ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರೋಗ್ಯ ತಪಾಸಣೆಗೆ ಹೋದವರಲ್ಲಿ ದೀರ್ಘಕಾಲದಿಂದಿದ್ದ ಕಾಯಿಲೆ ಪತ್ತೆ

ರಕ್ತಸ್ರಾವದ ಹಿನ್ನೆಲೆ ಕೂಡ ಇರಲಿಲ್ಲ. ಇನ್ನೂ ಹೆಚ್ಚಿನ ತಪಾಸಣೆ ನಡೆಸಿದಾಗ, ಅವರ ರೋಗ ನಿರೋಧಕ ವ್ಯವಸ್ಥೆಯು ಅವರದ್ದೇ ದೇಹದ ಕೆಂಪು ರಕ್ತ ಕಣಗಳನ್ನು ನಾಶ ಮಾಡುತ್ತಿದೆ ಎಂಬುದು ಗೊತ್ತಾಯಿತು. ಇದು ಬಹಳ ಅಪರೂಪದ ಸಮಸ್ಯೆಯಾದರೂ, ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದನ್ನು ವಾರ್ಮ್‌ ಆಟೊಇಮ್ಯೂನ್‌ ಹೀಮೊಲಿಟಿಸ್‌ ಅನೀಮಿಯಾ ಎನ್ನುತ್ತಾರೆ.

ಬೆಂಗಳೂರು: ಎಂದಿನಂತೆ, ಕಾಲಕಾಲಕ್ಕೆ ನಡೆಯುವ ಆರೋಗ್ಯ ತಪಾಸಣೆಗೆ ಹೋದಾಗ ದೀರ್ಘಾ ವಧಿಯಿಂದ ಇದ್ದ ಕಾಯಿಲೆ ಪತ್ತೆಯಾದರೆ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಿ.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಗೆ ಎಂದಿನಂತೆ ಆರೋಗ್ಯ ತಪಾಸಣೆಗೆ ಬಂದ ಮೂವರು ರೋಗಿಗಳು ಎದುರಿಸಿದ್ದು ಇದೇ ಪರಿಸ್ಥಿತಿಯನ್ನು. ಅವರಲ್ಲಿ ದೀರ್ಘಾವಧಿಯಿಂದ ಇದ್ದ ಕಾಯಿಲೆ ಗಳು ಪತ್ತೆಯಾಗಿವೆ. ಆದರೆ, ಅದೃಷ್ಟವಶಾತ್‌, ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು ಈ ಕಾಯಿಲೆ ಗಳನ್ನು ಸರಿಯಾಗಿ ಪತ್ತೆ ಮಾಡಿ, ಸೂಕ್ತವಾದ ಚಿಕಿತ್ಸೆ ನೀಡಿದ್ದಾರೆ.

ಈ ಪ್ರಕರಣವು, ರೋಗ ಪತ್ತೆಯು ಸರಿಯಾಗಿ ಆಗಬೇಕು ಹಾಗೂ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ ಆಗಬೇಕು ಎಂದಾದರೆ ಕಾಲಕಾಲಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಿರುವುದರ ಮಹತ್ವ ಹೇಳುತ್ತಿದೆ.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಆಂತರಿಕ ಔಷಧ (Internal Medicine) ವಿಭಾಗದ ನಿರ್ದೇಶಕರಾದ ಡಾ. ಶೀಲಾ ಚಕ್ರವರ್ತಿ ಅವರ ಪರಿಣತಿಯ ಚಿಕಿತ್ಸೆಯನ್ನು ಈ ಮೂವರೂ ರೋಗಿಗಳಿಗೆ ನೀಡಲಾಗಿದೆ. ಮೂವರ ಪ್ರಕರಣದಲ್ಲಿ, ಸಾಮಾನ್ಯವಾಗಿ ನಾವು ಅಲಕ್ಷ್ಯ ಮಾಡುವಂತಹ ನೋವು, ಸುಸ್ತು ಅಥವಾ ಜ್ವರವು ದೀರ್ಘಾವಧಿಯ ಕಾಯಿಲೆಗಳಾದ ಕ್ಯಾನ್ಸರ್‌, ಸ್ವಯಂರೋಗನಿರೋಧಕ ಕಾಯಿಲೆ, ಶ್ವಾಸಕೋಶದ ದೀರ್ಘಾವಧಿಯ ಉರಿಯೂತ ದಂತಹ ಕಾಯಿಲೆಗಳ ಲಕ್ಷಣಗಳಾಗಿದ್ದವು. ದೇಹವು ಆರಂಭಿಕ ಹಂತದಲ್ಲಿಯೇ ನೀಡುವ ಕೆಲವು ಸೂಚನೆಗಳು ಬಹಳ ಸೌಮ್ಯವಾಗಿ ಕಂಡರೂ ಚಿಕಿತ್ಸೆಯ ದೃಷ್ಟಿಯಿಂದ ಎಷ್ಟು ಮಹತ್ವದ್ದಾಗುತ್ತವೆ ಎಂಬುದನ್ನು ಈ ಪ್ರಕರಣ ಹೇಳುತ್ತಿದೆ.

ಇದನ್ನೂ ಓದಿ: Kidney Health : ಎಲ್ಲಾ ವಯಸ್ಸಿನವರಲ್ಲೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯ: ತಡೆಗಟ್ಟುವಿಕೆ, ಆರೈಕೆ ಮತ್ತು ಜಾಗೃತಿ

ಮೊದಲ ಪ್ರಕರಣದಲ್ಲಿ, ಬೆಂಗಳೂರಿನ 54 ವರ್ಷ ವಯಸ್ಸಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರಿಗೆ ಎರಡೂ ಕಾಲುಗಳಲ್ಲಿ ತೀವ್ರ ಸ್ವರೂಪದ ನೋವು ಕಾಣಿಸಿಕೊಳ್ಳುತ್ತಿತ್ತು. ಆ ನೋವು ಬೆನ್ನಿನ ಕೆಳಭಾಗದಿಂದ ತೊಡೆಗಳು, ಕಾಲುಗಳ ಮೀನುಖಂಡ, ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ನೋವು ಒಂದೇ ಪ್ರಮಾಣದಲ್ಲಿ ಇರುತ್ತಿತ್ತು. ಆದರೆ ರಾತ್ರಿ ಹೊತ್ತಿನಲ್ಲಿ ಮತ್ತು ನಿಂತಾಗ ಅಥವಾ ನಡೆಯುವಾಗ ತೀವ್ರವಾಗುತ್ತಿತ್ತು. ನೋವುನಿವಾರಕ ಮಾತ್ರೆಗಳನ್ನು ನುಂಗಿದಾಗ ನೋವು ಕಡಿಮೆ ಆಗುತ್ತಿರಲಿಲ್ಲ.

ಆರಂಭದಲ್ಲಿ, ಈ ನೋವು ನರಗಳ ಅಥವಾ ಬೆನ್ನುಹುರಿಯ ಸಮಸ್ಯೆಯಂತೆ ಕಾಣಿಸಿತು. ಆದರೆ ವೈದ್ಯರಿಗೆ ಅಸಹಜವಾದ ಲಕ್ಷಣವೊಂದು ಎಚ್ಚರಿಕೆಯ ಕರೆಗಂಟೆಯ ರೂಪದಲ್ಲಿ ಕಾಣಿಸಿತು. ರೋಗಿಯು ಮೂರು ತಿಂಗಳಲ್ಲಿ ಎಂಟು ಕೆ.ಜಿ. ತೂಕ ಕಳೆದುಕೊಂಡಿದ್ದರು. ಏಕೆ ಹೀಗಾಯಿತು ಎಂಬುದಕ್ಕೆ ಸೂಕ್ತ ವಿವರಣೆ ಇರಲಿಲ್ಲ. ಮಾಮೂಲಿಯಾಗಿ ನಡೆಸುವ ರಕ್ತದ ಪರೀಕ್ಷೆಗಳಲ್ಲಿ ಎಲ್ಲವೂ ಸಹಜವಾಗಿ ಇದ್ದವು. ಆದರೆ ಹೆಚ್ಚಿನ ತಪಾಸಣೆ ನಡೆಸಿದಾಗ ನರಗಳ ಉರಿಯೂತದ ಸಮಸ್ಯೆ ಇರುವುದು ಗೊತ್ತಾಯಿತು. ಪಿಇಟಿ-ಸಿಟಿ ಸ್ಕ್ಯಾನ್‌ ನಡೆಸಿದ ವೈದ್ಯರಿಗೆ, ರೋಗಿಗೆ ಶ್ವಾಸ ಕೋಶದ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಈ ಕ್ಯಾನ್ಸರ್‌ ಇತರೆಡೆ ಹರಡಿ ನರಕ್ಕೆ ಸಂಬಂಧಿಸಿದ ನೋವು ಉಂಟುಮಾಡುತ್ತಿತ್ತು.

