ದೀಪಾವಳಿ ಹಬ್ಬವು ದೀಪಗಳನ್ನು ಬೆಳಗಿಸುವುದು, ಪಟಾಕಿ ಸಿಡಿಸುವುದು, ಹಬ್ಬದ ಮೇಕಪ್ ಮಾಡಿ ಕೊಳ್ಳುವುದು ಹಾಗೂ ಬಣ್ಣದ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಇವು ಹಬ್ಬದ ಆಚರಣೆಯ ಅವಿಭಾಜ್ಯ ಭಾಗವಾಗಿದ್ದರೂ, ಕಣ್ಣಿಗೆ ಹಲವಾರು ಅಪಾಯಗಳನ್ನು ಉಂಟುಮಾಡಬಹುದು. ಪಟಾಕಿಗಳ ಹೊಗೆಯಿಂದ ಕಣ್ಣಿನ ಕಿರಿಕಿರಿ, ಅಲರ್ಜಿಯ ಪ್ರತಿಕ್ರಿಯೆಗಳು, ಸುಟ್ಟ ಗಾಯಗಳು, ಸೋಂಕುಗಳು ಹಾಗೂ ಗಂಭೀರ ಗಾಯ ಗಳು ಸಂಭವಿಸಬಹುದು.
ಹಬ್ಬದ ಸಂದರ್ಭದಲ್ಲಿ ಕಣ್ಣಿನ ಗಾಯಗಳು ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಕಣ್ಣಿನ ಸುರಕ್ಷತೆಯನ್ನು ಕಡೆಗಣಿಸದಂತೆ ವೈದ್ಯರು ಎಚ್ಚರಿಕೆ ನೀಡಿದ್ದು, ದೀಪಾವಳಿಯನ್ನು ಆಚರಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸಲಹೆ ನೀಡಿದ್ದಾರೆ.
ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಸುಪ್ರಿಯಾ ಶ್ರೀಗಣೇಶ್ ಅವರು, “ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಕಣ್ಣಿನ ಗಾಯಗಳು, ಪಟಾಕಿಗಳು ಕಣ್ಣಿನ ಸಮೀಪ ಸಿಡಿಯುವುದರಿಂದ ಸಂಭವಿಸುತ್ತವೆ. ಇದರಿಂದ ಕಣ್ಣಿಗೆ ಸುಟ್ಟ ಗಾಯಗಳು, ಕಾರ್ನಿಯಾದಲ್ಲಿ (ಕಣ್ಣಿನ ಪಾರದರ್ಶಕ ಮುಂಭಾಗದ ಪದರ) ಸವೆತಗಳು ಉಂಟಾಗ ಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಶಾಶ್ವತ ದೃಷ್ಟಿ ನಷ್ಟವೂ ಸಂಭವಿಸಬಹುದು.
ಇದನ್ನೂ ಓದಿ: Deepavali 2026: ದೀಪಾವಳಿ ಹಬ್ಬದಂದು 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ರಾಜ್ಯ ಸರ್ಕಾರರಿಂದ ಕಠಿಣ ಮಾರ್ಗಸೂಚಿ
ಈ ಗಾಯಗಳು ಪಟಾಕಿ ಸಿಡಿಸುವವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸುತ್ತಮುತ್ತಲಿರುವ ಮಕ್ಕಳು ಮತ್ತು ಇತರರು ಕೂಡ ಅಷ್ಟೇ ಅಪಾಯಕ್ಕೆ ಒಳಗಾಗುತ್ತಾರೆ.
ಈ ಅಪಾಯಗಳನ್ನು ಕಡಿಮೆ ಮಾಡಲು, ಪಟಾಕಿ ಸಿಡಿಸುವಾಗ ಸುರಕ್ಷಿತ ಅಂತರವನ್ನು ಕಾಯ್ದು ಕೊಳ್ಳುವುದು, ಕೈಯಲ್ಲಿ ಹಿಡಿದು ಸಿಡಿಸುವ ಪಟಾಕಿಗಳನ್ನು ಬಳಸುವುದನ್ನು ತಪ್ಪಿಸುವುದು ಹಾಗೂ ಮಕ್ಕಳು ಇರುವಾಗ ವಯಸ್ಕರು ಸೂಕ್ತ ಮೇಲ್ವಿಚಾರಣೆ ವಹಿಸುವುದು ಅತ್ಯಗತ್ಯ.
