ಡಾ.ಬಿಕಾಶ್ ಕುಮಾರ್ ಚೌಧರಿ, ಸಿಇಒ ಮತ್ತು ಹಿರಿಯ ಉಪಾಧ್ಯಕ್ಷರು, ಹ್ಯಾಪಿಯೆಸ್ಟ್ ಡಯಾಗ್ನೋಸ್ಟಿಕ್ಸ್
ನಮ್ಮಲ್ಲಿ ಅನೇಕರು ನಿರಂತರ ಆಯಾಸ, ಅನಿರೀಕ್ಷಿತವಾಗಿ ಅಥವಾ ಸಣ್ಣ ಪ್ರಮಾಣದಲ್ಲಿ ತೂಕ ಹೆಚ್ಚುವುದು, ಆತಂಕ ಅಥವಾ ಮೂಡ್ ಸ್ವಿಂಗ್ಸ್ (ಮನಸ್ಥಿತಿಯ ಬದಲಾವಣೆ) ಅನ್ನು ಕೇವಲ ಮಾನಸಿಕ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯ ಭಾಗ ಎಂದು ನಿರ್ಲಕ್ಷಿ ಸುತ್ತಾರೆ. ಸಾಮಾನ್ಯವೆನಿಸುವ ಈ ಸಮಸ್ಯೆಗಳು ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆಯ ಲಕ್ಷಣ ಗಳಾಗಿರಬಹುದು. ಈ ಸ್ಥಿತಿಯು ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವವರೆಗೂ ಸಾಮಾನ್ಯವಾಗಿ ಯಾರಿಗೂ ಗೊತ್ತಾಗುವುದಿಲ್ಲ.
ಈ ವಿಶ್ವ ಥೈರಾಯ್ಡ್ ದಿನದಂದು, ಥೈರಾಯ್ಡ್ ಗ್ರಂಥಿಯ ಬಗ್ಗೆ ಮತ್ತು ಅದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಎಷ್ಟು ಆಳವಾದ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸು ವುದು ಅತ್ಯಂತ ಮುಖ್ಯವಾಗಿದೆ.
‘ಥೈರಾಯ್ಡ್’ ಎನ್ನುವುದು ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಒಂದು ಸಣ್ಣ ಗ್ರಂಥಿಯಾಗಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ನಮ್ಮ ದೇಹದ ಚಯಾಪಚಯ ಕ್ರಿಯೆ (meta bolism), ಶಕ್ತಿ ಉತ್ಪಾದನೆ, ದೇಹದ ಉಷ್ಣತೆ, ಹೃದಯ ಬಡಿತ, ಮುಟ್ಟಿನ ಆರೋಗ್ಯ, ಜೀರ್ಣಕ್ರಿಯೆ ಮತ್ತು ಮಾನಸಿಕ ನೆಮ್ಮದಿಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಥೈರಾಯ್ಡ್ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ ಅಥವಾ ಹೆಚ್ಚು ಹಾರ್ಮೋನ್‌ಗಳನ್ನು ಉತ್ಪಾದಿಸಿದಾಗ, ಅದು ದೇಹದ ಹಲವಾರು ಅಂಗಗಳ ಮೇಲೆ ಮತ್ತು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳು ಸಿಗಲಿವೆ!
