ಆಯುರ್ವೇದವು ಕೇವಲ ರೋಗಗಳನ್ನು ನಿವಾರಿಸುವ ಶಾಸ್ತ್ರವಾಗಿರದೆ ಪ್ರತಿನಿತ್ಯದ ಜೀವನಶೈಲಿ ಯನ್ನು ಸಮರ್ಪಕವಾಗಿ ನಿಭಾಯಿಸಲು ತಿಳಿಸುವಂತಹ ಜ್ವಲಂತ ಜೀವನ ಶಾಸ್ತ್ರ. ಆಯುರ್ವೇದದ ಎಂಟು ವಿಭಾಗಗಳಲ್ಲಿ ರಸಾಯನ ತಂತ್ರವು ಅತ್ಯಂತ ವಿಶಿಷ್ಟವಾಗಿದೆ. ಆಧುನಿಕ ಜಗತ್ತಿನಲ್ಲಿ ವೈಪರೀತ್ಯವಾದ ಜೀವನಶೈಲಿಯ ಕಾರಣದಿಂದಾಗಿ ಆರೋಗ್ಯ ಮತ್ತು ಜೀವಿತಾವಧಿಯ ಗುಣಮಟ್ಟ ಕುಸಿಯುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವುದರೊಂದಿಗೆ ನಮ್ಮ ಜೀವನದ ಗುಣಮಟ್ಟವನ್ನು ವೃದ್ಧಿಸುವಲ್ಲಿ ರಸಾಯನ ತಂತ್ರವು ದಿವ್ಯೌಷಧಿಯಾಗಿದೆ.
“ಲಾಭೋಪಾಯೋ ಹಿ ಶಸ್ತಾನಾಂ ರಸಾದೀನಾಂ ರಸಾಯನಮ್ ||” (ಚರಕ ಸಂಹಿತೆ ರಸಾಯನ ಅಧ್ಯಾಯ)
ದೇಹದ ಪ್ರತಿಯೊಂದು ಅಂಗಾಂಶಗಳಿಗೆ(ಧಾತುಗಳಿಗೆ) ಅತ್ಯುತ್ತಮ ಗುಣಮಟ್ಟದ ಪೋಷಕಾಂಶಗಳನ್ನು ತಲುಪಿಸುವ ಪ್ರಕ್ರಿಯೆಯೇ ರಸಾಯನ.
“ರಸಾಯನ ತಂತ್ರಂ ನಾಮ ವಯಃಸ್ಥಾಪನಮಾಯುರ್ಮೆಧಾಬಲಕರಂ ರೋಗಾಪಹರಣಸಮರ್ಥಂ ಚ |” (ಸುಶ್ರುತ ಸಂಹಿತೆ)
ಮನುಷ್ಯನ ವೃದ್ಧಾಪ್ಯವನ್ನು ಮುಂದೂಡಿ ತಾರುಣ್ಯತೆಯನ್ನು ಪರಿಪಾಲಿಸುವ ಸಾಮರ್ಥ್ಯವಿರುವ ರಸಾಯನ ತಂತ್ರವು ಮನುಷ್ಯನ ಬುದ್ಧಿ ಮತ್ತೆಯನ್ನು ಹೆಚ್ಚಿಸಿ ದೇಹ ಮತ್ತು ಮನಸ್ಸಿನ ಬಲವನ್ನು ವೃದ್ಧಿಸುವುದರೊಂದಿಗೆ ವಿವಿಧ ಕಾಯಿಲೆಗಳನ್ನು ನಿವಾರಿಸುತ್ತದೆ.
ದೀರ್ಘಾಯುಷ್ಯಕ್ಕೆ ರಸಾಯನದ ಕೊಡುಗೆ
ಆಯುರ್ವೇದದ ಪ್ರಕಾರ ಒಬ್ಬ ವ್ಯಕ್ತಿಯು ದೀರ್ಘಕಾಲ ಬದುಕಬೇಕಾದರೆ ಅವನ ಶರೀರ, ಮನಸ್ಸು ಮತ್ತು ಇಂದ್ರಿಯಗಳು ಬಲವಾಗಿದ್ದು ಆತನ ರೋಗನಿರೋಧಕ ಶಕ್ತಿಯು ಉತ್ತಮವಾಗಿರಬೇಕು.
ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು
ಆಧುನಿಕ ಸಂಶೋಧನೆಗಳು ಸಾಬೀತುಪಡಿಸಿರುವಂತೆ, ರಸಾಯನ ದ್ರವ್ಯಗಳು ದೇಹದ ಮೂಲ ಭೂತ ಮಟ್ಟದಲ್ಲಿ ಕಾರ್ಯನಿರ್ವಹಿಸಿ ವೃದ್ಧಾಪ್ಯವನ್ನು ತಡೆಯುತ್ತವೆ. ನಮ್ಮ ದೇಹದ ಚಯಾಪ ಚಯ ಪ್ರಕ್ರಿಯೆಯ ಸಮಯದಲ್ಲಿ ನಿರಂತರವಾಗಿ ಜೀವಕೋಶಗಳು ಸಾಯುತ್ತಿರುತ್ತವೆ ಮತ್ತು ಹೊಸ ಜೀವಕೋಶಗಳು ಹುಟ್ಟುತ್ತಿರುತ್ತವೆ. ಈ ಸಮಯದಲ್ಲಿ ಫ್ರೀ ರಾಡಿಕಲ್ಸ್ ಎಂಬ ಅಸ್ಥಿರ ಅಣುಗಳು ಉತ್ಪತ್ತಿಯಾಗುತ್ತವೆ. ಇವು ಆರೋಗ್ಯವಂತ ಜೀವಕೋಶಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸುತ್ತವೆ. ರಸಾಯನ ದ್ರವ್ಯಗಳು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ ಜೀವಕೋಶಗಳ ಆಯಸ್ಸನ್ನು ಹೆಚ್ಚಿಸುತ್ತದೆ. ಆಮಲಕಿ, ಅಶ್ವಗಂಧದಂತಹ ರಸಾಯನ ದ್ರವ್ಯಗಳು ಪ್ರಬಲ ಆಂಟಿ ಆಕ್ಸಿಡೆಂಟ್ಗಳಾಗಿ ಕಾರ್ಯನಿರ್ವಹಿಸಿ ಈ ಫ್ರೀ ರಾಡಿಕಲ್ಸ್ ಪತ್ತೆಹಚ್ಚಿ ನಾಶಪಡಿಸುತ್ತವೆ. ಇದರಿಂದ ಚರ್ಮದ ಸುಕ್ಕುಗಳು, ಕೂದಲು ಬಿಳಿಯಾಗುವುದು ಮತ್ತು ಅಂಗಾಂಗಗಳ ದೌರ್ಬಲ್ಯ ದೂರವಾಗುತ್ತದೆ.
ವ್ಯಾಧಿ ನಿರೋಧಕ ಶಕ್ತಿ ಮತ್ತು ರಸಾಯನ
ದೀರ್ಘಾಯುಷ್ಯದ ಪ್ರಮುಖ ವೈರಿ ವಿವಿಧ ರೋಗಗಳು. ರಸಾಯನ ಚಿಕಿತ್ಸೆಯು ಮನುಷ್ಯನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ರಸಾಯನವು ಸಪ್ತ ಧಾತುಗಳನ್ನು ಮತ್ತು ಓಜಸ್ಸು ಎನ್ನುವ ತೇಜಸ್ಸನ್ನು ಅಧಿಕಗೊಳಿಸುತ್ತದೆ. ಮಾತ್ರವಲ್ಲದೆ ನಮ್ಮ ಜಾಠರಾಗ್ನಿಯನ್ನು ಚುರುಕುಗೊಳಿಸಿ ದೇಹದಲ್ಲಿ ಉತ್ಪತ್ತಿಯಾಗುವ ಆಮವೆನ್ನುವ ವಿಷವನ್ನು ಕಡಿಮೆಗೊಳಿಸುತ್ತದೆ. ಇದರಿಂದ ದೇಹದ ಶಾರೀರಿಕ, ಮಾನಸಿಕ ಬಲವು ಅಧಿಕವಾಗಿ ವ್ಯಾಧಿ ಕ್ಷಮತ್ವವು ಅಧಿಕವಾಗುತ್ತದೆ.
