ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶ್ವಾಸಕೋಶದ ಕ್ಯಾನ್ಸರ್ ಪತ್ತೆ: 65 ವರ್ಷದ ಮಹಿಳೆಗೆ 'ನ್ಯಾವಿಗೇಷನ್ ಆಧಾರಿತ ಬ್ರಾಂಕೋಸ್ಕೋಪಿ' ಯಶಸ್ವಿ

ಇಂಟರ್ ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶ ಕಸಿ ವಿಭಾಗದ ನಿರ್ದೇಶಕರಾದ ಡಾ.ಶ್ರೀವತ್ಸ ಲೋಕೇಶ್ವರನ್ ಅವರ ನೇತೃತ್ವದ ಇಂಟರ್ ವೆನ್ಷನಲ್ ಪಲ್ಮನಾಲಜಿ ತಂಡವು, ಫ್ಯೂಜಿ ಫಿಲ್ಮ್ ಸಂಸ್ಥೆಯ ಅತ್ಯಾಧುನಿಕ ಹಾಗೂ ಈ ಮಾದರಿಯಲ್ಲೇ ಮೊದಲನೆಯದಾದ 'ಸಿನಾಪ್ಸ್ 3ಡಿ ನ್ಯಾವಿಗೇಷನ್ ಸಿಸ್ಟಮ್' ಬಳಸಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ.

ಸುಧಾರಿತ ಶ್ವಾಸನಾಳ ಆಧಾರಿತ ಬಯಾಪ್ಸಿ ತಂತ್ರಜ್ಞಾನವು ಶ್ವಾಸಕೋಶದ ಕ್ಯಾನ್ಸರ್ ಶಂಕೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಜೊತೆಗೆ ತೊಂದರೆಗಳನ್ನು ಕಡಿಮೆ ಮಾಡಿ ರೋಗಿಯು ಶೀಘ್ರ ಚೇತರಿಸಿಕೊಳ್ಳಲು ನೆರವಾಗುತ್ತದೆ

ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು ಶ್ವಾಸಕೋಶದ ಕ್ಯಾನ್ಸರ್ ಹೊಂದಿರಬಹುದು ಎಂಬ ಶಂಕೆ ಹೊಂದಿದ್ದ 65 ವರ್ಷದ ಮಹಿಳೆಯೊಬ್ಬರಲ್ಲಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಲು ಕರ್ನಾಟಕದಲ್ಲಿ ಮೊದಲ ಬಾರಿಗೆ 'ನ್ಯಾವಿಗೇಷನ್ ಆಧಾರಿತ ಬ್ರಾಂಕೋಸ್ಕೋಪಿ' ಮತ್ತು ಶ್ವಾಸಕೋಶದ ಬಯಾಪ್ಸಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹತ್ವದ ವೈದ್ಯಕೀಯ ಸಾಧನೆ ಮಾಡಿದೆ.

ಇಂಟರ್ ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶ ಕಸಿ ವಿಭಾಗದ ನಿರ್ದೇಶಕರಾದ ಡಾ. ಶ್ರೀವತ್ಸ ಲೋಕೇಶ್ವರನ್ ಅವರ ನೇತೃತ್ವದ ಇಂಟರ್ ವೆನ್ಷನಲ್ ಪಲ್ಮನಾಲಜಿ ತಂಡವು, ಫ್ಯೂಜಿ ಫಿಲ್ಮ್ ಸಂಸ್ಥೆಯ ಅತ್ಯಾಧುನಿಕ ಹಾಗೂ ಈ ಮಾದರಿಯಲ್ಲೇ ಮೊದಲನೆಯದಾದ 'ಸಿನಾಪ್ಸ್ 3ಡಿ ನ್ಯಾವಿಗೇಷನ್ ಸಿಸ್ಟಮ್' ಬಳಸಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ.

