ಯಾನ್ಸರ್ ಕಾಯಿಲೆ ಹೇಗೆ ರೂಪುಗೊಂಡು ಅಭಿವೃದ್ಧಿಗೊಳ್ಳುತ್ತದೆ ಮತ್ತು ಈ ಕಾಯಿಲೆಯನ್ನು ಹೇಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆಗೊಳಪಡಿಸಬಹುದು ಎಂಬೆಲ್ಲ ವಿಷಯಗಳನ್ನು ಕೇಂದ್ರವಾಗಿರಿಸಿಕೊಂಡು ಈ ಅಧ್ಯಯನವನ್ನು ನಡೆಸಲಾಗಿತ್ತು.

ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು: ಹೃದಯ ಹಿಂಡುವ ದೃಶ್ಯ ಇಲ್ಲಿದೆ

ಈ ಅಧ್ಯಯನದ ಸಂಶೋಧನಾ ವರದಿಯು ಕ್ಲಿನಿಕಲ್ & ಟ್ರಾನ್ಸ್ ಲೇಷನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, ಭಾರತೀಯ ಮಹಿಳೆಯರನ್ನು ಕಾಡುತ್ತಿರುವ, ಮಾರಣಾಂತಿಕ ಬಾಯಿ ಕ್ಯಾನ್ಸರ್ ಮಾದರಿಗಳ ತೀವ್ರತೆ, ಮರುಕಳಿಸುವಿಕೆಯನ್ನು ಪ್ರಚುರಪಡಿಸಲೆಂದೇ ಇರುವ ಮಾಧ್ಯಮ ಇದಾಗಿದೆ.

ಸ್ಪಷ್ಟ ಸ್ವರೂಪದ ಅಧ್ಯಯನವನ್ನು ನಡೆಸಿದ ಬಳಿಕ, ಕರ್ನಾಟಕದ ಕೋಲಾರ ಭಾಗದಲ್ಲಿನ ಮಹಿಳಾ ಸಮುದಾಯದಲ್ಲಿ ಬಾಯಿಯ ಕ್ಯಾನ್ಸರ್ ಕಾರಕ ಪ್ರಮುಖ ಹತ್ತು ವಂಶವಾಹಿನಿಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಇವುಗಳಲ್ಲಿ ಸಿಎಎಸ್.ಪಿ8 ಮತ್ತು ಟಿಪಿ53 ಎಂಬುದು ಪ್ರಮುಖ ಎರಡು ವಂಶವಾಹಿನಿಗಳಾಗಿವೆ. ಮತ್ತು ಇವು ಈ ಸಮುದಾಯದ ರೋಗಿಗಳಲ್ಲಿ ವೇಗವಾಗಿ ರೂಪಾಂತರಗೊಳ್ಳುತ್ತಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಸಿಎಎಸ್.ಪಿ8 ಕ್ಯಾನ್ಸರ್ ಕಾರಕ ಪ್ರಮುಖ ರೂಪಾಂತರಿ ಎಂಬ ವಿಷಯವೂ ಈ ಅಧ್ಯಯನದಲ್ಲಿ ತಿಳಿದುಬಂದಿದೆ. ಇದು ಈ ಹಿಂದಿನ ಅಧ್ಯಯನಗಳ ಮೂಲಕ ಕಂಡುಕೊಂಡಿದ್ದ, ಬಾಯಿ ಕ್ಯಾನ್ಸರ್ ರೋಗಿಗಳಲ್ಲಿ ಕಂಡುಬರುವ ರೂಪಾಂತರಿಗಳಿಗಿಂತ ಭಿನ್ನವಾಗಿದೆ ಎಂಬ ಅಂಶವೂ ಈ ಅಧ್ಯಯನದಿಂದ ಹೊರ ಬಿದ್ದಂತಾಗಿದೆ.

ಒಟ್ಟಿನಲ್ಲಿ ಈ ಅಧ್ಯಯನವು ಕ್ಯಾನ್ಸರ್ ಸಂಶೋಧನಾ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಹಾಗೂ ಬಯೋಮೆಡಿಕಲ್ ಸಂಶೋಧನೆಯಲ್ಲಿ ಹೆಚ್ಚು ಮಹಿಳೆಯರನ್ನು ಒಳಪಡಿಸುವ ಮತ್ತು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವ್ಯಕ್ತಿಗತ ಚಿಕಿತ್ಸಾ ವಿಧಾನಕ್ಕೊಂದು ಹೊಸ ಮಾರ್ಗಸೂಚಿಯನ್ನು ಈ ಅಧ್ಯಯನ ನೀಡಿದಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.