ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆನ್ನಿನ ಆರೋಗ್ಯಕ್ಕೆ ಯಾವ ಭಂಗಿಯೂ ಸೂಕ್ತವಲ್ಲ: ಯಾಕೆ ಗೊತ್ತೆ?

Health Tips: ಬೆಳಗಿನ ಹೊತ್ತು ಕಂಪ್ಯೂಟರ್‌ ಮುಂದೆ ಕೂತರೆ, ಮುಗಿಯದ ಮೀಟಿಂಗ್‌ಗಳು, ಕಾಡುತ್ತಿರುವ ಡೆಡ್‌ಲೈನ್‌ಗಳು, ಕಾಯುತ್ತಿರುವ ಕೆಲಸಗಳು… ಇವೆಲ್ಲವುಗಳ ನಡುವೆ ಕುರ್ಚಿಯಿಂದ ಏಳುವುದನ್ನು ಮುಂದೂಡುತ್ತೇವೆ; ಕೈಕಾಲು ಸಡಿಲ ಮಾಡಿಕೊಳ್ಳುವುದು ದೂರವೇ ಉಳಿಯಿತು; ವ್ಯಾಯಾಮ ಮಾಡುವುದಂತೂ ಅಸಂಭವ. ಹೀಗಿದ್ದಾಗ ಬೆನ್ನಿನ ಅವಸ್ಥೆ ಏನಾಗಬೇಕು? ಬೆನ್ನು ಹುರಿಯ ತೊಂದರೆಗಳು ಮೂವತ್ತರ ಹರೆಯಕ್ಕೇ ಕಾಡುತ್ತಿರುವ ಕಾರಣಗಳು ನಮ್ಮ ಜೀವನಶೈಲಿಯಲ್ಲೇ ಇವೆಯಲ್ಲವೇ? ಇದಕ್ಕೆ ಪರಿಹಾರವೇನು?

ಸಂಗ್ರಹ ಚಿತ್ರ

ನವದೆಹಲಿ: ಆಡು ಮಾತಿನಲ್ಲಿ ಬರುವ ಕೆಲವು ಶಬ್ದಗಳನ್ನು ಗಮನಿಸಿ. ಕೂತು ತಿನ್ನುವುದು, ಆರಾಮಾಗಿ ಕೂತಿರುವುದು, ಕಾಲು ಚಾಚಿ ಕೂರುವುದು- ಇಂಥ ಎಲ್ಲ ಮಾತುಗಳಲ್ಲೂ ಬರುವುದು ಕೂರುವುದೆಂದರೆ ಒಂದು ಬಗೆಯ ಆರಾಮದಾಯಕ ವಿಷಯ ಎನ್ನುವುದು. ಆದರೆ ಕೂರುವುದೇ ತ್ರಾಸದಾಯಕ ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವುದು ಸುಳ್ಳೇನಲ್ಲವಲ್ಲ. ಬೆಳಗಿನ ಹೊತ್ತು ಕಂಪ್ಯೂಟರ್‌ ಮುಂದೆ ಕೂತರೆ, ಮುಗಿಯದ ಮೀಟಿಂಗ್‌ಗಳು, ಕಾಡುತ್ತಿರುವ ಡೆಡ್‌ಲೈನ್‌ ಗಳು, ಕಾಯುತ್ತಿರುವ ಕೆಲಸಗಳು. ಇವೆಲ್ಲವುಗಳ ನಡುವೆ ಕುರ್ಚಿಯಿಂದ ಏಳುವುದನ್ನು ಮುಂದೂಡುತ್ತೇವೆ; ಕೈಕಾಲು ಸಡಿಲ ಮಾಡಿಕೊಳ್ಳುವುದು ದೂರವೇ ಉಳಿಯಿತು; ವ್ಯಾಯಾಮ ಮಾಡುವುದಂತೂ ಅಸಂಭವ. ಹೀಗಿದ್ದಾಗ ಬೆನ್ನಿನ ಅವಸ್ಥೆ ಏನಾಗಬೇಕು? ಬೆನ್ನು ಹುರಿಯ ತೊಂದರೆಗಳು (Back Pain) ಮೂವತ್ತರ ಹರೆಯಕ್ಕೇ ಕಾಡುತ್ತಿರುವ ಕಾರಣಗಳು ನಮ್ಮ ಜೀವನಶೈಲಿಯಲ್ಲೇ ಇವೆಯಲ್ಲವೇ? ಇದಕ್ಕೆ ಪರಿಹಾರವೇನು?

