ಬೆಂಗಳೂರು: ಬೇಸಗೆಯಲ್ಲಿ ಹೆಚ್ಚಾಗಿ ಸಿಗುವ ಹಣ್ಣುಗಳಲ್ಲಿ ಹಲಸು (Jackfruit Seeds) ಪ್ರಮುಖವಾದುದು. ಆದರೆ ಈ ಹಣ್ಣನ್ನು ತಿಂದ ನಂತರ ಅದರ ಬೀಜಗಳನ್ನು ಎಸೆದು ಬೀಡುತ್ತೇವೆ. ಇದರಲ್ಲಿ ಹಲವು ರೀತಿಯ ಆರೋಗ್ಯ ಲಾಭಗಳು ಇವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕೆಲವೊಂದು ಮನೆಗಳಲ್ಲಿ ಈ ಬೀಜವನ್ನು ಸಂಬಾರಿನ ಜತೆ ಬಳಕೆ ಮಾಡುತ್ತಾರೆ. ಅಲ್ಲದೆ ವಿವಿಧ ಖಾದ್ಯವಾಗಿ ತಯಾರಿಸಿ ಸೇವನೆ ಮಾಡುವವರು ಬಹಳಷ್ಟು ಮಂದಿ ಇದ್ದಾರೆ. ಹಲಸಿನ ಬೀಜ ಪ್ರೋಟೀನ್, ಫೈಬರ್, ಜೀವಸತ್ವ ಹೊಂದಿದ್ದು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಪ್ರಮುಖ ಖನಿಜಗಳಿಂದ ಸಮೃದ್ಧವಾಗಿದೆ.
ಜೀರ್ಣಕ್ರಿಯೆಗೆ ರಾಮಬಾಣ
ಹಲಸಿನ ಬೀಜಗಳಲ್ಲಿ ಇರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸಿ ಫೈಬರ್ ಪ್ರಿಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ನಿಯಮಿತ ಸೇವನೆಯು ಜೀರ್ಣಕಾರಿ ಅಸ್ವಸ್ಥತೆಯನ್ನು ಕಡಿಮೆ ಮಾಡಿ ಮಲಬದ್ಧತೆಯನ್ನು ತಡೆಯುತ್ತದೆ.
ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಒಳಿತೇ? ತಜ್ಞರು ಹೇಳೋದೇನು?
ಹೃದಯದ ಆರೋಗ್ಯ
ಹಲಸಿನ ಬೀಜಗಳಲ್ಲಿ ಕಂಡುಬರುವ ಪೊಟ್ಯಾಸಿಯಮ್ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಲು ಸಹಾಯ ಮಾಡುತ್ತದೆ. ಫೈಬರ್ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡಿ, ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಈ ಬೀಜವನ್ನು ಬಿಸಾಡುವ ಬದಲು ನಿಮ್ಮ ಆಹಾರದಲ್ಲಿ ಉಪಯೋಗಿಸಿಕೊಳ್ಳಿ.
ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ
ತೂಕ ಇಳಿಸಬೇಕು ಎಂದು ಇದ್ದವರಿಗೆ ಹಲಸಿನ ಹಣ್ಣಿನ ಬೀಜ ಬಹಳಷ್ಟು ಉಪಯುಕ್ತ. ಇದು ತಿಂದರೆ ಹೊಟ್ಟೆ ತುಂಬಿದ ಅನುಭವ ನೀಡಲಿದ್ದು ಅನಗತ್ಯ ತಿಂಡಿ ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಬಹುದು. ಸಮತೋಲಿತ ಆಹಾರದ ಭಾಗವಾಗಿ ತೂಕವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಪ್ರಯೋಜನಕಾರಿ.
ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ
ಹಲಸಿನ ಬೀಜ ಕಬ್ಬಿಣ ಮತ್ತು ಸತು ಸೇರಿದಂತೆ ಜೀವಸ ತ್ವಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅದರಲ್ಲೂ ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹವು ಸೋಂಕುಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹೇಗೆ ಸೇವಿಸಬೇಕು
- ಹಲಸಿನ ಬೀಜಗಳನ್ನು ಎಂದಿಗೂ ಹಸಿಯಾಗಿ ತಿನ್ನಬಾರದು.
- ಆರೋಗ್ಯಪೂರ್ಣ ತಿಂಡಿಯಾಗಿ ಅವುಗಳನ್ನು ಬೇಯಿಸಿ ಸೇವಿಸಿ.
- ಬೇಕಿಂಗ್ ಅಥವಾ ಅಡುಗೆಗಾಗಿ ಅವುಗಳನ್ನು ಹಿಟ್ಟಿನಲ್ಲಿ ಬೆರೆಸಿ.
- ಕರಿ, ಸಂಬಾರ್, ಸೂಪ್‌ಗೆ ಸೇರಿಸಿ ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಿ.