ಬೆಂಗಳೂರು, ಫೆ. 27: ಮೊದಲ ಬಾರಿಗೆ ಮಧುಮೇಹ (Diabetes) ಬಂದಿದೆ ಎಂದು ತಿಳಿದಾಗ ಅದು ಯಾಕೆ ಬಂತು ಎಂಬುದನ್ನು ತಿಳಿಯಲು ಹೋಗಬೇಡಿ. ಎಷ್ಟಿದೆ, ಅದರಿಂದ ಯಾವ ರೀತಿಯ ತೊಂದರೆಗಳು ಆಗಿವೆ, ನಿಯಂತ್ರಿಸಿಕೊಳ್ಳಬಹುದಾದ ವಿಧಾನಗಳು ಏನು ಎಂಬುದನ್ನು ತಿಳಿದುಕೊಳ್ಳಿ ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಸುಮನ್ (Dr. Suman). 'ವಿಶ್ವವಾಣಿ ಹೆಲ್ತ್' ಯೂಟ್ಯೂಬ್ ಚಾನಲ್‌ನಲ್ಲಿ (Vishwavani Health Channel) ಈ ಕುರಿತು ಮಾಹಿತಿ ನೀಡಿದ ಅವರು, ಮಧುಮೇಹದಿಂದ ತೊಂದರೆಯಾಗುವುದಿಲ್ಲ. ಅದನ್ನು ನಿರ್ಲಕ್ಷಿಸಿದರೆ ಮಾತ್ರ ದೊಡ್ಡ ತೊಂದರೆಯಾಗುತ್ತದೆ ಎಂದರು.
ಮಧುಮೇಹ ಬಂದಿದೆ ಎಂದು ಗೊತ್ತಾದಾಗ ಭಯವಾಗುವುದು ಸಾಮಾನ್ಯ. ಇದಕ್ಕೆ ಫ್ಯಾಮಿಲಿ ಹಿಸ್ಟರಿ ಒಂದೇ ಕಾರಣವಾಗಿರುವುದಿಲ್ಲ. ಮಾನಸಿಕ ಒತ್ತಡ, ದೇಹದ ತೂಕ, ಎತ್ತರ ಹೆಚ್ಚಾಗಿದ್ದರೂ ಕೂಡ ಮಧುಮೇಹ ಬರುತ್ತದೆ. ಹೀಗಾಗಿ ಈ ಬಗ್ಗೆ ಚಿಂತೆ ಮಾಡದೆ ಡಯಾಬಿಟಿಸ್‌ನಿಂದ ಆಗಿರುವ ತೊಂದರೆಗಳನ್ನು ತಿಳಿದುಕೊಳ್ಳಲು ಮೊದಲು ಆರೋಗ್ಯವನ್ನು ಚೆಕ್ ಮಾಡಿಕೊಳ್ಳಿ ಎಂದರು.
ವಿಡಿಯೊ ಇಲ್ಲಿದೆ:
ಮಧುಮೇಹಿಗಳು ಪಾಲಿಸಬೇಕಾದ ನಿಯಮ
ಮಧುಮೇಹಿಗಳು ಶಿಸ್ತು ಬದ್ಧವಾದ ಜೀವನ ಕ್ರಮವನ್ನು ಅನುಸರಿಸಿದರೆ ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು. ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಬಹುದು.
- ಮಧುಮೇಹಿಗಳು ಆಹಾರದಲ್ಲಿ ಡಯಟ್ ಪಾಲನೆ ಮಾಡುವುದು ತುಂಬಾ ಮುಖ್ಯ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಅಗತ್ಯ. ಇವರು ಹೊಟ್ಟೆ ತುಂಬಾ ತಿನ್ನುವ ಹಾಗಿಲ್ಲ. ಹೊಟ್ಟೆ ಖಾಲಿ ಬಿಡುವ ಹಾಗೂ ಇಲ್ಲ. ಹೀಗಾಗಿ ನಿರ್ದಿಷ್ಟ ಪ್ರಮಾಣದ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು.
- ಮಧುಮೇಹಿಗಳು ವೈದ್ಯರು ನೀಡುವ ಔಷಧಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವೈದ್ಯರು ಹೇಳದೆ ಔಷಧಗಳನ್ನು ನಿಲ್ಲಿಸಬಾರದು.
- ಮಧುಮೇಹಿಗಳು ವಾಕಿಂಗ್ ಮಾಡುವುದು ಬಹಳ ಮುಖ್ಯ. ಇದಕ್ಕೆ ನಿರ್ದಿಷ್ಟ ಸಮಯ ಎಂಬುದಿಲ್ಲ. ದಿನದಲ್ಲಿ ಅರ್ಧ- ಮುಕ್ಕಾಲು ಗಂಟೆ ವಾಕಿಂಗ್ ಮಾಡಲೇಬೇಕು. ಡಯಾಬಿಟಿಸ್‌ಗೆ ಶೇ. 30- 40ರಷ್ಟು ಚಿಕಿತ್ಸೆಯೇ ವಾಕಿಂಗ್. ದಿನದಲ್ಲಿ ಯಾವಾಗ ಬೇಕಾದರೂ ಮಾಡಬಹುದು.
- ಮಧುಮೇಹಿಗಳು ಎಷ್ಟು ಚೆನ್ನಾಗಿ ನಿದ್ದೆ ಮಾಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ನಿದ್ದೆ ಕಡಿಮೆಯಾದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದು ಮಧುಮೇಹವನ್ನು ಹೆಚ್ಚಿಸುತ್ತದೆ.
ಹಲ್ಲುಜ್ಜುವುದರಿಂದ ಸ್ವೀಟ್ ಕ್ರೇವಿಂಗ್ ಕಡಿಮೆ ಆಗುತ್ತಾ? ಡಾಕ್ಟರ್ಸ್ ಹೇಳೋದೇನು?
ಮಧುಮೇಹವನ್ನು ಸರಿಯಾಗಿ ನಿಯಂತ್ರಣ ಮಾಡದಿದ್ದರೆ ಮಾತ್ರ ಅದರಿಂದ ಬೇರೆ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಹೀಗಾಗಿ ನಿರ್ಲಕ್ಷ್ಯ ಮಾಡದೇ ಶಿಸ್ತು ಬದ್ಧವಾದ ಜೀವನ ಶೈಲಿಯನ್ನು ಅನುಸರಿಸಿದರೆ ಆರಾಮವಾಗಿಯೇ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ ಎನ್ನುತ್ತಾರೆ ಡಾ. ಸುಮನ್.