ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೃದಯ ವೈಫಲ್ಯದ ನಿರ್ವಹಣೆ: ಸೋಂಕುಗಳನ್ನು ತಡೆಯುವುದು ಏಕೆ ಮುಖ್ಯ?

ಹೃದಯ ವೈಫಲ್ಯದ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಬಗ್ಗೆ ನಿಯಮಿತವಾಗಿ ಗಮನ ಹರಿಸುವುದು, ವೈದ್ಯರು ಸೂಚಿಸಿದ ಆಹಾರ ಪದ್ಧತಿಯನ್ನು ಪಾಲಿಸುವುದು, ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡ ಬಹುದಾದ ಅಂಶಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ.

ಡಾ. ಬಿ. ದಿನೇಶ್, ನಿರ್ದೇಶಕರು ಮತ್ತು ಹೃದ್ರೋಗ ವಿಭಾಗದ ಪ್ರಾಧ್ಯಾಪಕರು, ಶ್ರೀ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್, ಬೆಂಗಳೂರು, ಕರ್ನಾಟಕ.

ಹೃದಯವು ದೇಹಕ್ಕೆ ಬೇಕಾದಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ಹೃದಯ ವೈಫಲ್ಯ (Heart Failure) ಎಂದು ಕರೆಯಲಾಗುತ್ತದೆ. ಇದು ದೀರ್ಘಕಾಲ ಕಾಡುವ ಸಮಸ್ಯೆ ಯಾಗಿದ್ದು, ದೇಹದಲ್ಲಿ ಉಂಟಾಗುವ ನಿರಂತರ ಉರಿಯೂತವು ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರಬಹುದು. ಇದರ ಜೊತೆಗೆ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲೂ ಕೆಲವು ಬದಲಾವಣೆಗಳು ಆಗಬಹುದು.

ಹೃದಯ ವೈಫಲ್ಯದ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಬಗ್ಗೆ ನಿಯಮಿತವಾಗಿ ಗಮನ ಹರಿಸುವುದು, ವೈದ್ಯರು ಸೂಚಿಸಿದ ಆಹಾರ ಪದ್ಧತಿಯನ್ನು ಪಾಲಿಸುವುದು, ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡ ಬಹುದಾದ ಅಂಶಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ.

ಸೋಂಕುಗಳು ಮತ್ತು ಹೃದಯ ವೈಫಲ್ಯದ ಆರೈಕೆ

ಹೃದಯ ವೈಫಲ್ಯ ಇರುವವರಿಗೆ ಸೋಂಕುಗಳು ಮತ್ತು ಅವುಗಳಿಂದ ಉಂಟಾಗುವ ಸಮಸ್ಯೆಗಳ ಅಪಾಯ ಹೆಚ್ಚಿರಬಹುದು. ಹಾಗಾಗಿ ಸೋಂಕಿನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಇದನ್ನೂ ಓದಿ: Robotic Heart Surgery: ಬಾರ್ಸಿಲೋನಾದಿಂದ 12 ಸಾವಿರ ಕಿ.ಮೀ. ದೂರದ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ

ಫ್ಲೂ, ನ್ಯುಮೋಕಾಕಲ್ ಸೋಂಕು, ಕೋವಿಡ್‌-19 ಸೇರಿದಂತೆ ಕೆಲವು ಸೋಂಕುಗಳು ಹೃದಯ ಸಂಬಂಧಿತ ಸಮಸ್ಯೆ ಇರುವವರಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ಶಿಂಗಲ್ಸ್ (Herpes Zoster) ಕೂಡ ನಾವು ಎಚ್ಚರವಹಿಸಬೇಕಾದ ಮತ್ತೊಂದು ಸೋಂಕು. ವಿಶೇಷವಾಗಿ ವಯಸ್ಸು ಹೆಚ್ಚಾದಂತೆ ಇದರ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು.

ಚಿಕನ್‌ಪಾಕ್ಸ್‌ಗೆ ಕಾರಣವಾಗುವ ಅದೇ ವರಿಸೆಲ್ಲಾ-ಜೋಸ್ಟರ್ ವೈರಸ್ ದೇಹದಲ್ಲಿ ನಿಷ್ಕ್ರಿಯ ವಾಗಿದ್ದು, ನಂತರ ಮತ್ತೆ ಸಕ್ರಿಯವಾದಾಗ ಶಿಂಗಲ್ಸ್ ಉಂಟಾಗುತ್ತದೆ. ವಯಸ್ಸು ಹೆಚ್ಚಾದಂತೆ, ವಿಶೇಷವಾಗಿ 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಯಾಗುವುದರಿಂದ ಶಿಂಗಲ್ಸ್ ಬರುವ ಅಪಾಯ ಹೆಚ್ಚಾಗಬಹುದು. ಒಂದು ಅಧ್ಯಯನದ ಪ್ರಕಾರ, ಹೃದಯ ವೈಫಲ್ಯ ಇಲ್ಲದವರಿಗಿಂತ ಹೃದಯ ವೈಫಲ್ಯ ಇರುವವರಿಗೆ ಶಿಂಗಲ್ಸ್ ಬರುವ ಸಾಧ್ಯತೆ ಹೆಚ್ಚಿರಬಹುದು.

