ಬೆಂಗಳೂರು: ಪಲ್ಯ, ಕೋಸಂಬರಿ, ಚುರುಮುರಿ, ತಂಬುಳಿ ಮಾಡಿ ಸೇವಿಸುವ ಬಾಳೆ ದಿಂಡು ಆರೋಗ್ಯ ರಕ್ಷಣೆಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ (Banana Stem Benefits). ಇದರ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯಬಹುದು. ಅಲ್ಲದೇ ದೇಹದಿಂದ ವಿಷಯುಕ್ತ ಅಂಶಗಳನ್ನು ಹೊರ ಹಾಕುವ ಶಕ್ತಿಯನ್ನು ಇದು ಹೊಂದಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಬಾಳೆದಿಂಡನ್ನು ಅಪರೂಪಕ್ಕಾದರೂ ಸೇವಿಸಬೇಕು ಎಂದ ಅವರು ಆರೋಗ್ಯ ಚೆನ್ನಾಗಿರಬೇಕು ಎಂದರೆ ಅಡುಗೆ ಮಾಡಲು ಸಮಯ ಮಾಡಿಕೊಳ್ಳಬೇಕು. ಅದಕ್ಕಾಗಿ ಸೊಪ್ಪು, ಬಾಳೆದಿಂಡಿನಂತಹ ವಸ್ತುಗಳನ್ನು ಆಹಾರದಲ್ಲಿ ಬಳಸಲೇಬೇಕು ಎಂದು ಅವರು ಹೇಳಿದರು.
ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:
ಬಾಳೆ ದಿಂಡಿನಲ್ಲಿ ನಾರಿನಂಶ ಯಥೇಚ್ಛವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ಇದು ಉತ್ತಮ. ಇದರಲ್ಲಿ ಕರಗುವ, ಕರಗದ ಫೈಬರ್ ಇದೆ. ಇದು ಕರುಳಿನ ಉರಿಯೂತ, ಮಲಬದ್ಧತೆ ಆಗದ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಗೆ ಕೂಡ ಇದು ಉತ್ತಮ. ಕರುಳಿನ ಗೋಡೆಗಳಿಗೆ ಶಕ್ತಿಯನ್ನು ತುಂಬುತ್ತದೆ. ಕರುಳಿಗೆ ಸಂಬಂಧಿಸಿದ ತೊಂದರೆಗಳನ್ನು ಇದು ದೂರ ಮಾಡುತ್ತದೆ ಎಂದರು.
ಮಧುಮೇಹಿಗಳಿಗೆ ಕೇವಲ ಅನ್ನ ಸೇವಿಸಿದರೆ ಅದು ಬೇಗನೆ ಜೀರ್ಣವಾಗಿ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಆದರೆ ಅನ್ನದೊಂದಿಗೆ ಬಾಳೆ ದಿಂಡಿನ ಆಹಾರ ಸೇವಿಸಿದಾಗ ಇದು ಜೀರ್ಣ ಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಂಡು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ಬಾಳೆದಿಂಡು ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂದ ಅವರು. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ. ಹೀಗಾಗಿ ಇದನ್ನು ಎಲ್ಲರೂ ಸೇವಿಸಬೇಕು. ಹೃದಯದ ಸ್ನಾಯುಗಳು ಸರಿಯಾಗಿ ಕೆಲಸ ಮಾಡಲು ಪೊಟ್ಯಾಶಿಯಂ ಮುಖ್ಯವಾಗಿರುತ್ತದೆ. ಇದು ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ ಎಂದರು.
ವಯಸ್ಸಾದಂತೆ ಕಾಡುವ ಅಲ್ಝೈಮರ್ಸ್ ಎಂಬ ಭೂತ; ಆರಂಭಿಕ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
ಮೂತ್ರಕೋಶದಲ್ಲಿ ಕಲ್ಲು ಆಗದಂತೆ ತಡೆಯುವ ಸಾಮರ್ಥ್ಯವನ್ನು ಬಾಳೆದಿಂಡು ಹೊಂದಿದೆ. ಈ ಮೂಲಕ ಮೂತ್ರಕೋಶದ ರಕ್ಷಣೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ನೀರು ಕಡಿಮೆ ಕುಡಿದರೆ ಮೂತ್ರಕೋಶದಲ್ಲಿ ಖನಿಜಗಳ ಸಾಂದ್ರತೆ ಹೆಚ್ಚಾಗುತ್ತದೆ. ಇದರಿಂದ ಮೂತ್ರಕೋಶದಲ್ಲಿ ಕಲ್ಲುಗಳಾಗುತ್ತವೆ. ನೀರಿನ ಅಂಶ ಬಾಳೆ ದಿಂಡಿನಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಮೂತ್ರಕೋಶದಲ್ಲಿ ಕಲ್ಲು ಆಗದಂತೆ ತಡೆಯುತ್ತದೆ, ಆದರೆ ಇದೂ ಆರೋಗ್ಯಕ್ಕೆ ಪೂರಕ ಹೊರತು ಔಷಧವಲ್ಲ. ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಇದನ್ನು ಸೇವಿಸುವುದು ಒಳ್ಳೆಯದು. ದೇಹ ಆರೋಗ್ಯದ ವಿಚಾರದಲ್ಲಿ ಯಾವುದನ್ನೂ ಅತಿಯಾಗಿ ಮಾಡಬಾರದು ಎಂದು ಡಾ. ಸುತ್ತೂರು ಮಾಲಿನಿ ಹೇಳಿದರು.