ಬೆಂಗಳೂರು: ಬಿದಿರು ಎನ್ನುತ್ತಿದ್ದಂತೆ ದೊಡ್ಡ ಮೆಳೆಗಳೇ ನಮಗೆ ನೆನಪಾಗುವುದು. ಆದರೆ ಈ ಬೃಹತ್ ಮೆಳೆಗಳೂ ಹಿಂದೊಮ್ಮೆ ಎಳೆಯವೇ ಆಗಿದ್ದವಲ್ಲ? ಅಂಥ ಎಳೆಯ ಬಿದಿರು ಅಥವಾ ಮೊಳಕೆಗಳನ್ನು ಕಳಲೆ (Bamboo Shoots) ಎನ್ನಲಾಗುತ್ತದೆ. ನೈಸರ್ಗಿಕವಾಗಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇವು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ಗಮನಿಸಿ ತಾಜಾ ಕಳಲೆಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಸೇವನೆಗೆ ಯೋಗ್ಯವಾದ ಇಂಥ ರುಚಿಕರ ಕಳಲೆಗಳನ್ನು ಸಾಂಪ್ರದಾಯಿಕವಾದ ಸಾಂಬಾರು, ಪಲ್ಯಗಳಿಂದ ಹಿಡಿದು, ಆಧುನಿಕ ಖಾದ್ಯಗಳವರೆಗೆ ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತದೆ.
ಸಸ್ಯಾದಿಗಳ ಮೊಳಕೆ ಮತ್ತು ಚಿಗುರುಗಳು ಭರಪೂರ ಪೋಷಕಾಂಶಗಳಿಂದ ತುಂಬಿರುತ್ತವೆ. ಬೆಳೆಯುವ ಸಸ್ಯಗಳಿಗೆ ಬೇಕೆಂಬ ಕಾರಣಕ್ಕಾಗಿ ನಿಸರ್ಗವೇ ಸೃಷ್ಟಿಸಿಕೊಂಡಿರುವ ಮಾರ್ಗವಿದು. ಪ್ರಕೃತಿಯ ಈ ಕೃತಿ ಮಾನವರಿಗೂ ಲಾಭದಾಯಕವಾಗುವುದಿದೆ. ಕಾರಣ ಇವು ಪೌಷ್ಟಿಕತೆಯಲ್ಲಿ ಮಾತ್ರವಲ್ಲಿ ರುಚಿಯಲ್ಲೂ ಒಂದು ಕೈ ಮೇಲೆಯೇ ಇರುತ್ತವೆ. ಎಳೆಯ ಬಿದಿರು ಅಥವಾ ಕಳಲೆಯನ್ನೂ ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು. ಏನಿವೆ ಇದನ್ನು ತಿನ್ನುವುದರ ಲಾಭಗಳು ಎಂಬುದನ್ನು ಅರಿಯೋಣ
ಏನಿವೆ ಇದರಲ್ಲಿ?: ಹಲವು ರೀತಿಯ ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಇದು ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಸ್ಥೂಲವಾಗಿ ಹೇಳುವುದಾದರೆ, ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ದೇಹದಲ್ಲಿ ಕೊಬ್ಬು ಕಡಿಮೆ ಮಾಡಲೂ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಿಟ್ಯುಟರಿ ಮತ್ತು ಥೈರಾಯ್ಡ್ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಇವುಗಳ ಮಾತ್ರ ಹಿರಿದಾದದ್ದು. ಇದರ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ನೋಡುವುದಾದರೆ:
ಮಲಬದ್ಧತೆ ನಿವಾರಣೆ: ಇದರಲ್ಲಿ ಹೆಚ್ಚಿನ ಪ್ರಮಾಣದ ಸೆಲ್ಯುಲೋಸ್ ಅಂಶದಿಂದಾಗಿ, ಜಠರ ಮತ್ತು ಕರುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಪಚನವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗಿ, ದೇಹದಲ್ಲಿ ಶೇಖರವಾದ ಕೊಬ್ಬೂ ಇಳಿಯುತ್ತದೆ. ಕಳಲೆಗೆ ಪ್ರೊಬಯಾಟಿಕ್ ಗುಣವೂ ಇರುವುದರಿಂದ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಇದನ್ನು ಓದಿ:Health Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?