ಹಾಗಾದರೆ ಕುಳಿತುಕೊಳ್ಳುವ ʻಸರಿಯಾದʼ ಭಂಗಿ ಎನ್ನುವುದು ಇದೆಯೇ? ಇದ್ದರೆ ಯಾವುದು? ಅದು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವೇ? ಎಲ್ಲರಿಗೂ ಒಂದೇ ಆಗಿರುತ್ತದೆಯೇ? ಇಂಥ ಬಹಳಷ್ಟು ಪ್ರಶ್ನೆಗಳು ನಮ್ಮ ತಲೆಯಲ್ಲಿ ಬರಬಹುದು. ಬೆನ್ನು ಹುರಿಯ ವಿಷಯದಲ್ಲಿ ಹೇಳುವುದಾದರೆ, ಯಾವುದೋ ಒಂದು ʻಸರಿಯಾದʼ ಎನ್ನುವುದನ್ನು ಆರೋಗ್ಯ ತಜ್ಞರು ಒಪ್ಪುವುದಿಲ್ಲ. ಅಂದರೆ ಬೆನ್ನು ನೇರ ಮಾಡಿ ಕುಳಿತುಕೊಳ್ಳಬೇಕೆಂಬ ಭಂಗಿಯೇ ಸರಿ ಅಥವಾ ಸ್ವಲ್ಪ ಆರಾಮದಾಯಕವಾಗಿ ಕೂರುವುದು ಒಳ್ಳೆಯದು ಎನ್ನುವಂಥ ಯಾವುದನ್ನೂ ಇತ್ತೀಚೆಗೆ ಒಪ್ಪಲಾಗುತ್ತಿಲ್ಲ. ಹಾಗಾದರೆ ಇನ್ನೇನು ಮಾಡಬೇಕು?

ಮೊದಲಿಗೆ ನಮ್ಮ ಬೆನ್ನುಮೂಳೆಯನ್ನು ಅರ್ಥಮಾಡಿಕೊಳ್ಳೋಣ. ನಮ್ಮ ಬೆನ್ನು ಹುರಿಯೆಂದರೆ ನೇರವಾದ ಕಂಬದಂತೆ ಇರುವುದಿಲ್ಲ. 24 ಶೇರುಕಮಣಿಗಳನ್ನು ಹೊಂದಿದ, ಆಧಾರಕ್ಕೆ ಡಿಸ್ಕ್‌ ಇರುವಂಥ, ಜೊತೆಗೆ ನರ ಮತ್ತು ಸ್ನಾಯುಗಳನ್ನು ಹೊಂದಿರುವಂಥ ಸಂರಚನೆಯದು. ಇದನ್ನು ನಿಸರ್ಗ ರಚಿಸಿರುವುದು ಚಲನೆಗಾಗಿ, ಬಿಗಿಯಾಗಿ ಕುರ್ಚಿಗೆ ಅಂಟಿಕೊಂಡು ಕೂತಿರುವುದಕ್ಕಲ್ಲ. ಹಾಗಾಗಿ ದೀರ್ಘ ಕಾಲ ಕೂತಷ್ಟಕ್ಕೂ ಬೆನ್ನು, ಪೃಷ್ಠ, ಭುಜ ಮುಂತಾದ ಎಲ್ಲ ಅಂಗಗಳೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಯಾವ ಭಂಗಿ?: ತಜ್ಞರ ಪ್ರಕಾರ ಬೆನ್ನು ಹುರಿಗೆ ʻಒಂದು ಸರಿಯಾದ ಭಂಗಿʼ ಎನ್ನುವುದು ಇಲ್ಲ. ಬದಲಿಗೆ, ಯಾವುದೇ ಭಂಗಿಯಲ್ಲಿ ಎಷ್ಟು ಹೊತ್ತು ಕುಳಿತುಕೊಳ್ಳುತ್ತೀರಿ ಎನ್ನುವುದು ಮುಖ್ಯ. ಅಂದರೆ, ಆರಾಮ ಭಂಗಿಯಲ್ಲೇ ಕುಳಿತಿರಿ ಅಥವಾ ಬೆನ್ನು ನೇರವಾಗಿಸಿಯೇ ಕುಳಿತಿರಿ- ಹೇಗೇ ಆದರೂ ಆಯಾ ಭಂಗಿಯಲ್ಲಿ ಎಷ್ಟು ಹೊತ್ತು ಕೂತಿರುತ್ತೀರಿ ಎನ್ನುವುದು ಮುಖ್ಯವಾದ ಸಂಗತಿ. ದೀರ್ಘ ಸಮಯ ಯಾವುದೇ ಭಂಗಿಯಲ್ಲಿ ಕೂತರೂ ಸಮಸ್ಯೆ ಗಂಟಾಗುವುದು ನಿಶ್ಚಿತ.

