ಬೆಂಗಳೂರು: ಮಳೆಗಾಲವು (Monsoon) ತಂಪಾದ ವಾತಾವರಣವನ್ನು ತಂದರೂ, ಅದರೊಂದಿಗೆ ಹಲವು ಆರೋಗ್ಯ ಸಮಸ್ಯೆಗಳ (Health Issues) ಅಪಾಯವೂ ಹೆಚ್ಚಾಗುತ್ತದೆ. ನಿರಂತರ ಮಳೆ, ನೀರು ನಿಲ್ಲುವುದು, ಹೆಚ್ಚಿದ ತೇವಾಂಶ ಮತ್ತು ತಾಪಮಾನದಲ್ಲಿನ ಏರಿಳಿತಗಳಿಂದ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳು, ನೀರಿನಿಂದ ಹರಡುವ ಸೋಂಕುಗಳು ಹಾಗೂ ಶಿಲೀಂಧ್ರ (ಫಂಗಲ್) ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮಳೆಗಾಲದಲ್ಲಿ ವೈಯಕ್ತಿಕ ಸ್ವಚ್ಛತೆ, ಸುರಕ್ಷಿತ ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ.
ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರು ಸಂಗ್ರಹವಾಗುವ ಪಾತ್ರೆಗಳು, ಬಕೆಟ್‌ಗಳು ಹಾಗೂ ಇತರೆ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಹೊರಗೆ ಹೋಗುವಾಗ ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ ಹಾಗೂ ಮನೆಗೆ ಜಾಲರಿ ಅಳವಡಿಸಿಕೊಳ್ಳುವುದು ಉತ್ತಮ.
ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ
ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆಯಿರಿ. ಶುದ್ಧ ನೀರು ಲಭ್ಯವಿಲ್ಲದಿದ್ದರೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಬಹುದು. ನೀರು ನಿಂತಿರುವ ರಸ್ತೆಗಳಲ್ಲಿ ಬರಿಗಾಲಿನಲ್ಲಿ ನಡೆಯಬೇಡಿ. ಮಳೆನೀರು ಅಥವಾ ಕೆಸರಿನ ಸಂಪರ್ಕವಾದರೆ ಕಾಲುಗಳನ್ನು ತಕ್ಷಣ ಸಾಬೂನಿನಿಂದ ತೊಳೆಯಿರಿ.
ಶುಂಠಿ ಚಹಾ ಹೆಚ್ಚು ಕುಡಿಯುತ್ತೀರಾ? ಮಿತಿಮೀರಿದರೆ ಈ ಆರೋಗ್ಯ ಸಮಸ್ಯೆ ಕಾಡಬಹುದು!
ಸುರಕ್ಷಿತ ಕುಡಿಯುವ ನೀರು ಸೇವಿಸಿ
ಕುದಿಸಿ ತಂಪಾಗಿಸಿದ ನೀರು ಅಥವಾ RO/UV ಶುದ್ಧೀಕರಣಗೊಂಡ ನೀರನ್ನೇ ಕುಡಿಯುವುದು ಉತ್ತಮ. ನೀರಿನ ಗುಣಮಟ್ಟದ ಬಗ್ಗೆ ಅನುಮಾನವಿದ್ದರೆ ನೀರು ಶುದ್ಧೀಕರಣ ಮಾತ್ರೆಗಳನ್ನು ಬಳಸಬಹುದು.
ಆಹಾರದ ಸ್ವಚ್ಛತೆ ಕಾಪಾಡಿ
ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ, ಕತ್ತರಿಸಿದ ಹಣ್ಣುಗಳು ಹಾಗೂ ಪಾಶ್ಚರೀಕರಣ ಮಾಡದ ಹಾಲಿನ ಉತ್ಪನ್ನಗಳನ್ನು ಸೇವಿಸದಿರುವುದು ಉತ್ತಮ. ತಾಜಾ, ಬಿಸಿ ಹಾಗೂ ಚೆನ್ನಾಗಿ ಬೇಯಿಸಿದ ಆಹಾರವನ್ನೇ ಸೇವಿಸಿ. ಹಣ್ಣು-ತರಕಾರಿಗಳನ್ನು ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಸಿ.
ಆರೋಗ್ಯದಲ್ಲಿ ಬದಲಾವಣೆ ಕಂಡರೆ ನಿರ್ಲಕ್ಷಿಸಬೇಡಿ
ಹೆಚ್ಚಿನ ಜ್ವರ, ತೀವ್ರ ತಲೆನೋವು, ಮೈಕೈ ನೋವು, ಉಸಿರಾಟದ ತೊಂದರೆ ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರಂಭದಲ್ಲೇ ಚಿಕಿತ್ಸೆ ಪಡೆದರೆ ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ನೀರಿನಿಂದ ಹರಡುವ ಹಲವು ಸೋಂಕುಗಳನ್ನು ನಿಯಂತ್ರಿಸಲು ಸಾಧ್ಯ.
ಆರೋಗ್ಯಪೂರ್ಣ ಆಹಾರ, ಸ್ವಚ್ಛತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಮಳೆಗಾಲದಲ್ಲಿ ಸೋಂಕುಗಳಿಂದ ದೂರವಿದ್ದು ಸುರಕ್ಷಿತವಾಗಿ ಇರಬಹುದು.