ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Navaratri Festival 2026: ದಾಂಡಿಯಾ ಆಡಲು ರೆಡಿಯಾಗಿದ್ದೀರಾ...? ಹಾಗಿದ್ದರೆ ಪಾಲಿಸಿ ಈ ನಿಯಮ

ವರ್ಷಕ್ಕೊಮ್ಮೆ ಬರುವ ನವರಾತ್ರಿ ಉತ್ಸವದಲ್ಲಿ ನಡೆಯುವ ದಾಂಡಿಯಾದಲ್ಲಿ ಹೆಜ್ಜೆ ಹಾಕಲು ಸಾಕಷ್ಟು ಮಂದಿ ಕಾತರರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಾಂಡಿಯಾ ಉತ್ಸವದಲ್ಲಿ ಮೈಮರೆತ ಅನೇಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಎಚ್ಚರಿಕೆಯಿಂದ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಲು ಇಲ್ಲಿವೆ ಕೆಲವು ಸಲಹೆಗಳು.

ಸಂಗ್ರಹ ಚಿತ್ರ

ಬೆಂಗಳೂರು: ನವರಾತ್ರಿಯಲ್ಲಿ (Navaratri 2026) ದಾಂಡಿಯ ನೃತ್ಯಕ್ಕೆ (dandiya fest) ಹೆಜ್ಜೆ ಹಾಕುವ ಉಮೇದು ಬಹಳ ಮಂದಿಗಿರುತ್ತದೆ. ವರ್ಷವಿಡೀ ನಾಲ್ಕು ದಿನ ವ್ಯಾಯಾಮ ಮಾಡದಿದ್ದವರೂ ನವರಾತ್ರಿಯಲ್ಲಿ ದಾಂಡಿಯಾಗೆಂದು ಬಣ್ಣಬಣ್ಣದ ಬಟ್ಟೆ ತೊಟ್ಟು ಡಿಜೆ ಹಾಡಿಗೆ (DJ Dance) ಕುಣಿದಾಡುತ್ತಾ ದಾಂಡಿಯಾ ರಾಸ್‌ ಪಾರ್ಟಿಗಳಲ್ಲಿ ನಳನಳಿಸುತ್ತಿರುತ್ತಾರೆ. ಸದಾ ವ್ಯಾಯಾಮ ಮಾಡುತ್ತಾ, ನೃತ್ಯ ಮಾಡುತ್ತಾ ದೇಹವನ್ನು ಸಕ್ರಿಯವಾಗಿ ಇರಿಸಿಕೊಂಡವರಿಗೆ ಒಂದು ರಾತ್ರಿಯ ದಾಂಡಿಯಾ ಹೆಚ್ಚೇನೂ ಶ್ರಮ ತರುವುದಿಲ್ಲ. ಆದರೆ ಈ ನೃತ್ಯದ ಸಂದರ್ಭದಲ್ಲೇ ಕುಸಿದುಬಿದ್ದು ಜೀವ ಕಳೆದುಕೊಂಡವರ ಸುದ್ದಿಗಳು ಬರುತ್ತವೆ. ನೃತ್ಯದ ನಡುವೆಯೇ ಎದೆನೋವು, ಉಸಿರುಗಟ್ಟುವಂಥ ಸಮಸ್ಯೆಗಳನ್ನು ಹೊತ್ತು ವೈದ್ಯರಲ್ಲಿಗೆ ಹೋದವರು ಬಹಳಷ್ಟು ಮಂದಿ. ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು?

ತೂಕ ಇಳಿಕೆ ನಂತರ ಏರದಂತೆ ಕಾಪಾಡಿಕೊಳ್ಳುವುದು ಹೇಗೆ?

ನಿಧಾನವಾಗಿ ಹೆಜ್ಜೆ ಹಾಕಿ

ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಲೆಂದೇ ಇಂಥ ಪಾರ್ಟಿಗಳಿಗೆ ಹೋಗುವುದು ನಿಜವಾದರೂ ಆರಂಭ ನಿಧಾನವಾಗಿರಲಿ. ಒಮ್ಮೆಲೇ ಆವೇಶಗೊಂಡು ಹೆಜ್ಜೆ ಹಾಕುವ ಬದಲು ಶರೀರ ಬಿಸಿಯಾಗುವವರೆಗೆ ಸರಳ ಹೆಜ್ಜೆಗಳನ್ನೇ ಹಾಕಿ. ಇಡೀ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ ನಿಧಾನ ಲಯಕ್ಕೇ ನರ್ತಿಸಿ. ಹತ್ತಿಪ್ಪತ್ತು ನಿಮಿಷಗಳವರೆಗೆ ದೇಹ ಒಗ್ಗಿಕೊಂಡ ಮೇಲಷ್ಟೇ ಹೆಜ್ಜೆ ಚುರುಕಾಗಿಸಿ. ಅನಂತರವೂ ನಿಮಗೆಷ್ಟು ಕುಣಿಯುವುದಕ್ಕೆ ಸಾಧ್ಯ… ಅಷ್ಟೇ ಕುಣಿಯಿರಿ. ನಿಮ್ಮ ಮಿತಿ ನಿಮಗೆ ತಿಳಿದಿರಲಿ.

ವಿರಾಮ ನೀಡಿ

ಒಮ್ಮೆಲೆ ಗಂಟೆಗಟ್ಟಲೆ ಕುಣಿಯುವ ಉತ್ಸಾಹ ತೋರಬೇಡಿ. ನಡುವೆ ಐದೈದು ನಿಮಿಷಗಳ ವಿರಾಮ ನೀಡಿ ದೇಹಕ್ಕೆ. ನಿಧಾನವಾಗಿ ನೀರು, ಎಳನೀರು, ಹಣ್ಣಿನ ರಸಗಳು ಮುಂತಾದ ಎಲೆಕ್ಟ್ರೋಲೈಟ್‌ಗಳನ್ನು ಗುಟುಕರಿಸಿ. ಇದಕ್ಕಾಗಿ ಕಾಫಿ, ಎನರ್ಜಿ ಡ್ರಿಂಕ್‌ಗಳ ಮೊರೆ ಹೋಗಬೇಡಿ. ದೇಹದ ಶಕ್ತಿಯನ್ನು ಕೆಫೇನ್‌ ತಾತ್ಕಾಲಿಕವಾಗಿ ಹೆಚ್ಚಿಸಿದರೂ, ಇದರಿಂದ ಅಡ್ಡಪರಿಣಾಮಗಳು ತಪ್ಪಿದ್ದಲ್ಲ. ಬದಲಿಗೆ, ವಿರಾಮ ನೀಡಿದಾಗ ದೀರ್ಘವಾಗಿ ಉಸಿರಾಡಿ, ಎದೆಯ ಬಡಿತವು ಸಾಮಾನ್ಯ ಲಯಕ್ಕೆ ಬರುವುದಕ್ಕೆ ನೆರವಾಗಿ.

ಆಹಾರ

ಹಬ್ಬದ ನೆವ ಮುಂದಿಟ್ಟುಕೊಂಡು ಅತಿಯಾದ ಜಿಡ್ಡಿನ ಆಹಾರ ತಿನ್ನುವ ಬದಲು ಕಡಿಮೆ ಕೊಬ್ಬಿನ ಆರೋಗ್ಯಕರ ಆಯ್ಕೆಗಳತ್ತ ಕೈ ಚಾಚಿ. ಅತಿಯಾಗಿ ತುಂಬಿದ ಹೊಟ್ಟೆಯನ್ನು ಹೊತ್ತು ಕುಣಿಯುವುದಕ್ಕೆ ಸಾಧ್ಯವಾಗದು. ಅದರಲ್ಲೂ ಜಿಡ್ಡು ತುಂಬಿದ, ಸಕ್ಕರೆಭರಿತ ಆಹಾರಗಳು ಜೀರ್ಣವಾಗಲು ಹೆಚ್ಚು ಹೊತ್ತು ಬೇಕು. ಅವುಗಳನ್ನು ಮಿತಿಮೀರಿ ತಿಂದರಂತೂ ಹೊಟ್ಟೆಯ ಒತ್ತಡವು ಹೃದಯದ ಮೇಲೂ ಒತ್ತಡ ಹೆಚ್ಚಿಸುತ್ತದೆ. ಇಷ್ಟರ ಮೇಲೆ ಕುಣಿದಾಡುವುದೆಂದರೆ…? ಊಟದ ಪ್ರಮಾಣ ಮಿತಿಯಲ್ಲಿರಲಿ.