ಬೆನ್ನು ನೇರವಾಗಿಸಿ ಕುಳಿತುಕೊಂಡರೆ ಬೆನ್ನಿನ ಹುರಿಯ ಮೇಲೆ ಒತ್ತಡ ಹೆಚ್ಚಾಗಿ ಉಜ್ಜಿದಂತಾಗಿ, ʻಕಂಪ್ರೆಷನ್‌ʼ ಇದೆಯೆಂದು ವೈದ್ಯರಿಂದ ಚಿಕಿತ್ಸೆ ಬೇಕಾಗಬಹುದು. ಬೆನ್ನು ಸೊಟ್ಟ ಮಾಡಿ ಆರಾಮದಾಯಕ ಭಂಗಿಯಲ್ಲಿ ಕೂತರೆ, ಸೊಂಟದ ಡಿಸ್ಕ್‌ಗಳ ಮೇಲೆ ಒತ್ತಡ ಹೆಚ್ಚಿ, ಅದಕ್ಕೆ ಚಿಕಿತ್ಸೆ ಬೇಕಾಗಬಹುದು. ಅಂತೂ ಯಾವುದೇ ಭಂಗಿಯಲ್ಲಿ ದೀರ್ಘ ಕಾಲ ಕೂತರೂ ಬೆನ್ನಿನ ಸಮಸ್ಯೆ ತಪ್ಪಿದ್ದಲ್ಲ. ಹಾಗಾಗಿ ಎಷ್ಟೇ ಒತ್ತಡದ ಕೆಲಸಗಳನ್ನು ಮಾಡುವವರು ನೀವಾದರೂ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಮೊದಲು ನಿಲ್ಲಿಸಿ. ಇದಕ್ಕೆ ಹೊರತಾಗಿ, ಯಾವುದೇ ʻಒಂದು ಸರಿಯಾದ ಭಂಗಿʼಯಲ್ಲಿ ಕೂತು ಬೆನ್ನು ಕಾಪಾಡಿಕೊಳ್ಳುವ ಪ್ರಯತ್ನ ವ್ಯರ್ಥ.

Health Tips: ಕೇಸರಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಗೊತ್ತಾ?

ಇದಕ್ಕೆ ಬದಲು, ಸ್ವಲ್ಪವೇ ಸ್ವಲ್ಪ ಒರಗಿದಂತೆ, ಅಂದರೆ ತೀರ ನೇರವೂ ಅಲ್ಲದೆ, ಬೆನ್ನು ಸೊಟ್ಟವಾಗಿಸದೆ, ಅಲ್ಪ ಪ್ರಮಾಣದಲ್ಲಿ ನೇರವಾಗಿ ಹಿಂದಕ್ಕೆ ಒರಗಿದಂತೆ ಕುಳಿತುಕೊಳ್ಳುವುದು ಕಡಿಮೆ ಸಮಸ್ಯೆಗಳನ್ನು ತರಬಹುದು. ಆದರೆ ಇದಕ್ಕೆ ಭದ್ರವಾದ ಆಧಾರ ಬೇಕಾಗುತ್ತದೆ. ಇದು ಬೆನ್ನುಹುರಿಯ ಮೇಲಿನ ಒತ್ತಡವನ್ನ ಕಡಿಮೆ ಮಾಡುತ್ತದೆ. ಜೊತೆಗೆ, ಡಿಸ್ಕ್‌ಗಳ ಮೇಲಿನ ಭಾರವನ್ನೂ ಕಡಿಮೆ ಮಾಡಬಲ್ಲದು. ಇದಕ್ಕೂ ಸಹ ದೀರ್ಘ ಸಮಯ ಕುಳಿತುಕೊಳ್ಳಲಾಗದ ಮಿತಿ ಇದ್ದೇಇದೆ.

ಯಾವುದೇ ಭಂಗಿಯಲ್ಲಿ ಕೂತರೂ, ನಡುವೆ ಎದ್ದು ಓಡಾಡುವುದು ಕಡ್ಡಾಯ. ಆಗಾಗ ಒಂದೆರಡು ನಿಮಿಷಗಳಿಗೆ ಚಿಕ್ಕದೊಂದು ವ್ಯಾಯಾಮ ಮಾಡಿ, ಮೈಮುರಿಯಿರಿ. ನೀರನ್ನು ನಿಮ್ಮ ಬಳಿ ತಂದಿಟ್ಟುಕೊಳ್ಳುವ ಬದಲು, ಎದ್ದು ನೀರು ಇರುವ ಸ್ಥಳಕ್ಕೆ ಹೋಗಿ, ರೆಸ್ಟ್‌ರೂಮ್‌ ಓಡಾಟವನ್ನು ಮುಂದೂಡಬೇಡಿ. ಅಂತೂ ಒಂದೇ ಸಮನೆ ಕುಳಿತುಕೊಳ್ಳುವುದನ್ನು ತಪ್ಪಿಸಲು ಏನು ಸಾಧ್ಯವೋ ಎಲ್ಲವನ್ನೂ ಮಾಡಿ. ಬೆನ್ನಿಗೆ ಅದೇ ಕ್ಷೇಮ.