ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಹಬ್ಬದ ಸಿಹಿ ಇಷ್ಟವೇ? ಹಲ್ಲುಗಳಿಗೆ ಕಷ್ಟವಾಗಬಹುದು!

ಇನ್ನು ಹಬ್ಬಗಳು ಸಾಲುಗಟ್ಟಿ ಬರುತ್ತವೆ. ಸಂಭ್ರಮವೇನೋ ಸರಿ, ಆದರೆ ಇಂಥ ಹೊತ್ತಿನಲ್ಲಿ ಬರೀ ದೇವರ ಪೂಜೆ ಮಾತ್ರವಲ್ಲ, ಹೊಟ್ಟೆಯ ಪೂಜೆಯೂ ಸಾಕಷ್ಟು ಆಗುತ್ತದಲ್ಲವೇ?. ಹೀಗೆ ಹಬ್ಬಗಳ ನೆವದಲ್ಲಿ ಅತಿಯಾಗಿ ಸಿಹಿ ತಿನ್ನುವುದರಿಂದ ಬಾಯಿ, ಒಸಡು ಮತ್ತು ಹಲ್ಲುಗಳ ಆರೋಗ್ಯದ ಮೇಲೆ ಆಗುವ ಪರಿಣಾಮಗಳೇನು? ಇಲ್ಲಿದೆ ವಿವರ

Teeth Health

ಬೆಂಗಳೂರು: ಶ್ರಾವಣ, ಭಾದ್ರಪದ ಮಾಸಗಳೆಂದರೆ ಹಬ್ಬಗಳ ಸುಗ್ಗಿ. ಮಾಮೂಲಿ ಹುಣ್ಣಿಮೆ-ಅಮಾವಾಸ್ಯೆಗಳನ್ನೂ ಬಿಡದಂತೆ ಈ ತಿಂಗಳಲ್ಲಿ ಹಬ್ಬಗಳು ಸಾಲುಗಟ್ಟಿ ಬರುತ್ತವೆ. ಹಬ್ಬದ ಸಂಭ್ರಮವೇನೋ ಸರಿ. ಆದರೆ ಇಂಥ ಹೊತ್ತಿನಲ್ಲಿ ಬರೀ ದೇವರ ಪೂಜೆ ಮಾತ್ರವಲ್ಲ, ಹೊಟ್ಟೆಯ ಪೂಜೆಯೂ ಸಾಕಷ್ಟು ಆಗುತ್ತದಲ್ಲವೇ? ಹೀಗೆ ಹಬ್ಬಗಳ ನೆವದಲ್ಲಿ ಅತಿಯಾಗಿ ಸಿಹಿ ತಿನ್ನುವುದರಿಂದ ಬಾಯಿ, ಒಸಡು ಮತ್ತು ಹಲ್ಲುಗಳ (Teeth) ಆರೋಗ್ಯದ ಮೇಲೆ ಆಗುವ ಪರಿಣಾಮಗಳೇನು? ಯಾವ ರೀತಿ ನಾವು ಪಾರಾಗಬಹುದು? ಇಲ್ಲಿದೆ ವಿವರ.

ಪ್ರಸಾದಕ್ಕೆಂದು, ಪನಿವಾರಕ್ಕೆಂದು, ರುಚಿ ನೋಡಲೆಂದು, ತನಗಿಷ್ಟವೆಂಬ ಕಾರಣಕ್ಕೆ, ಇನ್ನೊಂದಿಷ್ಟು ತಿನ್ನೋಣವೆಂದು…ಅಂತೂ ಒಂದಿಲ್ಲೊಂದು ಕಾರಣದಿಂದ ಆಗೀಗ ಮೆಲ್ಲುವ ಸಾಧ್ಯತೆಗಳು ಹಬ್ಬದ ದಿನಗಳಲ್ಲಿ ಸ್ವಲ್ಪ ಹೆಚ್ಚು. ಹಾಗೆ ತಿಂದಾದ ಮೇಲೆ ನಿಷ್ಠೆಯಿಂದ ಬಾಯಿ ತೊಳೆಯುವವರು ಬೆರಳೆಣಿಕೆಯಷ್ಟು ಮಂದಿ. ಸಮಸ್ಯೆ ಪ್ರಾರಂಭವಾಗುವುದು ಇಲ್ಲಿಯೇ. ಕಾರಣ, ಸಿಹಿ ತಿಂಡಿಗಳು ಬ್ಯಾಕ್ಟೀರಿಯಾಗಳನ್ನು ಇನ್ನಿಲ್ಲದಂತೆ ಆಕರ್ಷಿಸುತ್ತವೆ. ಕೆಲವೊಮ್ಮೆ ಅತಿಯಾದ ಅಂಟು ತಿಂಡಿಗಳು ಹಲ್ಲಿನ ಮೇಲೆ ದೀರ್ಘಕಾಲ ಕೂತಿದ್ದರೆ, ದಂತದ ಎನಾಮಲ್‌ ಕವಚ ಗೋವಿಂದ! ಹಾಗಾದರೆ ಏನು ಮಾಡಬೇಕು?