ನಂತರ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ ಕ್ಯಾನ್ಸರ್‌ ತಜ್ಞರ ತಂಡದ ಬಳಿ ಕಳುಹಿಸಲಾಯಿತು. ನಿರಂತರವಾಗಿ ಕಾಣಿಸಿಕೊಳ್ಳುವ ನೋವನ್ನು, ಅದರಲ್ಲೂ ಮುಖ್ಯವಾಗಿ ನೋವಿನ ಜೊತೆ ಅಸಹಜವಾಗಿ ತೂಕ ಕಡಿಮೆ ಆಗುತ್ತಿದ್ದರೆ ಅದನ್ನು ಕಡೆಗಣಿಸುವುದರಲ್ಲಿ ಇರುವ ಅಪಾಯವನ್ನು ಈ ಪ್ರಕರಣವು ಹೇಳುತ್ತಿದೆ.

ಇನ್ನೊಂದು ಪ್ರಕರಣವು 23 ವರ್ಷ ವಯಸ್ಸಿನ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬರದ್ದು. ಅವರಿಗೆ ಒಂದು ತಿಂಗಳಿನಿಂದ ಸುಸ್ತು ಕಾಣಿಸಿಕೊಳ್ಳುತ್ತಿತ್ತು, ಅದು ಹೆಚ್ಚಾಗುತ್ತಲೇ ಇತ್ತು. ಆ ವಿದ್ಯಾರ್ಥಿನಿಗೆ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದು ಕೂಡ ಕಷ್ಟವಾಗುತ್ತಿತ್ತು. ರಕ್ತದ ಪರೀಕ್ಷೆ ನಡೆಸಿದಾಗ ಅವರ ರಕ್ತದಲ್ಲಿ ಹೀಮೊಗ್ಲೋಬಿನ್‌ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಕಡಿಮೆ ಇರುವುದು ಪತ್ತೆಯಾಯಿತು. ಆದರೆ ಆ ವಿದ್ಯಾರ್ಥಿನಿಗೆ ಹಿಂದೆ ಯಾವುದೇ ಕಾಯಿಲೆಗಳು ಇದ್ದಿರಲಿಲ್ಲ.

ರಕ್ತಸ್ರಾವದ ಹಿನ್ನೆಲೆ ಕೂಡ ಇರಲಿಲ್ಲ. ಇನ್ನೂ ಹೆಚ್ಚಿನ ತಪಾಸಣೆ ನಡೆಸಿದಾಗ, ಅವರ ರೋಗ ನಿರೋಧಕ ವ್ಯವಸ್ಥೆಯು ಅವರದ್ದೇ ದೇಹದ ಕೆಂಪು ರಕ್ತ ಕಣಗಳನ್ನು ನಾಶ ಮಾಡುತ್ತಿದೆ ಎಂಬುದು ಗೊತ್ತಾಯಿತು. ಇದು ಬಹಳ ಅಪರೂಪದ ಸಮಸ್ಯೆಯಾದರೂ, ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದನ್ನು ವಾರ್ಮ್‌ ಆಟೊಇಮ್ಯೂನ್‌ ಹೀಮೊಲಿಟಿಸ್‌ ಅನೀಮಿಯಾ ಎನ್ನುತ್ತಾರೆ.

ಈ ವಿದ್ಯಾರ್ಥಿನಿಗೆ ರಕ್ತ ನೀಡುವ, ಸ್ಟೆರಾಯ್ಡ್‌ ಔಷಧ ನೀಡುವ, ಫೋಲಿಕ್‌ ಆಮ್ಲ ಮತ್ತು ಇಮ್ಯು ನೋಸಪ್ರೆಸಿಸ್‌ ಚಿಕಿತ್ಸೆಯನ್ನು ಬಹಳ ಜಾಗರೂಕತೆಯಿಂದ ಒದಗಿಸಲಾಯಿತು. ರೋಗವು ಸರಿಯಾದ ಸಮಯದಲ್ಲಿ ಪತ್ತೆ ಆಗಿದ್ದುದು ಹಾಗೂ ಸೂಕ್ತವಾದ ಚಿಕಿತ್ಸೆ ಸಿಕ್ಕಿದ್ದುದು ಈ ವಿದ್ಯಾರ್ಥಿ ನಿಯ ಸ್ಥಿತಿಯು ಸ್ಥಿರವಾಗುವಲ್ಲಿ ಸಹಾಯ ಮಾಡಿತು. ಇದರಿಂದಾಗಿ ಜೀವಕ್ಕೆ ಅಪಾಯ ಎದುರಾಗಬಹುದಿದ್ದ ಸಾಧ್ಯತೆ ಇಲ್ಲವಾಯಿತು, ದೀರ್ಘಾವಧಿಗೆ ಕಾಯಿಲೆಯನ್ನು ನಿರ್ವಹಿಸಲು ಸಾಧ್ಯವಾಗುವಂತೆ ಆಯಿತು.