ಕೊಲೆಸ್ಟ್ರಾಲ್ ಕಡಿತ: ದೇಹಕ್ಕೆ ಮಾರಕವಾದ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕಡಿತ ಮಾಡುವಂಥ ಫೈಟೋಸ್ಟೆರೋಲ್‌ಗಳು ಕಳಲೆಯಲ್ಲಿವೆ. ಹಾಗಾಗಿ ಇದು ಬೇಡದ ಕೊಲೆಸ್ಟ್ರಾಲ್ ನಿವಾರಿಸುವುದು ಮಾತ್ರವಲ್ಲದೆ, ಒಟ್ಟಾರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್ ಕೆ ಅಂಶದಿಂದಾಗಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಸಹಾಯಕ.
ಕೊಲಾಜಿನ್ ವೃದ್ಧಿ: ಮಾನವ ಶರೀರದಲ್ಲಿ ಹೇರಳವಾಗಿರುವ ಖನಿಜಗಳ ಪೈಕಿ ಸತು ಮತ್ತು ಕಬ್ಬಿಣದ ನಂತರದ ಸ್ಥಾನ ಸಿಲಿಕಾಗೆ. ಎಳೆ ಬಿದಿರಿನಲ್ಲೂ ಈ ಅಂಶ ಧಾರಾಳವಾಗಿದೆ. ಸಿಲಿಕಾ ಅಂಶವು ಹೈಡ್ರಾಕ್ಸಿಪ್ರೊಲಿನ್ ಎಂಬ ಅಮೈನೊ ಆಮ್ಲದ ಉತ್ಪತ್ತಿಗೆ ಅಗತ್ಯವಾದದ್ದು. ಎಲಾಸ್ಟಿನ್ ಮತ್ತು ಕೊಲಾಜಿನ್ ಅಂಶಗಳನ್ನು ದೇಹದಲ್ಲಿ ಸಿದ್ಧಪಡಿಸಿಕೊಳ್ಳುವುದಕ್ಕೆ ಈ ಅಮೈನೊ ಆಮ್ಲವು ಅತ್ಯಗತ್ಯ.
ಮೂಳೆಗಳ ಬಲವೃದ್ಧಿ: ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಅಂಶವು ಹೇರಳವಾಗಿರುವ ಕಳಲೆಯಿಂದ ಮೂಳೆಗಳು ಟೊಳ್ಳಾಗದೆ ಬಲಗೊಳ್ಳುತ್ತವೆ. ಇದರಲ್ಲಿರುವ ವಿಟಮಿನ್ ಸಿ ಅಂಶದಿಂದಾಗಿ ಇತರ ಖನಿಜಗಳನ್ನು ಹೀರಿಕೊಳ್ಳಲು ಮೂಳೆಗಳಿಗೆ ನೆರವು ದೊರೆಯುತ್ತದೆ.
ತೂಕ ಇಳಿಕೆ: ಈ ತರಕಾರಿ ಕ್ಯಾಲರಿ ಲೆಕ್ಕದಲ್ಲಿ ಕಡಿಮೆ ಇದ್ದು, ನಾರಿನಂಶ ಬೇಕಾದಷ್ಟಿದೆ. ಹಾಗಾಗಿ ಆರೋಗ್ಯದ ಮಾರ್ಗದಲ್ಲಿ ತೂಕ ಇಳಿಸುವ ಉದ್ದೇಶ ಇರುವವರಿಗೆ ಇದೊಂದು ಉತ್ತಮ ಆಯ್ಕೆ. ನಾರಿನಿಂದ ಕೂಡಿದ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಂಡು, ದೀರ್ಘ ಕಾಲದವರೆಗೆ ಹಸಿವಾಗದಂತೆ ದೇಹವನ್ನು ಕಾಪಾಡುತ್ತವೆ.