ಮಸಾಲೆಯುಕ್ತ ಆಹಾರಗಳು

ಬಾಯಿಗೆ ರುಚಿ ಎಂಬ ಕಾರಣಕ್ಕಾಗಿ ಮಸಾಲೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸಿದರೆ ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ. ತೀಕ್ಷ್ಣ ಖಾರ, ಜೊತೆಗೆ ಗಡದ್ದಾಗಿ ಗರಂ ಮಸಾಲೆ ಸೇರಿದ ಅಡುಗೆಗಳು ಹೊಟ್ಟೆಯಲ್ಲಿ ಆಸಿಡಿಟಿ ಹೆಚ್ಚಿಸುತ್ತವೆ. ಇದರಿಂದ ರಕ್ತದೊತ್ತಡವೂ ಹೆಚ್ಚುತ್ತದೆ. ದಾಂಡಿಯಾ ಆಡುವುದಕ್ಕೆ ಮುನ್ನ ಇಂಥ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯುರಿ, ಎದೆಯುರಿಗಳು ಹೆಚ್ಚಾಗುತ್ತವೆ. ಹೆಚ್ಚಿನ ಉಪ್ಪಿನಂಶವು ಅಧಿಕ ನೀರು ಕುಡಿಸಿ, ದೇಹದಲ್ಲಿ ನೀರು ಉಳಿಯುವಂತೆ ಮಾಡುತ್ತದೆ. ಇದರಿಂದ ತೊಂದರೆಗಳು ತಪ್ಪಿದ್ದಲ್ಲ. ಜೊತೆಗೆ ರಕ್ತದೊತ್ತಡವನ್ನೂ ಏರಿಸಿ, ಹೃದಯಕ್ಕೆ ಆಪತ್ತು ತರುತ್ತದೆ. ಸಂಸ್ಕರಿತ ಆಹಾರಗಳು, ಚಿಪ್ಸ್‌, ಕುರ್ಕುರೆ, ಸಮೋಸಾ ಮುಂತಾದವನ್ನು ದೂರ ಇಟ್ಟಷ್ಟೂ ಕ್ಷೇಮವಾಗಿ ದಾಂಡಿಯ ಆಡಬಹುದು.

'ಬಾಗಿದ ಬೆನ್ನಿ'ನೊಂದಿಗೆ 20 ವರ್ಷಗಳು: 60 ವರ್ಷದ ರೋಗಿಯ 70-ಡಿಗ್ರಿ ಬೆನ್ನುಹುರಿ ವಕ್ರತೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ವೈದ್ಯರಲ್ಲಿಗೆ ಹೋಗಲು ತಡಮಾಡಬೇಡಿ

ದಾಂಡಿಯ ಆಡುವಾಗ ಎದೆ ಬಡಿತ ಮಿತಿ ಮೀರುತ್ತಿದೆ ಎನಿಸಿದರೆ ಅದು ನಿಮ್ಮ ಉತ್ಸಾಹದ ಫಲವಲ್ಲ, ಅನಾರೋಗ್ಯದ ಸೂಚನೆಯೂ ಆಗಿರಬಹುದು. ನೃತ್ಯ ನಿಲ್ಲಿಸಿ, ಹೆಚ್ಚು ಜನರಿಲ್ಲದ ಚೆನ್ನಾಗಿ ಗಾಳಿಯಾಡುವ ತಂಪಾದ ಪ್ರದೇಶದಲ್ಲಿ ವಿಶ್ರಮಿಸಿ. ಉಸಿರಾಡಲು ಕಷ್ಟವಾಗುತ್ತಿದೆ ಎನಿಸಿದರೆ ಮಲಗಬೇಡಿ, ಒರಗಿದಂತೆ ಕುಳಿತು ಮಿಶ್ರಮಿಸಿ. ತೊಟ್ಟ ವಸ್ತ್ರಗಳು ಬಿಗಿಯಾಗಿದ್ದರೆ ಸಡಿಲ ಮಾಡಿ, ಚೆನ್ನಾಗಿ ಗಾಳಿಯಾಡಲಿ. ನಿಧಾನಕ್ಕೆ ಎಲೆಕ್ಟ್ರೋಲೈಟ್‌ ಗುಟುಕರಿಸಿ. ಇದರ ಅನಂತರವೂ ಸುಸ್ತಾಗುತ್ತಿದೆ, ಬೆವರುತ್ತಿದೆ, ಎದೆ ನೋವು, ಉಸಿರು ಸರಿಯಾಗಿಲ್ಲ ಎನಿಸಿದರೆ ನೇರ ವೈದ್ಯರಲ್ಲಿಗೆ ತೆರಳಿ, ಉದಾಸೀನ ಮಾಡಬೇಡಿ.

ವಿದ್ಯಾ ಇರ್ವತ್ತೂರು

View all posts by this author