ಮೂರನೆಯ ಪ್ರಕರಣದಲ್ಲಿ, ಬೆಂಗಳೂರಿನ 51 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಎಡಭಾಗದ ಶ್ವಾಸಕೋಶವು ಹುಟ್ಟಿನಿಂದಲೇ ಸರಿಯಾಗಿ ಬೆಳವಣಿಗೆ ಕಂಡಿರಲಿಲ್ಲ. ಅವರಿಗೆ ಸರಿಸುಮಾರು ಒಂದು ತಿಂಗಳಿನಿಂದ ಜ್ವರ ಬರುತ್ತಿತ್ತು, ಅದರ ಜೊತೆ ನಡುಕ, ಒಣಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇತ್ತು. ಮಾಮೂಲಿ ಚಿಕಿತ್ಸೆಯಿಂದ ಈ ಲಕ್ಷಣಗಳು ವಾಸಿ ಆಗುತ್ತಿರಲಿಲ್ಲ. ಅವರ ದೇಹದ ತೂಕವು ಅಸಹಜವಾಗಿ ಕಡಿಮೆ ಆಗಿತ್ತು.

ವಿಸ್ತೃತವಾದ ತಪಾಸಣೆ ನಡೆಸಿದಾಗ ಅವರಿಗೆ ಶ್ವಾಸಕೋಶದ ಸೋಂಕಿಗಿಂತಲೂ ಶ್ವಾಸಕೋಶದ ಉರಿಯೂತದ ಸಮಸ್ಯೆ ಇರುವುದು ಪತ್ತೆಯಾಯಿತು. ಅವರ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ಪಾರಿವಾಳಗಳ ಜೊತೆ ದೀರ್ಘ ಅವಧಿಯಿಂದ ಒಡನಾಟ ಇರುವುದು, ಹಕ್ಕಿಗಳ ಪ್ರೊಟೀನ್‌ನಿಂದಾಗಿ ಉಂಟಾಗುವ ಅಲರ್ಜಿಯಿಂದಾಗಿ ಶ್ವಾಸಕೋಶದ ಉರಿಯೂತದ ಸ್ಥಿತಿ ಇರುವುದು ಗೊತ್ತಾಯಿತು. ಈ ಪರಿಸ್ಥಿತಿಯಲ್ಲಿ ಬಹಳ ಮುಖ್ಯವಾದ ಚಿಕಿತ್ಸೆ, ಪಕ್ಷಿಗಳ ಜೊತೆಗಿನ ಒಡನಾಟವನ್ನು ತಡೆಯುವುದು ಒಂದಾಗಿತ್ತು. ಅದರ ಜೊತೆಯಲ್ಲೇ ಶ್ವಾಸಕೋಶದ ಉರಿಯೂತವನ್ನು ಕಡಿಮೆ ಮಾಡಲು ಅಲ್ಪಾವಧಿಯ ಸ್ಟೆರಾಯ್ಡ್‌ ಚಿಕಿತ್ಸೆ ನೀಡಲಾಯಿತು.

ರೋಗದ ಮೂಲವನ್ನು ಬಹಳ ಬೇಗನೆ ಪತ್ತೆ ಮಾಡಿದ್ದರಿಂದಾಗಿ ಹಾಗೂ ಸೂಕ್ತವಾದ ಚಿಕಿತ್ಸೆ ಯನ್ನು ಒದಗಿಸಿದ್ದರಿಂದಾಗಿ ರೋಗಿ ಗಣನೀಯ ಪ್ರಮಾಣದಲ್ಲಿ ಚೇತರಿಸಿಕೊಂಡರು. ಈ ಪ್ರಕರಣವು ರೋಗಿಯು ತನ್ನ ಹಿನ್ನೆಲೆಯನ್ನು ಸರಿಯಾಗಿ ತಿಳಿಸುವುದರ ಮಹತ್ವವನ್ನು ಹೇಳುತ್ತದೆ. ಏಕೆಂದರೆ ಪರಿಸರದ ಕೆಲವು ಅಂಶಗಳಿಂದಾಗಿ ಉಂಟಾಗುವ ಸಮಸ್ಯೆಗಳಿಗೆ ಬಹಳ ಭಿನ್ನ ಬಗೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ.