ಇದಲ್ಲದೆ, ಕಾರ್ಬೈಡ್ ಗನ್ಗಳು ಮತ್ತು ಮನೆಯಲ್ಲಿ ತಯಾರಿಸಿದ ಅಪಾಯಕಾರಿ ಸಾಧನಗಳಂತಹ ಪರ್ಯಾಯಗಳನ್ನು ಬಳಸುವುದನ್ನು ತಪ್ಪಿಸಬೇಕು. ಸಿಡಿಯದೆ ಉಳಿದ ಪಟಾಕಿಯ ಬಳಿ ಹೋಗ ಬಾರದು ಅಥವಾ ಅದನ್ನು ಮತ್ತೆ ಸಿಡಿಸಲು ಪ್ರಯತ್ನಿಸಬಾರದು. ಏಕೆಂದರೆ ಅದು ಅನಿರೀಕ್ಷಿತವಾಗಿ ಸಿಡಿದು ಗಂಭೀರ ಕಣ್ಣಿನ ಗಾಯಗಳಿಗೆ ಕಾರಣವಾಗಬಹುದು.
ಪಟಾಕಿ ಸಿಡಿಸುವವರು ಅಥವಾ ಅದರ ಸಮೀಪ ನಿಲ್ಲುವವರು ಒಡೆದು ಚೂರುಗಳಾಗದ ಪಾಲಿ ಕಾರ್ಬೊನೇಟ್ ಕನ್ನಡಕ ಅಥವಾ ರಕ್ಷಣಾತ್ಮಕ ಗಾಗಲ್ಸ್ಗಳನ್ನು ಧರಿಸಬೇಕು. ಸಾಮಾನ್ಯ ಕನ್ನಡಕ ಗಳು ಅಥವಾ ಸನ್ಗ್ಲಾಸ್ಗಳು ಸೂಕ್ತ ರಕ್ಷಣಾತ್ಮಕ ಕನ್ನಡಕಗಳಿಗೆ ಪರ್ಯಾಯವಲ್ಲ.”
ಸಾಮಾನ್ಯ ಪಟಾಕಿಗಳ ಜೊತೆಗೆ, ಹಸಿರು ಪಟಾಕಿಗಳೂ ಹೊಗೆ ಮತ್ತು ಸೂಕ್ಷ್ಮ ಕಣಗಳನ್ನು ಹೊರ ಸೂಸುತ್ತವೆ. ಇವು ಕಣ್ಣಿನ ಕಿರಿಕಿರಿಗೆ ಕಾರಣವಾಗಬಹುದು. ವಿಶೇಷವಾಗಿ ಒಣಕಣ್ಣಿನ ಸಮಸ್ಯೆ ಅಥವಾ ಅಲರ್ಜಿ ಇರುವವರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ ಯಾವುದೇ ರೀತಿಯ ಪಟಾಕಿ ಗಳ ಹೊಗೆಗೆ ದೀರ್ಘಕಾಲ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು ಮುಖ್ಯ.
ಅಪಾಯವಿಲ್ಲವೆಂದು ತೋರುವ ಇತರ ಹಬ್ಬದ ಆಚರಣೆಗಳೂ ಕಣ್ಣಿಗೆ ಹಾನಿ ಉಂಟು ಮಾಡ ಬಹುದು. ಉದಾಹರಣೆಗೆ, ಮಿನುಗು ಕಣಗಳಿರುವ ಮೇಕಪ್ನ ಸೂಕ್ಷ್ಮ ಕಣಗಳು ಕಣ್ಣಿನೊಳಗೆ ಸೇರಿದರೆ ತೀವ್ರ ಕಿರಿಕಿರಿ ಉಂಟಾಗಬಹುದು. ಸರಿಯಾಗಿ ಹೊಂದಿಕೆಯಾಗದ ಅಥವಾ ನಿಯಂತ್ರಣ ವಿಲ್ಲದ ಬಣ್ಣದ ಕಾಂಟ್ಯಾಕ್ಟ್ ಲೆನ್ಸ್ಗಳು ಕಾರ್ನಿಯಾದ ಮೇಲ್ಮೈಗೆ ಹಾನಿ ಉಂಟುಮಾಡಬಹುದು. ಇದರಿಂದ ಸೋಂಕುಗಳು, ಕಾರ್ನಿಯಾದಲ್ಲಿ ಹುಣ್ಣುಗಳು ಹಾಗೂ ಇತರ ತೊಂದರೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಹಬ್ಬದ ಸಂದರ್ಭದಲ್ಲಿ ಸೌಂದರ್ಯವರ್ಧಕಗಳು ಮತ್ತು ಅಲಂಕಾರಿಕ ಪರಿಕರಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.