ಎನಾಮಲ್‌ ಕವಚ ರಕ್ಷಿಸಿಕೊಳ್ಳಿ: ಸಿಹಿ ತಿನಿಸುಗಳು ಹಲ್ಲಿಗೆ ಅಂಟಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳನ್ನು ಕೈಬೀಸಿ ಕರೆಯುತ್ತವೆ. ಇವು ಬಿಡುಗಡೆ ಮಾಡುವ ಆಮ್ಲಗಳಿಂದ ದಂತದ ರಕ್ಷಣಾ ಕವಚವಾದ ಎನಾಮಲ್‌ ಹಾಳಾಗುತ್ತದೆ. ಅದರಲ್ಲೂ ಜಿಲೇಬಿಯಂಥ ಅಂಟಾದ ಸಿಹಿ ತಿನಿಸುಗಳಿಂದ ಹಲ್ಲುಗಳು ಇನ್ನಷ್ಟು ತೊಂದರೆಗೆ ಈಡಾಗುತ್ತವೆ. ಹಾಗಾಗಿ ಯಾವುದೇ ಸಿಹಿ ತಿನಿಸನ್ನು ತಿಂದರೂ ಬಾಯಿ ತೊಳೆಯುವುದನ್ನು ಮುಂದೂಡಬೇಡಿ.

ಇದನ್ನು ಓದಿ:Health Tips: ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

ಬ್ರಷ್‌ ಮಾಡುವುದು ಕಡ್ಡಾಯ: ಬೆಳಗಿನ ಹೊತ್ತು ಎದ್ದು ಹೇಗಾದರೂ ಬ್ರಷ್‌ ಮಾಡಿರುತ್ತೇವೆ. ಆದರೆ ರಾತ್ರಿ ಮಲಗುವಾಗ ಹಲ್ಲುಜ್ಜುವುದೆಂದರೆ ಬಹಳ ಮಂದಿಗೆ ಗುಡ್ಡ ಕಡಿದಂತೆ. ಅದರಲ್ಲೂ ಹಬ್ಬ-ಹುಣ್ಣಿಮೆಗಳಂದು ಅಷ್ಟೊಂದು ಸಿಹಿ ತಿಂದಾಗ ರಾತ್ರಿ ಹಲ್ಲುಜ್ಜದಿದ್ದರೆ ಹೇಗೆ? ರಾಖಿ ಹಬ್ಬಕ್ಕೆಂದು ಅಣ್ತಮ್ಮಂದಿರು ಬಂದಿರುವಾಗ, ತಡರಾತ್ರಿ- ನಡುರಾತ್ರಿಯವರೆಗೆ ಹರಟೆ ಯಲ್ಲಿರುವಾಗ ಹಲ್ಲುಜ್ಜುವುದೇ… ಎಂದುಕೊಳ್ಳಬೇಡಿ. ನಮ್ಮ ರಜೆಯಂದು ಹಲ್ಲುಗಳಿಗೆ ಹೆಚ್ಚುವರಿ ಕೆಲಸವಾದ್ದರಿಂದ ಇದಿಷ್ಟು ಕಾಳಜಿಯನ್ನು ತೆಗೆದುಕೊಳ್ಳಲೇಬೇಕು.

ನೀರು ಕುಡಿಯಿರಿ: ದೀರ್ಘ ಕಾಲದವರೆಗೆ ಪಾರ್ಟಿಯ ಮೋಜಿನಲ್ಲಿದ್ದೀರಿ ಎಂದಾದರೆ, ಅತಿಯಾಗಿ ಸಿಹಿ, ಖಾರ, ಕರಿದ ತಿಂಡಿಗಳನ್ನು ತಿಂದರೆ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯ ವಾಗುತ್ತದೆ. ಹಾಗೆ ನೀರು ಕುಡಿಯದಿದ್ದರೆ ಬಾಯಲ್ಲಿ ಜೊಲ್ಲುರಸ ಬರುವ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ಒಸಡು ಮತ್ತು ಹಲ್ಲುಗಳ ಆರೋಗ್ಯ ಕುಸಿಯುತ್ತದೆ. ಹಾಗಾಗಿ ಬಾಯಾರಿಕೆ ಆದಾಗ ಮಾತ್ರವೇ ನೀರು ಕುಡಿಯುವುದಲ್ಲ, ದಿನವಿಡೀ ಸ್ವಲ್ಪವಾಗಿ ನೀರು ಗುಟುಕರಿಸುತ್ತಿರಿ.

ಮಕ್ಕಳಿಗೂ ಕಲಿಸಿ: ದಂತಾರೋಗ್ಯದ ವಿಷಯದಲ್ಲಿ ದೊಡ್ಡವರೇ ಸೋಮಾರಿತನವನ್ನು ತೋರುತ್ತಿದ್ದಾರೆ ಎಂದಾದರೆ ಮಕ್ಕಳಿಗೆ ಕಲಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹಲ್ಲುಜ್ಜುವುದು, ಬಾಯಿ ತೊಳೆಯುವುದು, ನೀರು ಕುಡಿಯುವುದು ಮುಂತಾದ ಶಿಸ್ತುಗಳನ್ನು ಮೊದಲಿಗೆ ಮನೆಯ ಹಿರಿಯರು ರೂಢಿಸಿಕೊಂಡರೆ, ಮಕ್ಕಳಿಗೆ ಕಲಿಸುವುದು ಕಷ್ಟವಾಗುವುದಿಲ್ಲ. ಅದಿಲ್ಲದಿದ್ದರೆ ಹಬ್ಬಗಳು ಮುಗಿಯುವಷ್ಟರಲ್ಲಿ ದಂತಕುಳಿಗಳು ಬಂದು ಕಣ್ಣೀರು ತರಿಸಬಹುದು.

ವೈದ್ಯರನ್ನು ಕಾಣಿ: ದಂತವೈದ್ಯರಲ್ಲಿ ನಿಮ್ಮ ವಾರ್ಷಿಕ ಚೆಕಪ್‌ ಬಾಕಿ ಇದ್ದರೆ ಅದನ್ನು ಉಳಿಸಿ ಕೊಳ್ಳಬೇಡಿ, ಪೂರ್ಣಗೊಳಿಸಿ. ಅದನ್ನು ಪೂರ್ಣಗೊಳಿಸಲು ಹಬ್ಬಗಳ ನಂತರದ ದಿನಗಳು ಅತ್ಯಂತ ಸೂಕ್ತ. ಅಗತ್ಯವಿದ್ದರೆ ಮಕ್ಕಳನ್ನೂ ಕರೆದೊಯ್ಯಿರಿ. ಹಲ್ಲುಗಳು ಅಲ್ಪಸ್ವಲ್ಪ ಹುಳುಕಾಗಿದ್ದರೂ ಅದನ್ನು ಪತ್ತೆ ಹಚ್ಚಿ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಜತೆಗೆ ಪ್ಲೇಕ್‌ ಇಲ್ಲವೇ ಟಾರ್ಟರ್‌ ಇದ್ದರೆ ಅವುಗಳನ್ನೂ ತೆಗೆಯಬಹುದು.

ಹಬ್ಬಗಳು ಬಹಳಷ್ಟು ನೆನಪುಗಳನ್ನು ತರುತ್ತವೆ. ಹಬ್ಬದ ಸಿಹಿಗಳು ಸಂಭ್ರಮ, ನಗೆಯನ್ನು ತರುತ್ತವೆ. ಆ ನಗೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದರೆ ಬಾಯಿಯ ಕಾಳಜಿ ಮಾಡಲೇಬೇಕು. ಹಲ್ಲು ನೋವಿನಿಂದ ಮುಕ್ತರಾಗಿದ್ದರೆ ಮಾತ್ರವೇ ಸುಂದರ ನಗೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು.