ಗರ್ಭಧಾರಣೆ ಎನ್ನುವುದು ಮಹಿಳೆಯ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಒಳಗೊಂಡಿರುವ ಒಂದು ಪ್ರಕ್ರಿಯೆಯಾಗಿದೆ. ಗರ್ಭಧಾರಣೆಯಿಂದ ಮಗುವಿನ ಜನನದ ವರೆಗೆ ತಾಯಿಯಾದವಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಬದಲಾವಣೆಗೆ ಒಳಗಾಗುತ್ತಾಳೆ. ಇದರ ಜೊತೆಗೆ ತನ್ನ ಹಾಗೂ ಮಗುವಿನ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಆತಂಕವನ್ನೂ ಅನುಭವಿಸುತ್ತಾಳೆ. ಇನ್ನು ಗರ್ಭದಾರಣೆ ಆಗದೇ ಇದ್ದ ಸಂದರ್ಭದಲ್ಲಿ ಪತಿ ಪತ್ನಿಯಲ್ಲಿ ಆತಂಕ ಹೆಚ್ಚುವುದು ಸಾಮಾನ್ಯ.
ಹಲವು ಪ್ರಕರಣಗಳಲ್ಲಿ ಆರೋಗ್ಯವಂತ ದಂಪತಿಗಳಿಗೂ ಗರ್ಭಧಾರಣೆ ಸಾಧ್ಯವಾಗುವುದಿಲ್ಲ ಇದಕ್ಕೆ ಕಾರಣ ಅವರಲ್ಲಿರುವ ಕೆಲವು ಆರೋಗ್ಯ ಸಮಸ್ಯೆಗಳು. ಈ ಸಮಸ್ಯೆಗಳು ನಿತ್ಯದ ಕೆಲಸ ಕಾರ್ಯಗಳಲ್ಲಿಅಡ್ಡಿಯಾಗದೇ ಇರಬಹುದು ಆದರೆ ಗರ್ಭ ಧರಿಸುವ ವಿಚಾರದಲ್ಲಿ ಸಮಸ್ಯೆ ತಂದೊಡ್ಡುತ್ತವೆ. ಇದಕ್ಕೆ ಕೆಲವು ದೈನಂದಿನ ಅಭ್ಯಾಸಗಳೂ ಕಾರಣವಾಗುತ್ತದೆ. ಹೀಗಾಗಿ ಮಗುವಿನ ಅಪೇಕ್ಷೆಯಲ್ಲಿರುವ ದಂಪತಿಗಳಿಗೆ ವೈದ್ಯರು ಪ್ರಿ ಕನ್ಸೆಪ್ಷನ್ ( ಗರ್ಭಧಾರಣೆ ಪೂರ್ವ) ಪರೀಕ್ಷೆಗಳನ್ನು ಮಾಡಿಸಲು ಸಲಹೆ ನೀಡುತ್ತಾರೆ.
ಇದನ್ನೂ ಓದಿ: Health Tips: ಎಳನೀರು ಎಲ್ಲರಿಗೂ ಒಳಿತಲ್ಲ: ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿ ತಪ್ಪಿಯೂ ಸೇವಿಸಬೇಡಿ
ಈ ಪರೀಕ್ಷೆಗಳಿಂದ ಏನು ಲಾಭ?
ಗರ್ಭಾವಸ್ಥೆಯಲ್ಲಿ ಕಂಡುಬರುವ ಹಲವು ತೊಂದರೆಗಳಿಗೆ ಹಾಗೂ ಗರ್ಭಧಾರಣೆಗೆ ಇರುವ ತೊಂದರೆಗಳಿಗೆ ನಮ್ಮ ದೇಹದಲ್ಲಿರುವ ಆರೋಗ್ಯ ಸಮಸ್ಯೆಗಳೇ ಕಾರಣವಾಗಿರುತ್ತವೆ. ಥೈರಾಯ್ಡ್ ಸಮಸ್ಯೆ, ಋತುಚಕ್ರದಲ್ಲಿ ಏರುಪೇರು (ಪಿಸಿಒಡಿ), ಹಿಮೊಗ್ಲೊಬಿನ್ ಕೊರತೆ, ಡಯಾಬಿಟಿಸ್‌ನಂತಹ ಸಮಸ್ಯೆಗಳಿಗೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು. ಪ್ರೀ ಕನ್ಸೆಪ್ಷನ್ ಪರೀಕ್ಷೆಯಿಂದ ಮಗುವಿನ ನ್ಯೂನ್ಯತೆ, ಗರ್ಭಪಾತ ಸೇರಿ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಜೊತೆಗೆ ದಂಪತಿಗಳ ಆರೋಗ್ಯ ಪರೀಕ್ಷೆಯ ಫಲಿತಾಂಶದಿಂದ ಅವರ ಜೀವನಶೈಲಿಯಲ್ಲಿ ಬದಲಾವಣೆ, ಪೂರಕ ಮೆಡಿಸಿನ್‌ಗಳ ಸಲಹೆಯನ್ನು ವೈದ್ಯರು ನೀಡುತ್ತಾರೆ.
ಯಾರಿಗೆಲ್ಲ ಪ್ರಿ ಕನ್ಸೆಪ್ಷನ್ ಪರೀಕ್ಷೆ ಅಗತ್ಯ?
ಈ ಪರೀಕ್ಷೆಯನ್ನ ಸಾಮಾನ್ಯವಾಗಿ ಮಗುವಿನ ಅಪೇಕ್ಷೆ ಇರುವ ಎಲ್ಲಾ ದಂಪತಿಗಳೂ ಮಾಡಿಸಿ ಕೊಳ್ಳಬಹುದು. ಒಂದು ವರ್ಷದವರೆಗಿನ ಪ್ರಯತ್ನದ ನಂತರವೂ ಮಕ್ಕಳಾಗದೇ ಇದ್ದಲ್ಲಿ, 35ಕ್ಕೂ ಹೆಚ್ಚಿನ ವಯಸ್ಸಿನ ಮಹಿಳೆಯರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು, ಥೈರಾಯ್ಡ್ ಸಮಸ್ಯೆ, ಮುಟ್ಟಿನ ಸಮಸ್ಯೆ, ಗರ್ಭಕೋಶ ಅಥವಾ ಸಂತಾನೋತ್ಪತ್ತಿ ಅಂಗದ ಶಸ್ತ್ರ ಚಿಕಿತ್ಸೆ ಆಗಿದ್ದರೆ ಗರ್ಭಧಾರೆಗೂ ಮುನ್ನ ಪರೀಕ್ಷೆಗೆ ಒಳಗಾಗುವುದು ಉತ್ತಮ.
ಯಾವೆಲ್ಲ ಪರೀಕ್ಷೆಗಳನ್ನು ನಡೆಸಲಾಗುತ್ತದೆ?
ಗರ್ಭಧಾರಣೆಗೂ ಮುನ್ನ ದಂಪತಿಗಳಿಬ್ಬರಿಗೂ ಕೆಲವು ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಗಂಡಸ ರಿಗೆ ವೀರ್ಯಾಣು ಪರೀಕ್ಷೆ, ಹಾರ್ಮೋನ್ ಪರೀಕ್ಷೆ, ಸೋಂಕು ಅಥವಾ ಜೆನಿಟಿಕ್ ಕಂಡೀಶನ್ ( ಥಲಸ್ಸೇಮಿಯಾ, ಸಿಕಲ್ ಸೆಲ್ ರೋಗ) ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಮಹಿಳೆಯರಿಗೆ ತೂಕ , ರಕ್ತದೊತ್ತಡ ಸೇರಿ ಸಂಪೂರ್ಣ ದೈಹಿಕ ಆರೋಗ್ಯ ಪರೀಕ್ಷೆ, ರಕ್ತ ಪರೀಕ್ಷೆ ಯಲ್ಲಿ ಹಿಮೊಗ್ಲೊಬಿನ್ ಮಟ್ಟ, ಕಬ್ಬಿಣಾಂಶ, ವಿಟಮಿನ್ ಡಿ, ಫೋಲೆಟ್ , ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಜೊತೆಗೆ ಪೆಲ್ವಿಕ್ ಸ್ಕ್ಯಾನ್ , ಹೆಚ್‌ಪಿವಿ ಪರೀಕ್ಷೆ, ಗರ್ಭಕೋಶದಲ್ಲಿ ಅಸಹಜತೆ, ಸೋಂಕು ಇವುಗಳ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತದೆ.
ಒಟ್ಟಾರೆ ಆರೋಗ್ಯ ಪೂರ್ಣ ಗರ್ಭಧಾರಣೆಗೆ ನೆರವಾಗುವಂತೆ ದೇಹವನ್ನು ಸಿದ್ಧಪಡಿಸಲು ಹಾಗೂ ಹುಟ್ಟುವ ಮಗು ಆರೋಗ್ಯ ಪೂರ್ಣವಾಗಿ ಜನಿಸಲು ನೆರವಾಗುವಂತೆ ದೇಹವನ್ನು ಸಿದ್ಧಪಡಿಸಲು ಈ ಪ್ರೀ ಕನ್ಸೆಪ್ಷನ್ ಪರೀಕ್ಷೆಯನ್ನು ನಡೆಸುವುದು ಮುಖ್ಯವಾಗಿದೆ. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಕಡಿಮೆ ಇದ್ದು ಮಗುವಿನ ಅಪೇಕ್ಷೆಯಲ್ಲಿರುವ ದಂಪತಿಗಳು ಗರ್ಭಧಾರಣೆಗೂ ಮುನ್ನ ನಡೆಸುವ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಲುವುದು ಉತ್ತಮ.
ಡಾ.ನಿತೇಶ್ .ಸಿ
ಕನ್ಸಲ್ಟೆಂಟ್ ಸ್ತ್ರೀರೋಗ ತಜ್ಞರು ಮತ್ತು ಲ್ಯಾಪ್ರೊಸ್ಕೊಪಿಕ್ ಸರ್ಜನ್
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ಶೃಂಗೇರಿ