ಸಮಯೋಚಿತ ಕಣ್ಣಿನ ಚಿಕಿತ್ಸೆಯ ಮಹತ್ವ ಒತ್ತಿ ಹೇಳಿದ ಡಾ.ಸುಪ್ರಿಯಾ ಅವರು, “ದೀಪಾವಳಿ ಸಂದರ್ಭದಲ್ಲಿ ಪ್ರತಿದಿನ ಸರಿಸುಮಾರು 25–30 ಪಟಾಕಿ ಸಂಬಂಧಿತ ಕಣ್ಣಿನ ಗಾಯಗಳ ಪ್ರಕರಣ ಗಳಿಗೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಇವುಗಳಲ್ಲಿ ಸುಟ್ಟ ಗಾಯಗಳು, ಕಣ್ಣನ್ನು ತೂರಿಕೊಂಡು ಉಂಟಾಗುವ ಗಾಯಗಳು ಹಾಗೂ ಕಣ್ಣಿನೊಳಗೆ ಸೇರಿಕೊಂಡಿರುವ ಹೊರಗಿನ ವಸ್ತುಗಳು ಸೇರಿವೆ. ಇಂತಹ ಗಾಯಗಳು ಹೆಚ್ಚಾಗಿ ಸರಿಯಾಗಿ ಸಿಡಿಯದ ಅಥವಾ ಮತ್ತೆ ಸಿಡಿಸಲು ಪ್ರಯತ್ನಿಸಿದ ಪಟಾಕಿಗಳಿಂದ ಉಂಟಾಗುತ್ತವೆ.
ಕೆಲವು ಪ್ರಕರಣಗಳಲ್ಲಿ ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಶಾಶ್ವತ ದೃಷ್ಟಿ ನಷ್ಟದ ಅಪಾಯವೂ ಇರುತ್ತದೆ. ಆದ್ದರಿಂದ ಗಾಯವು ಸಣ್ಣದಾಗಿ ಕಂಡರೂ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ. ಏಕೆಂದರೆ ಕಣ್ಣಿನ ಒಳಗಿನ ಹಾನಿ ಹೊರಗಿನಿಂದ ಕಾಣಿಸದೇ ಇರಬಹುದು.
ವೈದ್ಯಕೀಯ ನೆರವು ದೊರೆಯುವವರೆಗೆ ಗಾಯಗೊಂಡ ಕಣ್ಣನ್ನು ಉಜ್ಜಬಾರದು, ಒತ್ತಡ ಹಾಕ ಬಾರದು ಅಥವಾ ಕಣ್ಣಿನೊಳಗೆ ಸಿಲುಕಿರುವ ಯಾವುದೇ ವಸ್ತುವನ್ನು ತೆಗೆಯಲು ಪ್ರಯತ್ನಿಸ ಬಾರದು.
ಧೂಳು, ಹೊಗೆ ಅಥವಾ ಹೊರಗಿನ ವಸ್ತುಗಳು ಕಣ್ಣಿನೊಳಗೆ ಸೇರಿದರೆ, ವೈದ್ಯಕೀಯ ನೆರವು ಪಡೆಯುವ ವ್ಯವಸ್ಥೆ ಮಾಡುತ್ತಲೇ ತಣ್ಣನೆಯ ಶುದ್ಧ ನೀರಿನಿಂದ ಕಣ್ಣನ್ನು ನಿಧಾನವಾಗಿ ತೊಳೆಯ ಬೇಕು.
ಇತರ ರೀತಿಯ ಗಾಯಗಳಿದ್ದರೆ, ಸ್ವಚ್ಛವಾದ ಪೇಪರ್ ಕಪ್ ಅಥವಾ ರಕ್ಷಣಾತ್ಮಕ ಕವಚದಿಂದ ಕಣ್ಣನ್ನು ಸಡಿಲವಾಗಿ ಮುಚ್ಚಬೇಕು. ವೈದ್ಯಕೀಯ ಪರೀಕ್ಷೆಗೆ ಮುನ್ನ ಯಾವುದೇ ಮುಲಾಮು ಅಥವಾ ಕಣ್ಣಿನ ಹನಿಗಳನ್ನು ಬಳಸಬಾರದು.”
ಸಂಪರ್ಕಿಸಿ:
ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ
📞 +91 98451 95898
ಆಸ್ಪತ್ರೆಯ ಸುಸಜ್ಜಿತ ತುರ್ತು ಚಿಕಿತ್ಸಾ ಘಟಕವು ದಿನದ 24 ಗಂಟೆಯೂ, ವಾರದ ಏಳು ದಿನವೂ ಕಾರ್ಯ ನಿರ್ವಹಿಸುತ್ತದೆ.