ಮಾನಸಿಕ ಆರೋಗ್ಯ
ದೀರ್ಘಕಾಲ ಬದುಕಿ ನಮ್ಮ ನೆನಪಿನ ಶಕ್ತಿ ಅಥವಾ ಮಾನಸಿಕ ಆರೋಗ್ಯ ಕುಗ್ಗಿದರೆ ಅದು ವೃದ್ಧಾಪ್ಯದ ಜೀವನಕ್ಕೆ ಆತಂಕಕಾರಿ. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಅಗತ್ಯವಾಗಿದ್ದು ರಸಾಯನ ಚಿಕಿತ್ಸೆಯು ಅದಕ್ಕೆ ಫಲಕಾರಿಯಾಗಿದೆ. ಆಧುನಿಕ ಸಂಶೋಧನೆಗಳ ಪ್ರಕಾರ ರಸಾಯನವು ಮೆದುಳಿನ ಕೋಶಗಳಿಗೆ ನವ ಚೈತನ್ಯವನ್ನು ನೀಡಿ ಸ್ಮರಣಶಕ್ತಿ, ಏಕಾಗ್ರತೆ ಮತ್ತು ಧೀಶಕ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕ ಡಿಮೆನ್ಶಿಯದಂತಹ ವೃದ್ಧಾಪ್ಯದ ಕಾಯಿಲೆ ಗಳಿಂದ ರಕ್ಷಿಸುತ್ತದೆ. ಮಾತ್ರವಲ್ಲದೆ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಿ ಮಾನಸಿಕ ಶಾಂತಿಯನ್ನು ನೀಡುತ್ತದೆ.
ಪ್ರತಿನಿತ್ಯ ಬಳಸಬಹುದಾದ ರಸಾಯನ ದ್ರವ್ಯಗಳು
ಪ್ರತಿನಿತ್ಯ ಹಾಲು ಮತ್ತು ತುಪ್ಪದ ಸೇವನೆ, ನೆಲ್ಲಿಕಾಯಿಯ ಸೇವನೆ, ಅಶ್ವಗಂಧದ ಸಮರ್ಪಕ ಬಳಕೆ, ಅಂಮೃತಬಳ್ಳಿಯ ಕಷಾಯದ ಸೇವನೆ, ಮಂಡೂಕಪರ್ಣಿ(ಒಂದೆಲಗ)ಯ ಸ್ವರಸದ ಬಳಕೆ, ಯಷ್ಟಿ ಮಧುವಿನ ಚೂರ್ಣದ ಬಳಕೆ.
ವೃದ್ಧಾಪ್ಯವು ಬದುಕಿನ ಒಂದು ಅನಿವಾರ್ಯ ಹಂತ. ಆದರೆ, ರಸಾಯನ ಚಿಕಿತ್ಸೆಯ ಸಹಾಯದಿಂದ ಈ ಹಂತವನ್ನು ಗೌರವಯುತವಾಗಿ, ಆರೋಗ್ಯವಂತವಾಗಿ ಮತ್ತು ಮಾನಸಿಕ ನೆಮ್ಮದಿಯಿಂದ ಕಳೆಯಬಹುದು. ಇದು ಕೇವಲ ರೋಗ ಬಾರದಂತೆ ತಡೆಯುವುದಲ್ಲದೆ, ಜೀವನದ ಕೊನೆಯವರೆಗೂ ಚೈತನ್ಯಶೀಲವಾಗಿರಲು ಸಹಾಯ ಮಾಡುವ ಸಮಗ್ರ ಮಾರ್ಗವಾಗಿದೆ. ಇದರ ಬಳಕೆಯನ್ನು ವೈದ್ಯ ರನ್ನು ಭೇಟಿಯಾಗಿ ಅವರ ಸಲಹೆಯ ಮೇರೆಗೆ ಅನುಸರಿಸುವುದು ಉತ್ತಮ.
ಡಾ. ಯೋಗೀಶ ಆಚಾರ್ಯ
ಸಹ ಪ್ರಾಧ್ಯಾಪಕರು , ಸ್ವಸ್ಥವೃತ್ತ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ.