ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಹಾರಕ್ಕೆ ಕೃತಕ ಬಣ್ಣ ಬಳಸುತ್ತೀರಾ? ಈ ಬಗ್ಗೆ ಗೊತ್ತಿರಲಿ!

Health Tips: ಬೇಕರಿಗಳಿಗೆ ಹೋದರೆ, ನೋಡುವುದಕ್ಕೆ ಆಕರ್ಷಕವಾದ, ವರ್ಣಮಯವಾದ ತಿನಿಸುಗಳು ನಮ್ಮ ಗಮನ ಸೆಳೆಯುತ್ತವೆ. ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುವಂತೆ ಮಾಡುವ ಉದ್ದೇಶ ದಿಂದ ಬೇಕ್‌ ಮಾಡಿದ ತಿನಿಸುಗಳನ್ನು ರಂಗುರಂಗಾಗಿಯೇ ಇರಿಸುತ್ತಾರೆ. ಹೆಚ್ಚಿನ ಬಾರಿ ಈ ಎಲ್ಲಾ ತಿಂಡಿಗಳಲ್ಲೂ ಹಲವು ರೀತಿಯ ಬಣ್ಣಗಳನ್ನು (ಫುಡ್‌ ಕಲರ್‌) ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಉಪಯೋಗಿಸುವ ಬಣ್ಣಗಳು ಅರಿಶಿನ, ಕೇಸರಿಯಂಥ ನೈಸರ್ಗಿಕ ಮೂಲದ್ದೂ ಇರಬಹುದು ಅಥವಾ ಕೃತಕ ಬಣ್ಣಗಳೂ ಇರಬಹುದು. ಕೆಲವು ಬಣ್ಣಗಳಂತೂ ಹೊಟ್ಟೆಯನ್ನೆಲ್ಲಾ ಹಾಳು ಮಾಡಿ, ಆರೋಗ್ಯವನ್ನು ಏರುಪೇರು ಮಾಡಿಬಿಡುತ್ತದೆ.

ಸಂಗ್ರಹ ಚಿತ್ರ

ನವದೆಹಲಿ,ಜೂ.18: ಯಾವುದೇ ಸಂಭ್ರಮಕ್ಕೆಂದು ಕೇಕ್‌, ಪೇಸ್ಟ್ರಿ ತರುವುದಕ್ಕೆ ಬೇಕರಿಗಳಿಗೆ ಹೋದರೆ, ನೋಡುವುದಕ್ಕೆ ಆಕರ್ಷಕವಾದ, ವರ್ಣಮಯವಾದ ತಿನಿಸುಗಳು ನಮ್ಮ ಗಮನ ಸೆಳೆಯುತ್ತವೆ. ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುವಂತೆ ಮಾಡುವ ಉದ್ದೇಶದಿಂದ ಬೇಕ್‌ ಮಾಡಿದ ತಿನಿಸುಗಳನ್ನು (Artificial Coloring) ರಂಗುರಂಗಾಗಿಯೇ ಇರಿಸುತ್ತಾರೆ. ಹೆಚ್ಚಿನ ಬಾರಿ ಈ ಎಲ್ಲಾ ತಿಂಡಿಗಳಲ್ಲೂ ಹಲವು ರೀತಿಯ ಬಣ್ಣಗಳನ್ನು (ಫುಡ್‌ ಕಲರ್‌) ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಉಪ ಯೋಗಿಸುವ ಬಣ್ಣಗಳು ಅರಿಶಿನ, ಕೇಸರಿಯಂಥ ನೈಸರ್ಗಿಕ ಮೂಲದ್ದೂ ಇರಬಹುದು ಅಥವಾ ಕೃತಕ ಬಣ್ಣಗಳೂ ಇರಬಹುದು. ಬಣ್ಣ ಮತ್ತು ರುಚಿಯ ನಡುವೆ ಹೇಳುವಂಥ ನಂಟಿಲ್ಲದಿದ್ದರೂ, ತಿನ್ನುವವರು ಇವುಗಳ ನಡುವೆ ಸಂಬಂಧ ಕಲ್ಪಿಸುವುದು ಸಹಜ. ಉದಾ, ಕಿತ್ತಳೆ ಬಣ್ಣದಲ್ಲಿರುವ ಪೇಯವು ಆರೆಂಜ್‌ ಫ್ಲೇವರ್‌ ಎಂಬ ಭಾವ ಮನದಲ್ಲಿ ಬರುವುದಿಲ್ಲವೇ?

ಹಾಗೆಂದು ಆಹಾರ ತಯಾರಿಕೆಯಲ್ಲಿ ಬಳಸುವ ಬಣ್ಣಗಳೆಲ್ಲಾ ಆರೋಗ್ಯಕ್ಕೆ ಹಿತ ಎಂದು ಹೇಳಲಾಗದು. ಅದರಲ್ಲೂ ನೈಸರ್ಗಿಕವಲ್ಲದೆ, ಕೃತಕ ಬಣ್ಣಗಳನ್ನು ಉಪಯೋಗಿಸಿದಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೆಲವು ಕೃತಕ ಬಣ್ಣಗಳಂತೂ ಹೊಟ್ಟೆಯನ್ನೆಲ್ಲಾ ಹಾಳು ಮಾಡಿ, ಆರೋಗ್ಯವನ್ನು ಏರುಪೇರು ಮಾಡಿಬಿಡುತ್ತದೆ. ಕೆಲವು ಬಣ್ಣಗಳು ತಿನಿಸುಗಳಲ್ಲ ಮಾತ್ರವೇ ಅಲ್ಲ, ನಾವು ನಿತ್ಯ ಬಳಸುವ ಇನ್ನಿತರ ವಸ್ತುಗಳಲ್ಲೂ ಕಾಣಸಿಗುತ್ತವೆ.

ಯಾವೆಲ್ಲಾ ಆಹಾರಗಳಲ್ಲಿ ಕೃತಕ ಬಣ್ಣಗಳಿವೆ?: ಐಸ್‌ಕ್ರೀಮ್‌ಗಳು, ಸಂಸ್ಕರಿತ ಬ್ರೆಡ್‌, ಮೈಕ್ರೋ ವೇವ್‌ ಪಾಪ್‌ಕಾರ್ನ್‌, ಉಪ್ಪಿನಕಾಯಿ, ಸಾಲಡ್‌ ಡ್ರೆಸಿಂಗ್‌, ಫ್ಲೇವರ್ಡ್‌ ಯೋಗರ್ಟ್‌, ಕ್ಯಾಂಡಿ, ಚ್ಯೂಯಿಂಗ್‌ ಗಮ್‌, ಎನರ್ಜಿ ಬಾರ್‌, ಪಾಪ್ಸಿಕಲ್‌, ಜ್ಯೂಸ್‌ನಂಥ ಪಾನೀಯಗಳು, ಬೇಕ್‌ ಮಾಡಿದ ಕೇಕ್‌, ಪೇಸ್ಟ್ರಿಯಂಥ ತಿನಿಸುಗಳು- ಈ ಪಟ್ಟಿ ಬಹಳ ದೊಡ್ಡದು! ಪ್ಯಾಕ್‌ ಮಾಡಿದ ನಾನಾ ರೀತಿಯ ಚಿಪ್ಸ್‌ನಂಥ ಕುರುಕಲುಗಳಲ್ಲೂ ಕೃತಕ ಬಣ್ಣಗಳನ್ನು ಕಾಣಬಹುದು.

