ಬೆಂಗಳೂರು, ಡಿ. 10: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಕಂಡು ಬರುವ ಪ್ರಮಾಣ ಹೆಚ್ಚಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲ ವಯೋಮಾನದವರಲ್ಲಿ ಸಕ್ಕರೆ ಕಾಯಿಲೆ ಪತ್ತೆಯಾಗುತ್ತಿದೆ. ಕೆಲವರಿಗೆ ಶುಗರ್ ಲೆವೆಲ್ (Blood Sugar) ತುಂಬಾ ಹೆಚ್ಚಾಗಿ ಇದ್ದರೆ ಇನ್ನು ಕೆಲವರಿಗೆ ಈ ಶುಗರ್ ಲೆವೆಲ್ ಬಹಳ ಕಡಿಮೆ ಇರುತ್ತದೆ. ಎರಡು ಕೂಡ ಬಹಳ ಅಪಾಯಕಾರಿಯಾಗಿದ್ದು ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ವಿಶ್ವವಾಣಿ ಹೆಲ್ತ್ ಚಾನಲ್‌ನಲ್ಲಿ ಖ್ಯಾತ ಮಧುಮೇಹ ತಜ್ಞ ಡಾ. ಸುಮನ್ ರಾಥೋಡ್ (Dr. Suman) ತಿಳಿಸಿಕೊಟ್ಟಿದ್ದಾರೆ. ಸಕ್ಕರೆ ಮಟ್ಟವು ದೇಹದಲ್ಲಿ ಕಡಿಮೆ ಇದ್ದಾಗ ಮೆದುಳು ನಿಷ್ಕ್ರಿಯವಾಗಲಿದೆ, ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ. ಇದಕ್ಕೆಲ್ಲ ಹೈಪೋಗ್ಲೆಸಿಮಿಯಾ ಕಾರಣ. ಹೈಪೋಗ್ಲೆಸಿಮಿಯಾ ಎನ್ನುವುದು ಲೋ ಲೆವಲ್ ಶುಗರ್ ಆಗಿದ್ದು ದೇಹದಲ್ಲಿ ಕಡಿಮೆ ಸಕ್ಕರೆ ಮಟ್ಟ ಬಹಳ ಅಪಾಯಕಾರಿ. ಅದು ಬರದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.
ಸಕ್ಕರೆ ಕಾಯಿಲೆ ಇರುವವರು ವೈದ್ಯಕೀಯ ಸಲಹೆ ಪಡೆದಾಗ ಅವರು ಹೇಳಿದಂತೆ ಆಹಾರ ಕ್ರಮ ಪಾಲಿಸುವುದು, ಔಷಧ ಪಡೆಯುವುದು ಇತ್ಯಾದಿ ಮಾಡಿ ಶುಗರ್ ಲೆವೆಲ್ ಅನ್ನು ಸಮತೋಲನಗೊಳಿಸಬೇಕು. ಎಷ್ಟೋ ಸಲ ವೈದ್ಯರ ಮದ್ದುಗಳು ಓವರ್ ಡೋಸ್ ಆದಾಗ ಶುಗರ್ ಮಟ್ಟ ಸಾಮಾನ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಬರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ವೈದ್ಯರ ಬಳಿಗೆ ಹೋಗದೆ ಕೆಲವರು ಸ್ವ ವೈದ್ಯರಾಗುತ್ತಾರೆ. ಅಂತವರಿಗೂ ದೇಹದಲ್ಲಿ ಶುಗರ್ ಲೆವೆಲ್ ಎಷ್ಟಿದೆ ಎಂಬುದು ತಿಳಿದಿರಲಾರದು. ಹೀಗೆ ಅನೇಕ ಕಾರಣಕ್ಕೆ ಹೈಪೋಗ್ಲೆಸಿಮಿಯಾ ಕಂಡು ಬರುವ ಪ್ರಮಾಣ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ:
ಯಾವೆಲ್ಲ ಕಾರಣಕ್ಕೆ ಬರುತ್ತದೆ?
ಲೋ ಲೆವೆಲ್ ಶುಗರ್ ಬರಲು ಕೂಡ ಅನೇಕ ಕಾರಣಗಳಿವೆ. ಡಯಾಬಿಟಿಸ್ ಇದೆ ಎಂಬ ಕಾರಣಕ್ಕೆ ಇನ್ಸುಲಿನ್, ಇತರ ಮಧುಮೇಹ ಔಷಧಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ವಕ್ಕರಿಸುತ್ತದೆ. ಆಹಾರ ಪದ್ಧತಿ ಸರಿಯಾದ ಕ್ರಮದಲ್ಲಿ ಇಲ್ಲದಿರಿವುದು, ಆಗಾಗ ಊಟ ಬಿಡುವುದು ಕೂಡ ಸಕ್ಕರೆ ಮಟ್ಟ ದೇಹದಲ್ಲಿ ಕಡಿಮೆಯಾಗುವಂತೆ ಮಾಡುತ್ತದೆ. ಡಯಾಬಿಟಿಸ್ ಇದ್ದಾಗ ವ್ಯಾಯಾಮ, ವಾಕಿಂಗ್ ಮಾಡುವುದು ಉತ್ತಮ ಹವ್ಯಾಸ ಆಗಿದ್ದರೂ ಇದು ಅತಿಯಾದರೆ ಶುಗರ್ ಲೆವೆಲ್ ಕಡಿಮೆ ಆಗುತ್ತದೆ.
ಅಂಗೈಯಲ್ಲೇ ಇದೆ ಔಷಧ ಭಂಡಾರ; ತೂಕ ಇಳಿಕೆಯಿಂದ ಹಿಡಿದು ಬೊಜ್ಜು ಕರಗಿಸಲು ನೆರವಾಗುತ್ತದೆ ಈ ಮ್ಯಾಜಿಕ್ ಪಾನೀಯ
ಮದ್ಯಪಾನ ಮಾಡುವುದರಿಂದ ಕೂಡ ಲೋ ಶುಗರ್ ಲೆವೆಲ್ ಸಮಸ್ಯೆ ಬರಬಹುದು. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.
ಲಕ್ಷಣಗಳೇನು?
- ಲೋ ಶುಗರ್ ಲೆವೆಲ್ ಇದ್ದಾಗ ದೇಹವು ತುಂಬಾ ಬೆವರುತ್ತದೆ.
- ಕೈಕಾಲು ನಡಗುವುದು, ಪದೇ ಪದೆ ಏನಾದರೂ ತಿನ್ನಲೆ ಬೇಕು ಎಂದೆನಿಸುತ್ತದೆ.
- ದೇಹದ ಶುಗರ್ ಲೆವೆಲ್ 30-40 ಮಟ್ಟಕ್ಕೆ ತಲುಪಿದಾಗ ಪ್ರಜ್ಞೆ ತಪ್ಪುವ ಸಾಧ್ಯತೆ ಇದೆ.
- ಹೀಗೆ ಪ್ರಜ್ಞೆ ತಪ್ಪಿದ್ದವರನ್ನು ಏಳಿಸಲು ಬಹಳ ಕಷ್ಟ. ಅವರಿಗೆ ಡ್ರಿಪ್ಸ್ ಕೊಡಬೇಕಾಗುತ್ತದೆ. ಶುಗರ್ ಲೆವೆಲ್ ಅನ್ನು ಕಂಟ್ರೋಲ್‌ಗೆ ತಂದ ಮೇಲೆ ಅವರಿಗೆ ಪ್ರಜ್ಞೆ ಬರುತ್ತದೆ.
ಪರಿಹಾರ ಕ್ರಮ ಏನು?
- ಹೈಪೊಗ್ಲಿಸಿಮಿಯಾ ಆದಂತಹ ಸಂದರ್ಭದಲ್ಲಿ ತಕ್ಷಣವೇ ಬಿಸ್ಕತ್, ಟೀ, ಕಾಫಿ, ಹಾಲು, ಇಡ್ಲಿ, ಹಣ್ಣಿನ ಜ್ಯೂಸ್ ಈ ತರಹದ ಆಹಾರ ಸೇವಿಸಿ ಬಳಿಕ ಒಂದು ಲೋಟ ನೀರು ಕುಡಿದರೆ ಸಕ್ಕರೆ ಮಟ್ಟ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ.
- ಇಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಸ್ವೀಟ್ ತಿನ್ನಬಾರದು. ಶುಗರ್ ಲೆವೆಲ್ ಕಮ್ಮಿ ಇದೆ ಎಂದು ಸ್ವೀಟ್ ಅತಿಯಾಗಿ ಸೇವಿಸಿದರೆ ಶುಗರ್ ಲೆವೆಲ್ ದಿಢಿರ್ ಆಗಿ ಹೆಚ್ಚಾಗಬಹುದು. ಆಗ ಅದು ಕೂಡ ಸಮಸ್ಯೆ ಆಗಲಿದೆ.
- ಲೋ ಲೆವೆಲ್ ಶುಗರ್‌ನಿಂದ ಪ್ರಜ್ಞೆ ತಪ್ಪಿದ್ದವರಿಗೆ ಜ್ಯೂಸ್, ನೀರು ಕುಡಿಸಿದರೆ ಅದು ನೇರವಾಗಿ ಲಂಗ್ಸ್ ಒಳಗೆ ಹೋಗಿ ಸಮಸ್ಯೆ ಆಗಲಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ವೈದ್ಯರ ಮೊರೆ ಹೋಗಬೇಕು.
- ಡಯಾಬಿಟಿಸ್ ಸಮಸ್ಯೆ ಇದ್ದವರು ವೈದ್ಯರ ಸಲಹೆಯಂತೆ ಸೇವಿಸುವ ಔಷಧಗಳನ್ನು ನಿಲ್ಲಿಸಬಾರದು. ಆಗಾಗ ವೈದ್ಯರ ಬಳಿಗೆ ಹೋಗಿ ಅವರ ಸಲಹೆಯಂತೆ ಮೆಡಿಸಿನ್ ಸೇವಿಸಬೇಕು.
- ಅತಿಯಾಗಿ ವ್ಯಾಯಾಮ ಮಾಡಬಾರದು. ಒಂದು ನಿಯಮಿತ ಪ್ರಮಾಣದಲ್ಲಿ ವ್ಯಾಯಾಮ ಮಾಡಿದರೆ ಶುಗರ್ ಲೆವೆಲ್ ಕಂಟ್ರೋಲ್‌ನಲ್ಲಿ ಇರಲಿದೆ ಎಂದು ಡಾ. ಸುಮನ್ ರಾಥೋಡ್ ವಿವರಿಸಿದರು.