ನವದೆಹಲಿ, ಮೇ 2: ಬೇಸಗೆಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚುವುದು ಪ್ರತಿ ವರ್ಷದ ವಿದ್ಯಮಾನ. ಸೆಕೆ ತಡೆಯಲಾಗದು ಎನ್ನುವ ಕಾರಣಕ್ಕೆ ಮೈ ತುಂಬುವಂಥ ವಸ್ತ್ರಗಳನ್ನು ಧರಿಸದೆ ಇದ್ದರೆ, ಕೈ-ಮೈ ಮೇಲೆಲ್ಲ ಸೊಳ್ಳೆ ಕಚ್ಚಿ ಕೆಂಪು ಗುಳ್ಳೆಗಳು ಕಾಣುವುದು ಸಾಮಾನ್ಯ. ಬೇಸಿಗೆ ರಜೆಯೆಂಬ ನೆವದಲ್ಲಿ ಪ್ರಯಾಣ ಮಾಡುವಾಗ ಸೊಳ್ಳೆಗಳ ಕಾಟವಿರುವ ಊರು ಎದುರಾದರೂ ಆತಂಕ ವಾಗುತ್ತದೆ. ಪ್ರಯಾಣಿಸುವಾಗ ಸಾಂಕ್ರಾಮಿಕಗಳ ಬಗ್ಗೆಯೂ ಗಮನ ಇರಿಸುವುದು ಅನಿವಾರ್ಯ. ಹಾಗೆಂದು ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ ಒಂದೇ ರೀತಿಯವಲ್ಲ. ಪ್ರತಿಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ, ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯಾ (Malaria treatments) ಮತ್ತು ಡೆಂಗೆ (Dengue) ರೋಗಗಳಿಗೆ ವ್ಯತ್ಯಾಸವೇನು ಎಂಬ ಅರಿವಿನ ಲೇಖನವಿದು.
ಪ್ರಸರಣ ಹೇಗೆ?
ಮಲೇರಿಯಾ: ಅನಾಫಿಲಿಸ್ ಸೊಳ್ಳೆಯಿಂದ ದೇಹ ಪ್ರವೇಶಿಸುವ ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಮಲೇರಿಯಾ ಹೆಚ್ಚಿರುವ ಪ್ರದೇಶಗಳಿಗೆ ಹೋದಾಗ ಇದಕ್ಕೆ ತುತ್ತಾಗುವ ಸಂಭವ ಹೆಚ್ಚು.
ಡೆಂಗೆ: ಈಡಿಸ್ ಸೊಳ್ಳೆಯು ದೇಹಕ್ಕೆ ಚುಚ್ಚುವ ಡೆಂಗೆ ವೈರಸ್‌ನಿಂದ ಬರುವ ರೋಗವಿದು. ಅಂದರೆ ಮಲೇರಿಯಾ ಬರುವುದು ಪರಾವಲಂಬಿ ಜೀವಿಯಿಂದಾದರೆ, ಡೆಂಗೆ ಬರುವುದು ವೈರಸ್‌ನಿಂದ. ಯಾವುದೇ ಪ್ರದೇಶದಲ್ಲೂ ಡೆಂಗು ಸೊಳ್ಳೆಗಳು ಕಾಣಬಹುದು, ಸೊಳ್ಳೆ ಕಚ್ಚಿದಾಗ ಬರಬಹುದು.
ಲಕ್ಷಣಗಳೇನು?
ಮಲೇರಿಯಾ: ಜ್ವರ, ನಡುಕ, ಬೆವರು, ತಲೆನೋವು, ಮೈಕೈ ನೋವು, ಹೊಟ್ಟೆ ತೊಳೆಸುವುದು, ವಾಂತಿ.