ಅತ್ಯಂತ ಸಾಮಾನ್ಯವಾದ ಥೈರಾಯ್ಡ್ ಸಮಸ್ಯೆಗಳಲ್ಲಿ 'ಹೈಪೋಥೈರಾಯ್ಡಿಸಮ್' (Hypothyroidism) ಕೂಡ ಒಂದು. ಇದರಲ್ಲಿ ಥೈರಾಯ್ಡ್ ಗ್ರಂಥಿಯು ನಿಷ್ಕ್ರಿಯಗೊಂಡು, ದೇಹಕ್ಕೆ ಅಗತ್ಯವಿರುವಷ್ಟು ಥೈರಾಯ್ಡ್ ಹಾರ್ಮೋನ್‌ಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿರಂತರ ದಣಿವು, ಅನಿರೀಕ್ಷಿತ ತೂಕ ಹೆಚ್ಚಳ, ಒಣ ಚರ್ಮ, ಕೂದಲು ಉದುರುವುದು, ಮಲಬದ್ಧತೆ, ಮಂದತನ, ಏಕಾಗ್ರತೆಯ ಕೊರತೆ ಮತ್ತು ಖಿನ್ನತೆಯಂತಹ ಲಕ್ಷಣಗಳು ಕಂಡುಬರುತ್ತವೆ. ಅನೇಕರು ತಮಗೆ ಅತಿಯಾಗಿ ಚಳಿಯಾಗುವುದು ಅಥವಾ ಮಾನಸಿಕವಾಗಿ ಗೊಂದಲಕ್ಕೊಳಗಾಗುವುದು (mental fogginess) ಎಂದು ದೂರುತ್ತಿರುತ್ತಾರೆ. ಈ ಲಕ್ಷಣಗಳು ಕ್ರಮೇಣವಾಗಿ ಹೆಚ್ಚುವುದರಿಂದ ಇವುಗಳನ್ನು ಒತ್ತಡ, ವಯಸ್ಸಾಗುವಿಕೆ ಅಥವಾ ಜೀವನಶೈಲಿಯಿಂದ ಉಂಟಾಗುತ್ತಿರುವ ಆಯಾಸ ಎಂದು ತಪ್ಪಾಗಿ ಭಾವಿಸಲಾಗುತ್ತದೆ.
ಮತ್ತೊಂದೆಡೆ, ಥೈರಾಯ್ಡ್ ಗ್ರಂಥಿಯು ಅತಿಯಾಗಿ ಸಕ್ರಿಯಗೊಂಡು ಹೆಚ್ಚು ಹಾರ್ಮೋನ್‌ಗಳನ್ನು ಉತ್ಪಾದಿಸಿದಾಗ 'ಹೈಪರ್ ಥೈರಾಯ್ಡಿಸಮ್' (Hyperthyroidism) ಉಂಟಾಗುತ್ತದೆ. ಇದರ ಪರಿಣಾಮ ವಾಗಿ ಅನಿರೀಕ್ಷಿತವಾಗಿ ತೂಕ ಕಡಿಮೆಯಾಗುವುದು, ವೇಗದ ಹೃದಯ ಬಡಿತ, ಆತಂಕ, ಕಿರಿಕಿರಿ, ನಿದ್ರಾಹೀನತೆ, ಅತಿಯಾಗಿ ಬೆವರುವುದು, ನಡುಕ ಮತ್ತು ಮೂಡ್ ಸ್ವಿಂಗ್ ಮುಂತಾದ ಲಕ್ಷಣಗಳು ಕಂಡುಬರಬಹುದು. ಇನ್ನೂ ಕೆಲವರಲ್ಲಿ ಹಸಿವು ಹೆಚ್ಚಾಗುವುದು, ಆಗಾಗ್ಗೆ ಮಲ ವಿಸರ್ಜನೆ ಮಾಡುವುದು ಅಥವಾ ಶಾಖವನ್ನು ತಡೆದುಕೊಳ್ಳಲು ಕಷ್ಟವಾಗುವುದು ಮುಂತಾದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.
ಥೈರಾಯ್ಡ್ ಸಮಸ್ಯೆಗಳಿಗೆ ಸಂಬಂಧಿಸಿದ ಮೂಡ್ ಮತ್ತು ಮನಸ್ಥಿತಿಯ ಬದಲಾವಣೆಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಥೈರಾಯ್ಡ್ ಹಾರ್ಮೋನ್‌ಗಳು ಮೆದುಳಿನ ಕಾರ್ಯಚಟುವಟಿಕೆ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ನೇರ ಪ್ರಭಾವ ಬೀರುತ್ತವೆ. ನಿಷ್ಕ್ರಿಯ ಥೈರಾಯ್ಡ್ (ಹೈಪೋ) ಖಿನ್ನತೆ, ಉತ್ಸಾಹದ ಕೊರತೆ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು. ಅದೇ ರೀತಿ ಅತಿಯಾಗಿ ಸಕ್ರಿಯವಾಗಿರುವ ಥೈರಾಯ್ಡ್ (ಹೈಪರ್) ಆತಂಕ, ಚಡಪಡಿಕೆ ಮತ್ತು ಭಾವನಾ ತ್ಮಕ ಅಸ್ಥಿರತೆಯನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ, ರೋಗಿಗಳು ತಮಗೆ ಇರುವ ಮೂಲ ಥೈರಾಯ್ಡ್ ಸಮಸ್ಯೆಯನ್ನು ಪತ್ತೆಹಚ್ಚುವ ಮುನ್ನವೇ ಮಾನಸಿಕ ಚಿಕಿತ್ಸೆಯನ್ನು ಪಡೆಯಲು ಮುಂದಾಗುತ್ತಾರೆ.
ಮಹಿಳೆಯರಲ್ಲಿ, ವಿಶೇಷವಾಗಿ ಹಾರ್ಮೋನ್‌ಗಳ ಬದಲಾವಣೆಯ ಹಂತಗಳಾದ ಪ್ರೌಢಾವಸ್ಥೆಗೆ ಬರುವ ಸಮಯ (puberty), ಗರ್ಭಾವಸ್ಥೆ ಮತ್ತು ಋತುಬಂಧದ (menopause) ಸಮಯದಲ್ಲಿ ಥೈರಾಯ್ಡ್ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚು. ಥೈರಾಯ್ಡ್ ಕಾಯಿಲೆಯ ಕೌಟುಂಬಿಕ ಇತಿಹಾಸ, ಆಟೋಇಮ್ಯೂನ್ ಪರಿಸ್ಥಿತಿಗಳು ಮತ್ತು ಕೆಲವು ಔಷಧಿಗಳ ಬಳಕೆಯು ಕೂಡ ಈ ಅಪಾಯವನ್ನು ಹೆಚ್ಚಿಸಬಹುದು. ಕೇವಲ ಮಹಿಳೆಯರಿಗಷ್ಟೇ ಅಲ್ಲದೆ, ಪುರುಷರು ಮತ್ತು ಯುವಕರ ಮೇಲೆಯೂ ಥೈರಾಯ್ಡ್ ಸಮಸ್ಯೆ ಪರಿಣಾಮ ಬೀರಬಹುದು.
ಇದರಲ್ಲಿ ಸಮಾಧಾನಕರ ವಿಷಯವೆಂದರೆ, ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಥೈರಾಯ್ಡ್ ಸಮಸ್ಯೆಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಅಳೆಯುವ ಸರಳ ರಕ್ತದ ಪರೀಕ್ಷೆ (ಮುಖ್ಯವಾಗಿ TSH ಮತ್ತು Free T4, ಹಾಗೂ ಅಗತ್ಯವಿದ್ದಲ್ಲಿ T3) ಹೆಚ್ಚಿನ ಥೈರಾಯ್ಡ್ ಪರಿಸ್ಥಿತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಸಮಸ್ಯೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ಸ್ಕ್ಯಾನಿಂಗ್ ಅಥವಾ ಆ್ಯಂಟಿಬಾಡಿ ಪರೀಕ್ಷೆಗಳನ್ನು ಶಿಫಾರಸು ಮಾಡಬಹುದು.
ಚಿಕಿತ್ಸೆಯು ಥೈರಾಯ್ಡ್ ಸಮಸ್ಯೆಯ ಪ್ರಕಾರವನ್ನು ಅವಲಂಬಿಸಿರುತ್ತದೆ. ಹೈಪೋಥೈರಾಯ್ಡಿಸಮ್ ಅನ್ನು ಸಾಮಾನ್ಯವಾಗಿ ಥೈರಾಯ್ಡ್ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಮಾತ್ರೆಗಳು) ಮೂಲಕ ನಿರ್ವಹಿಸಲಾಗುತ್ತದೆ. ಆದರೆ ಹೈಪರ್ ಥೈರಾಯ್ಡಿಸಮ್‌ಗೆ ಹಾರ್ಮೋನ್ ಉತ್ಪಾದನೆಯನ್ನು ನಿಯಂತ್ರಿಸುವ ಔಷಧಿಗಳು, ರೇಡಿಯೋಆಕ್ಟಿವ್ ಅಯೋಡಿನ್ ಚಿಕಿತ್ಸೆ (radioactive iodine treatment) ಅಥವಾ ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು. ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಸಮರ್ಪಕ ನಿದ್ರೆ, ನಿಯಮಿತ ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಮತ್ತು ಪೌಷ್ಟಿಕ ಆಹಾರವು ಒಟ್ಟಾರೆ ಥೈರಾಯ್ಡ್ ಆರೋಗ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಪೌಷ್ಟಿಕಾಂಶದ ಸಪ್ಲಿಮೆಂಟ್‌ಗಳನ್ನು ಕೇವಲ ವೈದ್ಯರ ಸಲಹೆಯ ಮೇರೆಗಷ್ಟೇ ತೆಗೆದುಕೊಳ್ಳಬೇಕು.
