ನವದೆಹಲಿ: ಬರಲಿರುವ ದಸರಾ ಮತ್ತು ದೀಪಾವಳಿ ಹಬ್ಬಗಳ ಸಾಲಿನಲ್ಲಿ ಸಿಹಿ ತಿನಿಸುಗಳ ಸುಗ್ಗಿ, ಬಂಧು-ಬಾಂಧವರನ್ನು ಭೇಟಿ ಮಾಡುವ ಸಂಭ್ರಮ, ಪೂಜೆ-ಪ್ರಸಾದಗಳ ಭರಾಟೆ. ಹಬ್ಬಗಳ ರಜೆಯ ಹೆಸರಿನಲ್ಲಿ ಇಷ್ಟಾದರೂ ಮನೋಲ್ಲಾಸ ಇಲ್ಲದಿದ್ದರೆ ಏನು ಚೆನ್ನ? ಆದರೆ ಇವೆಲ್ಲ ಮುಗಿದ ಮೇಲೆ, ಇದಿಷ್ಟೂ ಸಂಭ್ರಮಕ್ಕೆ ದೃಷ್ಟಿಬೊಟ್ಟಿನಂತೆ ಕಾಣುವುದು ನಮ್ಮ ತೂಕ! ಪಾಪಿ ಹೊಟ್ಟೆಯಂತೂ ಮಜ್ಜಿಗೆಯಲ್ಲಿನ ಬೆಣ್ಣೆಯಂತೆ ಶರೀರದ ಮೇಲೆಯೇ ಇರುತ್ತದೆ. ಹಾಗಂತ ಬರುವ ತೂಕವನ್ನೊ, (Weight Loss) ಹೊಟ್ಟೆಯನ್ನೊ ನೆನಪಿಸಿಕೊಂಡು ಇರುವ ಸಂಭ್ರಮವನ್ನು ಬಿಡಲಾದೀತೇ?
ಪೇರಿಸಿಕೊಂಡು ಅಥವಾ ಏರಿಸಿಕೊಂಡು ಬರುತ್ತಿರುವ ಹೊಟ್ಟೆ ನಮ್ಮ ಆರೋಗ್ಯದ ಬಗ್ಗೆ ಹಲವು ವಿಷಯಗಳನ್ನು ಹೇಳಬಲ್ಲದು. ಹಾರ್ಮೋನ್ ಏರುಪೇರಾಗಿದ್ದರೆ, ಜೀರ್ಣಕ್ರಿಯೆ ವ್ಯತ್ಯಾಸ ವಾಗಿದರೆ, ಆನುವಂಶಿಕ ಸಮಸ್ಯೆಗಳಿದ್ದರೆ ಅಥವಾ ಜೀವನಶೈಲಿ ಸರಿಯಿಲ್ಲದಿರುವುದನ್ನೂ ಇದು ಸೂಚಿಸುತ್ತದೆ. ಮಹಿಳೆಯರಿಗೆ ಸೊಂಟದ ಸುತ್ತ ಹೆಚ್ಚುವ ನೆರಿಗೆಗಳು ಇನ್ನೂ ಕೆಲವು ಮಾಹಿತಿ ಯನ್ನು, ಉದಾ- ಋತುಬಂಧ ಸಮೀಪಿಸುತ್ತಿರುವುದು, ಬಹಿರಂಗಪಡಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಎನಿಸಿರುವ ಈ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು? ಇಲ್ಲಿವೆ ಕೆಲವು ಉಪಾಯಗಳು-
ಸೂರ್ಯ ನಮಸ್ಕಾರ: ನಮ್ಮ ಜೀರ್ಣಾಂಗವನ್ನು ಚುರುಕುಗೊಳಿಸಿ, ಶರೀರದ ಜಡತ್ವ ತೊಲಗಿಸಲು ಇದು ಉತ್ತಮ ಉಪಾಯ. ಖಾಲಿ ಹೊಟ್ಟೆಯಲ್ಲಿ 12 ಸೂರ್ಯ ನಮಸ್ಕಾರಗಳು ನಮ್ಮ ದೇಹದ ಜೊತೆಗೆ ಮನಸ್ಸನ್ನೂ ಚೈತನ್ಯಶೀಲವಾಗಿ ಇರಿಸಬಲ್ಲವು. ಮೊದಲಿಗೆ ಒಂದೆರಡರಿಂದ ಆರಂಭಿಸಿ ಕ್ರಮೇಣ ಸೂರ್ಯ ನಮಸ್ಕಾರಗಳ ಸಂಖ್ಯೆಯನ್ನು ಹೆಚ್ಚಿಸಿ. ಕಪಾಲಭಾತಿ ಪ್ರಾಣಾಯಾಮವೂ ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ.