ರೋಗಿಯು ಆರಂಭದಲ್ಲಿ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರು ಮತ್ತು ಕೆಳ ಶ್ವಾಸನಾಳದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ತಪಾಸಣೆಯ ಸಮಯದಲ್ಲಿ, ಸಾಮಾನ್ಯ ಎದೆಯ ಎಕ್ಸ್-ರೇ ಮಾಡಿದಾಗ ಅಲ್ಲಿ ಅಸಹಜ ನೆರಳು ಕಾಣಿಸಿದ್ದು, ಇದು ವೈದ್ಯರನ್ನು ಸಿಟಿ ಸ್ಕ್ಯಾನ್ ಶಿಫಾರಸು ಮಾಡಲು ಪ್ರೇರೇಪಿಸಿತು. ಸ್ಕ್ಯಾನ್ ಮಾಡಿದಾಗ ಬಲ ಶ್ವಾಸಕೋಶದ ಮಧ್ಯಭಾಗದಲ್ಲಿ 2 ಸೆಂ.ಮೀ ಗಾತ್ರದ ಗೆಡ್ಡೆಯು ಪತ್ತೆಯಾಯಿತು. ಇದು ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ, ದೃಢೀ ಕರಣಕ್ಕಾಗಿ ಬಯಾಪ್ಸಿ ಮಾಡುವುದು ಅಗತ್ಯವಿತ್ತು.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ಸಾಂಪ್ರದಾಯಿಕವಾಗಿ, ಇಂತಹ ಶ್ವಾಸಕೋಶದ ಗೆಡ್ಡೆಗಳ ಮಾದರಿಯನ್ನು 'ಸಿಟಿ- ಗೈಡೆಡ್ ಟ್ರಾನ್ಸ್‌ ಥೊರಾಸಿಕ್ ನೀಡಲ್ ಬಯಾಪ್ಸಿ' ಮೂಲಕ ಪಡೆಯಲಾಗುತ್ತದೆ. ಈ ವಿಧಾನದಲ್ಲಿ ಸೂಜಿಯನ್ನು ಎದೆಯ ಗೋಡೆಯ ಮೂಲಕ ಶ್ವಾಸಕೋಶಕ್ಕೆ ಚುಚ್ಚಲಾಗುತ್ತದೆ ಮತ್ತು ಆ ಮೂಲಕ ಮಾದರಿ ಪಡೆಯಲಾಗುತ್ತದೆ. ಈ ವಿಧಾನವು ಪರಿಣಾಮಕಾರಿಯಾಗಿದ್ದರೂ, ಕೆಲವೊಮ್ಮೆ ಶ್ವಾಸಕೋಶ ಸಮಸ್ಯೆ (ನ್ಯೂಮೊಥೊರಾಕ್ಸ್ - ಇದು ಶೇ. 20 ರಷ್ಟು ರೋಗಿಗಳಲ್ಲಿ ಸಂಭವಿಸಬಹುದು) ಮತ್ತು ರಕ್ತಸ್ರಾವದಂತಹ ಅಪಾಯಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಇದರಿಂದ ರೋಗಿಗಳು ಹೆಚ್ಚಿನ ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ ಮತ್ತು ಚಿಕಿತ್ಸಾ ವೆಚ್ಚವೂ ಅಧಿಕವಾಗುತ್ತದೆ. ಅಲ್ಲದೇ ಅತ್ಯಂತ ಅಪರೂಪದ ಸಾಧ್ಯತೆಯಾಗಿದ್ದರೂ ಬಯಾಪ್ಸಿ ಸಮಯದಲ್ಲಿ ಗೆಡ್ಡೆಯ ಮೂಲಕವೇ ಸೂಜಿ ಹಾದು ಹೋಗುವುದರಿಂದ ಈ ಸಂದರ್ಭದಲ್ಲಿ ಕೆಲವು ಕ್ಯಾನ್ಸರ್ ಕೋಶಗಳು ಸೂಜಿ ಹೋದ ಹಾದಿಯಲ್ಲಿ ಇತರ ಭಾಗಗಳಿಗೆ ಹರಡುವ ಅಪಾಯವೂ ಇರುತ್ತದೆ, ಇದನ್ನು 'ಟ್ಯೂಮರ್ ಸೀಡಿಂಗ್' ಎಂದು ಕರೆಯಲಾಗುತ್ತದೆ.

