ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೆಣ್ಣು ಮಕ್ಕಳು ಬೇಗ ಋತುಮತಿಯಾಗಲು ಕಾರಣವೇನು? ಇದು ಅಪಾಯಕಾರಿಯೇ? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ

ಇಂದಿನ ದಿನಗಳಲ್ಲಿ 9-10 ವರ್ಷದ ಮಕ್ಕಳೆಲ್ಲ ಋತುಮತಿ ಆಗುತ್ತಿದ್ದಾರೆ. ಇದು ಪೋಷಕರಲ್ಲಿ ಆತಂಕವನ್ನುಂಟು ಮಾಡಿದ್ದು, ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ತೊಂದರೆ ಆಗುತ್ತದೆಯೇ ಎಂಬ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು ಜಿಯೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಸುತ್ತೂರು ಎಸ್. ಮಾಲಿನಿ ವಿಶ್ವವಾಣಿ ಹೆಲ್ತ್‌ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಪ್ರೊ. ಸುತ್ತೂರು ಎಸ್. ಮಾಲಿನಿ

ಬೆಂಗಳೂರು, ಡಿ. 29: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಬಹು ಬೇಗ ಋತಿಮತಿಯರಾಗುತ್ತಿದ್ದಾರೆ. ಎರಡು ದಶಕಗಳ ಹಿಂದೆ 15-16 ವರ್ಷದಿಂದ ಹುಡುಗಿಯರು ಋತುಚಕ್ರವನ್ನು ಪ್ರಾರಂಭಿಸುತ್ತಿದ್ದರು. ಆದರೆ ಈಗೆಲ್ಲ 9-10 ವರ್ಷದ ಮಕ್ಕಳೆಲ್ಲ ಋತುಮತಿಯಾಗುತ್ತಿದ್ದಾರೆ. ಇದು ಪೋಷಕರಲ್ಲಿ ಆತಂಕವನ್ನುಂಟು ಮಾಡಿದ್ದು, ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ತೊಂದರೆ ಆಗುತ್ತದೆಯೇ ಎಂಬ ಯೋಚನೆಯಲ್ಲಿದ್ದಾರೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಜೆನಿಟಿಕ್ಸ್ ಮತ್ತು ಜಿಯೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಸುತ್ತೂರು ಎಸ್. ಮಾಲಿನಿ ವಿಶ್ವವಾಣಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಬೇಗ ಪಿರಿಯಡ್ಸ್ ಆಗಲು ಕಾರಣವೇನು? ಅದರಿಂದಾಗುವ ತೊಂದರೆಗಳೇನು? ಎಂಬೆಲ್ಲ ಪ್ರಶ್ನೆಗಳುಗೆ ಉತ್ತರಿಸಿದ್ದಾರೆ.

ಋತುಮತಿ ಅಥವಾ ಪಿರಿಯಡ್ಸ್ ಎಂದರೇನು?

ಪ್ರಕೃತಿ ನಿಯಮದ ಪ್ರಕಾರ ಹೆಣ್ಣೊಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ತಾಯಿಯಾಗಲು ಸದೃಢಳಾದಾಗ ಆಕೆಯಲ್ಲಿ ಅಂಡಾಣುಗಳು ಬಿಡುಗಡೆಯಾಗುತ್ತವೆ. ಅದನ್ನೇ ನಾವು ಪಿರಿಯಡ್ಸ್ ಅಥವಾ ಋತುಮತಿ ಎಂದು ಕರೆಯುತ್ತೇವೆ.

ಹೆಣ್ಣು ಮಕ್ಕಳು ಬೇಗ ಋತಿಮತಿ ಆಗಲು ಕಾರಣವೇನು?

