ನವದೆಹಲಿ,ಜ.25: ದೇಹದ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು ಉತ್ತಮ ಆಹಾರ ಸೇವನೆ ಮಾಡುವುದು ಮುಖ್ಯ. ಕೆಲವೊಮ್ಮೆ ನಿತ್ಯ ಅನೇಕ ಬಗೆಯ ಆಹಾರ ಸೇವನೆ ಮಾಡಿದರೂ ಪೋಷಕಾಂಶಗಳ ಕೊರತೆ ಕಾಡುತ್ತದೆ. ಹಾಗಾಗಿ ಮುಖ್ಯವಾಗಿ ಆಹಾರ ಅಂತ ಬಂದಾಗ ತರಕಾರಿಯೂ ಮೊದಲ ಸ್ಥಾನದಲ್ಲಿದೆ. ವಿವಿಧ ರೀತಿಯ ತರಕಾರಿಗಳಲ್ಲಿ (Vegetables) ಹಲವು ರೀತಿಯ ಪೋಷ ಕಾಂಶಗಳಿದ್ದು ದೇಹಕ್ಕೆ ಬೇಕಾದ ಶಕ್ತಿಯನ್ನು ಇವು ಒದಗಿಸುತ್ತದೆ. ಇತ್ತೀಚೆಗೆ ಪೌಷ್ಟಿಕತಜ್ಞರೊಬ್ಬರು ಪ್ರತಿದಿನವೂ ಸೇವಿಸಲೇಬೇಕಾದ ಐದು ಪ್ರಮುಖ ತರಕಾರಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ ಅಂಶದ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ ಸುಮಾರು ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ 7.3 ಮಿ.ಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ರಕ್ತಹೀನತೆ ನಿವಾರಣೆ, ಕೂದಲ ಆರೈಕೆ ಮಲಬದ್ಧತೆ ನಿಯಂತ್ರಣ, ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
ಕ್ಯಾರೆಟ್
ಒಂದು ಮಧ್ಯಮ ಗಾತ್ರದ ಕ್ಯಾರೆಟ್ 542 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಅನ್ನು ಒದಗಿಸುತ್ತದೆ. ಹಾಗಾಗಿ ಕ್ಯಾರೆಟ್ ಅನ್ನು ತುಪ್ಪ ಅಥವಾ ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಸೇವನೆ ಮಾಡಿದರೆ ಉತ್ತಮ. ಪೌಷ್ಟಿಕತಜ್ಞರ ಪ್ರಕಾರ, ಕಣ್ಣಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿ ಕೊಳ್ಳಲು ವಿಟಮಿನ್ ಎ ಮುಖ್ಯವಾಗಿದೆ. ಇದು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ನೀಡಲಿದೆ.
ರೆಡ್ ಕ್ಯಾಪ್ಸಿಕಂ
ಕೆಂಪು ಕ್ಯಾಪ್ಸಿಕಂ ನಿಮಗೆ ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗಿ ಒದಗಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣ ಕೂಡ ಹೆಚ್ಚಾಗಿದ್ದು ಇದು ಚರ್ಮದಲ್ಲಿ ಕೊಲಾಜೆನ್ ಉತ್ಪತ್ತಿಗೂ ಸಹಕಾರಿಯಾಗುತ್ತದೆ.
ಬೀಟ್ರೂಟ್
ಬೀಟ್ರೂಟ್ ಫೋಲೇಟ್‌ನ ಅತ್ಯುತ್ತಮ ಮೂಲವಾಗಿದೆ. ಇದು ಪ್ರತಿ ಬಟ್ಟಲಿಗೆ 195 ಮೈಕ್ರೋ ಗ್ರಾಂಗಳಷ್ಟು ಈ ಅಗತ್ಯ ಪೋಷಕಾಂಶವನ್ನು ಹೊಂದಿರುತ್ತದೆ. ಇದು ಡಿಎನ್‌ಎ ಸಂಶ್ಲೇಷಣೆ, ಗರ್ಭಧಾರಣೆಯ ಆರೋಗ್ಯ ಮತ್ತು ಕೆಂಪು ರಕ್ತ ಕಣಗಳನ್ನು ಬೆಂಬಲಿಸುತ್ತದೆ.
ಹೂಕೋಸು
ಹೂಕೋಸು ಆಹಾರದ ನಾರಿನಂಶದಿಂದ ಸಮೃದ್ಧವಾಗಿದ್ದು ಅತ್ಯಂತ ಉತ್ತಮ ಪೋಷಕಾಂಶದ ತರಕಾರಿಯಾಗಿದೆ. ಇದು 100 ಗ್ರಾಂ ಹೂಕೋಸು 4 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಕರುಳಿನ ಆರೋಗ್ಯವನ್ನು ಬೆಂಬಲಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.