ನಡಿಗೆ ನಮಗ್ಯಾರಿಗೂ ಹೊಸದಲ್ಲ; ಆದರೆ ಹಿಮ್ಮುಖ ನಡಿಗೆ ಹೊಸದು. ಹಿಮ್ಮುಖ ಚಲನೆ (Benefits of Walking Backwards) ಎಂದರೆ ಪ್ರಗತಿ ಕಡಿಮೆ ಎಂದೇ ಭಾವಿಸುವ ನಮಗೆ ಹೀಗೆ ನಡೆಯುವುದು ಅಂಥ ಸುಖವಾದ ಭಾವನೆಯೇನ್ನೇನೂ ಕೊಡುವುದಿಲ್ಲ. ಆದರೆ ನಮ್ಮ ದೇಹಕ್ಕೆ ಇದರಿಂದ ಹಿತವಾಗುತ್ತಾರೆ ಎನ್ನುತ್ತಾರೆ ಇತ್ತೀಚಿನ ವ್ಯಾಯಾಮ ತಜ್ಞರು. ಹೀಗೆ ಬೆನ್ನಿನ ದಿಕ್ಕಿನಲ್ಲಿ (Reverse Walking) ಅಥವಾ ಹಿಂದೆ ಹಿಂದೆ ನಡೆಯುವುದರಿಂದ ನಮ್ಮ ದೇಹಕ್ಕೆ ಹಿತವಾಗುವುದು ಹೇಗೆ ಎನ್ನುವುದನ್ನು ತಿಳಿಯೋಣ.
ನಡಿಗೆಯನ್ನು ಅತ್ಯಂತ ಸುಲಭದ ವ್ಯಾಯಾಮ ಎಂದೇ ಕರೆಯಲಾಗಿದೆ. ಆದರೆ ನಡಿಗೆಯ ದಿಸೆಯೊಂದನ್ನು ಬದಲಿಸುವುದರಿಂದ ಇದನ್ನು ಸವಾಲೊಡ್ಡುವ ವ್ಯಾಯಾಮವಾಗಿ ಮಾಡುವುದಕ್ಕೆ ಸಾಧ್ಯವಿದೆ. ಹಿಮ್ಮುಖ ಚಲನೆಯನ್ನು ರೆಟ್ರೊ ವಾಕಿಂಗ್ ಎಂದೂ ಕರೆಯಲಾಗುತ್ತದೆ. ಉಳಿದೆಲ್ಲ ವ್ಯಾಯಾಮಗಳಿಗಿಂತ ಇದು ದೇಹವನ್ನು ಬೇರೆಯದೇ ರೀತಿಯಲ್ಲಿ ಸಕ್ರಿಯವಾಗಿ ಇರಿಸುತ್ತದೆ ಎನ್ನುವ ಕಾರಣದಿಂದ ಇಂದಿನ ಫಿಟ್ನೆಸ್ ಪ್ರಿಯರಲ್ಲಿ ಹಲವರು ಇದನ್ನು ನೆಚ್ಚಿಕೊಳ್ಳುತ್ತಾರೆ.
ಏನಿದರ ಮಹತ್ವ?
ಸಮತೋಲನ ಹೆಚ್ಚಳ: ಮುಖವನ್ನು ಮುಂದಿರಿಸಿಕೊಂಡು ಹಿಂದಕ್ಕೆ ನಡೆಯುವ ಕ್ರಿಯೆಯು, ಉಳಿದೆಲ್ಲ ವ್ಯಾಯಾಮಗಳಿಗಿಂತ ನಮ್ಮ ದೇಹದ ಹಿಂದು-ಮುಂದಿನ ಹೊಂದಾಣಿಕೆ ಮತ್ತು ಸಮತೋಲನವನ್ನು ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿದೆ. ಇದು ನಿತ್ಯದ ಅಭ್ಯಾಸ ಬಲದಿಂದ ಮಾಡುವ ಕೆಲಸ ಅಲ್ಲವಾದ್ದರಿಂದ, ಮಾಡುತ್ತಿರುವವರ ಜಾಗೃತಿಯೂ ಅಧಿಕವಾಗುತ್ತದೆ. ಈ ಎಲ್ಲವುಗಳಿಂದ ದೇಹದ ಮೇಲಿನ ಹಿಡಿತ ಹೆಚ್ಚುತ್ತದೆ.
ಹಿಂಭಾಗದ ಸ್ನಾಯುಗಳು: ಬೆನ್ಮುಖ ನಡಿಗೆಯಿಂದ ಕಾಲಿನ ಹಿಂಭಾಗದ ಸ್ನಾಯುಗಳು, ಅಂದರೆ ಮೀನಖಂಡ, ಮಂಡಿಯ ಹಿಂಭಾಗದ ಮಾಂಸಖಂಡಗಳು, ತೊಡೆಯ ಹಿಂಭಾಗದ ಸ್ನಾಯುಗಳು ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಮಾತ್ರವಲ್ಲ, ಕೆಳಬೆನ್ನಿನ ಕೆಲವು ಸ್ನಾಯುಗಳೂ ಇದರಲ್ಲಿ ಚುರುಕಾಗಬೇಕಾಗುತ್ತದೆ. ಹಾಗಾಗಿ ಅದದೇ ವ್ಯಾಯಾಮದಿಂದ ಬೋರಾಯಿತು ಎನ್ನುವವರಿಗೆ, ವ್ಯಾಯಾಮದಲ್ಲಿ ವಿವಿಧತೆ ಬೇಕು ಎನ್ನುವವರಿಗಾಗಿ ಸೂಕ್ತವಾಗಿದ್ದಿದು.
ಕ್ಯಾಲರಿ ಕರಗಿಸಲು: ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲರಿ ಕರಗಿಸುವುದಕ್ಕೆ ಸಾಧ್ಯವಿದೆ. ಆದರೆ ಫಿಟ್ನೆಸ್ ಉತ್ಸಾಹಿಗಳು ಇದನ್ನು ಅಂಕುಡೊಂಕಿಲ್ಲದ ಪಾರ್ಕ್ ಅಥವಾ ಯಾವುದಾದರೂ ಸುರಕ್ಷಿತ ಸ್ಥಳದಲ್ಲಿ ಅಭ್ಯಾಸ ಮಾಡಿ. ವಿರುದ್ಧ ದಿಕ್ಕಿನಲ್ಲಿ ನಡೆಯುವಾಗ ಶರೀರದ ಸಮತೋಲನ ಮತ್ತು ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಶಕ್ತಿ ಖರ್ಚಾಗುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದು ಉಪಯುಕ್ತ. ವೃದ್ಧರು ಸಹ ಇದನ್ನು ಅಡೆತಡೆಗಳು ಇಲ್ಲದಲ್ಲಿ, ಮನೆಯೊಳಗೇ ಸುರಕ್ಷಿತವಾಗಿ ಅಭ್ಯಾಸ ಮಾಡುವುದು ಉಪಯುಕ್ತ.
ಮಂಡಿಗೆ ಬಲ: ಮಂಡಿಯ ಸ್ನಾಯುಗಳ ಪುನರುಜ್ಜೀವನದಲ್ಲಿ ಇರುವವರಿಗೆ ಇದು ಸೂಕ್ತವಾದದ್ದು. ಆದರೆ ಇದನ್ನು ಅಳವಡಿಸಿಕೊಳ್ಳುವಾಗ ತಜ್ಞರ ಸಲಹೆ ಬೇಕಾಗುತ್ತದೆ. ಸಾಮಾನ್ಯವಾದ ಮುಮ್ಮುಖ ನಡಿಗೆಯಲ್ಲಿ ಮಂಡಿಯ ಮುಂಭಾಗದಲ್ಲಿ ಹೆಚ್ಚಿನ ಒತ್ತಡ ಬೀಳುವ ಸಂಭವ ಅಧಿಕ. ಆದರೆ ಹಿಂದೆ ನಡೆಯುವುದರಿಂದ ಮಂಡಿಯ ಮುಂಭಾಗದ ಸ್ನಾಯುಗಳ ಬಲವೃದ್ಧಿಸಲು ಸಾಧ್ಯವಾಗುತ್ತದೆ. ಆದರೆ ಇದರ ಪರಿಣಾಮ ಸಣ್ಣದು ಮತ್ತು ನಿಧಾನವಾದದ್ದು.
