ಬೆಂಗಳೂರು, ಜೂ. 29: ಬಿರುಬಿಸಿಲಿನಿಂದ ಕಂಗೆಟ್ಟ ಜೀವಕ್ಕೆ ಮಳೆಗಾಲದ ಆರಂಭ ಕೊಂಚ ರಿಲೀಫ್ ನೀಡಿದರೂ ಇದರೊಂದಿಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಚರ್ಮ ಮತ್ತು ಕೂದಲಿನ ತೊಂದರೆಗಳು. ಇದಕ್ಕಾಗಿ ಸ್ವಚ್ಛತೆಯೊಂದಿಗೆ ಕೆಲವೊಂದು ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಚರ್ಮ ಮತ್ತು ಕೂದಲಿನ ಮೇಲೆ ಮಳೆಗಾಲ (Mansoon Care) ತೀವ್ರ ಪರಿಣಾಮವನ್ನು ಉಂಟು ಮಾಡುತ್ತದೆ. ಹೆಚ್ಚಿನ ಆರ್ದ್ರತೆ, ಆಗಾಗ್ಗೆ ಬೆವರುವುದು, ಒದ್ದೆ ಬಟ್ಟೆಗಳು ಮತ್ತು ಮಳೆ ನೀರಿಗೆ ಒಡ್ಡಿಕೊಳ್ಳುವುದರಿಂದ ಮೊಡವೆ, ಶಿಲೀಂಧ್ರ ಸೋಂಕು, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ತೊಂದರೆಗಳು ಹೆಚ್ಚಾಗಿ ಬಾಧಿಸುತ್ತದೆ.
ಮಳೆಗಾಲದಲ್ಲಿ ಬಾಧಿಸುವ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಲು ಸರಿಯಾದ ಆರೈಕೆ ಮತ್ತು ದಿನಚರಿಯನ್ನು ಪಾಲಿಸುವುದು ಮುಖ್ಯ ಎನ್ನುತ್ತಾರೆ ತಜ್ಞ ವೈದ್ಯೆ ಡಾ. ರಶ್ಮಿ ಶರ್ಮಾ.
ಸ್ಟೇಫ್ರೀ: ಮುಟ್ಟಿನ ನೈರ್ಮಲ್ಯದ ಉತ್ಪನ್ನ ವ್ಯಾಪ್ತಿ ವಿಸ್ತರಣೆ
ಹವಾಮಾನ ತಂಪಾಗಿರುವುದರಿಂದ ಈ ಸಂದರ್ಭದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆ ಬೇಕಾಗಿಲ್ಲ ಎಂದೇ ಹೆಚ್ಚಿನವರು ಭಾವಿಸುತ್ತಾರೆ. ಆದರೆ ಗಾಳಿಯಲ್ಲಿರುವ ಹೆಚ್ಚುವರಿ ತೇವಾಂಶವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಸಮಯದಲ್ಲಿ ಕೂದಲು ಮತ್ತು ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ ಎನ್ನುತ್ತಾರೆ ಅವರು.
ಅತಿಯಾಗಿ ತೊಳೆಯಬೇಡಿ
ಮಳೆಗಾಲದಲ್ಲಿ ಚರ್ಮದ ಕಾಳಜಿ ಬಹಳ ಮುಖ್ಯ. ಯಾಕೆಂದರೆ ಈ ಸಮಯದಲ್ಲಿ ಅದು ಹೆಚ್ಚು ಎಣ್ಣೆ ಉತ್ಪಾದನೆ ಮಾಡುತ್ತದೆ. ಹೆಚ್ಚಿನ ಆರ್ದ್ರತೆಯ ಕಾರಣದಿಂದ ಚರ್ಮದ ಮೇಲೆ ಜಿಡ್ಡು ಕಾಣಿಸಿಕೊಳ್ಳುತ್ತದೆ. ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ದಿನಕ್ಕೆ ಎರಡು ಬಾರಿ ಸೌಮ್ಯವಾದ ಸಲ್ಫೇಟ್ ಮುಕ್ತ ಕ್ಲೆನ್ಸರ್‌ನಿಂದ ಮುಖವನ್ನು ತೊಳೆಯಬೇಕು. ಇದು ಚರ್ಮವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಅತಿಯಾಗಿ ತೊಳೆಯುವುದು ಕೂಡ ಒಳ್ಳೆಯದಲ್ಲ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ ಎನ್ನುತ್ತಾರೆ ಡಾ. ರಶ್ಮಿ.
ಸನ್‌ಸ್ಕ್ರೀನ್ ಬಳಸಿ
ಬೇಸಗೆಯಲ್ಲಿ ಮಾತ್ರವಲ್ಲ ಮಳೆಗಾಲದಲ್ಲೂ ಸನ್‌ಸ್ಕ್ರೀನ್ ಬಳಸುವುದು ಮುಖ್ಯ. ಸನ್‌ಸ್ಕ್ರೀನ್ ಟ್ಯಾನಿಂಗ್, ಅಕಾಲಿಕ ವಯಸ್ಸಾಗುವಿಕೆ ಮತ್ತು ಸೂರ್ಯನ ಹಾನಿಯಿಂದ ಇದು ರಕ್ಷಿಸುತ್ತದೆ. ಆರ್ದ್ರ ವಾತಾವರಣದಲ್ಲಿ ಚರ್ಮಕ್ಕೆ ಆರಾಮದಾಯಕವೆನಿಸುವ ಹಗುರವಾದ, ಜಿಡ್ಡುರಹಿತ ಸನ್‌ಸ್ಕ್ರೀನ್ ಬಳಸಿ.