ಇವುಗಳ ಬಗ್ಗೆ ವಿವರ ನೀಡಿದ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಯ ಆಂತರಿಕ ಔಷಧ ಗಳ ವಿಭಾಗದ ನಿರ್ದೇಶಕಿ ಡಾ. ಶೀಲಾ ಚಕ್ರವರ್ತಿ ಅವರು, “ನೋವು, ಸುಸ್ತು ಅಥವಾ ಜ್ವರದಂತಹ ಲಕ್ಷಣಗಳು ಸಾಮಾನ್ಯವಾಗಿ ಗಂಭೀರವಾಗಿ ಪರಿಗಣಿತ ಆಗುವುದಿಲ್ಲ. ಅವು ತಾವಾಗಿಯೇ ಕಡಿಮೆ ಆಗುತ್ತವೆ ಎಂದು ಭಾವಿಸಲಾಗುತ್ತದೆ. ಆದರೆ ಅವು ಬಹುಕಾಲ ಮುಂದುವರಿದರೆ, ಅಥವಾ ಅಂತಹ ಲಕ್ಷಣಗಳು ಏಕೆ ಕಾಣಿಸಿಕೊಳ್ಳುತ್ತಿವೆ ಎಂಬುದಕ್ಕೆ ಸರಿಯಾದ ವಿವರಣೆಗಳು ಇಲ್ಲದಿದ್ದರೆ ಅವುಗಳನ್ನು ಉಪೇಕ್ಷೆ ಮಾಡಬಾರದು. ಆರಂಭದಲ್ಲೇ ವೈದ್ಯರಿಂದ ಸರಿಯಾಗಿ ಚಿಕಿತ್ಸೆ ದೊರೆತರೆ, ಕಾಯಿಲೆ ತಡೆಯುವ ಉದ್ದೇಶದ ಆರೋಗ್ಯ ತಪಾಸಣೆಗಳು ಲಭ್ಯವಾದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಆರಂಭದಲ್ಲೇ ಪತ್ತೆಯಾಗುತ್ತವೆ. ಆಗ ಚಿಕಿತ್ಸೆಯ ಫಲ ಕೂಡ ಉತ್ತಮವಾಗಿರುತ್ತದೆ” ಎಂದು ಹೇಳಿದ್ದಾರೆ.

ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ಬನ್ನೇರುಘಟ್ಟ ರಸ್ತೆಯ ಫೆಸಿಲಿಟಿ ಡೈರೆಕ್ಟರ್ ಗೌತಮ್ ಸಿ.ಬಿ. ಅವರು “ರೋಗಿಗಳಿಗೆ ಹೆಚ್ಚಿನ ಗಮನ ನೀಡುವ, ಸಾಕ್ಷ್ಯ ಆಧಾರಿತ ಆರೈಕೆಗೆ ನಾವು ಹೊಂದಿರುವ ಬದ್ಧತೆಯನ್ನು ಈ ಪ್ರಕರಣಗಳು ಹೇಳುತ್ತಿವೆ. ನಾವು ಯಾವ ಲಕ್ಷಣವನ್ನೂ ಸಹಜವೆಂದು ಉಪೇಕ್ಷೆ ಮಾಡುವುದಿಲ್ಲ. ಅವುಗಳ ಬಗ್ಗೆ ಸರಿಯಾದ ಪರಿಶೀಲನೆ ನಡೆಸುತ್ತೇವೆ. ತಜ್ಞರು, ಉನ್ನತವಾದ ರೋಗಪತ್ತೆ ಸಾಧನಗಳು ಮತ್ತು ರೋಗವನ್ನು ತಡೆಯುವ ಆರೈಕೆಯ ಸಮ್ಮಿಲನದ ಕಾರಣದಿಂದಾಗಿ ಕಾಯಿಲೆಗಳು ಆರಂಭದಲ್ಲಿಯೇ ಪತ್ತೆಯಾಗುತ್ತವೆ. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆ ಯಲ್ಲಿ ನಮ್ಮ ಗಮನವು ಗಂಭೀರ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ, ಅವುಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವುದರ ಕಡೆ ಇರುತ್ತದೆ. ಹೀಗೆ ಮಾಡುವುದು ನಿಜಕ್ಕೂ ಜೀವ ಉಳಿಸುವ ಕೆಲಸ ಆಗುತ್ತದೆ” ಎಂದು ಹೇಳಿದ್ದಾರೆ.