ಮೆದುಳಿಗೂ ವ್ಯಾಯಾಮ: ಯಾಂತ್ರಿಕವಾಗಿ ಉಮ್ಮುಖವಾಗಿ ಚಲಿಸುವಂತೆ ಈ ನಡಿಗೆಯನ್ನು ಮಾಡಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಎಚ್ಚರ ಬೇಕು; ಹೆಜ್ಜೆಯನ್ನು ಎಲ್ಲಿ ಇಡುತ್ತಿದ್ದೇವೆ ಎನ್ನುವ ಜಾಗೃತಿ ಬೇಕು. ಕಣ್ಣಿಗೆ ಕಾಣುವ ಸ್ಥಳದಲ್ಲಿ ನಡೆಯುವಾಗಲೇ ಎಡವುವ ನಾವು, ಬೆನ್ಮುಖವಾಗಿ ನಡೆಯಬೇಕೆಂದರೆ ಮೆದುಳಿನ ನಿರ್ಣಯಿಸುವ, ಅಳೆಯುವ ಸಾಮರ್ಥ್ಯ, ಏಕಾಗ್ರತೆ, ಪ್ರತ್ತ್ಯುತ್ಪನ್ನ ಚಲನೆಗಳೆಲ್ಲವೂ ಚುರುಕಾಗಬೇಕು. ಹಾಗಾಗಿ ಇದನ್ನು ದೇಹ-ಮನಸ್ಸುಗಳ ಕಸರತ್ತು ಎನ್ನಬಹುದು.
ಸುರಕ್ಷತೆ: ಒಂದೇ ದಿನ ಕಿ.ಮೀ. ಗಟ್ಟಲೆ ನಡೆಯುವ ಉದ್ದೇಶ ಇರಿಸಿಕೊಳ್ಳಬೇಡಿ, ನಿಧಾನವಾಗಿ ಆರಂಭಿಸಿ. ಅಂಕುಡೊಂಕಿಲ್ಲದ ನೆಲ್ದಲ್ಲಿ ಮಾತ್ರ ಹೀಗೆ ನಡೆಯುವುದು ಸುರಕ್ಷಿತ. ಹಿಮ್ಮುಖ ನಡಿಗೆಯ ವೇಗಕ್ಕಿಂತ, ಸಣ್ಣದಾದ ಮತ್ತು ಸ್ಥಿರವಾದ ಹೆಜ್ಜೆಗಳನ್ನು ಇಡುವುದರತ್ತ ಗಮನ ನೀಡಿ. ಹೆಚ್ಚು ಜನ ಇರುವ ಸ್ಥಳಕ್ಕಿಂತ ಕಡಿಮೆ ಜನವಿರುವ ಜಾಗವನ್ನು ಆರಿಸಿಕೊಳ್ಳಿ. ಅತಿ ನಿಧಾನಗತಿಯಲ್ಲಿ ಟ್ರೆಡ್ಮಿಲ್ ಮೇಲೆ ಮಾಡುವವರೂ ಇದ್ದಾರೆ. ಇದಕ್ಕೆ ಜಿಮ್ ತಜ್ಞರ ನೆರವು ತೆಗೆದುಕೊಳ್ಳಿ.