ಹೆಚ್ಚು ನೀರು ಕುಡಿಯಿರಿ
ಸಾಮಾನ್ಯವಾಗಿ ಮಳೆಗಾಲದಲ್ಲಿ ನಾವು ನೀರು ಸೇವಿಸುವ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಸಾಕಷ್ಟು ನೀರು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಮುಖ್ಯ. ಸಾಕಷ್ಟು ನೀರು ಕುಡಿಯುವುದು ಆರೋಗ್ಯಪೂರ್ಣ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮಾಯಿಶ್ಚರೈಸರ್‌ಗಳನ್ನು ತಪ್ಪಿಸದಿರಿ
ಮಳೆಗಾಲದಲ್ಲಿ ಮಾಯಿಶ್ಚರೈಸರ್‌ಗಳನ್ನು ತಪ್ಪಿಸಬೇಡಿ. ಮಾಯಿಶ್ಚರೈಸರ್‌ಗಳು ಚರ್ಮದ ರಂಧ್ರಗಳನ್ನು ಮುಚ್ಚದೆ ಹೈಡ್ರೇಟ್ ಮಾಡುತ್ತವೆ. ಈ ಸಂದರ್ಭದಲ್ಲಿ ಕಾಮೆಡೋಜೆನಿಕ್ ಅಲ್ಲದ ಮಾಯಿಶ್ಚರೈಸರ್‌ಗಳನ್ನು ಬಳಸುವುದು ಸೂಕ್ತ. ಸರಿಯಾದ ಮಾಯಿಶ್ಚರೈಸೇಶನ್ ಆಯ್ಕೆ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.
ಸೋಂಕುಗಳನ್ನು ತಡೆಯಿರಿ
ಮಳೆಗಾಲವೆಂದರೆ ನಿರಂತರ ತೇವಾಂಶವಿರುತ್ತದೆ. ಈ ಸಂದರ್ಭದಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಚರ್ಮದ ಮಡಿಕೆಗಳು, ಪಾದ, ತೋಳುಗ, ತೊಡೆಸಂದುಗಳಂತಹ ಪ್ರದೇಶಗಳು ಸ್ವಚ್ಛ ಮತ್ತು ಒಣಗಿಸಿ ಇಟ್ಟುಕೊಳ್ಳುವುದು ಮುಖ್ಯ. ಒದ್ದೆಯಾದ ಬಟ್ಟೆ ಧರಿಸಬೇಡಿ. ಟವೆಲ್‌ಗಳಂತಹ ವೈಯಕ್ತಿಕ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹತ್ತಿ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.
ಕೂದಲಿನ ಆರೋಗ್ಯಕ್ಕೆ ಟಿಪ್ಸ್
ಮಳೆಗಾಲದಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಮಳೆಯಲ್ಲಿ ಕೂದಲು ಒದ್ದೆಯಾದರೆ ಸಾಧ್ಯವಾದಷ್ಟು ಬೇಗ ಅದನ್ನು ಶುದ್ಧ ನೀರಿನಿಂದ ತೊಳೆದು ಒಣಗಿಸಿ. ಸೌಮ್ಯವಾದ ಶಾಂಪೂ ಬಳಸಿ ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲನ್ನು ತೊಳೆಯುವುದು ಒಳ್ಳೆಯದು. ಸ್ಟೈಲಿಂಗ್ ಉತ್ಪನ್ನಗಳು, ಸ್ಟ್ರೈಟ್ನರ್‌ಗಳು ಮತ್ತು ಇತರ ಶಾಖ ಸಾಧನಗಳ ಅತಿಯಾದ ಬಳಕೆಯನ್ನು ತಪ್ಪಿಸುವುದು ಒಳ್ಳೆಯದು. ಯಾಕೆಂದರೆ ಇವುಗಳು ಕೂದಲನ್ನು ದುರ್ಬಲಗೊಳಿಸುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈ ಆಹಾರಗಳೇ ಸಾಕು
ಸಮತೋಲಿತ ಆಹಾರ ಸೇವಿಸಿ
ಆರೋಗ್ಯಪೂರ್ಣ ಚರ್ಮ ಮತ್ತು ಕೂದಲಿಗೆ ಪ್ರೋಟೀನ್, ವಿಟಮಿನ್, ಖನಿಜಗಳನ್ನು ಒಳಗೊಂಡ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಇದಕ್ಕಾಗಿ ದೈನಂದಿನ ಊಟದಲ್ಲಿ ತಾಜಾ ಹಣ್ಣು, ತರಕಾರಿ, ಬೀಜ, ಧಾನ್ಯಗಳನ್ನು ಬಳಸಿ. ಇವು ಋತು ಬದಲಾವಣೆಗಳ ಸಮಯದಲ್ಲಿ ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ. ರಶ್ಮಿ ಶರ್ಮಾ.