ಕೇವಲ ಇಂಟರ್ನೆಟ್ ಮಾಹಿತಿಯ ಆಧಾರದ ಮೇಲೆ ನೀವೇ ಸ್ವಯಂ-ರೋಗನಿರ್ಣಯ ಮಾಡಿ ಕೊಳ್ಳುವುದನ್ನು ತಪ್ಪಿಸಬೇಕು. ಆಯಾಸ ಮತ್ತು ತೂಕದ ಬದಲಾವಣೆಗಳು ರಕ್ತಹೀನತೆ (ಅನೀಮಿಯಾ), ಮಧುಮೇಹ (ಶುಗರ್), ಜೀವಸತ್ವಗಳ ಕೊರತೆ (vitamin deficiencies) ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳಂತಹ ಇತರ ಕಾಯಿಲೆಗಳಿಂದಲೂ ಉಂಟಾಗಬಹುದು. ಅರ್ಹ ವೈದ್ಯರನ್ನು ಸಂಪರ್ಕಿಸುವುದರಿಂದ ಮಾತ್ರ ಸರಿಯಾದ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬಹುದು ಎನ್ನುವುದನ್ನು ಮರೆಯಬೇಡಿ.
ಥೈರಾಯ್ಡ್ ಸಮಸ್ಯೆಗಳು ಯಾವಾಗಲೂ ತಕ್ಷಣವೇ ದೊಡ್ಡದಾಗಿ ಕಾಣಿಸದೇ ಇರಬಹುದು. ಆದರೆ ಕಾಲಾನಂತರದಲ್ಲಿ ದೈಹಿಕ, ಭಾವನಾತ್ಮಕ ಮತ್ತು ಚಯಾಪಚಯ ಆರೋಗ್ಯದ ಮೇಲೆ ನಿಧಾನ ವಾಗಿ ಪರಿಣಾಮ ಬೀರುತ್ತವೆ. ದೇಹದ ಲಕ್ಷಣಗಳನ್ನು ಗಮನಿಸುವುದು ಮತ್ತು ನಿರಂತರ ಸಮಸ್ಯೆ ಗಳಾದಾಗ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಹಾಯವನ್ನು ಪಡೆಯುವುದು ದೊಡ್ಡ ಬದಲಾವಣೆಯನ್ನು ಉಂಟುಮಾಡುತ್ತದೆ.
ಈ ವಿಶ್ವ ಥೈರಾಯ್ಡ್ ದಿನದಂದು, ನಮ್ಮ "ದೈನಂದಿನ ಆಯಾಸ"ವನ್ನು ಕೇವಲ ಸಣ್ಣದು ಎಂದು ಅಲಕ್ಷ್ಯ ಮಾಡದೆ, ದೇಹವು ನೀಡುತ್ತಿರುವ ಪ್ರಮುಖ ಸಂಕೇತಗಳನ್ನು ಗುರುತಿಸೋಣ — ಏಕೆಂದರೆ ಕೆಲವೊಮ್ಮೆ, ಈ ಎಲ್ಲದರ ಕೇಂದ್ರಬಿಂದು ನಮ್ಮ ಥೈರಾಯ್ಡ್ ಕಾರ್ಯವಾಗಿರುತ್ತದೆ.