ಬಣ್ಣಗಳಾವುವು?: ನೀಲಿ ಡೈ: ಇದನ್ನು ಬ್ರಿಲಿಯಂಟ್‌ ಬ್ಲೂ ಎಂದೂ ಕರೆಯಲಾಗುತ್ತದೆ. ಇವುಗಳನ್ನು ಕೇಕ್‌, ಕಪ್‌ಕೇಕ್‌, ಐಸ್‌ಕ್ರೀಮ್‌, ಪಾಪ್ಸಿಕಲ್‌, ಐಸಿಂಗ್‌ ಸಕ್ಕರೆಗಳು, ಸೀರಿಯಲ್‌ಗಳು ಅಥವಾ ನಾನಾ ರೀತಿಯ ಪೇಯಗಳಲ್ಲಿ ಬಳಕೆಯಾಗುತ್ತದೆ. ಢಾಳಾದ ಬಣ್ಣವನ್ನು ನೀಡಿ, ಆಹಾರವನ್ನು ಕಣ್ಮನ ಸೆಳೆಯುವಂತೆ ಮಾಡುವ ಉದ್ದೇಶ ತಯಾರಕರದ್ದು.

ಇಂಡಿಗೊ ಕಾರ್ಮೈನ್:‌ ಇದೊಂದು ಭಿನ್ನ ರೀತಿಯ ನೀಲಿ ಬಣ್ಣ. ಆಹಾರ ತಯಾರಿಕೆಯಲ್ಲಿ ಬಳಕೆಯಾಗುವ ಬಣ್ಣಗಳ ಪೈಕಿ ಪೆಟ್ರೋಲಿಯಂ ಇಲ್ಲದ ಏಕಮಾತ್ರ ಬಣ್ಣವಿದು. ಸ್ಪೋರ್ಟ್‌ ಅಥವಾ ಶಕ್ತಿ ನೀಡುವ ಪೇಯಗಳು, ಕೆಲವು ಔಷಧಿಗಳು, ಸಾಕು ಪ್ರಾಣಿಗಳ ಆಹಾರಗಳಲ್ಲಿ ಇವು ಬಳಕೆಯಾಗುತ್ತಿವೆ.

ಸಿಟ್ರಸ್‌ ರೆಡ್:‌ ಇದರ ಬಳಕೆ ಸ್ವಲ್ಪ ಕಡಿಮೆ. ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗಗಳಲ್ಲಿ ಈ ಬಣ್ಣಗಳು ಕೆಲವು ರೀತಿಯ ಕ್ಯಾನ್ಸರ್‌ಗೆ ಕಾರಣವಾಗಿವೆ. ಹಾಗೆಂದು ಆಹಾರೋದ್ಯಮದಲ್ಲಿ ಇದರ ಬಳಕೆ ಸಂಪೂರ್ಣವಾಗೇನೂ ನಿಂತಿಲ್ಲ.

ಹಸಿರು ಡೈ: ಪಚ್ಚೆಯ ಬಣ್ಣದ ಈ ವಸ್ತುವನ್ನು ಬರೀ ಆಹಾರ ವಸ್ತುಗಳಲ್ಲಿ ಮಾತ್ರವಲ್ಲ, ಹಲವು ರೀತಿಯ ಸೌಂದರ್ಯವರ್ಧಕಗಳು, ಕ್ರೀಮ್‌ಗಳು, ಲಿಪ್‌ಸ್ಟಿಕ್‌ನಂಥವು, ಔಷಧಿಗಳಲ್ಲಿ ಬಳಸಲಾಗುತ್ತದೆ. ಸಂಸ್ಕೃರಿತ ತರಕಾರಿಗಳು, ಬಟಾಣಿ, ಮೀನು ಮುಂತಾದವುಗಳ ವರ್ಣವರ್ಧನೆಗೆ ಇವು ಹೆಚ್ಚು ಬಳಕೆಯಾಗುತ್ತವೆ.

