ಬೆಂಗಳೂರು: ಕನಕಪುರ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕುಟುಂಬಗಳಿಗೆ ಮಕ್ಕಳ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಲಭವಾಗಿ ಮತ್ತು ಮನೆ ಸಮೀಪದಲ್ಲೇ ದೊರಕುವಂತೆ ಮಾಡಲು, ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆಯಲ್ಲಿ ಮಕ್ಕಳ ಚಿಕಿತ್ಸಾ ಕೇಂದ್ರ (Paediatrics Centre) ಹಾಗೂ ಮಕ್ಕಳ ಉನ್ನತ ವಿಶೇಷ ಚಿಕಿತ್ಸಾ ಸೇವೆಗಳನ್ನು (Paediatric Super Specialty Services ) ಆರಂಭಿಸಿದೆ. ಈ ಕೇಂದ್ರವು ಒಂದು ಡಜನ್‌ಗಿಂತಲೂ ಹೆಚ್ಚು ಮಕ್ಕಳ ತಜ್ಞರನ್ನು ಒಂದೇ ಸೂರಿನಡಿ ಒಟ್ಟುಗೂಡಿಸಿ, ಗುಣಮಟ್ಟದ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸಲಿದೆ.
ಈ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕರು ಹಾಗೂ ಹಿರಿಯ ಮಕ್ಕಳ ಶಸ್ತ್ರಚಿಕಿತ್ಸಕರಾದ ಡಾ. ನರೇಂದ್ರ ಬಾಬು, ಬನಶಂಕರಿಯ ಕಿಡ್‌ಕೇರ್ ಕ್ಲಿನಿಕ್‌ನ ಹಿರಿಯ ಮಕ್ಕಳ ತಜ್ಞ ಡಾ. ಎ. ನಾಗೇಶ್, ಕಾಸಿ ಕ್ಲಿನಿಕ್‌ನ ಹಿರಿಯ ಮಕ್ಕಳ ತಜ್ಞ ಡಾ. ಎಸ್. ಜಿ. ಕಾಸಿ ಹಾಗೂ ಮಣಿಪಾಲ್ ಆಸ್ಪತ್ರೆ ಕನಕಪುರ ರಸ್ತೆಯ ಮಕ್ಕಳ ಚಿಕಿತ್ಸೆ ಮತ್ತು ಮಕ್ಕಳ ಉನ್ನತ ವಿಶೇಷ ಸೇವೆಗಳ ನಿರ್ದೇಶಕರಾದ ಡಾ. ಚೇತನ್ ಗಿಣಿಗೇರಿ ಉಪಸ್ಥಿತರಿದ್ದರು.
ಇದನ್ನೂ ಓದಿ:Vishwavani Health: ಮಳೆಗಾಲದಲ್ಲಿ ಮಧುಮೇಹಿಗಳು ವಹಿಸಲೇಬೇಕಾದ ಎಚ್ಚರಿಕೆ ಏನು?
ಈ ಕೇಂದ್ರದಲ್ಲಿ ಸಾಮಾನ್ಯ ಮಕ್ಕಳ ಚಿಕಿತ್ಸೆ, ನಿಯಮಿತ ಆರೋಗ್ಯ ತಪಾಸಣೆ, ಲಸಿಕೆ, ಬೆಳವಣಿಗೆಯ ಮೇಲ್ವಿಚಾರಣೆ, ಪೌಷ್ಟಿಕಾಂಶ ಸಲಹೆ ಹಾಗೂ 24x7 ಮಕ್ಕಳ ತುರ್ತು ಚಿಕಿತ್ಸಾ ಸೇವೆ ಲಭ್ಯವಿದೆ.
ಜೊತೆಗೆ ಮಕ್ಕಳ ಹೃದ್ರೋಗ, ಶ್ವಾಸಕೋಶ, ಅಂತಃಸ್ರಾವಶಾಸ್ತ್ರ, ಜೀರ್ಣಾಂಗ, ಮೂತ್ರಪಿಂಡ, ನರವಿಜ್ಞಾನ, ರಕ್ತಶಾಸ್ತ್ರ-ಆಂಕೊಲಾಜಿ, ಮೂಳೆಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ, ಇಎನ್‌ಟಿ, ವೈದ್ಯಕೀಯ ತಳಿಶಾಸ್ತ್ರ ಸೇರಿದಂತೆ ಹಲವು ವಿಶೇಷ ವಿಭಾಗಗಳ ತಜ್ಞರು ಒಂದೇ ಸ್ಥಳದಲ್ಲಿ ಸೇವೆ ನೀಡಲಿದ್ದಾರೆ.
ಆಸ್ಪತ್ರೆಯ ಸುಧಾರಿತ ಲೆವೆಲ್ 3B ಎನ್‌ಐಸಿಯು (NICU) ಹಾಗೂ ಪಿಐಸಿಯು (PICU) ಘಟಕಗಳು ಅಕಾಲಿಕ ಜನನ, ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಹೆಚ್ಚಿನ ಅಪಾಯದಲ್ಲಿರುವ ಶಿಶುಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಸಜ್ಜಾಗಿವೆ. ಅಲ್ಲದೆ, ಎಡಿಎಚ್‌ಡಿ (ADHD), ಆಟಿಸಂ, ಕಲಿಕೆಯ ತೊಂದರೆ ಹಾಗೂ ಆತಂಕ ಎದುರಿಸುತ್ತಿರುವ ಮಕ್ಕಳಿಗೆ ಚೈಲ್ಡ್ ಲೈಫ್ ಸೇವೆಗಳು ಮತ್ತು ಪೋಷಕರಿಗೆ ಸಮಾಲೋಚನೆ ಸಹ ಲಭ್ಯವಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಚೇತನ್ ಗಿಣಿಗೇರಿ , "ಪ್ರತಿಯೊಂದು ಮಗುವಿಗೂ ಮನೆಯ ಸಮೀಪದಲ್ಲೇ ತಜ್ಞರ ಆರೋಗ್ಯ ಸೇವೆ ದೊರಕಬೇಕು ಎಂಬುದು ನಮ್ಮ ಉದ್ದೇಶ. ಈ ಹೊಸ ಕೇಂದ್ರದ ಮೂಲಕ ನವಜಾತ ಶಿಶುವಿನಿಂದ ಹದಿಹರೆಯದವರವರೆಗೆ ಸಮಗ್ರ ಮತ್ತು ಅತ್ಯಾಧುನಿಕ ಚಿಕಿತ್ಸೆಯನ್ನು ಒಂದೇ ಸೂರಿನಡಿ ನೀಡುತ್ತಿದ್ದೇವೆ. ಇದರಿಂದ ಕುಟುಂಬಗಳ ಅನಗತ್ಯ ಪ್ರಯಾಣ, ವಿಳಂಬ ಮತ್ತು ವಿವಿಧ ಆಸ್ಪತ್ರೆಗಳಿಗೆ ಅಲೆದಾಡುವ ತೊಂದರೆ ಕಡಿಮೆಯಾಗಲಿದೆ" ಎಂದರು.
ಈ ಹೊಸ ಮಕ್ಕಳ ಚಿಕಿತ್ಸಾ ಕೇಂದ್ರವು ಕನಕಪುರ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಟುಂಬಗಳಿಗೆ ಸಮಗ್ರ, ತಜ್ಞರ ನೇತೃತ್ವದ ಹಾಗೂ ಸುಲಭವಾಗಿ ಲಭ್ಯವಾಗುವ ಮಕ್ಕಳ ಆರೋಗ್ಯ ಸೇವೆಯ ಹೊಸ ಭರವಸೆಯಾಗಿದೆ.