ಆದಾಗ್ಯೂ, ಈ ಸಮಸ್ಯೆ ಬಹಳ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಸಂಭವಿಸುತ್ತದೆ ಎಂಬುದು ಗಮನಾರ್ಹ. ಇದೇನೇ ಇದ್ದರೂ ನಿಖರವಾದ ರೋಗನಿರ್ಣಯ ಹಾಗೂ ಚಿಕಿತ್ಸಾ ಯೋಜನೆಗೆ ಬಯಾಪ್ಸಿ ಮಾಡುವುದು ಅತ್ಯಗತ್ಯ ಎಂಬು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಈ ಪ್ರಕರಣದಲ್ಲಿ 'ನ್ಯಾವಿಗೇಷನ್ ಆಧಾರಿತ ಬ್ರಾಂಕೋಸ್ಕೋಪಿ' ಯನ್ನು ಬಳಸುವ ನಿರ್ಧಾರ ಮಾಡಿದರು. ಇದು ಹೊಸ ತಂತ್ರಜ್ಞಾನವಾಗಿದ್ದು, ಇದರಲ್ಲಿ ಎದೆಯ ಗೋಡೆಯ ಮೂಲಕ ಸೂಜಿ ಚುಚ್ಚುವ ಬದಲಾಗಿ, ಶ್ವಾಸನಾಳದ ಒಳಗಿನಿಂದಲೇ ಬಯಾಪ್ಸಿ ಮಾಡಲಾಗುತ್ತದೆ. ಇದು ಹೆಚ್ಚಿನ ನಿಖರತೆ, ಕಡಿಮೆ ಅಪಾಯ ಮತ್ತು ರೋಗಿಗೆ ಹೆಚ್ಚಿನ ಸುರಕ್ಷತೆ ಯನ್ನು ಒದಗಿಸುತ್ತದೆ.

ಈ ಸಂದರ್ಭದಲ್ಲಿ 'ಸಿನಾಪ್ಸ್ 3ಡಿ ನ್ಯಾವಿಗೇಷನ್ ಸಿಸ್ಟಮ್' ನ ಅನುಕೂಲಗಳ ಬಗ್ಗೆ ಮಾತನಾಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಇಂಟರ್ ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶ ಕಸಿ ವಿಭಾಗದ ನಿರ್ದೇಶಕರಾದ ಡಾ. ಶ್ರೀವತ್ಸ ಲೋಕೇಶ್ವರನ್ ಅವರು, “ನೈಸರ್ಗಿಕ ಶ್ವಾಸನಾಳದ ಮೂಲಕವೇ ಶ್ವಾಸಕೋಶದ ಗೆಡ್ಡೆಯನ್ನು ತಲುಪುವುದು ಎಂದರೆ, ಮನೆಯನ್ನು ಹಿಂಬಾಗಿಲಿನಿಂದ ಒಡೆದು ಪ್ರವೇಶಿಸುವ ಬದಲು ಮುಂಭಾಗಿಲಿನಿಂದ ಸರಳವಾಗಿ ಪ್ರವೇಶಿಸಿದಂತೆ ಎಂದು ಭಾವಿಸ ಬಹುದು.

ಈ ವಿಧಾನವು ತೊಂದರೆಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಮತ್ತು ನಮಗೆ ಉತ್ತಮ ಗುಣ ಮಟ್ಟದ ಅಂಗಾಂಶದ ಮಾದರಿಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಆಧುನಿಕ ಕಾಲದ ವೈಯಕ್ತೀಕರಿಸಿದ ಮತ್ತು ಉದ್ದೇಶಿತ ಕ್ಯಾನ್ಸರ್ ಚಿಕಿತ್ಸೆಯ (ಟಾರ್ಗೆಟೆಡ್ ಥೆರಪಿ) ಯುಗದಲ್ಲಿ ಇದು ಅತ್ಯಂತ ನಿರ್ಣಾಯಕ ವಿಧಾನವಾಗಿದೆ. ಈ ಪ್ರಕರಣದಲ್ಲಿ, ನ್ಯಾವಿಗೇಷನ್ ಆಧಾರಿತ ತಂತ್ರವು ಪ್ರಕ್ರಿಯೆಯ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದ್ದು, ಸಾಂಪ್ರದಾಯಿಕ ವಿಧಾನದಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಸಮಯ ಬೇಕಾಗುವ ಜಾಗದಲ್ಲಿ, ನಾವು ಕೇವಲ 2 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಗೆಡ್ಡೆಯನ್ನು ತಲುಪಲು ಸಾಧ್ಯವಾಯಿತು. ಜೊತೆಗೆ ವಿಕಿರಣದ ಅಪಾಯ ವನ್ನೂ ಗಣನೀಯವಾಗಿ ಕಡಿಮೆ ಮಾಡಿದೆವು. ಈ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ಪೂರ್ಣ ಗೊಂಡಿದ್ದು, ರೋಗಿಯನ್ನು ನಿಯಮಿತ ತಪಾಸಣೆಯ ಸಲಹೆಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ” ಎಂದು ಹೇಳಿದರು.

ಈ ಮೈಲಿಗಲ್ಲು ಸಾಧನೆಯ ಕುರಿತು ಮಾತನಾಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವಿಪಿ ಮತ್ತು ಬಿಸಿನೆಸ್ ಹೆಡ್ ಡಾ. ಅನಂತ್ ರಾವ್ ಅವರು, “ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯು ರೋಗಿಗಳ ಸುರಕ್ಷತೆ ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸುವ ಸುಧಾರಿತ ತಂತ್ರಜ್ಞಾನ ಗಳಲ್ಲಿ ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ನ್ಯಾವಿಗೇಷನ್ ಆಧಾರಿತ ಬ್ರಾಂಕೋ ಸ್ಕೋಪಿಯನ್ನು ಪರಿಚಯಿಸಿರುವುದು ನಮ್ಮ ಈ ಭಾಗದ ರೋಗಿಗಳಿಗೆ ಕ್ಯಾನ್ಸರ್‌ ನ ಆರಂಭಿಕ ಪತ್ತೆ ಸೌಲಭ್ಯ, ನಿಖರ ರೋಗನಿರ್ಣಯ ಮತ್ತು ಉತ್ತಮ ಆರೈಕೆಯನ್ನು ನೀಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ಜಾಗತಿಕವಾಗಿ, ಹೆಚ್ಚಿನ ಶ್ವಾಸಕೋಶದ ಗೆಡ್ಡೆಗಳು ಅನಿರೀಕ್ಷಿತ ತಪಾಸಣೆಯ ಸಮಯದಲ್ಲಿ ಪತ್ತೆಯಾಗುತ್ತವೆ. ಶ್ವಾಸಕೋಶದ ಕ್ಯಾನ್ಸರ್‌ ನ ಕೌಟುಂಬಿಕ ಹಿನ್ನೆಲೆ ಹೊಂದಿರುವವರು ಅಥವಾ ಧೂಮಪಾನದ ಇತಿಹಾಸವಿರುವ ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳಿಗೆ 'ಲೋ ಡೋಸ್ ಸಿಟಿ' ಸ್ಕ್ರೀನಿಂಗ್ ಅನ್ನು ಅತ್ಯುತ್ತಮ ತಪಾಸಣಾ ಮಾನದಂಡವೆಂದು ಪರಿಗಣಿಸಲಾಗುತ್ತದೆ.

ಅಮೆರಿಕದ ನ್ಯಾಷನಲ್ ಲಂಗ್ ಸ್ಕ್ರೀನಿಂಗ್ ಟ್ರಯಲ್ ಸೇರಿದಂತೆ ಅಂತರರಾಷ್ಟ್ರೀಯ ಅಧ್ಯಯನ ಗಳು, ಇಂತಹ ಸ್ಕ್ರೀನಿಂಗ್ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಮರಣ ಪ್ರಮಾಣವನ್ನು ಶೇ. 15 ರಷ್ಟು ಕಡಿಮೆ ಮಾಡಬಹುದು ಎಂದು ದೃಢಪಡಿಸಿವೆ. ಆದರೆ ಭಾರತದಲ್ಲಿ, ಕ್ಷಯರೋಗದ ಹೆಚ್ಚಿನ ಪ್ರಮಾಣದಿಂದಾಗಿ ತಪಾಸಣೆ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದೆ. ಕ್ಷಯರೋಗದಿಂದ ಉಂಟಾ ಗುವ ಗಡ್ಡೆಗಳು ಕ್ಯಾನ್ಸರ್‌ ನಂತೆಯೇ ಕಂಡುಬರುವುದರಿಂದ ನಿಖರ ರೋಗನಿರ್ಣಯವು ಸವಾಲಿನ ಕೆಲಸವಾಗಿದೆ.