Health Tips: ದೇಹದಲ್ಲಿ ಉತ್ತಮ ಕೊಬ್ಬು ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಕೆಂಪು ಡೈ: ಇವುಗಳು ಹೆಚ್ಚಾಗಿ ಸಂಸ್ಕರಿತ ಹಣ್ಣುಗಳು, ಕೆಲವು ಔಷಧಗಳು, ಸಾಸೇಜ್‌ಗಳಲ್ಲಿ ಇರುತ್ತವೆ. ಕಿತ್ತಳೆ ಬಣ್ಣದಂತೆ ಕಾಣುವ ಅಲ್ಯೂರಾ ರೆಡ್‌ ಎನ್ನುವ ಬಣ್ಣವನ್ನಂತೂ ಅಲೂಗಡ್ಡೆ ಚಿಪ್ಸ್‌, ಕ್ಯಾಂಡಿಗಳು, ಬಾರ್ಬೆಕ್ಯೂ ಸಾಸ್‌, ಪಾನೀಯಗಳು, ಫ್ರೂಟ್‌ ಬಾರ್‌- ಇಂಥ ಬಹಳಷ್ಟು ಆಹಾರಗಳಲ್ಲಿ ಬಳಸಲಾಗುತ್ತದೆ. ಈ ಬಣ್ಣದಲ್ಲಿರುವ ರಾಸಾಯನಿಕದಿಂದ ಹೊಟ್ಟೆ ಹಾಳು ಮಾಡುವ ಇರಿಟಬಲ್‌ ಬವಲ್‌ ಸಿಂಡ್ರೋಮ್‌ ಬರುವುದಾಗಿ ಸಂಶೋಧನೆಗಳು ಹೇಳುತ್ತವೆ.

ಇದರಿಂದ ಆರೋಗ್ಯಕ್ಕೇನಾಗುತ್ತದೆ?: ಮೇಲೆ ಹೇಳಿರುವುದು ಕೆಲವು ಬಣ್ಣಗಳಷ್ಟೇ. ಇನ್ನೂ ಹಳದಿ ಡೈ ಅಥವಾ ಟಾರ್ಟ್ರಜೈನ್‌ನಂಥ ಹಲವು ರೀತಿಯ ಬಣ್ಣಗಳು ಬಳಕೆಯಾಗುತ್ತವೆ. ಚಿಕನ್‌ ಟಿಕ್ಕಾ ಮತ್ತು ಪನೀರ್‌ ಬಟರ್‌ ಮಸಾಲಾಗಳಲ್ಲಿ ಬಳಕೆಯಾಗುವುದೂ ಇಂಥದ್ದೇ ಬಣ್ಣಗಳು. ಈ ಪೈಕಿ ಹಲವು ಬಣ್ಣಗಳು ಹೊಟ್ಟೆಯಲ್ಲಿ ಕೋಲೈಟಿಸ್‌ನಂಥ ತರಹೇವಾರಿ ತೊಂದರೆಗಳನ್ನು ಉಂಟುಮಾಡುವ ಸಾಮರ್ಥ್ಯ ಉಳ್ಳವು. ಹಲವಾರು ರೀತಿಯ ಅಲರ್ಜಿಗಳನ್ನು ಬಡಿದೆಬ್ಬಿಸಬಲ್ಲವು. ಮಕ್ಕಳಲ್ಲಿ ಗಮನದ ಕೊರತೆಯಿಂದ ಉಂಟಾಗುವ ವರ್ತನೆಯ ಏರುಪೇರುಗಳನ್ನು (attention deficit hyperactivity disorder) ತಂದಿಡಬಲ್ಲವು. ಈ ಬಣ್ಣಗಳನ್ನು ಅಪರೂಪಕ್ಕೆ ತಿಂದಾಗ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಆಗುವುದು ಅನುಮಾನ. ಆದರೆ ಇವುಗಳನ್ನು ಸತತವಾಗಿ ಅಥವಾ ಪದೇಪದೆ ತಿನ್ನುತ್ತಿದ್ದರೆ ಆರೋಗ್ಯದ ಮೇಲೆ ಗಂಭೀರ ಅಡ್ಡಪರಿಣಾಮಗಳು ಉಂಟಾಗು ವುದು ನಿಶ್ಚಿತ. ಹಾಗಾಗಿ ತಿನ್ನುವ ಅಹಾರದಲ್ಲಿ ಕೃತಕ ಬಣ್ಣಗಳು ಸೇರಿದ್ದರೆ, ಅಂಥವು ನಿಮಗೆ ಬೇಕೇ ಎನ್ನುವುದನ್ನು ನೀವೇ ತೀರ್ಮಾನಿಸಿ.