ಡೆಂಗೆ: ಇದ್ದಕ್ಕಿದ್ದಂತೆ ತೀವ್ರವಾದ ಜ್ವರ, ತೀಕ್ಷ್ಣ ತಲೆ ನೋವು, ಕಣ್ಣು ನೋವು, ಮೈ ಮೇಲೆಲ್ಲ ದದ್ದುಗಳು, ಕೀಲು, ಸ್ನಾಯುಗಳಲ್ಲಿ ತೀವ್ರ ನೋವು. ಜೊತೆಗೆ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕುಸಿಯುತ್ತದೆ. ಅಂದರೆ ಮಲೇರಿಯ ಫ್ಲೂ ಮಾದರಿಯ ಲಕ್ಷಣಗಳನ್ನು ತೋರಿಸಿದರೆ, ಡೆಂಗು ಜ್ವರದಲ್ಲಿ ತಲೆನೋವು ಮತ್ತು ಕೀಲು-ಸ್ನಾಯುಗಳ ನೋವು ತೀವ್ರವಾಗಿರುತ್ತದೆ.
ಪತ್ತೆ ಹೇಗೆ?
ಎರಡೂ ಮಾದರಿಯ ಜ್ವರಗಳಿಗೆ ರಕ್ತ ಪರೀಕ್ಷೆಯೇ ಪತ್ತೆ ಮಾಡುವುದಕ್ಕೆ ನಿಖರವಾದ ಆಧಾರ.
ಚಿಕಿತ್ಸೆ ಏನು?
ಮಲೇರಿಯಾ: ಕ್ಲೊರೊಕ್ವಿನ್‌ನಂಥ ಔಷಧಿಗಳು ಇದಕ್ಕಾಗಿಯೇ ಇವೆ. ಪ್ಲಾಸ್ಮೋಡಿಯಂನಂಥ ಪರಾವಲಂಬಿಗಳ ಹತೋಟಿಗೆ ಔಷಧಿ ನೀಡಲಾಗುತ್ತದೆ. ಉಳಿದಂತೆ, ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಬೇಕಾಗುತ್ತದೆ.
ಡೆಂಗೆ: ಈ ವೈರಸ್‌ಗೆ ಪ್ರತ್ಯೇಕವಾದ ಆ್ಯಂಟಿವೈರಸ್ ಚಿಕಿತ್ಸೆ ಲಭ್ಯವಿಲ್ಲ. ರೋಗಿಯ ಲಕ್ಷಣಗಳನ್ನು ಆಧರಿಸಿ ಅದಕ್ಕೆ ಔಷಧವನ್ನು ನೀಡಲಾಗುತ್ತದೆ. ಪ್ಲೇಟ್‌ಲೆಟ್ ಕುಸಿದಂಥ ಸಂದರ್ಭಗಳಲ್ಲಿ ರೋಗಿಯ ಆಹಾರ ಪದ್ಧತಿ ಅತ್ಯಂತ ಮಹತ್ವದ್ದು.
ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!
ಸಾವಿನ ಪ್ರಮಾಣ
ಮಲೇರಿಯಾ: ಸೂಕ್ತ ಸಮಯಲ್ಲೇ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ, ಮಲೇರಿಯಾ ಪ್ರಾಣಕ್ಕೆ ಎರವಾಗುತ್ತದೆ. ವಿಶ್ವದಲ್ಲಿ ಇಂದಿಗೂ ಮಲೇರಿಯಾಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಬಹಳಷ್ಟಿದೆ.
ಡೆಂಗೆ: ಈ ಜ್ವರವೂ ಪ್ರಾಣಾಪಾಯ ತರಬಹುದಾದರೂ, ಮಲೇರಿಯಾಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಇದರಲ್ಲಿ ಕಡಿಮೆ.
ತಡೆ ಹೇಗೆ?
ಈ ಎರಡೂ ರೋಗಗಳಲ್ಲಿ ಸೊಳ್ಳೆ ನಿರ್ಮೂಲನೆಯೇ ಮುಖ್ಯವಾಗಿದ್ದು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್ ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ಸೆಕೆಯೆಂದು ಮೈ ತೆರೆದುಕೊಂಡಿರದೆ, ತೆಳುವಾದ ಹತ್ತಿಯ ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇದ್ದರೆ ಒಳ್ಳೆಯದು.