ಬೆಂಗಳೂರು: ವಿಶ್ವದ ಕೆಲವೊಂದು ಭಾಗಗಳಲ್ಲಿ ಜನರು ಇವತ್ತಿಗೂ ದೀರ್ಘಾಯುಷಿಗಳಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಾಗಿದೆ. ಇದನ್ನು ನಾವು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿದರೆ ಅಥವಾ ಅಲ್ಲಿಗೆ ಹೋಗಿ ವಾಸ ಮಾಡಲು ಪ್ರಾರಂಭಿಸಿದರೆ 100 ವರ್ಷ ಖಂಡಿತಾ ಬದುಕಬಹುದು ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ (Dr. Suttur Malini). 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಸಾವು ಎಲ್ಲರಿಗೂ ಬಂದೇ ಬರುತ್ತದೆ. ಆದರೆ ದೀರ್ಘಾಯುಷ್ಯವನ್ನು ಎಲ್ಲರೂ ಬಯಸುತ್ತಾರೆ. ಹಿಂದಿನ ಕಾಲದಲ್ಲೂ ಅಮರತ್ವವನ್ನು ಪಡೆಯಲು ಬೇಕಾದಷ್ಟು ಪ್ರಯತ್ನಗಳಾಗಿವೆ. ಆದರೆ ಇವತ್ತಿಗೂ ಕೂಡ ಸಾವನ್ನು ಗೆಲ್ಲುವುದು ಮನುಷ್ಯನಿಂದ ಸಾಧ್ಯವಾಗಿಲ್ಲ. ಸಂಪೂರ್ಣವಾಗಿ ಸಾವೇ ಇಲ್ಲದೆ ಯಾವ ಜೀವಿಯು ಇಲ್ಲ. ಆದರೆ ಆಯಸ್ಸನ್ನು ವೃದ್ಧಿ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.
ದೀರ್ಘಾಯುಷ್ಯಕ್ಕೆ ನಮ್ಮ ದೇಹದಲ್ಲಿರುವ ಲಾಂಜಿವಿಟಿ ಜೀನ್ಸ್ ಮುಖ್ಯ ಕಾರಣವಾಗಿರುತ್ತದೆ. ಇವುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದರಿಂದ ನಾವು ಕೂಡ ದೀರ್ಘಾಯುಷಿ ಗಳಾಗಬಹುದು. ಇವತ್ತು ನಮ್ಮ ಸರಾಸರಿ ಆಯಸ್ಸು 70 ವರ್ಷಕ್ಕೆ ಏರಿಕೆಯಾಗಿದೆ. ಹಿಂದೆಲ್ಲ 40 ವರ್ಷಕ್ಕೆ ಕೆಲವೊಮ್ಮೆ ಸಾಂಕ್ರಾಮಿಕಗಳಿಂದ ಜನರು ಸಾವನ್ನಪ್ಪುತ್ತಿದ್ದರು. ಇವತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳಿಂದ ನಮ್ಮ ಆಯಸ್ಸು ಕೂಡ ಹೆಚ್ಚಿದೆ ಎನ್ನುತ್ತಾರೆ ಅವರು.
ಇವತ್ತಿಗೂ ಕೂಡ ಕೆಲವೊಂದು ಜಾಗಗಳಲ್ಲಿ ಜನರ ಸರಾಸರಿ ಆಯಸ್ಸು 100 ವರ್ಷಗಳಿಗಿಂತ ಹೆಚ್ಚು ಇದೆ. ಈ ಪ್ರದೇಶಗಳನ್ನು ಬ್ಲೂ ಝೋನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಜಪಾನ್ ನ ಓಕಿನೊವಾ ದ್ವೀಪ, ಇಟಲಿಯ ಸಾರ್ಡಿನಿಯಾ ಸೇರಿದೆ. ನಮ್ಮ ದೇಹದಲ್ಲಿ ಲಾಂಜಿವಿಟಿ ಜೀನ್ ಆರೋಗ್ಯವಾಗಿರಬೇಕು ಎಂದರೆ ಇವರ ಜೀವನ ಶೈಲಿಯನ್ನು ಅನುಸರಿಸಬೇಕು ಎನ್ನುತ್ತಾರೆ ಡಾ. ಮಾಲಿನಿ.