ಆದರೆ ಪ್ರತಿಯೊಬ್ಬರಲ್ಲೂ ಸೋಂಕಿನ ಅಪಾಯ ಒಂದೇ ರೀತಿಯಾಗಿರುವುದಿಲ್ಲ. ವಯಸ್ಸು, ಒಟ್ಟಾರೆ ಆರೋಗ್ಯ ಮತ್ತು ಹಿಂದಿನ ವೈದ್ಯಕೀಯ ಇತಿಹಾಸ ಸೇರಿದಂತೆ ಹಲವು ಅಂಶಗಳು ಇದರಲ್ಲಿ ಪಾತ್ರವಹಿಸುತ್ತವೆ. ಆದ್ದರಿಂದ ಸೋಂಕಿನ ಯಾವುದೇ ಲಕ್ಷಣ ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಕಾಣುವುದು ಮುಖ್ಯ.

ಹೃದಯ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸೋಂಕು ಉಂಟಾದರೆ, ಸಮಯಕ್ಕೆ ಸರಿಯಾದ ಪರೀಕ್ಷೆ, ಸೂಕ್ತ ಚಿಕಿತ್ಸೆ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯವಾಗುತ್ತದೆ. ತೀವ್ರ ಹೃದಯ ವೈಫಲ್ಯದ ಜೊತೆಗೆ ಸೋಂಕು ಇದ್ದರೆ ಜ್ವರ, ವಾಂತಿ, ಹೊಟ್ಟೆ ನೋವು ಅಥವಾ ಮಾನಸಿಕ ಗೊಂದಲ ದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಆದರೆ ಸೋಂಕು ಇದ್ದಾಗ ಯಾವಾಗಲೂ ಸಾಮಾನ್ಯ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಸೋಂಕಿನ ಲಕ್ಷಣಗಳು ಹೃದಯ ವೈಫಲ್ಯ ಹೆಚ್ಚಾದಾಗ ಕಾಣಿಸುವ ಲಕ್ಷಣಗಳಂತೆಯೇ ಇರಬಹುದು. ಆದ್ದರಿಂದ ಹೃದಯ ವೈಫಲ್ಯ ಇರುವವರು ಯಾವುದೇ ಹೊಸ ಅಥವಾ ಆತಂಕಕಾರಿ ಲಕ್ಷಣ ಕಂಡುಬಂದರೆ, ಅಥವಾ ಈಗಾಗಲೇ ಇರುವ ಲಕ್ಷಣಗಳು ಬದಲಾಗಿದ್ದರೆ, ಹೆಚ್ಚಾಗಿದ್ದರೆ ತಮ್ಮ ವೈದ್ಯರಿಗೆ ತಿಳಿಸಬೇಕು.

ಸೋಂಕಿನ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ಹೃದಯ ವೈಫಲ್ಯ ಇರುವವರಿಗೆ ಸೋಂಕಿನ ಅಪಾಯ ಮತ್ತು ಅದರ ಪರಿಣಾಮವನ್ನು ಕಡಿಮೆ ಮಾಡುವುದು ಒಟ್ಟಾರೆ ಆರೋಗ್ಯ ನಿರ್ವಹಣೆಯ ಒಂದು ಪ್ರಮುಖ ಭಾಗವಾಗಿದೆ.

ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಅನಾರೋಗ್ಯದಲ್ಲಿರುವವರೊಂದಿಗೆ ಹೆಚ್ಚು ನಿಕಟ ಸಂಪರ್ಕವನ್ನು ತಪ್ಪಿಸುವುದು, ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಯಾವುದೇ ಲಕ್ಷಣ ಕಂಡುಬಂದಾಗ ವೈದ್ಯರ ಸಲಹೆ ಪಡೆಯುವುದು ಮುಂತಾದ ಸಾಮಾನ್ಯ ಕ್ರಮಗಳು ಸಹಾಯ ಮಾಡಬಹುದು.

ಪ್ರತಿಯೊಬ್ಬರಿಗೂ ಸೂಕ್ತವಾಗಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡಬೇಕು. ವ್ಯಕ್ತಿಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ವೈದ್ಯಕೀಯ ಇತಿಹಾಸವನ್ನು ಆಧರಿಸಿ ಈ ಸಲಹೆಗಳು ಬದಲಾಗಬಹುದು. ಅಗತ್ಯವಿದ್ದಲ್ಲಿ ಲಸಿಕೆಗಳನ್ನೂ ಇದರಲ್ಲಿ ಸೇರಿಸಬಹುದು.

ಮುಂಜಾಗ್ರತಾ ಕ್ರಮಗಳನ್ನು ವೈಯಕ್ತಿಕ ಆರೋಗ್ಯ ನಿರ್ವಹಣೆಯ ಒಂದು ಭಾಗವನ್ನಾಗಿ ಮಾಡಿಕೊಂಡರೆ, ಹೃದಯ ವೈಫಲ್ಯ ಇರುವವರು ತಮ್ಮ ಆರೋಗ್ಯಕ್ಕೆ ಎದುರಾಗಬಹುದಾದ ವಿವಿಧ ಅಪಾಯಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಜೊತೆಗೆ, ತಮ್ಮ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಚಿಕಿತ್ಸಾ ಯೋಜನೆಯನ್ನು ಮುಂದುವರಿಸಬಹುದು.