ಇಂದಿನ ಜೀವನ ಶೈಲಿ, ಆಹಾರ ಹಾಗೂ ಹವ್ಯಾಸಗಳೇ ಮಕ್ಕಳು ಬೇಗ ಋತುಮತಿಯರಾಗಲು ಕಾರಣ. ಈ ಹಿಂದೆ ಅವಿಭಕ್ತ ಕುಂಟುಂಬಗಳು ಹೆಚ್ಚಾಗಿದ್ದು, ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರ ಸಿಗುತ್ತಿರಲಿಲ್ಲ. ಇದರಿಂದಾಗಿ ಮಕ್ಕಳಲ್ಲಿ ಕೊಬ್ಬಿನಾಂಶವೂ ಕಡಿಮೆಯಾಗಿರುತ್ತಿತ್ತು. ಹೀಗಾಗಿ ಆಗ 14-16 ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇಂದು ವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಝಂಕ್ ಫುಡ್, ಮಾಂಸಹಾರ ಸೇವನೆ ಇನ್ನಿತರ ಕಾರಣಗಳಿಂದ ದೇಹದಲ್ಲಿ ಕೊಬ್ಬನಾಂಶ ಶೇಖರಣೆ ಹೆಚ್ಚಾಗಿ, ಹೆಚ್ಚು ಹೆಚ್ಚು ಎಸ್ಟ್ರೋಜನ್ (ಸೆಕ್ಸ್ ಹಾರ್ಮೋನ್‌) ಬಿಡುಗಡೆಯಾಗುತ್ತವೆ. ಇದರ ಪ್ರಮಾಣ ಹೆಚ್ಚಾದಾಗ ಅಂಡಾಶಯದಿಂದ ಅಂಡಾಣುಗಳು ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿಯೇ ಋತುಮತಿ ಆಗುತ್ತಿರುವ ವಯಸ್ಸು ಕಡಿಮೆಯಾಗಿದೆ.

ವಿಡಿಯೊ ಇಲ್ಲಿದೆ:



ಬೇಗ ಋತುಮತಿ ಆಗುವುದರಿಂದ ಆಗುವ ತೊಂದರೆಗಳೇನು?

ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುತ್ತದೆ. ಪ್ರಬುದ್ಧತೆಯ ಕೊರತೆಯಿಂದಾಗಿ ಪಿರಿಯಡ್ಸ್‌ನಿಂದ ಆಗುವ ಸ್ನಾಯು ಸೆಳೆತ, ನೋವನ್ನು ತಡೆದುಕೊಳ್ಳು ಶಕ್ತಿ ಇರುವುದಿಲ್ಲ. ಇದರಿಂದಾಗಿ ವಿದ್ಯಾಭ್ಯಾಸದಲ್ಲಿ, ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ದೂರ ಉಳಿಯುತ್ತಾರೆ. ಬೇಗ ಋತುಮತಿ ಆಗುವವರಲ್ಲಿ ಯುಟ್ರೆನ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮುಂಜಾಗೃತ ಕ್ರಮಗಳೇನು?

ಮಕ್ಕಳು ಬೇಗ ಋತುಮತಿ ಆಗದಂತೆ ಪೋಷಕರು ಕಾಳಜಿವಹಿಸುವುದು ಬಹಳ ಮುಖ್ಯ. ಮಕ್ಕಳಿಗೆ ಮಾಂಸಹಾರ, ಕೊಬ್ಬಿನಿಂದ ಕೂಡಿದ ಆಹಾರ ಝಂಕ್ ಫುಡ್ ನೀಡುವುದನ್ನು ಕಡಿಮೆ ಮಾಡಬೇಕು. ಮಕ್ಕಳಲ್ಲಿ ಪಿರಿಯಡ್ಸ್ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ.

ನೈರ್ಮಲ್ಯ ಅಗತ್ಯ

ಋತುಮತಿ ಆಗಿರುವ ಮಕ್ಕಳಿಗೆ ನೈರ್ಮಲ್ಯದ ಬಗ್ಗೆ ತಿಳುವಳಿಕೆ ನೀಡುವುದು ಅತ್ಯವಶ್ಯಕ. ಪ್ಯಾಡ್ಸ್ ಬಟ್ಟೆಯ ಬಳಕೆ, ನಿಯಮಿತವಾಗಿ ಬಟ್ಟೆಯ ಬದಲಾವಣೆ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು. ಇನ್ನೂ ಋತುಮತಿ ಆಗುವಂತಹ ಮಕ್ಕಳಲ್ಲಿ ಅದರ ಬಗ್ಗೆ ಸಾಮಾನ್ಯ ಜ್ಞಾನ ತಿಳುವಳಿಕೆ ಇರಲೇ ಬೇಕು. ತಂದೆ-ತಾಯಂದಿರು, ಶಾಲಾ ಶಿಕ್ಷಕರು ಮಕ್ಕಳಿಗೆ ಪಿರಿಯಡ್ಸ್, ಲೈಂಗಿಕ ಶಿಕ್ಷಣ, ಜನಾನಾಂಗಗಳ ಬಗ್ಗೆ ತಿಳುವಳಿಕೆ ನೀಡುವುದು ಅತ್ಯವಶ್ಯಕೆ ಎಂಬುವುದು ಪ್ರೊ. ಮಾಲಿನಿ ಅವರ ಕಿವಿಮಾತು.