ಇಲ್ಲಿನ ಜನರ ದೈಹಿಕ ವ್ಯಾಯಾಮವೇ ಕೃಷಿ ಕಾರ್ಯಗಳಾಗಿವೆ. ಇವರು ಶುದ್ಧ ಸಸ್ಯಾಹಾರ ಸೇವನೆ ಮಾಡುತ್ತಾರೆ. ಯಾವುದೇ ರಾಸಾಯನಿಕ ಬಳಸದೆ ಬೆಳೆಸುವ ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆಸಿ ಅದನ್ನೇ ಉಪಯೋಗಿಸುತ್ತಾರೆ. ಇಲ್ಲಿ ಜನರು ತರಕಾರಿ, ಹಣ್ಣುಗಳನ್ನು ವ್ಯಾಪಾರಕ್ಕಾಗಿ ಅಲ್ಲ ತನ್ನ ಆಹಾರಕ್ಕಾಗಿಯೇ ಬೆಳೆಸುತ್ತಾರೆ. ಇಲ್ಲಿನ ಜನರು ಒಳ್ಳೆಯ ನಿದ್ರೆಯನ್ನು ಮಾಡುತ್ತಾರೆ. ಯಾವುದೇ ರೀತಿಯ
ಸಂಸ್ಕರಿಸಿದ ಆಹಾರ ಸೇವಿಸುವುದಿಲ್ಲ. ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೇ ಇರುವುದರಿಂದ ಒತ್ತಡ ರಹಿತ ಜೀವನವನ್ನು ಮಾಡುತ್ತಾರೆ. ಸಂಪೂರ್ಣ ಗ್ರಾಮದಲ್ಲಿ ಸಂಬಂಧಗಳು ಉತ್ತಮವಾಗಿವೆ. ಇದು ಇವರ ಆರೋಗ್ಯದ ಪ್ರಮುಖ ಗುಟ್ಟು. ನಾಲ್ಕೈದು ತಲೆಮಾರುಗಳು ಒಟ್ಟಿಗೆ ವಾಸ ಮಾಡುತ್ತಾರೆ. ಅವರವರ ವಯಸ್ಸಿಗೆ ತಕ್ಕಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು.
ಗ್ರಾಮದಲ್ಲಿ ಬಹುತೇಕ ಎಲ್ಲರದ್ದೂ ಒಂದೇ ರೀತಿಯ ಜೀವನ ಶೈಲಿಯಾಗಿರುತ್ತದೆ. ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಬೊಜ್ಜುತನ, ಮಧುಮೇಹ, ಹಾರ್ಮೋನ್ ಸಮಸ್ಯೆಗಳು ಇರುವುದಿಲ್ಲ. ಆರೋಗ್ಯಯುತವಾದ ಜೀವನ ನಡೆಸುತ್ತಿರುವುದರಿಂದ ನೈಸರ್ಗಿಕವಾಗಿ ಆಯಸ್ಸು ಕೂಡ ಹೆಚ್ಚಾಗುತ್ತದೆ. ಇದಕ್ಕೆ ಪೂರಕವಾಗಿ ಅವರ ಭೌಗೋಳಿಕ ವಾತಾವರಣವು ಇದೆ ಎಂದು ಅವರು ತಿಳಿಸಿದರು.
ನಮ್ಮಲ್ಲಿ ಇವತ್ತು ಹಣ್ಣು, ತರಕಾರಿಗಳು ತೋಟದಿಂದ ಮನೆಗೆ ಬರುವ ವೇಳೆ ಅದರ ಸಂಪೂರ್ಣ ಸತ್ವವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಅದರ ಗುಣಗಳು ನಮ್ಮ ದೇಹಕ್ಕೆ ಸಿಗುವುದಿಲ್ಲ. ಆಹಾರ ಸೇವನೆ ಮಾಡುವ ಶೇಕಡಾ 80ರಷ್ಟು ಮಾತ್ರ ಮಾಡಬೇಕು. ಇದರಿಂದ ನಾವು ಆರೋಗ್ಯವಾಗಿ ಇರಬಹುದು. ಮನಸ್ಸು ಹೇಳುವಷ್ಟು ಮಾತ್ರ ಆಹಾರ ಸೇವಿಸಬೇಕು. ಬಟ್ಟಲು ತುಂಬಾ ಅಲ್ಲ ಎಂದರು.