ಊಟದ ನಂತರದ ಉಪವಾಸ!: ಊಟ ಆದ ಮೇಲೆ ಮತ್ತಿನ್ನೇನು ಉಪವಾಸ ಎಂದು ನಗಬೇಡಿ. ವಿಷಯ ಹಾಗಲ್ಲ, ರಾತ್ರಿ ಊಟವನ್ನು ಸೂರ್ಯಾಸ್ತದ ಹೊತ್ತಿಗೆ, ಅಂದರೆ ಸುಮಾರು 7 ಗಂಟೆಯ ಹೊತ್ತಿಗೆ ಮಾಡಿ. ಆನಂತರ ಬೆಳಗಿನವರೆಗೆ ಉಪವಾಸ. ಹಬ್ಬದೂಟವೆಂದು ರಾತ್ರಿ ಹತ್ತು ಗಂಟೆಗೆ ಗಡದ್ದು ತಿನ್ನುವಂತಿಲ್ಲ. ತಿಂದಿದ್ದು ಪಚನ ಆಗುವುದಕ್ಕೆ ಸಾಕಷ್ಟು ಅವಕಾಶ ನೀಡಿ. ಬೆಳಗಿನ ಹೊತ್ತಿಗೆ ಹೊಟ್ಟೆ ಚುರುಕಾಗಿರಬೇಕು.
ಬೆಚ್ಚಗಿನ ನೀರು: ಪಚನ ಮಾಡುವಲ್ಲಿ ಇದು ಪರಿಣಾಮಕಾರಿ. ಊಟದ ನಂತರ ಮಾತ್ರವೇ ಅಲ್ಲ, ಬೇರೆ ಸಮಯದಲ್ಲೂ ಉಗುರು ಬಿಸಿ ನೀರು ಆರೋಗ್ಯಕ್ಕೆ ಒಳಿತನ್ನು ಮಾಡಬಲ್ಲದು. ಹೊಟ್ಟೆಯುಬ್ಬರ, ಹಸಿವಿಲ್ಲದಿರುವುದು ಮುಂತಾದ ಸಮಸ್ಯೆಗಳಿಂದಲೂ ಮುಕ್ತಿ ನೀಡುತ್ತದೆ. ಹಾಗಾಗಿ ಹೊಟ್ಟೆಯ ಸುತ್ತಳತೆ ಇಳಿಸುವಲ್ಲಿ ಮಾತ್ರವೇ ಅಲ್ಲ, ಒಟ್ಟಾರೆ ತೂಕ ನಿಯಂತ್ರಿಸುವುದಕ್ಕೂ ಇದು ಪ್ರಯೋಜನಕಾರಿ.
ನಿದ್ದೆ: ದಿನಕ್ಕೆ ಏಳೆಂಟು ತಾಸಿನ ನಿದ್ದೆ ಅಗತ್ಯವಾಗಿ ಬೇಕು. ಹಬ್ಬವೇ ಇರಲಿ, ಹರಿದಿನವೇ ಇರಲಿ, ಈ ವಿಷಯಕ್ಕೆ ಚೌಕಾಸಿ ಮಾಡುವಂತೆಯೇ ಇಲ್ಲ. ಮನಸ್ಸಿನ ಒತ್ತಡವನ್ನು ನಿಯಂತ್ರಣದಲ್ಲಿಟ್ಟು, ಹಾರ್ಮೋನುಗಳು ಏರುಪೇರಾಗದಂತೆ ಮಾಡಲು ನಿದ್ದೆಯೇ ಮದ್ದು. ಹಾಗಾಗಿ ನಾಳೆಯ ಹಬ್ಬ ಹೇಗೆಂದು ಯೋಚಿಸುತ್ತಾ ಕೂರುವ ಬದಲು ಮಗುವಿನಂತೆ ನೆಮ್ಮದಿಯಿಂದ ನಿದ್ರಿಸಿ.
ಹೀಗೊಂದು ಮನೆಮದ್ದು: ಹಬ್ಬಗಳಲ್ಲಿ ಹೆಚ್ಚುವ ಹೊಟ್ಟೆಯ ಸುತ್ತಳತೆ ಕಡಿಮೆ ಮಾಡುವುದಕ್ಕೆ ಹೀಗೊಂದು ಮನೆಮದ್ದನ್ನು ಪ್ರಯತ್ನಿಸಬಹುದು.
ಶುಂಠಿ- ಸಣ್ಣ ತುಂಡು, ಸೋಂಪು- ಒಂದುಸಣ್ಣ ಚಮಚ, ಓಂಕಾಳು (ಅಜವಾನ)- ಅರ್ಧ ಚಮಚ, ಕಪ್ಪು ಕಾಳು ಮೆಣಸಿನ ಪುಡಿ- ಒಂದು ಚಿಟಿಕೆ, 1 ಏಲಕ್ಕಿ, ಚಿಕ್ಕ ತುಂಡು ಚಕ್ಕೆ, ಧನಿಯಾ- ಎರಡು ಚಮಚ. ಇವಿಷ್ಟನ್ನೂ ಒಂದು ಲೋಟ ನೀರಿನಲ್ಲಿ ಮೂರು ನಿಮಿಷಗಳ ಕಾಲ ಕುದಿಸಿ, ಸೋಸಿ. ಒಂದು ಚಮಚ ನಿಂಬೆ ರಸದೊಂದಿಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸಂದುನೋವಿನ ಸಮಸ್ಯೆ ಇದ್ದಲ್ಲಿ ನಿಂಬೆ ರಸ ಬೇಡ. ಪಿತ್ತದ ಸಮಸ್ಯೆ ಇದ್ದವರು, ಖಾಲಿ ಹೊಟ್ಟೆಯ ಬದಲಿಗೆ ರಾತ್ರಿ ಊಟದ ನಂತರ ಸೇವಿಸಿ.